ನೀಹಾರಿಕಾ ಲೋಕ: ಹಿಕ್ಸ್ ಕುಬ್ಜ ಕುಟುಂಬ

ಮಂಗಳವಾರ, ಜೂಲೈ 23, 2019
26 °C

ನೀಹಾರಿಕಾ ಲೋಕ: ಹಿಕ್ಸ್ ಕುಬ್ಜ ಕುಟುಂಬ

Published:
Updated:

ಹಬಲ್ ದೂರದರ್ಶಕ ಒದಗಿಸಿಕೊಟ್ಟ ಸುಂದರ ಚಿತ್ರಗಳಿಂದ ಹಿಂದೆಂದೂ ಕಂಡರಿಯದ ದೂರದೂರದ ಗೆಲಾಕ್ಸಿಗಳ ಅಧ್ಯಯನ ಸಾಧ್ಯಯಿತು. ಅವುಗಳಲ್ಲಿ ಅನೇಕ ಹೊಸ ಹೊಸ ಗೆಲಾಕ್ಸಿ ಗುಚ್ಛಗಳು ಕಂಡುಬಂದವು.

 

ಆಶ್ಚರ್ಯವೆಂದರೆ ಇವು ಬಹಳ ದೂರದಲ್ಲಿಲ್ಲ. ಆದರೆ ಸಣ್ಣ ದ್ರವ್ಯರಾಶಿಯವು. ಅಂದರೆ ಕುಬ್ಜ ವರ್ಗಕ್ಕೆ ಸೇರಿದವು. ಆದ್ದರಿಂದ ಇವುಗಳ ಅಸ್ತಿತ್ವವನ್ನು ತಿಳಿಯಲು ಹಬಲ್ ದೂರದರ್ಶಕದ ಆಗಮನಕ್ಕಾಗಿಯೇ ಕಾಯಬೇಕಾಯಿತು.ಇಷ್ಟು ಸಣ್ಣ ಸಣ್ಣ ಗೆಲಾಕ್ಸಿಗಳು ರಚಿತವಾದುದು ಹೇಗೆ? ಈ ಗೆಲಾಕ್ಸಿ ಗುಂಪುಗಳಲ್ಲಿ ಪರಸ್ಪರ ಸಂಘರ್ಷಗಳು ನಡೆಯುವುದಿಲ್ಲವೇ? ಈ ಬಗೆಯ ಅನೇಕ ಪ್ರಶ್ನೆಗಳಿಗೆ ಸೈದ್ಧಾಂತಿಕವಾಗಿ ಪರಿಹಾರ ದೊರಕಿದೆಯಾದರೂ ಅದನ್ನು ಪುಷ್ಟೀಕರಿಸುವ ಉದಾಹರಣೆಯೋತಹ ಗುಚ್ಛಗಳು ಹೆಚ್ಚಿಲ್ಲ.ಈ ಬಗ್ಗೆ ಇತ್ತೀಚೆಗೆ ಗಮನ ಹರಿಸಿದ ಹಿಕ್ಸನ್ ಎಂಬ ಖಗೋಳ ವಿಜ್ಞಾನಿ ಖಗೋಲದ ಮೂಲೆ ಮೂಲೆಗಳನ್ನು ಜಾಲಾಡಿ ಕುಬ್ಜ ಗೆಲಾಕ್ಸಿಗಳನ್ನು ಪತ್ತೆ ಮಾಡಿದರು. ಅವು ಗುಚ್ಛದಂತೆ ಒಟ್ಟುಗೂಡಿದ್ದವು. ಹೆಚ್ಚಿನ ಸದಸ್ಯರುಗಳ ಚಲನೆ ಹಾಗೂ ಆಕಾರ ಇತರ ದೊಡ್ಡ ಗೆಲಾಕ್ಸಿಗಳಿಗಿಂತ ಭಿನ್ನವಾಗಿದ್ದುದು ಆಶ್ಚರ್ಯವೇ ಆಗಿತ್ತು.ಇಲ್ಲಿ ಕಪ್ಪು ಕುಳಿಗಳ ಪ್ರಭಾವ ಇರಬಹುದೇ? ಅಥವಾ ಇದ್ದಕ್ಕಿದ್ದಂತೆ ನಕ್ಷತ್ರರಚನೆಯ ಕ್ರಿಯೆ ತೀವ್ರವಾಗಿರಬಹುದೇ? ಹೀಗೆ ಅನೇಕ ಸಾಧ್ಯತೆಗಳನ್ನು ಪರಿಶೀಲಿಸಿದಾಗ ಅವುಗಳ ಸಂಘರ್ಷ ಒಂದು ಬಾರಿಯಲ್ಲ ಹಲವಾರು ಬಾರಿಯಾದರೂ ಆಗಿರಬೇಕು ಎಂಬ ಅಂಶ ಬೆಳಕಿಗೆ ಬಂದಿತು. ಎರಡು ಗೆಲಾಕ್ಸಿಗಳ ನಡುವೆ ಸೇತುವೆಯ ಹಾಗೆ ಕಾಣುವ ಭಾಗದಲ್ಲಿ ಸಂಘರ್ಷದ ಕಾರಣ ಹೊಸ ನಕ್ಷತ್ರಗಳ ಸೃಷ್ಟಿ ಬಿರುಸಿನಿಂದ ಸಾಗಿರಬೇಕು. ಹೀಗೆ ಹಲವಾರು ಬಾರಿ ಒಂದನ್ನೊಂದು ಹಾಯ್ದ ಮೇಲೆ ಅವೆಲ್ಲವೂ ಒಟ್ಟುಗೂಡಿ ಒಂದೇ ಅಂಡಾಕಾರದ (ದೀರ್ಘವೃತ್ತಾಕಾರದ) ಗೆಲಾಕ್ಸಿ ಆಗಬಹುದು.ಆದರೆ ಆ ನಡುವೆ ಧೂಳು ಚದುರಿಹೋಗಬಹುದು;  ಭಾರೀ ದ್ರವ್ಯರಾಶಿಯ ನಕ್ಷತ್ರಗಳು ಸೂಪರ್ ನೋವಾ ಆಗಿ ಸಿಡಿಯಬಹುದು. ಅವು ಸಿಡಿಸಿದ ಅನಿಲ ಮತ್ತ ಧೂಳು ಇತರ ಎಳೆಯ ನಕ್ಷತ್ರಗಳ ಅತಿ ನೇರಿಳೆ ಕಿರಣಗಳಿಂದ ಉದ್ದೀಪನಗೊಳ್ಳುತ್ತದೆ. ಹೀಗೆ ಘರ್ಷಣೆಯ ಮತ್ತು ನಕ್ಷತ್ರ ರಚನೆಯ ಕುರುಹುಗಳು ಕಾಣುತ್ತವೆ. ಹಿಕ್ಸನ್ ಪಟ್ಟಿಯಲ್ಲಿ 31ನೆಯ ನಮೂದಿನ ಗುಚ್ಛ ಎರಿಡಾನಿಸ್ (ವೈತರಣೀ) ಎಂಬ ಗುಚ್ಛದಲ್ಲಿದೆ.

 

ಖಗೋಳದ ಮಾಪನದಲ್ಲಿ ಹತ್ತಿರದಲ್ಲೇ ಇದೆ ಎನ್ನಬಹುದು. ದೂರ 166 ದಶಲಕ್ಷ ಜ್ಯೋತಿರ್ವರ್ಷಗಳು ಮಾತ್ರ. ಸುಮಾರು 100,000 ನಕ್ಷತ್ರಗಳು ಈ ಸಂಕೀರ್ಣದಲ್ಲಿ ಅಡಗಿವೆ. ಇತ್ತೀಚೆಗೆ ಅಂದರೆ ಸುಮಾರು 10 ದಶಲಕ್ಷ ವರ್ಷಗಳ ಹಿಂದೆ ಇವು ರಚಿತವಾದವು. ಇಲ್ಲಿರುವ ಸಂಯೋಜಿತ ಚಿತ್ರದಲ್ಲಿ ಬೇರೆ ಬೇರೆ ಬಣ್ಣಗಳು ಬೇರೆ ಬೇರೆ ತರಂಗಾಂತರಗಳನ್ನು ಸೂಚಿಸುತ್ತವೆ. ಹಬಲ್ ದೂರದರ್ಶಕ ದೃಕ್ ತರಂಗಾಂತರಗಳಲ್ಲಿ ಚಿತ್ರಿಸಿದೆ. ಗಾಲೆಕ್ಸ್ ಎಂಬ ಉಪಕರಣ ಅತಿ ನೇರಿಳೆ ಕಿರಣಗಳಲ್ಲಿ ಚಿತ್ರಿಸಿದೆ. ಸ್ಪಿಟ್ಝರ್ ಎಂಬ ಬಾಹ್ಯಾಕಾಶ ವೀಕ್ಷಣಾಲಯ ಅವಕೆಂಪು ಕಿರಣಗಳಲ್ಲಿ ಚಿತ್ರಿಸಿದೆ. ಹೀಗೆ ಎಲ್ಲವನ್ನೂ ಒಟ್ಟುಗೂಡಿಸಿದಾಗ ಈ ಸಂಕೀರ್ಣದ ಒಟ್ಟು ವಿಸ್ತಾರ ಸುಮಾರು 150000 ಜ್ಯೋತಿರ್ವರ್ಷಗಳು ಎಂದು ತಿಳಿಯುತ್ತದೆ.ಚಿತ್ರದ ಮಧ್ಯದಲ್ಲಿರುವ ಪ್ರಕಾಶಮಾನ ನಕ್ಷತ್ರ ಮುನ್ನೆಲೆಯಲ್ಲಿದೆ; ನಮ್ಮ ಗೆಲಾಕ್ಸಿಗೆ ಸೇರಿದೆ. ಇದರ ಹೊರತಾಗಿ ಪ್ರತಿಯೊಂದು ಸೂಕ್ಷ್ಮ ಬಿಂದುವೂ ಒಂದೊಂದು ಗೆಲಾಕ್ಸಿ ಎಂದು ತಿಳಿಯಬಹುದು. ಮೂರು ಗೆಲಾಕ್ಸಿಗಳನ್ನು ಸಂಪರ್ಕಿಸುವ ನಕ್ಷತ್ರ ಸೇತುವೆ, ಸಿಗಾರ್ ಆಕಾರದ ಧೂಳಿನ ರಚನೆ ಎಲ್ಲವೂ ಸಂಘರ್ಷದ ಇತಿಹಾಸದ ಗುರುತುಗಳು.ಸಣ್ಣ ಗೆಲಾಕ್ಸಿಗಳ ವ್ಯಾಪ್ತಿಗೆ ಮೀರಿದ ಗುರುತ್ವ ಬಲವನ್ನು ಇಲ್ಲಿ ಕಂಡುಕೊಳ್ಳುವುದು ಸಾಧ್ಯ. ಆಕಾಶಗಂಗೆಯಂತಹ ದೊಡ್ಡ ಗೆಲಾಕ್ಸಿಗಳಲ್ಲಿ ಆವರ್ತನೆಯ ಸಂದರ್ಭದಲ್ಲಿ ಮಾತ್ರ ಸುಳಿವು ನೀಡುವ ಅವ್ಯಕ್ತ ವಸ್ತುವನ್ನು ಪತ್ತೆಮಾಡಲು ಈ ಬಗೆಯ ಕುಬ್ಜ ಗೆಲಾಕ್ಸಿಗಳ ಗುಚ್ಛಗಳು ಒಳ್ಳೆಯ ಅವಕಾಶವನ್ನು ಒದಗಿಸುತ್ತವೆ.ಸಣ್ಣ ಸಣ್ಣ ಗೆಲಾಕ್ಸಿಗಳ ರಚನೆಯೇ ಬಹಳ ಮುಖ್ಯವಾದ ಕಾರ್ಯ; ಸರ್ವೇ ಸಾಧಾರಣವಾಗಿ ನಡೆಯುವಂತಹುದು ಎಂದಾದರೆ ದೊಡ್ಡ ಗೆಲಾಕ್ಸಿಗಳ ಸೃಷ್ಟಿ ಹೇಗೆ ಎಂದು ತಿಳಿಯುವಲ್ಲಿ ಅವುಗಳ ವಿಕಾಸದ ತಿಳುವಳಿಕೆ  ಅವಶ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧ್ಯಯನ ಭರದಿಂದ ಸಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry