ನೀವು ಯಾರು ಎಂದ ಅಧಿಕಾರಿ!

7

ನೀವು ಯಾರು ಎಂದ ಅಧಿಕಾರಿ!

Published:
Updated:

ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತವರಿನ ಅಂಗಳದಲ್ಲಿಯೇ ಮುಜುಗರ ಎದುರಿಸಬೇಕಾದ ಘಟನೆ ಮಂಗಳವಾರ ಜರುಗಿದೆ. ಗುರುತಿನ ಚೀಟಿ ಇಲ್ಲದ ಕಾರಣ ಪಶ್ಚಿಮ ಬಂಗಾಳದ ಹೀರೊ ಗಂಗೂಲಿ ಈಡನ್ ಗಾರ್ಡನ್ಸ್ ಕ್ರೀಡಾಂಗಣದೊಳಗೆ ಪ್ರವೇಶಿಸಲು ಪರದಾಡಬೇಕಾಯಿತು.ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಇಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಐದನೇ ಪಂದ್ಯದ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಭ್ರಷ್ಟಾಚಾರ ತಡೆ ಘಟಕದ (ಎಸಿಯು) ಅಧಿಕಾರಿಯೊಬ್ಬರು ಅಂಗಳ ಪ್ರವೇಶಿಸಲು ಗಂಗೂಲಿ ಅವರಿಗೆ ಅವಕಾಶ ನೀಡಲಿಲ್ಲ.ನಿಯೊ ಕ್ರಿಕೆಟ್ ಟಿವಿ ಚಾನೆಲ್‌ಗೆ ವೀಕ್ಷಕ ವಿವರಣೆ ನೀಡುತ್ತಿರುವ ಸೌರವ್ ಈ ಪಂದ್ಯದ ಟಾಸ್‌ಗೆ ಮುನ್ನ `ಪಿಚ್ ರಿಪೋರ್ಟ್~ ಮಾಡಲು ಈಡನ್ ಗಾರ್ಡನ್ಸ್ ಅಂಗಳದೊಳಗೆ ತೆರಳಲು ಮುಂದಾದರು. ಆದರೆ ಅಂಗಳದ ಒಳ ಪ್ರವೇಶಿಸುವ ಸಂದರ್ಭ ಎಸಿಯು ಅಧಿಕಾರಿಯೊಬ್ಬರು, `ನೀವು ಯಾರು?~ ಎಂದು ಪ್ರಶ್ನಿಸಿದ್ದಾರೆ ಎಂಬುದು ತಿಳಿದುಬಂದಿದೆ.ಆಗ ಅವರು `ನಾನು ಸೌರವ್ ಗಂಗೂಲಿ. ಪಿಚ್ ರಿಪೋರ್ಟ್‌ಗಾಗಿ ತೆರಳುತ್ತಿದ್ದೇನೆ~ ಎಂದು ಉತ್ತರಿಸಿದ್ದಾರೆ. ಆದರೆ ಅಷ್ಟಕ್ಕೆ ತೃಪ್ತರಾಗದ ಆ ಅಧಿಕಾರಿ ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದಾರೆ.ಆದರೆ ಗಂಗೂಲಿ ತಮ್ಮ ಗುರುತಿನ ಚೀಟಿಯನ್ನು ಕಾಮೆಂಟರಿ ಬಾಕ್ಸ್‌ನಲ್ಲಿಯೇ ಬಿಟ್ಟು ಬಂದಿದ್ದರು. ಮತ್ತೆ ಕಾಮೆಂಟರಿ ಬಾಕ್ಸ್‌ಗೆ ತೆರಳಿ ಗುರುತಿನ ಚೀಟಿ ತಂದ ಬಳಿಕವಷ್ಟೇ ಗಂಗೂಲಿ ಅಂಗಳದ ಒಳಗೆ ಪ್ರವೇಶಿಸಿದ್ದಾರೆ.

ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಜಂಟಿ ಕಾರ್ಯದರ್ಶಿ ವಿಶ್ವರೂಪ್ ದೇವ್ ಇಂತಹ ಘಟನೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ.`ಗೊಂದಲವನ್ನು ಬಗೆಹರಿಸಲಾಗಿದೆ. ಆದರೆ ಈ ಕುರಿತು ನಾನು ಗಂಗೂಲಿ ಜೊತೆ ಮಾತನಾಡುವೆ~ ಎಂದು ಅವರು ನುಡಿದಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಆಟಗಾರರು ಹಾಗೂ ತಂಡದ ಅಧಿಕಾರಿಗಳು ಬಳಸುವ ಹಾದಿಯಲ್ಲಿ ಗಂಗೂಲಿ ಅಂಗಳ ಪ್ರವೇಶಿಸಲು ಮುಂದಾದಾಗ ಯಾದವ್ ತಡೆದರು ಎನ್ನಲಾಗಿದೆ.`ನೀವು ಗಂಗೂಲಿ ಆಗಿರಬಹುದು. ಆದರೆ ಐಸಿಸಿ ನಿಯಮದ ಪ್ರಕಾರ ಇಲ್ಲಿಂದ ಅಂಗಳಕ್ಕೆ ಪ್ರವೇಶಿಸುವಂತಿಲ್ಲ~ ಎಂದು ಆ ಅಧಿಕಾರಿ ತಿಳಿಸಿದರು ಎಂದು ಮೂಲಗಳ ಹೇಳಿವೆ. ಈ ಘಟನೆಯ ಬಳಿಕ ಗಂಗೂಲಿ ಇನ್ನೊಂದು ಪ್ರವೇಶದ್ವಾರದ ಮೂಲಕ ಪಿಚ್ ರಿಪೋರ್ಟ್‌ಗಾಗಿ ಅಂಗಳದೊಳಕ್ಕೆ ಪ್ರವೇಶಿಸಿದರು. ಹುಟ್ಟೂರ ಅಂಗಳದಲ್ಲೇ ಕಹಿ ಅನುಭವ ಆದ ಈ ಘಟನೆಯ ಬಗ್ಗೆ ಸೌರವ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry