ನೀವು ಮಾಲೀಕರು, ನಾವು ಸೇವಕರು

7

ನೀವು ಮಾಲೀಕರು, ನಾವು ಸೇವಕರು

Published:
Updated:

ಮೈಸೂರು: ನನ್ನ ಜೀವನದ ಕೊನೆಯ ದಿನಗಳಲ್ಲಿ ಈ ರಾಜ್ಯವು ಸುಭಿಕ್ಷ ಸರ್ಕಾರವೊಂದರ ಆಡಳಿತದಲ್ಲಿ ಇರುವುದನ್ನು ನೋಡಲು ಬಯಸುತ್ತೇನೆ. ನೀವು ನನ್ನ ಮಾಲೀಕರು ನಾವು ನಿಮ್ಮ ಸೇವಕರು.

 

ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷವನ್ನು ಆಶೀರ್ವದಿಸಿ ಎಂದು ಮಾಜಿ ಪ್ರಧಾನಿ ಮತ್ತು ಜಾತ್ಯತೀತ ಜನತಾದಳದ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಶುಕ್ರವಾರ ಸಂಜೆ ನಡೆದ ಜೆಡಿಎಸ್ ಜಿಲ್ಲಾ ಘಟಕದ ಸಮಾವೇಶದಲ್ಲಿ ಅವರು ಕಣ್ಣೀರು ಸುರಿಸುತ್ತಲೇ ಭಾಷಣ ಮಾಡಿದರು.`ಕಾಂಗ್ರೆಸ್, ಬಿಜೆಪಿ ಪಕ್ಷಗಳು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಜನರು ಈ ಕೇಂದ್ರ ಕಾಂಗ್ರೆಸ್ ಮತ್ತು ರಾಜ್ಯದ ಬಿಜೆಪಿ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಸಂಸತ್ ಅಧಿವೇಶನಗಳಲ್ಲಿ ಭಾಗವಹಿಸಿದಾಗ ನನಗೆ ದುಃಖ ವಾಗುತ್ತದೆ. ಜನರು ನಮ್ಮನ್ನು ಆರಿಸಿ ಕಳಿಸಿದ್ದು ಏಕೆ ಎಂದು ಮನಕ್ಕೆ ತೀವ್ರ ನೋವಾಗುತ್ತದೆ. ಅಲ್ಲಿಯ ವಾತಾವರಣ ಹಾಗಿದೆ~ ಎಂದು ಗದ್ಗದಿತರಾದರು.`ಮೈಸೂರು ಜಿಲ್ಲೆಯಲ್ಲಿರುವ 11 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಆರಿಸಿ ತರಬೇಕು. ಅದು ಸಾಧ್ಯವಾಗಬೇಕಾದರೆ ಇಲ್ಲಿಯ ಘಟಕದ ನಾಯಕರು ಒಂದುಗೂಡಿ ದುಡಿಯಬೇಕು. ಯಾರೇ ಮಂತ್ರಿ, ಶಾಸಕ, ಸಂಸದರಾದರೂ ಪಕ್ಷವು ಅಧಿಕಾರ ಹಿಡಿದು, ನಾಡಿನ ಜನರ ಶ್ರೇಯಕ್ಕಾಗಿ ದುಡಿಯುವಂತಾಗಬೇಕು. ಅದಕ್ಕಾಗಿ ನೀವು ನಾಯಕರು ಒಂದಾಗಬೇಕು~ ಎಂದು ಒತ್ತಿ ಹೇಳಿದರು.`ಎರಡು ಲಕ್ಷ ಕೋಟಿ ಮೌಲ್ಯದ 2ಜಿ ಸ್ಪೆಕ್ಟ್ರಂ ಹಗರಣವೂ ಸೇರಿದಂತೆ ಹಲವು ಕೋಟಿ ಹಗರಣಗಳನ್ನು ಹುಟ್ಟುಹಾಕಿದ್ದು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ರಾಜ್ಯದಲ್ಲಿ ಬಿಜೆಪಿಯ ಆಡಳಿತದ ವೈಖರಿ ನಿಮಗೇ ಗೊತ್ತಿದೆ. ಇದೀಗ ರಾಷ್ಟ್ರೀಯ ಪಕ್ಷಗಳ ಆಡಳಿತವು ವಿಫಲವಾಗಿದ್ದು, ಮುಂದೆ ಪ್ರಾಂತೀಯ ಪಕ್ಷಗಳಿಗೇ ಉಜ್ವಲವಾದ ಭವಿಷ್ಯವಿದೆ. ಕುಮಾರಸ್ವಾಮಿಯವರಿಗೆ ಸದಾ ಕರ್ನಾಟಕದ ಅಭಿವೃದ್ಧಿಯ ಚಿಂತೆ. ಅವರಿಗೆ ಒಂದು ಅವಕಾಶ ಕೊಡಿ~ ಎಂದು ಹೇಳಿದರು.  ಬಿಜೆಪಿಗೆ ಪ್ರಾಯಶ್ಚಿತ್ತವೇ ಗತಿ

`ರೈತನ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷವು ರೈತ ಸಮುದಾಯಕ್ಕೆ ಗೌರವಯುತ ಬಾಳು ನೀಡಿಲ್ಲ. ಕೃಷಿಕರ ಯಾವುದೇ ಸಮಸ್ಯೆಗೂ ಸ್ಪಂದಿಸಿಲ್ಲ. ತಾವು 20 ತಿಂಗಳ ಅಧಿಕಾರದಲ್ಲಿಯೇ ರೈತರ 2500 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದನ್ನು ಜನ ಮರೆತಿಲ್ಲ.

 

ಆಗ ಹಣಕಾಸು ಕಾರ್ಯದರ್ಶಿಯಾಗಿದ್ದ ಸುಬ್ರಹ್ಮಣ್ಯ ಅವರ ಸಲಹೆ ಸೂಚನೆಗಳನ್ನು ಸದಾ ಸ್ಮರಿಸಬೇಕು~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.`ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ್ದ ಕೃಷಿ ಬಜೆಟ್ ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ. ಕೇವಲ ಶೇಕಡಾ 26ರಷ್ಟು ಹಣ ಮಾತ್ರ ಖರ್ಚಾಗಿದೆ. ಕಲ್ಪನೆಗೂ ನಿಲುಕದ ಹಗರಣಗಳು, ಅನೈತಿಕತೆಗಳು ಈ ಸರ್ಕಾರದಲ್ಲಿ ಆಗಿ ಹೋಗಿವೆ.ಇಂತಹ ಕೆಟ್ಟ ಸರ್ಕಾರವನ್ನು ಕಂಡಿಲ್ಲ. ಅಧಿಕಾರದ ಆಸೆಯಿಂದ ಜೆಡಿಎಸ್ ಬಿಟ್ಟುಹೋಗಿರುವ ಕೆಲವು ಹಿರಿಯ ನಾಯಕರು ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ಮನೆ ಬಾಗಿಲಿನಲ್ಲಿ ಕಾಯುತ್ತ ನಿಂತಿದ್ದಾರೆ. ದುರಾಸೆಯೇ ಅವರನ್ನು ಇಂತಹ ಸ್ಥಿತಿಗೆ ತಂದಿದೆ. ಪಕ್ಷದಲ್ಲಿ ಒಗ್ಗಟ್ಟಾಗಿದ್ದರೆ, ಕಾರ್ಯಕರ್ತರು ಶ್ರಮಪಟ್ಟರೆ ಸೇವೆಯ ಅವಕಾಶ ಸಿಗುತ್ತದೆ~ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ, ಚೆಲುವರಾಯಸ್ವಾಮಿ, ಬಂಡೆಪ್ಪ ಕಾಶೆಂಪುರ, ಜಮೀರ್ ಅಹ್ಮದ್, ಬಸವರಾಜ ಯತ್ನಾಳ, ಶಾಸಕರಾದ ಸಾ.ರಾ ಮಹೇಶ್, ಚಿಕ್ಕಮಾದು, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಚಿತ್ರನಟಿ ಪೂಜಾ ಗಾಂಧಿ, ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ, ಸಂದೇಶಸ್ವಾಮಿ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry