ನುಗ್ಗೇಕಾಯಿ ಸೋನಂ!

ಶುಕ್ರವಾರ, ಜೂಲೈ 19, 2019
29 °C

ನುಗ್ಗೇಕಾಯಿ ಸೋನಂ!

Published:
Updated:

ಆ ಸಭಾಭವನದಲ್ಲಿ ಕುಳಿತಿದ್ದವರಲ್ಲಿ ಸ್ಥೂಲಕಾಯದವರ ಸಂಖ್ಯೆಯೇ ಹೆಚ್ಚಾಗಿತ್ತು. ಮೈಕಿನ ಎದುರು ಬಂದದ್ದು ಸಪೂರ ನಟಿ. `ನಿಮ್ಮನ್ನೆಲ್ಲಾ ನೋಡಿ ಬಾಲ್ಯದ ನನ್ನ ಶರೀರ ನೆನಪಾಗುತ್ತಿದೆ. ನಾನೂ ನಿಮ್ಮಂತೆಯೇ ಇದ್ದೆ. ಆದರೆ, ಬೊಜ್ಜು ಕರಗಿಸಲು ನಿಮ್ಮಷ್ಟು ತಡ ಮಾಡಲಿಲ್ಲ. ಪುಣ್ಯಕ್ಕೆ ನನಗೆ ಬೇಗ ಜ್ಞಾನೋದಯವಾಗಿತ್ತು. ಈಗಲೂ ಕಾಲ ಮಿಂಚಿಲ್ಲ, ನೀವೂ ನನ್ನಂತೆ ಸಣ್ಣಗಾಗಿ...~ ಸೋನಂ ಕಪೂರ್ ಹೀಗೆ ಭಾಷಣವಿಟ್ಟರು.ಮುಂಬೈನ ಫಿಟ್‌ನೆಸ್ ಸೆಂಟರ್ ಒಂದರಲ್ಲಿ ಎರಡೇ ನಿಮಿಷ ಇದ್ದ ಅವರ ಮಾತುಗಳಿಂದ ಕೆಲವರಾದರೂ ಪ್ರಭಾವಿತರಾಗಿರಲಿಕ್ಕೆ ಸಾಕು. ಸೋನಂ ಬಾಲ್ಯದ ದೇಹಾಕಾರವನ್ನು ಈಗಲೂ ನೆನಪಿಸಿ, ಅವರ ಗೆಳತಿಯರು ರೇಗಿಸುವುದುಂಟು. `ಆಗ ನಿನ್ನ ಕೆನ್ನೆ ಜಿಗುಟಲು ಖುಷಿಯಾಗುತ್ತಿತ್ತು. ಈಗ ಕೆನ್ನೆ ಕೈಗೆ ಸಿಗೋದೇ ಇಲ್ಲ~ ಎಂದು ಕಿಚಾಯಿಸುವವರೂ ಕಡಿಮೆಯಿಲ್ಲ.

ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ `ಸಾವರಿಯಾ~ ಚಿತ್ರ ನೋಡಿದ ಮೇಲೆ ಸೋನಂ ಅಪ್ಪ ಅನಿಲ್ ಕಪೂರ್‌ಗೂ ಆಶ್ಚರ್ಯವಾಗಿತ್ತಂತೆ. ಆನೆಮರಿಯಂಥ ತಮ್ಮ ಮಗಳು ಜಿಂಕೆಮರಿ ಆಗಿದ್ದಾಳಲ್ಲ ಎಂಬುದೇ ಅವರ ಅಚ್ಚರಿಗೆ ಕಾರಣ. ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಮುನ್ನ ಸೋನಂ ಕೆಲವು ತಿಂಗಳು ವಿಪರೀತ ಬೆವರು ಹರಿಸಿದ್ದರು. 90 ಕೆ.ಜಿ.ಗಿಂತ ಹೆಚ್ಚು ಇದ್ದ ದೇಹತೂಕವನ್ನು ಚಿತ್ರೀಕರಣ ಶುರುವಾಗುವ ಹೊತ್ತಿಗೆ 55 ಕೆ.ಜಿ.ಗೆ ಇಳಿಸಿದ್ದರು.ನಟಿಯಾಗಬೇಕು ಎಂದು ಸೋನಂ ಮೊದಲು ಅಂದುಕೊಂಡಿದ್ದವರೇ ಅಲ್ಲ. ಆಗಂತೂ ಜಂಕ್‌ಫುಡ್ ತಿಂದೂತಿಂದೂ ದೇಹ ಊದಿಕೊಂಡಿತ್ತು. ಒಂದು ಹಂತದಲ್ಲಿ ಅವರು ಒಂದು ಕ್ವಿಂಟಾಲ್ ತೂಕವಿದ್ದ್ದ್ದದನ್ನು ಕಂಡು ಅವರ ತಂದೆಗೆ ಈ ಮಗಳನ್ನು ನಟಿಯಾಗಿ ನೋಡುವುದು ಸಾಧ್ಯವೇ ಇಲ್ಲ ಎನ್ನಿಸಿತ್ತಂತೆ. ಆದರೆ, ಆಡಿಕೊಳ್ಳುವವರಿಗೆಲ್ಲಾ ಉತ್ತರ ಕೊಡುವುದಾಗಿ ಪಣತೊಟ್ಟ ಸೋನಂ ಜಿಮ್‌ನಲ್ಲಿ ಬೆವರಿಳಿಸಿದರು. ಡಯಟಿಷಿಯನ್ ಸಲಹೆ ಪಡೆದು, ಊಟದಲ್ಲಿ ಪಥ್ಯ ಮಾಡಿದರು. ಜಂಕ್‌ಫುಟ್ ಅಡ್ಡಾಗಳಿಗೆ ಗುಡ್‌ಬೈ ಹೇಳಿದರು.

 

ಕೆಲವೇ ತಿಂಗಳಲ್ಲಿ ಸಪೂರವಾದರು. ನಟಿಯಾಗಿ ಅವರನ್ನು ಕಂಡಮೇಲಂತೂ ಅವರ ಗೆಳತಿಯರಿಗೆಲ್ಲಾ ಪರಮಾಶ್ಚರ್ಯ. ಆಮೇಲೆ ಸೋನಂ ಜೊತೆಯೇ ಗಪ್ಪಾ ಹೊಡೆಯುತ್ತಾ ಚಾಟ್‌ಗಳನ್ನು ಮೆಲ್ಲುತ್ತಿದ್ದ ಅರ್ಧ ಡಜನ್ ಹುಡುಗಿಯರು ಜಿಮ್ ಸೇರಿ ಬೆವರಿಳಿಸಿದರು.ಅವರೆಲ್ಲ ತೂಕ ಇಳಿಸಿಕೊಳ್ಳಲು ಸೋನಂ ಸಣ್ಣಗಾದದ್ದೇ ಸ್ಫೂರ್ತಿ.`ಇನ್ನೂ ಕೆಲವು ದಿನ ನಿರ್ಲಕ್ಷ್ಯದಿಂದ ಇದ್ದಿದ್ದರೆ ನನಗೆ ಮಧುಮೇಹದ ಸಮಸ್ಯೆ ಎದುರಾಗುತ್ತಿತ್ತು. ಆ ಸಮಸ್ಯೆಯ ಗಡಿಯಲ್ಲೇ ನಾನಿದ್ದೆ. ಆಮೇಲೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ಜಿಮ್‌ಗೆ ಕಾಲಿಟ್ಟೆ. ಮೊದಮೊದಲು ನನಗೆ ಸರಳ ವ್ಯಾಯಾಮ ಮಾಡುವುದು ಕೂಡ ಸಾಧ್ಯವಾಗುತ್ತಿರಲಿಲ್ಲ.ಈಗ ನನ್ನ ಕಾಲುಗಳನ್ನು ನೋಡಿಕೊಂಡಾಗ ಹೆಮ್ಮೆ ಎನ್ನಿಸುತ್ತದೆ. ಇಷ್ಟು ಸಣ್ಣಗೆ ಇರಲು ನಾವು ಕಷ್ಟಪಡಬೇಕಾಗುತ್ತದೆ. ದೇಹವನ್ನು ದಂಡಿಸುವುದರಿಂದ ಮನಸ್ಸೂ ಅರಳುತ್ತದೆ. ಕುಂಬಳಕಾಯಿಯ ಹಾಗಿದ್ದ ನನ್ನನ್ನು ನುಗ್ಗೇಕಾಯಿ ಮಾಡಿದ ವ್ಯಾಯಾಮದ ಗುರುಗಳೆಲ್ಲರಿಗೂ ನನ್ನ ವಂದನೆ~ ಅಂತಾರೆ ಸೋನಂ.ಹೆಚ್ಚೂಕಡಿಮೆ ಸೋನಂ ಅವರಷ್ಟೇ ದಪ್ಪಗಿದ್ದ ಇನ್ನೊಬ್ಬ ನಟಿ ಸೋನಾಕ್ಷಿ ಸಿನ್ಹ. 85 ಕೆ.ಜಿ.ಯಷ್ಟು ತೂಕವಿದ್ದ ಅವರು, `ದಬಂಗ್~ ಚಿತ್ರದ ಶೂಟಿಂಗ್ ಮುಗಿಯುವ ಹೊತ್ತಿಗೆ 60 ಕೆ.ಜಿ.ಗೆ ಇಳಿದಿದ್ದರು. ಈಗ ತೂಕ ಇನ್ನೂ ಕಡಿಮೆ ಮಾಡಿಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಈಜುವುದರಿಂದ ಸಪೂರವಾಗುವುದು ಸಾಧ್ಯವೆಂಬುದು ಅವರ ಅನುಭವ.ಒಮ್ಮೆಲೇ ಊಟ ಮಾಡುವುದನ್ನು ಈಗ ಸೋನಾಕ್ಷಿ ಬಿಟ್ಟಿದ್ದಾರೆ. ಪ್ರತಿ ಎರಡು ತಾಸಿಗೊಮ್ಮೆ ಸ್ವಲ್ಪ ಸ್ವಲ್ಪವೇ ಪಥ್ಯಾಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹಣ್ಣುಗಳನ್ನು ಹಿತಮಿತವಾಗಿ ತಿನ್ನುವುದರಿಂದ ವ್ಯಾಯಾಮ ಮಾಡಲು ಶಕ್ತಿ ಬರುತ್ತದೆನ್ನುವ ಅವರು ಟ್ರೆಡ್‌ಮಿಲ್ ಮೇಲೆ 20 ನಿಮಿಷ ಓಡುತ್ತಾರೆ.ಸೋನಾಕ್ಷಿಗೆ ಸೋನಂ ಅವರಷ್ಟು ಸಣ್ಣಗಾಗಲು ಇಷ್ಟವಿಲ್ಲ. `ಹಂಚಿಕಡ್ಡಿಯಂತಾದರೆ ಹುಡುಗರು ನನ್ನನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ನಟಿಯಾದವಳು ತನ್ನ ಚಹರೆಗೆ ತಕ್ಕಂತೆ ದೇಹಾಕಾರವನ್ನೂ ರೂಪಿಸಿಕೊಳ್ಳಬೇಕಾಗುತ್ತದೆ.ಸೋನಂ ಮುಖಕ್ಕೆ ಅವರು ಎಷ್ಟು ಸಣ್ಣಗಾದರೂ ನೋಡಲು ಚೆನ್ನ. ನನ್ನ ಮುಖವೇ ಅಗಲವಿರುವುದರಿಂದ ಅವಳಷ್ಟು ಸಣ್ಣಗಾದರೆ ನನ್ನನ್ನು ನೋಡಿ ಜನ ಆಡಿಕೊಳ್ಳುತ್ತಾರಷ್ಟೇ~ ಎನ್ನುವ ಸೋನಾಕ್ಷಿಯ ತೂಕವೀಗ 55-60 ಕೆ.ಜಿ.ಯ ವ್ಯಾಪ್ತಿಯಲ್ಲೇ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry