ಮಂಗಳವಾರ, ಮೇ 11, 2021
22 °C

ನೀವು ಹೇಳಿದವರಿಗೆ ಸಂಪುಟದಲ್ಲಿ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನೀವು ಹೇಳಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೇವೆ. ಹೆಸರು ಕೊಡಿ~- ಪಕ್ಷದ ಈ ಸೂಚನೆಗೆ ಬಳ್ಳಾರಿಯ ರೆಡ್ಡಿ ಸಹೋದರರು ಸೊಪ್ಪು ಹಾಕುತ್ತಿಲ್ಲ.`ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಹೆಸರು ಇರುವ ಕಾರಣಕ್ಕೆ ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಆಗುವುದಿಲ್ಲ. ಆದರೆ, ನೀವು ಹೇಳಿದವರನ್ನು ಸೇರಿಸಿಕೊಳ್ಳುತ್ತೇವೆ~ ಎನ್ನುವ ಪಕ್ಷದ ಸಲಹೆಗೆ `ಗಣಿ ಧಣಿ~ ಶಾಸಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸಮಸ್ಯೆ ತಲೆದೋರಿದೆ.ಶಾಸಕರಾದ ಕರುಣಾಕರೆಡ್ಡಿ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಹೆಸರು ಲೋಕಾಯುಕ್ತ ವರದಿಯಲ್ಲಿದೆ. ಅಷ್ಟೇ ಅಲ್ಲದೆ, ಅವರನ್ನು ಸಂಪುಟದಿಂದ ಕೈಬಿಡಬೇಕೆಂದೂ ಸೂಚಿಸಲಾಗಿದೆ.ಹೀಗಾಗಿ ಈ ಮೂವರನ್ನು ಬಿಟ್ಟು, ಜನಾರ್ದನ ರೆಡ್ಡಿ ಅವರ ಸಹೋದರ ಸೋಮಶೇಖರ ರೆಡ್ಡಿ, ಶ್ರೀರಾಮುಲು ಅವರ ಭಾವಮೈದುನ ಸುರೇಶಬಾಬು ಮತ್ತು ಸೋಮಲಿಂಗಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧ ಇದೆ. ಈ ವಿಷಯವನ್ನು ರೆಡ್ಡಿ ಸಹೋದರರಿಗೂ ಪಕ್ಷ ತಿಳಿಸಿದೆ. ಪಕ್ಷದ ಹೈಕಮಾಂಡ್ ಈ ವಿಷಯದಲ್ಲಿ ಮಧ್ಯಸ್ಥಿಕೆ ಕೂಡ ವಹಿಸಿತ್ತು. ಆದರೆ, ಈ ಯಾವ ಸಲಹೆಗೂ ರೆಡ್ಡಿ ಸಹೋದರರು ಒಪ್ಪುತ್ತಿಲ್ಲ. ಬದಲಿಗೆ `ಆದರೆ ನಾವೇ ಸಚಿವರಾಗಬೇಕು. ಇಲ್ಲದಿದ್ದರೆ ಇಲ್ಲ~ ಎನ್ನುವ ಸಂದೇಶ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಇದಕ್ಕೆ ಒಪ್ಪಲು ಪಕ್ಷ ಸಿದ್ಧ ಇಲ್ಲ. ಹೀಗಾಗಿ ಗೊಂದಲ ಸೃಷ್ಟಿಯಾಗಿದ್ದು, ಒತ್ತಡ ತಂತ್ರದ ಭಾಗವಾಗಿ ಶ್ರೀರಾಮುಲು ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವ ಕಾರ್ಯತಂತ್ರ ರೂಪಿಸಲಾಗಿದೆ. ಇದನ್ನು ಪಕ್ಷ ಹೆಚ್ಚು ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ರೆಡ್ಡಿ ಸಹೋದರರ ಜತೆ ದೂರವಾಣಿ ಮೂಲಕ ಮಾತನಾಡಿದ್ದು, ಪಕ್ಷ ತೊರೆಯದಂತೆ ಸಲಹೆ ಮಾಡಿದ್ದಾರೆ.ಇದಕ್ಕೆ ಜನಾರ್ದನ ರೆಡ್ಡಿ ಉತ್ತರಿಸಿ, `ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಶ್ರೀರಾಮುಲು ರಾಜೀನಾಮೆ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ, ಪುನರಾಯ್ಕೆ ಆಗಿ ಜನ ನಮ್ಮ ಜತೆ ಇದ್ದಾರೆ ಎಂಬುದನ್ನು ತೋರಿಸಲಿದ್ದಾರೆ. ಇಷ್ಟು ಬಿಟ್ಟರೆ ಪಕ್ಷ ಬಿಡುವ ಪ್ರಶ್ನೆ ಇಲ್ಲ~ ಎಂದು ಹೇಳಿದ್ದಾರೆ ಎನ್ನಲಾಗಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.