ಶುಕ್ರವಾರ, ಮೇ 27, 2022
31 °C

ನೀಲಿ ವ್ಯಾನ್ ಕಂಡರೆ `ಇವರು' ನಾಪತ್ತೆ!

ಪ್ರಜಾವಾಣಿ ವಾರ್ತೆ/ ವಿಷ್ಣುಭಾರದ್ವಾಜ್ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅದು ನೀಲಿ ಬಣ್ಣದ ವ್ಯಾನ್. ಸುತ್ತ ತಂತಿ ಜಾಲರಿ. ಒಳಗಡೆ ಹದ್ದಿನ ಕಣ್ಣಿನಿಂದ ಹುಡುಕುತ್ತಾ ಸಾಗುವ ಸಿಬ್ಬಂದಿ. ಅದು ಪೊಲೀಸ್ ವ್ಯಾನ್ ಅಲ್ಲ. ಆದರೂ ಅದನ್ನು ಕಂಡರೆ ರೈಲು, ಬಸ್ಸು ನಿಲ್ದಾಣ ಹಾಗೂ ಕಸದ ತೊಟ್ಟಿಯಿಂದ ಅನ್ನ, ಆಹಾರ ಇತ್ಯಾದಿಯನ್ನು ಅರಸುವವರಿಗೆ ಭಯ!ಇವರೇನೂ ಕೆಡುಕು ಮಾಡುವವರಲ್ಲ. ಆದರೆ ಭಿಕ್ಷುಕರು, ಬೀದಿಯಲ್ಲಿ ಬದುಕುವವರನ್ನು ಕಾರ್ಯಾಚರಣೆ ಮೂಲಕ ಹಿಡಿದು ತರಲು ನೇಮಕಗೊಂಡಿರುವ ನಿರಾಶ್ರಿತರ ಕೇಂದ್ರದ ಸಿಬ್ಬಂದಿ.ಸೋಮವಾರ, ಗುರುವಾರ, ಶನಿವಾರಗಳಂದು ದೇವಸ್ಥಾನ, ಗುಡಿ, ಮುಂತಾದ ಭಿಕ್ಷುಕರಿರುವ ಆಯಕಟ್ಟಿನ ಜಾಗಗಳನ್ನು ನಿಗದಿ ಪಡಿಸಿ ಕಾರ್ಯಾಚರಣೆ ನಡೆಸುತ್ತಾರೆ. ಇತರ ದಿನಗಳಲ್ಲಿ ರೈಲು-ಬಸ್ ನಿಲ್ದಾಣಗಳಲ್ಲಿ, ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಾರೆ.ಈ ಕಾರಣಕ್ಕಾಗಿಯೇ ನಿರಾಶ್ರಿತರ ಕೇಂದ್ರದ ನೀಲಿ ವ್ಯಾನ್ ಕಂಡರೆ ಬೀದಿ ಬದಿಯ  ಭಿಕ್ಷುಕರು ನಾಪತ್ತೆಯಾಗುತ್ತಾರೆ. ಆದರೂ ಅವರನ್ನು ಗುರುತಿಸಲು ರಕ್ಷಕ ಪಡೆ ಯಶಸ್ವಿಯಾಗುತ್ತದೆ. ಅವರನ್ನು ಕರೆತಂದು ನಿರಾಶ್ರಿತ ಕೇಂದ್ರಕ್ಕೆ ಸೇರಿಸಲಾಗುತ್ತದೆ.`ಕುಟುಂಬ ಸಮಸ್ಯೆ, ಪತಿ-ಪತ್ನಿ ಸಾಮರಸ್ಯದ ಕೊರತೆಯೇ ಇವರಲ್ಲಿ ಹೆಚ್ಚಿನವರನ್ನು ಬೀದಿಗೆ ತಂದಿದೆ' ನಿರಾಶ್ರಿತರ ಪರಿಹಾರ ಕೇಂದ್ರದ  ಪ್ರಭಾರ ಅಧೀಕ್ಷಕ ನರಸಿಂಗ ರಾಥೋಡ್ ಹೇಳುತ್ತಾರೆ.ನಿರಾಶ್ರಿತರ ಪರಿಹಾರ ಕೇಂದ್ರ: 1975 ರಲ್ಲಿ `ಭಿಕ್ಷುಕರ ಕಾಲೊನಿ' ಎಂಬ ಹೆಸರಿನೊಂದಿಗೆ ನಗರದಲ್ಲಿ ಈ ಕೇಂದ್ರ ಪ್ರಾರಂಭವಾಗಿತ್ತು. 1980ರ ದಶಕದ ಆರಂಭದಲ್ಲಿ `ನಿರಾಶ್ರಿತರ ಪರಿಹಾರ ಕೇಂದ್ರ' ಎಂಬ ಹೆಸರಿನೊಂದಿಗೆ ಹಿಂದುಳಿದ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ (ಬಿಸಿಎಂ) ಸುಪರ್ದಿಗೆ ನೀಡಲಾಯಿತು.ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಗಳು ಈ ಕೇಂದ್ರದ ವ್ಯಾಪ್ತಿಯಲ್ಲಿವೆ. 150 ನಿವಾಸಿಗಳಿಗೆ ಅವಕಾಶವಿದೆ. ಈಗ 38 ಮಂದಿ ನೆಲೆಸಿದ್ದಾರೆ. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳು ಇರುವುದು ಇಲ್ಲಿನ ವಿಶೇಷ. ಮೇಲುಸ್ತುವಾರಿ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ.ಭಿಕ್ಷುಕರು, ಬೀದಿಬದಿ ನಿರ್ಗತಿಕರನ್ನು ತಂದು ಅವರಿಗೆ ಆಶ್ರಯ ನೀಡಿ ಸ್ವ-ಉದ್ಯೋಗ ತರಬೇತಿ ನೀಡುವುದು. ಆಹಾರ, ಬಟ್ಟೆ, ವಸತಿ ನೀಡಿ ಜೀವನದ ಮುಖ್ಯವಾಹಿನಿಗೆ ತಂದು, ದುಡಿದು ಬದುಕುವಂತೆ ಮಾಡುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ವೈದ್ಯಕೀಯ ಸೌಲಭ್ಯವೂ ಇದೆ.ಮೂರರಿಂದ ಆರು ತಿಂಗಳ ಕಾಲ ಇಂತಹ ನಿರಾಶ್ರಿತರನ್ನು ಇಲ್ಲಿ ಇರಿಸುವ ಅವಕಾಶ ಇದೆ. 30 ರಿಂದ 85 ವಯಸ್ಸಿನವರೂ ಇಲ್ಲಿದ್ದಾರೆ. ವೃದ್ಧರು, ಮಾನಸಿಕ-ದೈಹಿಕ ತೊಂದರೆ ಇರುವವರು ಇವರಲ್ಲಿದ್ದಾರೆ. ವಿವಿಧ ರೀತಿಯ ಸ್ವಭಾವದವರು ಇವರಾಗಿರುವುದರಿಂದ ನಿಯಂತ್ರಣ ಕಷ್ಟ. ಇದಕ್ಕಾಗಿ ಏಳು ಮಂದಿ ಸಿಬ್ಬಂದಿಗಳು ಇದ್ದಾರೆ. ಇವರಲ್ಲಿ ಒಬ್ಬ ಕಾವಲುಗಾರ, ಒಬ್ಬ ಭದ್ರತಾ ಸಿಬ್ಬಂದಿ, ಅವರ ಶಿಸ್ತಿನ ಚಲನೆಗಾಗಿ ಒಬ್ಬ ಸಿಬ್ಬಂದಿ ಇದ್ದಾನೆ. ಶನಿವಾರ, ಸೋಮವಾರ, ಗುರುವಾರ ವ್ಯಾನ್ ಮೂಲಕ ಸಾರ್ವಜನಿಕ ಜಾಗಗಳಲ್ಲಿ ಭಿಕ್ಷೆ ಎತ್ತುವವರನ್ನು ಹುಡುಕಿ ಕರೆತರಲಾಗುತ್ತದೆಕಲಿಕೆಗೆ ಅವಕಾಶ: ಜಿಲ್ಲಾ ಆಸ್ಪತ್ರೆಯಿಂದ ವೈದ್ಯರು-ಶಸ್ತ್ರಚಿಕಿತ್ಸಕರನ್ನು ಇಲ್ಲಿನ ಆರೋಗ್ಯ ಉಸ್ತುವಾರಿಗೆ ನಿರಂತರ ಲಭ್ಯ ಇರುವಂತೆ ಜಿಲ್ಲಾಧಿಕಾರಿ ನಿಗದಿ ಮಾಡಿದ್ದಾರೆ. ಇವರ ನಡವಳಿಕೆ ತಿದ್ದುವುದಕ್ಕಾಗಿ ಯೋಗ, ಭಜನೆ, ವಾಕಿಂಗ್, ಸರಳ ವ್ಯಾಯಾಮ ಇತ್ಯಾದಿ ನಿತ್ಯ ಇರುತ್ತದೆ. ಮಳೆಗಾಲದ ಆರು ತಿಂಗಳ ಕಾಲ ನಿರಾಶ್ರಿತರ ಕೇಂದ್ರದ ಆವರಣದಲ್ಲಿ ತರಕಾರಿ ಬೆಳೆಸುವ ಸರಳ ಕೃಷಿ ಕೆಲಸ. ಫಿನಾಯಿಲ್,  ಬಳಪ ತಯಾರಿಸುವ ವೃತ್ತಿ ಕಲಿಕೆ ಮುಂತಾದ ಹೊಸ ಬದುಕಿನ ಅವಶ್ಯಕತೆಗಳನ್ನು ಕಲಿಸಲಾಗುತ್ತದೆ.  ಊಟ, ಟಿಫಿನ್, ಚಹಾ, ಪಾನೀಯಗಳು ಇಲಾಖೆ ನಿಗದಿ ಪಡಿಸಿದ ಅಳತೆಯಲ್ಲಿ ನೀಡಲಾಗುತ್ತದೆ. 300 ಗ್ರಾಂ ಜೋಳ, ಅಷ್ಟೇ ಅಕ್ಕಿ ಅನ್ನ, 80 ಗ್ರಾಂ ತೊಗರಿ... ಹೀಗೆ ಪ್ರತಿಯೊಬ್ಬರ ಆರೈಕೆಗೆ ರೇಷನ್ ಇದೆ. ವರ್ಷಕ್ಕೆ ಎರಡು ಸಮವಸ್ತ್ರ ನೀಡಲಾಗುತ್ತದೆ. ಮನರಂಜನೆ- ಮಾಹಿತಿಗಾಗಿ ಟಿ.ವಿ., ವೀಕ್ಷಣಾ ಕೊಠಡಿ ಇದೆ.ವೈದ್ಯ ಕೇಂದ್ರ:  `ನಿರಾಶ್ರಿತರ ಕೇಂದ್ರದಲ್ಲಿ ಹಲವು ಕೊರತೆಗಳಿವೆ. ಇದಕ್ಕಾಗಿ ಪ್ರಾಯೋಜಕರ ಕೊರತೆ ಇದ್ದೇ ಇದೆ. ವೃದ್ಧರು, ಅಸ್ವಸ್ಥರು ಇರುವುದರಿಂದ ಶಾಶ್ವತ ಆರೋಗ್ಯ ಕೇಂದ್ರ, ಔಷಧಿ ನೀಡಬೇಕೆಂಬ ಬೇಡಿಕೆ ಇದೆ. ಇಲ್ಲಿನ ನಿವಾಸಿಗಳಿಗೆ ಊಟ-ಉಪಾಹಾರಕ್ಕಾಗಿ ವಿಶಾಲವಾದ ಹಾಲ್ ನಿರ್ಮಿಸಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರೂ ಆಸಕ್ತಿ ಹೊಂದಿದ್ದಾರೆ' ಎನ್ನುತ್ತಾರೆ ಪ್ರಭಾರ ಅಧೀಕ್ಷಕ ನರಸಿಂಗ ರಾಥೋಡ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.