ಸೋಮವಾರ, ನವೆಂಬರ್ 18, 2019
27 °C

ನೀವೂ ನಿರ್ಮಾಪಕರಾಗಲು ಬಯಸುವಿರಾ?

Published:
Updated:

ಕಲೆ-ಕಾಸು ಬೆರೆತ ಉದ್ಯಮ ಸಿನಿಮಾ. ಕಾಸಿದ್ದರೆ ಇಲ್ಲಿ ಕೈಲಾಸ ಸೃಷ್ಟಿಸಬಹುದೆ? `ಸಾಧ್ಯವಿಲ್ಲ' ಎನ್ನುತ್ತಾರೆ ಅನುಭವಿಗಳು. ಬೇರೆ ಉದ್ಯಮದಂತೆ ಇದು ಇಂತಿಷ್ಟೇ ಹಣ ಹಾಕಿ ಇಷ್ಟೇ ಲಾಭ ಗಳಿಸಬಹುದು ಎಂದು ಖಚಿತವಾಗಿ ಹೇಳಲಾಗದ ಉದ್ಯಮ.`ಕನಸು ಮಾರುವ ಅಂಗಡಿ'ಯವರು ಅಂದರೆ ನಿರ್ಮಾಪಕರು ಕೂಡ ಕನಸುಗಾರರಾಗಿರಬೇಕು. ಅವರಿಗೆ ಕಲೆಯತ್ತ ಒಲವಿರಬೇಕು. ಕಲೆ ಒಲವಿದ್ದ ಮಾತ್ರಕ್ಕೆ `ಸಿನಿ ದೇವಿ' ಒಲಿಯುತ್ತಾಳೆ ಎನ್ನುವುದು ಕೂಡ ಸಿಹಿಯಾದ ಸುಳ್ಳು. ಕಾಸಿನ ಲೆಕ್ಕಾಚಾರ ಗೊತ್ತಿರಬೇಕು. ಇದನ್ನು ಚೆನ್ನಾಗಿ ಬಲ್ಲವರು ಕಲೆಯನ್ನೂ ಅರಿತಿರಬೇಕು. ಅಂದರೆ ಎರಡೂ ಅಂಶಗಳು ಸೂಕ್ತವಾಗಿ ಬೆರೆತಿದ್ದರೇನೇ ಸಿನಿಮಾ ಕ್ಷೇತ್ರ ಪ್ರವೇಶ, ಪ್ರಯೋಗ, ಗಳಿಕೆ ಸಾಧ್ಯ.ಕನಿಷ್ಠ ಬಂಡವಾಳ

ಹೊಸ ನಿರ್ಮಾಪಕರನ್ನು ಕಾಡುವ ಮೂಲ ಪ್ರಶ್ನೆ ಇದು. ಈಗಿನ ಕಾಲಕ್ಕೆ ಕನಿಷ್ಠ ರೂ80 ಲಕ್ಷ ಬಂಡವಾಳ ಬೇಕು ಎನ್ನುತ್ತಾರೆ `ಕಾಶಿನಾಥ್ ನಿರ್ಮಾಪಕರ ತರಬೇತಿ ಸಂಸ್ಥೆ' ಸಂಸ್ಥಾಪಕ, ನಟ, ನಿರ್ದೇಶಕ ಕಾಶಿನಾಥ್.`ಕಾಸಿಗೆ ತಕ್ಕ ಕಜ್ಜಾಯ' ಗಾದೆಮಾತು ಚಿತ್ರ ನಿರ್ಮಾಣಕ್ಕೆ ಹೇಳಿ ಮಾಡಿಸಿದಂತಿದೆ. ಬೆಳಗಿನ ತಿಂಡಿಗೆ ಬರೀ ಇಡ್ಲಿ-ಸಾಂಬಾರ್‌ಗೆ ರೂ16 ಸಾಕು. ಚೌಚೌ ಬಾತೂ ಸೇರಿದರೆ ಇನ್ನಷ್ಟು ವೆಚ್ಚವಾಗುತ್ತದೆ. ಈ ಮಾತು ಸಿನಿಮಾ ನಿರ್ಮಾಣಕ್ಕೂ ಅನ್ವಯಿಸುತ್ತದೆ.ಹೆಚ್ಚು ದೃಶ್ಯ ಪರಿಣಾಮಗಳಿಲ್ಲದೆ ಸರಳವಾಗಿ ಕತೆ ಹೇಳುವವರಿಗೆ ಕಡಿಮೆ ಬಂಡವಾಳ, ಅದ್ದೂರಿಯಾಗಿ ಮಂಡಿಸುವವರಿಗೆ ಹೆಚ್ಚು ಬಂಡವಾಳ ಬೇಕು. ಲಾಭ ಪ್ರಮಾಣ ಹೂಡಿಕೆ ಅವಲಂಬಿಸಿರುತ್ತದೆ. ಕಡಿಮೆ ಹಣ ಹಾಕಿ ಕಡಿಮೆ ಲಾಭ ಪಡೆಯುವ ನಿರ್ಮಾಪಕರೂ ಇದ್ದಾರೆ. ಹೆಚ್ಚು ಹೂಡಿ ಅಧಿಕ ಲಾಭ ಗಳಿಸುವವರೂ ಇದ್ದಾರೆ.ಚಿತ್ರ ರೂಪಿಸಲು ನಿರ್ಮಾಪಕ ಹೇಗೆ ಸಿದ್ಧವಾಗಬೇಕು? ಎಂಬುದು ಎರಡನೇ ಪ್ರಶ್ನೆ.`ಒಂದಿಷ್ಟು ಬಂಡವಾಳ ಇದ್ದರೂ ಚಿತ್ರ ನಿರ್ಮಾಣ ಸಾಧ್ಯ' ಎಂದು ನಂಬಿಸುವವರು ಚಿತ್ರರಂಗದಲ್ಲಿದ್ದಾರೆ. `ಟಿವಿ ಹಕ್ಕು ಸಿಗುತ್ತದೆ. ವಿತರಕರೂ ಮೊದಲೇ ಹಣ ಕೊಡುತ್ತಾರೆ' ಎಂಬ ನಂಬಿಕೆ ಹುಟ್ಟಿಸಿ, ನಿರ್ಮಾಪಕರಿಗೆ ಒಂದಿಷ್ಟು ಮುಂಗಡವನ್ನೂ ಕೊಡಿಸುತ್ತಾರೆ. ಮುಂಗಡ ದೊರೆತ ಮೇಲೆ ಅರ್ಧಂಬರ್ಧ ಬಂಡವಾಳ ಹೂಡಿದವರು ಸಿನಿಮಾ ತಯಾರಾಗಿಯೇ ಹೋಯಿತು ಎಂಬ ಭ್ರಮೆಯಲ್ಲಿರುತ್ತಾರೆ. ಅಲ್ಲಿಂದಲೇ ಕಷ್ಟಗಳು ಆರಂಭ.ಮುಂಗಡ ಪಡೆದಿರುವುದರಿಂದ ಸಿನಿಮಾ ಪೂರ್ಣಗೊಳಿಸಬೇಕೆಂಬ ಒತ್ತಡಕ್ಕೆ ನಿರ್ಮಾಪಕರು ಸಿಲುಕುತ್ತಾರೆ. ಅರ್ಧ ಹೂಡಿಕೆ ಸಾಲದಾದಾಗ ಮನೆ-ಮಠ ಮಾರಿ ಸಾಲ ಮಾಡುತ್ತಾರೆ. ಸಾಲದ ಹಣ ಹೊಂದಿಸುವ ಹೊತ್ತಿಗೆ ನಿರ್ಮಾಣ ಪ್ರಕ್ರಿಯೆಯಲ್ಲಿ ಏರುಪೇರಾಗಿರುತ್ತದೆ. ಅದನ್ನು ಸರಿದೂಗಿಸಲು ಇನ್ನಷ್ಟು ಹೆಚ್ಚುವರಿ ಹಣ ಬೇಕೇಬೇಕು. ಅಂತಹವರಿಗೆ ಸಿನಿಮಾ ಮುಗಿಯುವ ಹೊತ್ತಿಗೆ   ಸಾಕಾಗಿ ಹೋಗಿರುತ್ತದೆ. ಅಂತಹ ಹೊಸ ನಿರ್ಮಾಪಕರ ಉದ್ಘಾರ; `ಗಾಂಧಿನಗರ ಸಹವಾಸ ಸಾಕಪ್ಪಾ ಸಾಕು'...ಹಾಗೆಂದು ನಿರ್ಮಾಪಕರು ಹತಾಶರಾಗಬೇಕಿಲ್ಲ. ಆದರೆ, ಚಿತ್ರ ನಿರ್ಮಾಣಕ್ಕೆ ಬೇಕಾಗುವುದಕ್ಕಿಂತ ಸ್ವಲ್ಪ ಹೆಚ್ಚು ಹಣ ಹೊಂದಿರುವುದು ಒಳ್ಳೆಯದು. ಕಾರಣ, ಸಿನಿಮಾ ನಿರ್ಮಾಣಕ್ಕೆ ಹಲವು ಕೈಗಳು ಸೇರಬೇಕು. ಕಲಾವಿದರು ಲಭ್ಯವಿದ್ದಾಗ ತಂತ್ರಜ್ಞರು ಲಭಿಸುವುದಿಲ್ಲ. ಕಲಾವಿದರು, ತಂತ್ರಜ್ಞರು ಸಿದ್ಧವಿದ್ದಾಗ ಚಿತ್ರೀಕರಣಕ್ಕೆ ಲೊಕೇಶನ್ ಅಣಿಯಾಗದೇ ಇರಬಹುದು. ಇದನ್ನೆಲ್ಲಾ ನಿಭಾಯಿಸಲು ಹೆಚ್ಚು ಹಣ ಇರಲೇಬೇಕು. ಜತೆಗೆ ಚಿತ್ರರಂಗದ ವಿವಿಧ ಹಂತಗಳ ಪರಿಚಯವೂ ನಿರ್ಮಾಪಕರಿಗೆ ಇರಬೇಕು. ನಿರ್ಮಾಣ ಪೂರ್ವ ಹಂತ, ನಿರ್ಮಾಣ ಸಂದರ್ಭ, ನಿರ್ಮಾಣೋತ್ತರ ಹಂತದಲ್ಲಿ ಏನೇನಾಗುತ್ತದೆ ಎಂಬ ಅರಿವಿರಬೇಕು.`ಅತ್ಯುತ್ತಮ ನಿರ್ಮಾಪಕರು ಕತೆಯ ಸ್ಕ್ರಿಪ್ಟ್ ಹಿಡಿದು ಬರುತ್ತಾರೆ, ಬಂಡವಾಳವನ್ನಲ್ಲ' ಎಂಬುದು ಲೋಕಾನುಭವದ ಮಾತು. ಅವರು ಸಿನಿಮಾ ಬಗ್ಗೆ ಅಭಿರುಚಿಯುಳ್ಳ ನಿರ್ಮಾಪಕ. ತಮ್ಮ ಪ್ರೇಕ್ಷಕರು ಯಾರು ಎಂಬ ಕಲ್ಪನೆಯೂ ನಿರ್ಮಾಪಕರಿಗೆ ಇರಬೇಕು.ತನ್ನ ಚಿತ್ರ ಕಲಾತ್ಮಕವೇ, ವ್ಯಾಪಾರಿ ಸ್ವರೂಪದ್ದೇ, ಮಕ್ಕಳಿಗೆಂದು ಮಾಡಿದ್ದೇ, ಆಧ್ಯಾತ್ಮಿಕ ಚಿತ್ರವೇ ಎಂಬ ಸಾಮಾನ್ಯ ಜ್ಞಾನ ಅಗತ್ಯ. ಜತೆಗೆ ಯಾವ ಭಾಷೆಯ ಪ್ರೇಕ್ಷಕರಿಗೆ ಚಿತ್ರ ನಿರ್ಮಿಸುತ್ತಿದ್ದೇವೆ ಎಂಬ ಎಚ್ಚರವೂ ಇರಬೇಕು. ಕತೆಗೆ ಅಗತ್ಯವಿದೆಯೆಂದು ಅರ್ಧಕ್ಕರ್ಧ ಬೇರೆ ಭಾಷೆಯದನ್ನು ತುಂಬಿಕೊಂಡು ಸೋತ ಕನ್ನಡ ಚಿತ್ರಗಳೂ ಇವೆ.ನಿರ್ಮಾಪಕರು ಮೊದಲು ಮಾಡಬೇಕಾದ ಕೆಲಸ ಭಿನ್ನ ಭಾಷೆಗಳ ಭಿನ್ನ ಕಾಲಮಾನದ ಸಿನಿಮಾಗಳನ್ನು ವೀಕ್ಷಿಸುವುದು. ಒಂದು ಸಿನಿಮಾ ಹೇಗೆ ತಯಾರಿಸಬೇಕು ಎಂಬುದಕ್ಕೆ ಉತ್ತಮ ಚಲನಚಿತ್ರಗಳನ್ನು; ಹೇಗೆ ತಯಾರಿಸಬಾರದು ಎಂಬುದಕ್ಕೆ ಕೆಟ್ಟ ಚಿತ್ರಗಳನ್ನೂ ವೀಕ್ಷಿಸಿ ಮನದಟ್ಟು ಮಾಡಿಕೊಳ್ಳುವುದು ಅಗತ್ಯ.ಥಿಯೇಟರ್‌ನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಯನ್ನೂ ಸೂಕ್ಷ್ಮವಾಗಿ ಅರಿಯುವುದೂ ಮುಖ್ಯ ಕಲಿಕೆ. ಪ್ರೇಕ್ಷಕರಿಗೆ ರೂ100 ಕೋಟಿ ಬಂಡವಾಳ ಹೂಡಿದ ಚಿತ್ರವೂ ಒಂದೇ, ರೂ1 ಕೋಟಿ ವೆಚ್ಚದ ಚಿತ್ರವೂ ಒಂದೇ. ಅವರ ಗಮನ ಉತ್ತಮ ಚಿತ್ರ ಯಾವುದು? ಎಂಬುದರೆಡೆಗೆ ಇರುತ್ತದೆಯೇ ವಿನಃ ಎಷ್ಟು ಬಂಡವಾಳದಲ್ಲಿ ಚಿತ್ರ ತಯಾರಿಸಲಾಗಿದೆ ಎಂಬುದರ ಮೇಲಲ್ಲ. ಹಾಗಾಗಿ ಉತ್ತಮ ನಿರ್ಮಾಪಕರೊಳಗೆ ಉತ್ತಮ ಪ್ರೇಕ್ಷಕನೂ ಇರುತ್ತಾನೆ.ನಿರ್ಮಾಪಕ, ನಿರ್ಮಾಣ ವ್ಯವಸ್ಥಾಪಕ ಹಾಗೂ ನಿರ್ದೇಶಕ ಚಿತ್ರದ ಆಧಾರ ಸ್ತಂಭಗಳು. ನಿರ್ಮಾಪಕನದು ಬಂಡವಾಳ ಹೂಡುವ, ತನ್ನಿಷ್ಟದ ಕತೆ ಒದಗಿಸುವ ಕೆಲಸ. ನಿರ್ಮಾಣ ವ್ಯವಸ್ಥಾಪಕ, ನಿರ್ಮಾಪಕರ ಪರವಾಗಿ ಶ್ರಮಿಸುತ್ತಾರೆ. ಚಿತ್ರೀಕರಣ ವೇಳೆ ನಿಗದಿ, ತಾಂತ್ರಿಕ ವರ್ಗ, ಕಲಾವಿದರ ಡೇಟ್ಸ್ ಹೊಂದಾಣಿಕೆ, ಸಂಭಾವನೆ ನಿಗದಿ, ಲೊಕೇಶನ್ ಆಯ್ಕೆ, ತಾಂತ್ರಿಕ ಸಾಧನಗಳನ್ನು ಹೊಂದಿಸುವುದು, ಪ್ರತಿದಿನದ ನಿರ್ಮಾಣ ಯೋಜನೆಗಳನ್ನು ತಯಾರಿಸಿ ಚಿತ್ರ ತಯಾರಿ ಸುಸೂತ್ರವಾಗಿ ನಡೆಯುವಂತೆ ಮಾಡುವುದು ಇವರ ಕಾರ್ಯ. ಇವರ ಹೊಣೆಗಾರಿಕೆ ಅತ್ಯಂತ ಮಹತ್ವದ್ದು. ನಂತರ ಚಿತ್ರ ರೂಪಿಸುವುದು ನಿರ್ದೇಶಕ. ಈ ಮೂವರ ಹೊಂದಾಣಿಕೆ ಎಷ್ಟು ಚೆನ್ನಾಗಿರುತ್ತದೋ ಅಷ್ಟೂ ಚೆನ್ನಾಗಿ ಚಿತ್ರ ಮೂಡುತ್ತದೆ. ಚಿತ್ರದ ಸೋಲು ಗೆಲುವಿಗೆ ಇವರೇ ಹೊಣೆ.ನಂತರದ್ದು ಪ್ರಾಯೋಗಿಕ ಪಾಠ. ಅರ್ಥಾತ್ ಸಿನಿಮಾ ತಯಾರಿಸುವಾಗಲೇ ಕಲಿಯಬೇಕಾದ ಪಾಠ. ನಿರ್ದೇಶಕನಿಗೆ ಸಿನಿಮಾ ನಿರ್ಮಾಣದಲ್ಲಿ ಯಾವ ವಿಚಾರ ಗೊತ್ತಿವೆಯೋ ಅದರಲ್ಲಿ ಕಾಲು ಭಾಗವನ್ನಾದರೂ ನಿರ್ಮಾಪಕ ಅರಿತಿರಬೇಕು. ಆಗ ನಿರ್ದೇಶಕನ ಕೆಲಸ ಹಗುರ, ಚಿತ್ರವೂ ದಿಕ್ಕು ತಪ್ಪುವುದಿಲ್ಲ. ನೂರು ಸಿನಿಮಾ ಮಾಡಿದ ಅನುಭವಿಗೂ ಹೊಸ ಸಿನಿಮಾ ಹೊಸ ಪಾಠಗಳನ್ನು ಕಲಿಸುತ್ತದೆ. ಹಿಂದೆ ಸಲೀಸಾಗಿ ನಡೆದ ಸಂಗತಿ ಈ ಬಾರಿ ಕೈಕೊಡಬಹುದು. `ನೋಡಿ ಕಲಿ ಮಾಡಿ ತಿಳಿ' ಪ್ರಾಯೋಗಿಕ ತಿಳಿವಳಿಕೆ ನಿರ್ಮಾಪಕರಿಗೆ ಅಗತ್ಯ, ತಾಳ್ಮೆಯೂ ಮುಖ್ಯ.

ಪ್ರತಿಕ್ರಿಯಿಸಿ (+)