ನೀಲಿ ಮೇಳ ಇಂಡಿಗೋ ಗಾಳ

7

ನೀಲಿ ಮೇಳ ಇಂಡಿಗೋ ಗಾಳ

Published:
Updated:
ನೀಲಿ ಮೇಳ ಇಂಡಿಗೋ ಗಾಳ

ವಸ್ತ್ರಜಗತ್ತಿಗೂ ಬಣ್ಣಕ್ಕೂ ಎಂಥ ನಂಟಿದೆಯಲ್ಲವೇ? ಅದರಲ್ಲೂ ಖರೀದಿಗೆ ಹೊರಡುವ ವನಿತೆಯರ ವರ್ಣಪ್ರಜ್ಞೆ ನಿಬ್ಬೆರಗಾಗಿಸುವಂಥದ್ದು. ಬಟ್ಟೆಗಳ ಆಯ್ಕೆಯ ವಿಷಯದಲ್ಲಂತೂ ಬಣ್ಣದ್ದೇ ಪಾರುಪತ್ಯ. ವಸ್ತ್ರ ಮಾರಾಟ ಮಾಡುವವರು ಕೂಡ ಬಣ್ಣದ ಮೂಲಕವೇ ಗ್ರಾಹಕರನ್ನು ಸೆಳೆಯುವ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಕಾಲಕ್ಕೂ ಬಣ್ಣಕ್ಕೂ ಸಂಬಂಧ ಬೆಸೆಯುವವರೂ ಇಲ್ಲದಿಲ್ಲ.ಹೊಸ ಚಿಗುರಿಗೆ ಅನುವು ಮಾಡಿಕೊಡಲು ಚಳಿಗಾಲ ಹಣ್ಣೆಲೆಗಳನ್ನು ಕೆಡವಿ ಆಗಿದೆ. ಇನ್ನು ಬೆವರಿಳಿಸುವ ಬೇಸಿಗೆ. ಸುಡು ಧಗೆಗೆ ಒಪ್ಪುವ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಡುವ ಅವಧಿ ಇದು. ಬೇಸಿಗೆಗೆ ಹೇಳಿಮಾಡಿಸಿದ ಬಣ್ಣಗಳಲ್ಲಿ ನೀಲಿ ಮುಖ್ಯವಂತೆ. ಶಾಂತ ಕಡಲು, ಮೋಡಗಳ ಆಟವಿಲ್ಲದ ಆಕಾಶ ಎರಡರಲ್ಲೂ ಕಾಣುವುದು ತಿಳಿನೀಲಿ ಬಣ್ಣ. ಪ್ರಕೃತಿ ನಳನಳಿಸುವ ಈ ಕಾಲದಲ್ಲಿ ನೀಲಿ ಬಟ್ಟೆ ಆಕರ್ಷಕ ಎಂಬ ನಂಬಿಕೆ ಇದೆ.ಬೇಸಿಗೆಯಲ್ಲಿ ತಿಳಿನೀಲಿ ಬಣ್ಣಕ್ಕೆ ಮನಸೋಲುವ ಹೆಂಗಳೆಯರೂ ಕಡಿಮೆ ಇಲ್ಲ. ಅದಕ್ಕೇ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ ಫೆ.1ರಿಂದ ಆಯೋಜಿಸಿರುವ `ಇಂಡಿಗೊ~ ಹೆಸರಿನ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಎಲ್ಲಿ ನೋಡಿದರೂ ನೀಲಿ ನೀಲಿ. ಅಲ್ಲೆಲ್ಲಾ ಹರಡಿಕೊಂಡಿರುವುದು ನೀಲಿ ವಸ್ತುಗಳೇ.ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ವಿಶಿಷ್ಟ ಇಂಡಿಗೊ ಶೈಲಿಯ ಬಟ್ಟೆಗಳಿಗೇ ಮೇಳದಲ್ಲಿ ಆದ್ಯತೆ. ಕಾಮನಬಿಲ್ಲಿನ ಎರಡನೇ ಬಣ್ಣವಾದ ನೀಲಿಯನ್ನು `ಥೀಮ್~ ಆಗಿ ಇಟ್ಟುಕೊಂಡು ಪ್ರದರ್ಶನ ಆಯೋಜಿಸಲಾಗಿದ್ದು, ಮಹಾರಾಷ್ಟ್ರ, ರಾಜಸ್ತಾನದ ಕರಕುಶಲಕರ್ಮಿಗಳು ಸಿದ್ಧಪಡಿಸಿದ ಸೀರೆಗಳಿವೆ. ಹತ್ತಿ, ರೇಷ್ಮೆ ಸೀರೆಗಳ ಮೇಲೆ `ಆಪ್ಲಿಕ್ ಕಲೆ~ಯ ಛಾಪಿದೆ. ಸೂಕ್ಷ್ಮ ಚಿತ್ತಾರಗಳು ಇಡೀ ವಸ್ತ್ರಗಳ ಮೇಲೆ ಅನಾವರಣಗೊಂಡಿರುವುದು ಅವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.ಬನಾರಸ್, ಚಾಂದೇರಿ ಸೀರೆಗಳು, ದುಪ್ಪಟ್ಟಾ, ಸಲ್ವಾರ್‌ಗಳಿಗೆ ಹೆಣ್ಣುಮಕ್ಕಳ ನೋಟವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವ ಆಕರ್ಷಣೆ ಇದೆ. ಈ ಬಾರಿ ಪುರುಷರಿಗಾಗಿ ಕುರ್ತಾ, ಅಂಗಿಗಳು, ಜೀನ್ಸ್ ಬಟ್ಟೆಗಳನ್ನು ಇಡಲಾಗಿದೆ ಎನ್ನುತ್ತಾರೆ ಸಹಾಯಕ ವ್ಯವಸ್ಥಾಪಕಿ ಮಂಜುಳಾ ರಘುರಾಂ.ಸೀರೆಗಳ ಮ್ಯಾಚಿಂಗ್‌ಗಾಗಿ ನೀಲಿ ಬಣ್ಣದ ಬ್ಯಾಗ್‌ಗಳು, ಕೃತಕ ಆಭರಣಗಳು ಮೇಳದಲ್ಲಿವೆ. ಜೊತೆಗೆ ಜೈಪುರದ ಪಿಂಗಾಣಿ ಉತ್ಪನ್ನಗಳು, ಲಾಟೀನು ಎಲ್ಲವೂ ನೀಲಿ ಬಣ್ಣದ್ದೇ.ಬೇಸಿಗೆಗಾಲದಲ್ಲಿ ಮನೆಗಳ ಒಳಾಂಗಣ ವಿನ್ಯಾಸದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಅನುಕೂಲವಾಗುವಂಥ ಉತ್ಪನ್ನಗಳು ಇಲ್ಲಿ ಲಭ್ಯ. ಇಷ್ಟೇ ಅಲ್ಲದೇ ಬೆಟ್‌ಶೀಟ್, ಟೇಬಲ್ ಕ್ಲಾತ್, ಬಾಗಿಲಿಗೆ ನೇತುಹಾಕುವ ವಸ್ತ್ರ, ತಲೆದಿಂಬು, ಹೊದಿಕೆ ಮೊದಲಾದ ಗೃಹೋಪಯೋಗಿ ಉತ್ಪನ್ನಗಳು ಗಮನ ಸೆಳೆಯುತ್ತವೆ. ವಿಶೇಷವೆಂದರೆ ಪ್ರದರ್ಶನದಲ್ಲಿ ಸಿಗುವ ಎಲ್ಲಾ ಉತ್ಪನ್ನಗಳು ನೀಲಿ ಬಣ್ಣದ್ದೇ.ಈ ಬಟ್ಟೆಗಳ ಮೇಲೆ ಅಜ್ರಕ್, ಆಪ್ಲಿಕ್ ಪ್ರಿಂಟ್‌ಗಳ ವಿನ್ಯಾಸವಿರುವುದು ಮತ್ತೊಂದು ವೈಶಿಷ್ಟ್ಯ. ಇಂದಿನ ಪೀಳಿಗೆಯವರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರದರ್ಶನ ಮೇಳವನ್ನು ಆಯೋಜಿಸಲಾಗಿದೆ ಎನ್ನುತ್ತಾರೆ ಮೇಳದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಎಸ್.ಮುಖರ್ಜಿ.ಗೃಹಾಲಂಕಾರಿಕ ಮಾರ್ಬಲ್ ಉತ್ಪನ್ನಗಳು, ಮೇಣದ ಬತ್ತಿಗಳು, ಸುಂದರ ಟೆರ‌್ರಾಕೊಟಾ ಉತ್ಪನ್ನಗಳು, ಅವುಗಳ ಮೇಲೆ ಬಿಡಿಸಿರುವ ವರ್ಲಿ ಚಿತ್ತಾರಗಳು ಮನಸ್ಸಿಗೆ ಮುದ ನೀಡುತ್ತವೆ.`ಸಾವರಿಯಾ~ ಹಿಂದಿ ಚಿತ್ರದಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನೀಲಿ ಬಣ್ಣದ ಹಿನ್ನೆಲೆಯಲ್ಲೇ ಕಥೆ ಹೇಳುವ ಪ್ರಯೋಗಕ್ಕೆ ಕೈಹಾಕಿದ್ದರು. ಆಗ `ಸಂಜಯ್ ನೀಲಾ ಬನ್ಸಾಲಿ~ ಎಂದು ಅವರನ್ನು ಗೇಲಿ ಮಾಡಿದವರೂ ಇದ್ದರು. ಆದರೆ, ಈ ಮೇಳಕ್ಕೆ ಆ ಸಿನಿಮಾ ಸ್ಫೂರ್ತಿಯೇನೂ ಇಲ್ಲವಂತೆ. ಹೃದಯ ವೈಶಾಲ್ಯಕ್ಕೆ ಕನ್ನಡಿ ಹಿಡಿಯುವ, ಹಕ್ಕಿದನಿಗೆ ಹಿನ್ನೆಲೆಯಾಗುವ ನೀಲಿ ಬಣ್ಣ ಅನೇಕರಿಗೆ ಮೆಚ್ಚಾದದ್ದಂತೂ ಹೌದು. ಇಷ್ಟಕ್ಕೂ ಕೃಷ್ಣ ಕೂಡ ನೀಲ ಮೇಘ ಶಾಮನೇ ಅಲ್ಲವೇ?ಪ್ರದರ್ಶನ ಮತ್ತು ಮಾರಾಟ ಮೇಳವು ಎಚ್.ಎಸ್.ಆರ್. ಲೇಔಟ್ ಮತ್ತು ಎಂ.ಜಿ.ರಸ್ತೆಯ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ ಮಳಿಗೆಗಳಲ್ಲಿ ನಡೆಯುತ್ತಿದೆ.ಭಾನುವಾರ (ಫೆ.12) ಪ್ರದರ್ಶನ ಮುಕ್ತಾಯ. ಸಮಯ: ಬೆಳಿಗ್ಗೆ 11ರಿಂದ ರಾತ್ರಿ 8. ಮಾಹಿತಿಗೆ: 2558 4083, 2558 4515. 

 -

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry