ಭಾನುವಾರ, ಮೇ 16, 2021
28 °C
ಸದನ ಸ್ವಾರಸ್ಯ

ನೀ ಸರ್ಕಾರ ರಚಿಸಿದ ಪರಿಗೆ ಬೆರಗಾದೆನೋ ಸಿದ್ದರಾಮಣ್ಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಮಂಡಲದಲ್ಲಿ ಮಂಗಳವಾರ ವಚನ ವೈಭವ. ವಿಧಾನಸಭೆಯಲ್ಲಿ ಕಡೂರು ಶಾಸಕ ವೈ.ಎಸ್. ವಿ.ದತ್ತ (ಜೆಡಿಎಸ್) ವಚನದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಣಕಿದರೆ, ವಿಧಾನ ಪರಿಷತ್‌ನಲ್ಲಿ ಬಸವರಾಜ ಹೊರಟ್ಟಿ ವಚನವನ್ನು ಹಾರಿಬಿಟ್ಟರು.ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಜರಿದ್ದಿದ್ದರಿಂದ ದತ್ತ ಅವರ ವಚನಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಿತು. ಹೊರಟ್ಟಿ ವಚನ ಹೇಳಿದ ಸಂದರ್ಭದಲ್ಲಿ ಮೇಲ್ಮನೆ ಬಹುತೇಕ ಖಾಲಿ ಇದ್ದಿದ್ದರಿಂದ ಹೆಚ್ಚು ಸದ್ದು ಮಾಡಲಿಲ್ಲ.ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ದತ್ತ, ರಾಜ್ಯದಲ್ಲಿ ಕಣ್ಣಿಗೆ ಕಾಣುವ ಹಾಗೆ ಆಡಳಿತದಲ್ಲಿ ಬದಲಾವಣೆ ತರುವುದಾಗಿ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಭರವಸೆ ನೀಡಿದ್ದನ್ನೇ ಸಿದ್ದರಾಮಯ್ಯ ಅವರನ್ನು ಕೆಣಕಲು ಬಳಸಿಕೊಂಡರು. ಮೊದಲಿಗೆ ಅವರು ದೇವರದಾಸಿಮಯ್ಯನಮರದೊಳಗೆ ಮಂದಾಗ್ನಿಯ ಉರಿಯದಂತೆ ಇರಿಸಿದೆ

ನೊರೆ ಹಾಲೊಳಗೆ ತುಪ್ಪವ ಕಂಪಿಲ್ಲದಂತೆ ಇರಿಸಿದೆ

ಶರೀರದೊಳಗೆ ಆತ್ಮವ ಕಾಣದಂತೆ ಇರಿಸಿದೆ

ನೀ ಬೆರೆಸುವ ಪರಿಗೆ ಬೆರಗಾದೆನಯ್ಯೊ ರಾಮನಾಥ ...ಎಂಬ ವಚನ ಓದಿದರು.ನಂತರ ಇದನ್ನೇ ಮೂಲವಾಗಿಟ್ಟುಕೊಂಡು ತಾವೇ ರಚಿಸಿದ

ಕಾಂಗ್ರೆಸ್ ಸರ್ಕಾರದೊಳಗೆ ಜನತಾ ಪರಿವಾರವ ಕಾಣದಂತೆ ತುರುಕಿದೆ

ಆಪ್ತರಿಗೆ ಆಯಕಟ್ಟಿನ ಖಾತೆಗಳನ್ನು ಸದ್ದಿಲ್ಲದಂತೆ ನೀಡಿದೆ

ಹಿರಿಯ ಕಾಂಗ್ರೆಸ್ಸಿಗರನ್ನು ಅಲಕ್ಷಿಸಿಯೂ ಅಮ್ಮನ ಅಂಕಿತ ಪಡೆದೆ

ನೀ ಸರ್ಕಾರ ರಚಿಸಿದ ಪರಿಗೆ ಬೆರಗಾದೆನೋ ಅಣ್ಣಾ ಸಿದ್ದರಾಮಣ್ಣ

ಎಂದು ಓದುತ್ತಿದ್ದಂತೆಯೇ ಇಡೀ ಸದನ ನಗೆಗಡಲಲ್ಲಿ ತೇಲಿತು.ಆದರೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಇದನ್ನು ಗಮನಿಸಿದ ದತ್ತ, `ಅರ್ಥವಾಗಲಿಲ್ಲವೇ ಸಿದ್ದರಾಮಣ್ಣ... ಮತ್ತೊಮ್ಮೆ ಹೇಳುತ್ತೇನೆ' ಎಂದು ವಚನ ಓದಿದರು. ಎರಡನೇ ಬಾರಿಗೆ ವಚನ ಓದುತ್ತಿದ್ದಂತೆಯೇ ಎದ್ದುನಿಂತ ಸಿದ್ದರಾಮಯ್ಯ, `ವಚನದಲ್ಲಿರುವ ವಿಷಯ ಸತ್ಯಕ್ಕೆ ದೂರವಾದುದು. ನಮ್ಮಲ್ಲಿ ಒಡಕು ಉಂಟು ಮಾಡುವ ದುರುದ್ದೇಶದಿಂದ ಈ ವಚನ ಓದಿದ್ದಾರೆ. ದತ್ತ ಒಳ್ಳೆಯ ಸ್ನೇಹಿತ. ಅವರಿಂದ ಈ ರೀತಿಯ ವಚನ ನಿರೀಕ್ಷೆ ಮಾಡಿರಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.ಮಾತಿನ ಮಧ್ಯೆ ಸಿದ್ದರಾಮಯ್ಯ, `ಕಾಂಗ್ರೆಸ್‌ನವರು... ನಾವು' ಎನ್ನುತ್ತಿದ್ದಂತೆಯೇ ಜೆಡಿಎಸ್ ಸದಸ್ಯರು ನಗಲು ಶುರು ಮಾಡಿದರು. ಅವರು ಯಾಕೆ ನಗುತ್ತಿದ್ದಾರೆ ಎಂದು ಸ್ವಲ್ಪ ಹೊತ್ತು ಸಿದ್ದರಾಮಯ್ಯ ಗಲಿಬಿಲಿಗೊಂಡರು. ಆಗ ಮಧ್ಯಪ್ರವೇಶಿಸಿದ ಜೆಡಿಎಸ್‌ನ ಜಮೀರ್ ಅಹಮದ್, `ಮನಸ್ಸಿನಲ್ಲಿ ಇರೋದು ಯಾವತ್ತೂ ಹೋಗುವುದಿಲ್ಲ' ಎಂದು ಸಿದ್ದರಾಮಯ್ಯ ಅವರನ್ನು ಛೇಡಿಸಿದರು.ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, `ನೀನೇ (ಜಮೀರ್ ಅಹಮದ್) ಜೆಡಿಎಸ್ ಬಿಟ್ಟು ಬರೋದಕ್ಕೆ ಹೊರಟಿದ್ದೆ' ಎಂದು ಚುಚ್ಚಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್, `ನಾನು ಯಾವಾಗ ಪಕ್ಷ ಬಿಡುವುದಾಗಿ ಹೇಳಿದ್ದೇನೆ ಎಂಬುದನ್ನು ಹೇಳಿ' ಎಂದು ಪಟ್ಟು ಹಿಡಿದರು. `ನೀನು ಬರುವುದು ಬೇಡ, ಅಲ್ಲೇ ಇರು. ಮುಸ್ಲಿಂ ಓಟು ಹಾಕಿಸುತ್ತೀಯ ಎಂದು ನಿನ್ನನ್ನು ಬಹಳ ನಂಬಿದ್ದಾರೆ' ಎಂದು ಸಿದ್ದರಾಮಯ್ಯ ಪರೋಕ್ಷ ಬಾಣ ಬಿಟ್ಟರು.ಸಿದ್ದರಾಮಯ್ಯ ಬೇಸರ ಮಾಡಿಕೊಂಡಿದ್ದನ್ನು ಗಮನಿಸಿದ ದತ್ತ, `ಪಕ್ಷ ಒಡೆಯಲಿ ಎಂಬ ಉದ್ದೇಶ ನನಗೆ ಇಲ್ಲ. ಪ್ರೀತಿಯಿಂದ ಹೇಳಿದೆ ಅಷ್ಟೇ' ಎಂದು ಸ್ಪಷ್ಟೀಕರಣ ನೀಡಿದರು. `ಪ್ರೀತಿ ಬೇರೆ, ದುರುದ್ದೇಶದಿಂದ ಹೇಳುವುದು ಬೇರೆ. ಏನೇ ಹೇಳಿದರೂ ನಮ್ಮಲ್ಲಿ ಒಡಕು ಮೂಡಿಸಲು ಸಾಧ್ಯವಿಲ್ಲ' ಎನ್ನುವ ಮೂಲಕ ಸಿದ್ದರಾಮಯ್ಯ ತೆರೆ ಎಳೆದರು.ಮತ್ತೆ ಭಾಷಣ ಮುಂದುವರಿಸಿದ ದತ್ತ, `ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಧೀರನೂ ಅಲ್ಲ' ಎಂಬ ಅಲ್ಲಮಪ್ರಭುಗಳ ವಚನ ಉಲ್ಲೇಖಿಸಿ `ಹಿಂದಿನ ಬಿಜೆಪಿ ಸರ್ಕಾರ ಸೋತ ಕುದುರೆ (ಖಾಲಿ ಖಜಾನೆ) ಬಿಟ್ಟು ಹೋಗಿದ್ದಾರೋ, ಗೆದ್ದ  ಕುದುರೆ ಬಿಟ್ಟು ಹೋಗಿದ್ದಾರೋ ಗೊತ್ತಿಲ್ಲ. ಅವರು ಎಂತಹದ್ದೇ ಕುದುರೆ ಬಿಟ್ಟು ಹೋಗಿರಲಿ... ನೀವು ಹಣಕಾಸು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ವೀರರು, ಧೀರರು ಎಂಬುದನ್ನು ಸಾಬೀತುಪಡಿಸಬೇಕು' ಎಂದರು.ಸತ್ಯಕ್ಕೆ ದೂರವಾದ ವರದಿಗಳನ್ನು ಪ್ರಕಟಿಸುವ ಮೂಲಕ ಮಾಧ್ಯಮಗಳು ರಾಜಕಾರಣಿಗಳ ಮಾನ ಹರಾಜು ಹಾಕುತ್ತಿವೆ ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ದತ್ತ, `ನಮ್ಮ ಆತ್ಮಶುದ್ಧವಾಗಿದ್ದರೆ, ನಾವು ಮಾಡುತ್ತಿರುವ ಕಾರ್ಯ ಜನಪರವಾಗಿದ್ದರೆ ಯಾರಿಗೂ ಅಂಜಬೇಕಾಗಿಲ್ಲ' ಎಂಬುದನ್ನು ಉದಾಹರಣೆಯೊಂದಿಗೆ ವಿವರಿಸಿದರು.ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗೆ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಾಗ, ವಿಶ್ವೇಶ್ವರಯ್ಯ ಅವರು ಸೌದೆ ಬಳಸಿ ಕಬ್ಬಿಣ ಕರಗಿಸುವುದಾಗಿ ಹೇಳಿದರು. ಆಗ, ಎಲ್ಲ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಯಿತು. ಕೊನೆಗೆ ಆ ಕಾರ್ಯದಲ್ಲಿ ಯಶಸ್ವಿಯಾದಾಗ ಟೀಕೆ ಮಾಡಿದವರೇ ಸನ್ಮಾನ ಮಾಡಿದರು. ಸನ್ಮಾನ ಸಂದರ್ಭದಲ್ಲಿ ನೀಡಿದ ಹಣವನ್ನು ವಿಶ್ವೇಶ್ವರಯ್ಯ ಅವರು ನಗರ ಕೆ.ಆರ್.ವೃತ್ತದಲ್ಲಿರುವ ಎಸ್.ಜೆ.ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣಕ್ಕೆ ನೀಡಿದರು ಎಂಬುದನ್ನು ದತ್ತ ಉಲ್ಲೇಖಿಸುವ ಮೂಲಕ `ಎದೆಗುಂದುವ ಅಗತ್ಯವಿಲ್ಲ' ಎಂದರು.

`ಕೂಲಿಗೆ ಬೆಂಕಿ ಹಚ್ಚೆಂದ ಸಿದ್ದರಾಮಯ್ಯ!'

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಜೆಡಿಎಸ್‌ನ ಬಸವರಾಜ ಹೊರಟ್ಟಿ ಸರ್ವಜ್ಞನ ತ್ರಿಪದಿಯನ್ನು ಹೋಲುವ ಸಾಲುಗಳನ್ನು ಓದುವ ಮೂಲಕ ಗಮನ ಸೆಳೆದರು.`ಆಶ್ರಯಕ್ಕೆ ಆಶ್ರಯ ಮನೆ ಇರಲು

ರೂಪಾಯಿಗೊಂದು ಕೇಜಿ ಅಕ್ಕಿ ಸಿಗುತಿರಲು

ರಾತ್ರಿ ನಶೆಗೆ ಅಗ್ಗದ ಮದ್ಯವಿರಲು

ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ ಸಿದ್ದರಾಮಯ್ಯ'

ಎಂದಾಗ ಮೇಲ್ಮನೆಯಲ್ಲಿಯೂ ನಗೆಯ ಬುಗ್ಗೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.