ನೀಹಾರಿಕಾ ಲೋಕ: ಗೆಲಾಕ್ಸಿಗಳಿಗೂ ಡಯಟ್ ?

7

ನೀಹಾರಿಕಾ ಲೋಕ: ಗೆಲಾಕ್ಸಿಗಳಿಗೂ ಡಯಟ್ ?

Published:
Updated:
ನೀಹಾರಿಕಾ ಲೋಕ: ಗೆಲಾಕ್ಸಿಗಳಿಗೂ ಡಯಟ್ ?

‘ಕೋಮಾ ಬೆರೆನ್ಸೀಸ್’ ಅಥವಾ ಕೃಷ್ಣವೇಣಿ ಎಂಬುದು ಸಣ್ಣ ನಕ್ಷತ್ರಪುಂಜ. ಕೆದರಿದ ತಲೆಕೂದಲಿನ ಹಾಗೆ ಕಾಣುತ್ತದೆ. ಇದರಲ್ಲಿ ಗೆಲಾಕ್ಸಿಗಳ ಗುಚ್ಛವೊಂದಿದೆ. ಅವುಗಳಲ್ಲಿ ಒಂದನ್ನು ಕಾಲ್ಡ್‌ವೆಲ್ ಎಂಬಾತ ಮೊದಲು ಗುರುತಿಸಿದ್ದರಿಂದ ಅವನ ಪಟ್ಟಿಯಲ್ಲಿ 38ನೆಯ ನಮೂದಾಗಿದೆ. ‘ಎನ್‌ಜಿಸಿ’ ಪಟ್ಟಿಯಲ್ಲೂ 4565 ಎಂಬ ಸಂಖ್ಯೆ ಸಿಕ್ಕಿದೆ. ವಿಲಿಯಂ ಹರ್ಷೆಲ್ ನಕ್ಷೆಯಲಿ ್ಲಗುರುತಿಸಿದ್ದನಾದರೂ ಇದು ನಕ್ಷತ್ರವಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಇದು ನೀಹಾರಿಕೆ ಎಂಬ ವರ್ಗಕ್ಕೆ ಸೇರುತ್ತದೆ ಎಂಬುದನ್ನೂ ಆತ ಗಮನಿಸಿದಂತಿಲ್ಲ. ದೊಡ್ಡ ದೂರದರ್ಶಕಗಳಿಂದ ತೆಗೆದ ಛಾಯಾ ಚಿತ್ರಗಳಲ್ಲಿ ಸೂಜಿಯ ಹಾಗೆಯೇ ಕಾಣುತ್ತದೆ. ಇಷ್ಟು ತೆಳ್ಳಗೆ ಹೇಗೆ ಇದೆ? ಎಂಬುದು ಮುಖ್ಯ ಪ್ರಶ್ನೆ. ಇದರ ಆಕಾರದ ಆಧಾರದ ಮೇಲೆ ಇದೊಂದು ಸುರುಳಿ ಗೆಲಾಕ್ಸಿ ಎಂದು ತಿಳಿಯಬಹುದು.

 

ನಮ್ಮ ದೃಷ್ಟಿ ರೇಖೆಯಲ್ಲಿ ದೂಳಿನ ಹಾಸು ಅಡ್ಡ ಇರಬಹುದು ಎಂಬ ಅಂಶವೂ ತಿಳಿದುಬಂದಿದೆ. ಇನ್ನೂ ಒಂದು ಅಂಶವೆಂದರೆ ಇದು ನಮ್ಮ ಗೆಲಾಕ್ಸಿಯ ತಲಕ್ಕೆ ಲಂಬವಾಗಿರುವುದು. ಅಂದರೆ ಭೂಮಿಗೊಂದು ಧ್ರುವ ಇದ್ದಂತೆ ನಮ್ಮ ಆಕಾಶಗಂಗೆಗೂ ಇದೆ. ಅದು ಭ್ರಮಣೆಯನ್ನು ಸೂಚಿಸುವ ದಿಕ್ಕು.  ಈ ಗೆಲಾಕ್ಸಿ ಆಕಾಶಗಂಗೆಯ ಭ್ರಮಣೆಯ ಧ್ರುವದ ದಿಕ್ಕಿಗೇ ಇದೆ.  ಇದು ಕೇವಲ ಆಕಸ್ಮಿಕವಾಗಿರಬಹುದು. ಏಕೆಂದರೆ ಅಷ್ಟು ದೂರದ ಗೆಲಾಕ್ಸಿಗಳು ಯಾವುದೇ ಕೋನದಲ್ಲಿರುವುದೂ ಸಾಧ್ಯವಿದೆ. ಇದರ ದೂರವನ್ನು ಸುಮಾರು 30 ರಿಂದ 50 ಮಿಲಿಯನ್ ಜ್ಯೋತಿರ್ವರ್ಷಗಳು ಎಂದು ಲೆಕ್ಕ ಮಾಡಲಾಗಿದೆ. ವಿಸ್ತಾರ ಆಕಾಶಗಂಗೆಯಷ್ಟೇ - ಸುಮಾರು 100000 ಜ್ಯೋತಿರ್ವರ್ಷಗಳು.ವಿಶ್ವದ ದೂರಗಳ ಲೆಕ್ಕದಲ್ಲಿ ಹೇಳುವುದಾದರೆ ಇದು ಅಷ್ಟೇನೂ ದೂರದ್ದಲ್ಲ. ಸಣ್ಣ ದೂರದರ್ಶಕಗಳಿಗೆ ನಿಲುಕುವ ಪ್ರಕಾಶ ಈ ಸೂಜಿ ಗೆಲಾಕ್ಸಿಗೆ ಇದೆ.ಆದರೂ ಮೆಸಿಯೆನಂತಹ ವೀಕ್ಷಕನ ಚಾಣಾಕ್ಷ ಕಣ್ಣುಗಳಿಗೆ ಇದು ಏಕೆ ಕಾಣಲಿಲ್ಲ ಎಂಬುದೇ ಆಶ್ಚರ್ಯದ ಸಂಗತಿ.

ಹೀಗೆ ನಡುವಿನಲ್ಲಿ ತೆಳ್ಳಗೆ ಇರುವ ಗೆಲಾಕ್ಸಿಗಳು ಬಹಳ ಅಪೂರ್ವ. ಇದು ನಮಗೆ ಓರೆಯಾಗಿರುವ ದಿಕ್ಕು ಹೀಗೆ ಈ ಅಪೂರ್ವದ ದೃಶ್ಯವನ್ನು ತೆರೆದಿಡುತ್ತಿರಬಹುದು. ಹಾಗಾದರೆ ನಡು ತೆಳ್ಳಗಿರುವ ಗೆಲಾಕ್ಸಿ ಇದೊಂದೇ ಏಕೆ? ಎಂಬುದೊಂದು ಪ್ರಶ್ನೆಯಾಗಿತ್ತು.ಇತ್ತೀಚೆಗೆ ಎನ್‌ಜಿಸಿ 3621 ಎಂಬ ಇನ್ನೊಂದು ಗೆಲಾಕ್ಸಿ ತೆಳ್ಳಗಿದೆ ಎಂದು ಗೊತ್ತಾಗಿದೆ. ‘ಹೈಡ್ರಾ’ ಎಂಬ ನಕ್ಷತ್ರಪುಂಜದಲ್ಲಿರುವ ಇದು ಸುಮಾರು 22 ದಶಲಕ್ಷ ಜ್ಯೋತಿರ್ವರ್ಷ ದೂರದಲ್ಲಿದೆ. ಇಂತಹ ಆಕಾರಕ್ಕೆ ಅದರ ಸೌಮ್ಯ ಇತಿಹಾಸವೇ ಕಾರಣ. ಉಳಿದ ಎಲ್ಲ ಗೆಲಾಕ್ಸಿಗಳೂ ಸುತ್ತಲಿನ ಸಂಗಾತಿಗಳೊಡನೆ ಘರ್ಷಿಸಿ ತಿಂದುಬಿಡುತ್ತವೆ. ಆಗ ಹೆಚ್ಚಿನ ವಸ್ತು ಕೇಂದ್ರದಲ್ಲಿ ಸಂಗ್ರಹವಾಗುತ್ತದೆ.ನಮ್ಮ ಆಕಾಶಗಂಗೆಯೂ ಇದಕ್ಕೆ ಹೊರತಲ್ಲ. ಆದರೆ ಈ ಎರಡು ಗೆಲಾಕ್ಸಿಗಳು ಶಾಂತ ಜೀವನ ನಡೆಸಿಕೊಂಡು ಬಂದಿವೆ. ಆದ್ದರಿಂದ ಭ್ರಮಣಾಂಕ ನಿತ್ಯತೆಯ ಕಾರಣ ಬಿಲ್ಲೆಯಆಕಾರ ಮಾತ್ರ ಉಂಟಾಗಿದೆ. ಕೇಂದ್ರದ ಗೋಳಾಕಾರ ರೂಪುಗೊಂಡಿಲ್ಲ ಎಂದು ತಿಳಿದು ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry