ನೀಲು- ಕೃಷಿಕನ ಪತ್ರಗಳು

7
ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ ತೀರ್ಪುಗಾರರು ಮೆಚ್ಚಿದ ಪತ್ರ

ನೀಲು- ಕೃಷಿಕನ ಪತ್ರಗಳು

Published:
Updated:
ನೀಲು- ಕೃಷಿಕನ ಪತ್ರಗಳು

ನೀಲು, ಕಳೆದ ಎರಡು ವರ್ಷಗಳಿಂದ, ಜಪಾನಿನ ಕೃಷಿಋಷಿ ಮಸನೊಬು ಫುಕುವೋಕನ ಸಹಜ ಕೃಷಿಯಿಂದ ಪ್ರೇರಿತನಾಗಿ, ಮನೆಯವರಿಂದ ಮತ್ತು ಹುಟ್ಟೂರಿನಿಂದ ದೂರವಾಗಿ ದೂರದ ಸಹೃದಯರೊಬ್ಬರ ತೋಟದಲ್ಲಿ ನನ್ನಿಷ್ಟದಂತೆ ಕೃಷಿಯಲ್ಲಿ ತೊಡಗಿದೆ.

ಪ್ರಕೃತಿಯನ್ನು ಮಾದರಿಯನ್ನಾಗಿಸಿಕೊಂಡಿರುವ ಸಹಜ ಕೃಷಿಯ ತತ್ವಗಳನ್ನು, ಇಲ್ಲಿನ ಸ್ಥಳೀಯ ಪರಿಸ್ಥಿತಿಗೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡೆವು. ವೆಲ್ವೆಟ್ ಬೀನ್ಸ್ ಎಂಬ ಹಸಿರೆಲೆ ಗೊಬ್ಬರದ ಬಳ್ಳಿಯನ್ನು ಬೆಳೆದು ಅದರಲ್ಲಿ ಬತ್ತವನ್ನು ಉಳುಮೆ ಇಲ್ಲದೆ ಬೆಳೆದದ್ದು ನನಗೆ ಅತೀ ಸಂತೋಷ ಕೊಟ್ಟ ಪ್ರಯೋಗ.ಹೀಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಕೃಷಿ ಗುಂಗಿನಲ್ಲಿಯೇ ಇರುತ್ತಿದ್ದ ನನ್ನಲ್ಲಿ ಕಳೆದ ಕೆಲವು ತಿಂಗಳುಗಳಿಂದ, ಸಂಜೆಯ ನಂತರ ಒಂದು ರೀತಿಯ ಚಡಪಡಿಕೆ ಶುರುವಾಗುತ್ತಿತ್ತು. ನಿನ್ನ ಜೊತೆ, ಅಮ್ಮ ಮತ್ತು ನನ್ನ ಸ್ನೇಹಿತರೊಡನೆ ಮಾತನಾಡಬೇಕೆಂಬ ಆಳವಾದ ಬಯಕೆ ಹುಟ್ಟುತ್ತಿತ್ತು. ಬರಹಗಾರ ಪೌಲ್ ಕೊಯಿಲೋ ಹೇಳುವಂತೆ: “ಮನುಷ್ಯ ಒಂದು ವಾರ ನೀರಿಲ್ಲದೆ, ಎರಡು ವಾರ ಆಹಾರವಿಲ್ಲದೆ ಮತ್ತು ಅನೇಕ ವರ್ಷಗಳು ಮನೆಯಿಲ್ಲದೆ ಇರಬಲ್ಲ.

ಆದರೆ ಒಂಟಿತನವನ್ನು ಕ್ಷಣಮಾತ್ರ ಸಹಿಸಲಾರ. ಒಂಟಿತನ ಎಲ್ಲಾ ರೀತಿಯ ಹಿಂಸೆ ಮತ್ತು ಶೋಷಣೆಗಳಲ್ಲೇ ಅತೀ ಘೋರವಾದದ್ದು”. ನಿಜ, ಕೃಷಿ ಮಾಡಬೇಕೆಂಬ ಹೆಬ್ಬಯಕೆಯಿಂದ ಎಲ್ಲರನ್ನು ಧಿಕ್ಕರಿಸಿದ ನನಗೆ, ಸಾಂಗತ್ಯದ ಹಂಬಲ ಮತ್ತು ಅದರ ಅಗತ್ಯತೆಯ ಅರಿವಾಗಲಾರಂಭಿಸಿತು, ಮುಖ್ಯವಾಗಿ ನಿನ್ನ ಸಾಂಗತ್ಯ.ಕೃಷಿಯಿಂದ ನನ್ನ ತಲೆಮಾರಿನವರು ವಿಮುಖವಾಗಿ ಪೇಟೆ ಸೇರಿರುವಾಗ, ಕೃಷಿಯಲ್ಲಿ ಪದವಿ ವ್ಯಾಸಂಗದ ನಂತರ ನಾನು ಕೃಷಿಮಾಡಿ ಬದುಕು ಕಟ್ಟಿಕೊಳ್ಳಲು ಹೊರಟಿರುವುದು ನಿನಗೆ ಅಚ್ಚರಿಯಾಗಿ ಕಾಣಬಹುದು.

ಯಾವುದೇ ಕೃಷಿ-ಕುಟುಂಬದ ಹಿನ್ನೆಲೆ ಇಲ್ಲದ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ನಾನು ಕೃಷಿಯನ್ನು ನನ್ನ ಬದುಕಿನ ಮಾರ್ಗವಾಗಿ ಸ್ವೀಕರಿಸಲು ಮುಖ್ಯವಾದ ಕಾರಣ: ಯಾರ ಹಂಗೂ ಇಲ್ಲದೇ, ನನ್ನ ಪಾಡಿಗೆ, ಸ್ವಾವಲಂಬಿಯಾಗಿ ಸ್ವತಂತ್ರ ಬದುಕು ಮಾಡಬಹುದೆಂದು ನಿಸರ್ಗದ ಮಡಿಲಿನಲ್ಲಿ ಇದ್ದು, ನಮ್ಮ ಅನ್ನ-ಆಹಾರಗಳನ್ನು ಸಂಪಾದಿಸಿಕೊಳ್ಳುವುದು ಮನುಷ್ಯ ಮಾಡಲೇಬೇಕಾದ `ಕೆಲಸ'ವೆಂದು, ನನಗನ್ನಿಸಿರುವುದರಿಂದ.

ಸಹಜ ಕೃಷಿ ವ್ಯಕ್ತಿಯ ಆಧ್ಯಾತ್ಮಿಕ ಆರೋಗ್ಯದಿಂದ ಪ್ರಾರಂಭವಾಗುವುದರಿಂದ. ಭೂಮಿ ಫಲವತ್ತುಗೊಳ್ಳುವುದು ಮತ್ತು ಆತ್ಮದ ಶುದ್ಧೀಕರಣವೆರಡೂ ಒಂದೇ ಪ್ರಕ್ರಿಯೆಯೆಂದು ನಾನು ಭಾವಿಸಿದ್ದೇನೆ. ಅದರಿಂದ ಕೃಷಿಯಲ್ಲಿ ನನ್ನ ಸಾಕ್ಷಾತ್ಕಾರವನ್ನು ನಾನೇ ಕಂಡುಕೊಳ್ಳಬೇಕೆಂದಿದ್ದೇನೆ.ಈ ಕಾರಣಗಳು ನಿನಗೆ ಹುಚ್ಚುತನವಾಗಿ ಕಾಣಬಹುದು. ನಾನು ‘normal’ ಆಗಿದ್ದು ಕಹಿಯಾಗಿರುವುದಕ್ಕಿಂತ, ಈ ಹುಚ್ಚುತನದೊಂದಿಗೆ ಸಂತೋಷವಾಗಿರುವುದು ಲೇಸಲ್ಲವೇ. ಈ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಊರಿಗೆ ಹಿಂತಿರುಗಿ ಇಲ್ಲಿಯ ಪರಿಚಿತ ಕೃಷಿಕರನ್ನು ಭೇಟಿಮಾಡಿ ಕೃಷಿ ಜಮೀನಿನ ಹುಡುಕಾಟ ಪ್ರಾರಂಭಿಸಿದ್ದೇನೆ.

ನೀಲು, ನಿನಗೆ ಗೊತ್ತಿರುವಂತೆ ನನ್ನದು ಎನ್ನುವ ಹಣ ಏನೂ ಇಲ್ಲ. ಬಹಳ ಪೀಕಲಾಟಗಳ ನಂತರ ಅಪ್ಪಾಜಿ ಸ್ವಲ್ಪ ಹಣ ಕೊಡುವುದಾಗಿ ಹೇಳಿದ್ದಾರೆ. ನಾನು ಕಳೆದ ಎರಡು ವರ್ಷಗಳಿಂದ ಕೈಗೊಂಡ ಹುಡುಕಾಟದ ಭಾಗವಾಗಿ ಆತ್ಮೀಯರಾದ ಕೆಲವು ಸಹಜ/ಸಾವಯವ ಕೃಷಿಕರು ಮತ್ತು ನನ್ನ ಆಪ್ತ ಸ್ನೇಹಿತರಿಂದ ಸಾಲ ಅಥವಾ ಸಹಾಯದ ರೂಪವಾಗಿ ಹಣ ಸಂಗ್ರಹಿಸಬೇಕೆಂದಿದ್ದೇನೆ.ನೀಲು, ಜಮೀನಿನ ಹುಡುಕಾಟದಲ್ಲಿ ನಾನು ಕಂಡುಕೊಂಡಂತೆ, ಎಲ್ಲಾ ಕಡೇ ಆಗಿರುವಂತೆ ಇಲ್ಲಿಯೂ ಸಹ ಜಮೀನಿನ ಬೆಲೆ ಕೈಗೆಟುಕಲಾರದಷ್ಟು ದುಬಾರಿಯಾಗಿದೆ. ಎರಡು ಎಕರೆ ಬಿಡು, ಒಂದು ಎಕರೆಗೂ ಹಣ ಕೂಡಿಸುವುದು ಕಷ್ಟವಾಗುವಷ್ಟು ದುಬಾರಿಯಾಗಿದೆ.

ಬಹುತೇಕರು ಕೃಷಿಯಲ್ಲಿ ಲಾಭವಿಲ್ಲ, ಅದು ನಷ್ಟದ ಬಾಬತ್ತು ಎಂದು ಕೃಷಿ ತ್ಯಜಿಸುತ್ತಿರುವಾಗ ಕೃಷಿ ಭೂಮಿಯ ಬೆಲೆ ಮಾತ್ರ ಗಗನಕ್ಕೇರಿರುವುದು ಎಂಥ ವಿಪರ‌್ಯಾಸ! ಕೃಷಿಯೇತರ ಕಾರಣಗಳಿಂದಾದ ಈ ಅಸಹಜವಾದ ಬೆಳವಣಿಗೆಯನ್ನು ವಿಶ್ಲೇಷಿಸಿದರೆ, ನಮ್ಮ ಕೃಷಿ ಮತ್ತು ಸಮಾಜ ನಡೆದಿರುವ ದಾರಿಯ ಬಗ್ಗೆ ಆತಂಕ ಉಂಟಾಗುತ್ತದೆ.ಸರಳವಾಗಿ ಸ್ವಾವಲಂಬಿಯಾಗಿ ಕೃಷಿಯನ್ನು ಮಾಡುತ್ತಾ ನೆಮ್ಮದಿಯ ಜೀವನ ನಡೆಸಬೇಕೆಂಬ ನನ್ನ ಕನಸನ್ನು ಹಣ ನಿರ್ಬಂಧಿಸಿ ನಿಯಂತ್ರಿಸುತ್ತಿದೆ. ಹಣ ಮೌಲ್ಯವಾಗಿರುವ ಕಾಲದಲ್ಲಿ ಜೀವಿಸುತ್ತಿರುವುದರ ಫಲವಿದು. ಪ್ರೇಮ ಪತ್ರದಲ್ಲಿಯೂ ಕೃಷಿ ಬಗ್ಗೆ ಹೇಳಿ ಕೊರೆಯುತ್ತಿರುವುದಕ್ಕೆ ಕ್ಷಮೆ ಇರಲಿ!ನನಗೆ ಗೊತ್ತು. ನಾವಿಬ್ಬರೂ ಬೇರೆ-ಬೇರೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದು. ಹಿಂದೊಮ್ಮೆ, ನಾನು ಸತ್ತು ಸ್ವರ್ಗ ಸೇರುವ ಮಾರ್ಗ ಕೃಷಿ ಎಂದಾಗ, ನೀನು “ನೀ ಕೃಷಿಗೋಸ್ಕರ ಸಾಯೀ, ನಾನು ನಿನಗೋಸ್ಕರ ಸಾಯುತ್ತೀನಿ” ಎಂದು ಹೇಳಿದ‘dialogue’ಅನ್ನು ಗಂಭೀರವಾಗಿ ಪರಿಗಣಿಸಬೇಕಾ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ದೋಣಿಗಳು ನೀರಿನಲ್ಲಿಯೇ ಸಾಗಬೇಕಲ್ಲ?ಈ ಮಧ್ಯೆ ನಿಮ್ಮ ಮನೆಯಲ್ಲಿ ನಿನಗೆ ವರನ ಹುಡುಕಾಟ ಮುಂದುವರಿದಿರುವುದು, ಅದರಲ್ಲೂ ಇತ್ತೀಚೆಗೆ ನೋಡಿದ ಹುಡುಗನನ್ನು, ನೋಡಲು ಮತ್ತು ಸ್ವಭಾವದಲ್ಲಿ ನನ್ನಂತೆ ಇರುವನೆಂದು ಹೇಳಿ ನಿಮ್ಮಮ್ಮ ತಿರಸ್ಕರಿಸಿರುವುದು ತಿಳಿಯಿತು. ನಿಮ್ಮಮ್ಮನಿಗೆ ನಿನಗೆ ಎಂಥಹ ಹುಡುಗ ಸರಿಹೊಂದುವುದಿಲ್ಲ ಎಂಬುದರ ಬಗ್ಗೆಗಿರುವ ಖಚಿತತೆ ನಿನ್ನಲ್ಲಿ ಅಚ್ಚರಿಯನ್ನುಂಟು ಮಾಡಿದೆ!!!If you love someone you must be prepared to set them freeಎನ್ನುವಂತೆ ನಾವಿಬ್ಬರೂ ನಮ್ಮೆಲ್ಲ ಸಾಮ್ಯತೆ-ಭಿನ್ನತೆಗಳನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಪರಸ್ಪರರಲ್ಲಿ ಕಾಳಜಿ, ಗೌರವ, ಹೊಂದಾಣಿಕೆ ಮತ್ತು ನಂಬಿಕೆಯಿಂದ ಜೀವನ ಸಾಗಿಸುವುದೇ ಒಲವು. ಬದುಕು ಎಲ್ಲದಕ್ಕಿಂತ ಮುಖ್ಯವಾದದ್ದು. ಈ ಕ್ಷಣದ ನನ್ನ ಬದುಕಿನಲ್ಲಿ ನಿನ್ನಿಂದಾಗಿ ರೋಮಾಂಚನ, ಸಂತೋಷ, ಜೀವನ ಪ್ರೀತಿ ಹೆಚ್ಚಾಗಿದೆ.ಕಳೆದ ಬಾರಿ ನಿನ್ನ ಭೇಟಿ ಮಾಡಿದ ನಂತರ ಇದುವರೆಗಿನ ನನ್ನ ಜೀವನದಲ್ಲಿ ನಾನು ಬಹಳವಾಗಿ miss ಮಾಡಿಕೊಂಡ ಸಾಂಗತ್ಯದ ಕೊರತೆಯ ಅರಿವುಂಟಾಯಿತು. ಮೊಬೈಲ್‌ಗಳಲ್ಲಿ ಹರಿದಾಡುವ 'miss u' ಸಂದೇಶದ ನಿಜ ಅರ್ಥ ಅನುಭವಪೂರ್ವಕವಾಗಿ ಆಯ್ತು.

ಒಲವಿನ ಸಾಂಗತ್ಯದ ನಡುವೆಯೂ ಪರಸ್ಪರ ನಮ್ಮಿಬ್ಬರಿಗೆ ಸಂಪೂರ್ಣ ಸ್ವತಂತ್ರವಾಗಿರುವ ಮೂಲಭೂತವಾದ ಹಕ್ಕನ್ನು ನಾವು ಕಳೆದುಕೊಳ್ಳದೇ ಮತ್ತು ಪರಸ್ಪರರ ಸ್ವತಂತ್ರದಲ್ಲಿ ಹಸ್ತಕ್ಷೇಪ ಮಾಡದೆ ಬದುಕನು ಸಾಗಿಸುವುದು ನಮ್ಮ ಮುಂದಿರುವ ಸವಾಲು.

ಏಕೆಂದರೆ ಸ್ವಾತಂತ್ರವಿದ್ದೆಡೆ ಆನಂದವಿರುತ್ತದೆ. ಪರಸ್ಪರರ ಸಾಮ್ಯತೆ ಮತ್ತು ಭಿನ್ನತೆಗಳ ಅರಿವಿನೊಂದಿಗೆ ಪರಿಪಕ್ವತೆಯತ್ತ ಸಾಗಲು ನಮ್ಮ ಒಲವು ನೆರವಾಗಲಿ ಎಂಬ ಆಶಯದೊಂದಿಗೆ,

-ನಿನ್ನ `ಪಿ'

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry