ಭಾನುವಾರ, ಡಿಸೆಂಬರ್ 15, 2019
26 °C
ಶಿವಮೊಗ್ಗ: ಕಾಗೋಡು ತಿಮ್ಮಪ್ಪ ಜನ್ಮ ದಿನ ಸಂಭ್ರಮದಲ್ಲಿ ಕಂಬಾರ ಅಭಿಮತ

ನುಡಿದಂತೆ ನಡೆಯುವುದೇ ಸಮಾಜವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನುಡಿದಂತೆ ನಡೆಯುವುದೇ ಸಮಾಜವಾದ

ಶಿವಮೊಗ್ಗ: ಚಳವಳಿ, ಹೋರಾಟದಲ್ಲಿ  ಭಾಗಿಯಾದ ಸಮಾಜವಾದಿಗಳು ಆದರ್ಶಗಳನ್ನು ವ್ರತಗಳಂತೆ ಆಚರಿಸಿ ಬದುಕಿ ತೋರಿಸಿದರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಕಾಗೋಡು ತಿಮ್ಮಪ್ಪ ಅಭಿಮಾನಿ ವೃಂದ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ 82ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ’ಸಹಚಿಂತನೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹೋರಾಟಗಾರರು ಸಮಾಜವಾದವನ್ನು ಮಾತನಾಡಲಿಲ್ಲ, ಬರೆಯಲಿಲ್ಲ. ಬದಲಿಗೆ ಅಕ್ಷರಶಃ ಬದುಕಿ ತೋರಿಸಿದರು. ಚಳವಳಿಯಲ್ಲಿ ಭಾಗಿಯಾದ ಗೋಪಾಲಗೌಡ, ಜೆ.ಎಚ್‌.ಪಟೇಲ್‌, ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೋಣಂದೂರು ಲಿಂಗಪ್ಪ ಅವರು ನಾಡಿನ ಬೇರೆ ರಾಜಕಾರಣಿಗಳಿಗಿಂತ ಭಿನ್ನರು ಎಂಬ ಭಾವನೆ ಬರಲು ಇದೇ ಕಾರಣ ಎಂದು ಹೇಳಿದರು.ಇಡೀ ದೇಶದಲ್ಲಿ ಹರಡಿದ ಸಮಾಜವಾದಿ ಚಿಂತನೆ, ಫಲ ಕಂಡದ್ದು ಮಾತ್ರ ರಾಜ್ಯದ ಕಾಗೋಡಿನಲ್ಲಿ ಮಾತ್ರ. ಕಾಗೋಡಿನಲ್ಲಿ ಯಶಸ್ಸು ಕಂಡ ಈ ಚಳುವಳಿ ಅಂದಿನ ಕಾಲದಲ್ಲಿ ಉತ್ತರ ಕರ್ನಾಟಕದಲ್ಲೂ ಸಂಚಲನ ಉಂಟು ಮಾಡಿತ್ತು.

11ಲಕ್ಷ ಎಕರೆ ಜಮೀನನ್ನು 8ಲಕ್ಷ ಜನತೆಗೆ ಹಂಚಿದ್ದು ರಾಜ್ಯದಲ್ಲಿ ಮಾತ್ರ. ಅದು ಸಾಧ್ಯವಾಗಿದ್ದು, ಸಮಾಜವಾದದಿಂದ ಎಂದರು. ಗಾಂಧಿವಾದಕ್ಕೆ ಬದ್ಧರಾದ ರಾಜಕಾರಣಿಗಳು ಸಿಗುತ್ತಾರೆ. ಆದರೆ, ಸಮಾಜವಾದಕ್ಕೆ ಬದ್ಧರಾದ ರಾಜಕಾರಣಿಗಳು ಸಿಗುವುದು ಕಡಿಮೆ. ಈ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅಪರೂಪದ ರಾಜಕಾರಣಿ. ಭೂ ಸುಧಾರಣಾ ಕಾಯ್ದೆಯ ಡ್ರಾಫ್ಟ್‌ ಕಮಿಟಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಅವರು, ಕಾಯ್ದೆ ಪರಿಣಾಮಕಾರಿಯಾಗಿ ರಚನೆಯಾಗಿ ಅನುಷ್ಠಾನಗೊಳ್ಳುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದರು ಎಂದು ತಿಳಿಸಿದರು.    ಇದೇ ಸಂದರ್ಭದಲ್ಲಿ ಲೇಖಕ ಹಸನ್‌ ನಹೀಮಾ ಅವರಿಗೆ 2013 ನೇ ಸಾಲಿನ ಕಾಗೋಡು ತಿಮ್ಮಪ್ಪ ಪ್ರಶಸ್ತಿ ನೀಡಿ ರವಿಸಲಾಯಿತು. ಹಾಗೂ ಗೋಪಾಲಗೌಡರ ಒಡನಾಡಿ ಹಾಗೂ ಹೋರಾಟಗಾರರಾದ ಮಿಣುಕಮ್ಮ ಅವರನ್ನು ಸನ್ಮಾನಿಸಲಾಯಿತು.ಪ್ರಾಥಮಿಕ ಮತ್ತುಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಎಸ್‌.ಪುಟ್ಟಣ್ಣಯ್ಯ, ಕೆ.ಬಿ.ಪ್ರಸನ್ನಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಮಂಜುನಾಥ ಬಂಡಾರಿ, ಕೆ.ದಿವಾಕರ್‌, ರಾಧಾಕೃಷ್ಣ, ಓಂಪ್ರಕಾಶ್‌,  ಮಾಜಿ ಶಾಸಕ ಕರಿಯಣ್ಣ, ಬಲದೇವಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಆರ್‌.ಪ್ರಸನ್ನಕುಮಾರ್‌ ಸ್ವಾಗತಿಸಿದರು.'ಬಂಡವಾಳಶಾಹಿಗಳ ಅಭಿವೃದ್ಧಿ ಆಗುತ್ತಿದೆ'

ದೇಶದ ಅಭಿವೃದ್ಧಿ ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕಂತೆ ಆಗುತ್ತಿದೆ. ರಾಜಕಾರಣ, ರಾಜಕೀಯ ಪಕ್ಷಗಳು ಬದಲಾದಂತೆ ಅಭಿವೃದ್ಧಿಯ ಅರ್ಥವೂ, ಪಥವೂ ಬದಲಾಗುತ್ತಿದೆ. ಬಡವರ ಅಭಿವೃದ್ಧಿಗೆ ತಕ್ಕಂತೆ ಯೋಜನೆಗಳು ರೂಪುಗೊಳ್ಳುವ ಬದಲು ಬಂಡವಾಳಶಾಹಿಗಳ ಆಶಯಕ್ಕೆ, ಅಗತ್ಯಕತೆಗೆ ತಕ್ಕಂತೆ ಅಭವೃದ್ಧಿ ನಡೆಯುತ್ತಿದೆ ಎಂದು ಕನಾರ್ಟಕ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಚಂದ್ರಶೌರಿ ಹೇಳಿದರು.ರಾಜ್ಯದಲ್ಲಿ 90ರ ದಶಕದವರೆಗೂ ಸಮಾವಾದದ ಆದಶರ್ಗಳು ಒಂದಷ್ಟು ಇದ್ದವು. ಆದರೆ, ಆ ನಂತರದಲ್ಲಿ ಸಮಾಜವಾದದ ನಂಟು ಯಾವ ಪಕ್ಷದಲ್ಲೂ ಇಲ್ಲದಾಗಿದೆ. ರೂಪಾಯಿಗೆ ಒಂದು ಕೆ.ಜಿ. ಅಕ್ಕಿ, ಶೌಚಾಲಯ, ಕುಡಿಯುವ ನೀರು ಇಂತಹ ಯೋಜನೆಗಳನ್ನು ಜಾರಿಗೆ ತರುವ ರಾಜಕೀಯ ಪಕ್ಷಗಳು ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿವೆ. ಬಡವರಿಗೆ ಬಡತನದಿಂದ ಹೊರ ಬರುವ ದಾರಿ ತೋರಿಸುತ್ತಿಲ್ಲ. ಅವರಲ್ಲಿ ಇಂತಹ ಸಾಮರ್ಥ್ಯ ಬೆಳೆಸುತ್ತಿಲ್ಲ ಎಂದು ವಿಷಾದಿಸಿದರು.ಸರ್ಕಾರಗಳು ಅಭಿವೃದ್ಧಿಯನ್ನು ಊಟ, ವಸತಿ, ಶೌಚಾಲಯ, ಕುಡಿಯುವ ನೀರಿನ ಹಿನ್ನೆಲೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಬಾರದು. ದೇಶದ ಶೇ. 60 ರಷ್ಟು ಸಂಪನ್ಮೂಲಗಳು ಶೇ. 30ರಷ್ಟು ಜನತೆಗೆ ಮಾತ್ರ ಲಭ್ಯವಾಗುತ್ತಿವೆ. ಇಂದು ಜಾತಿಯನ್ನೂ ಮೀರಿ  ವರ್ಗ ಬೆಳೆಯುತ್ತಿದೆ. ಎಲ್ಲಾ ಜಾತಿ–ಜನಾಂಗಗಳ ಒಳಗೂ ವರ್ಗ ತಾರತಮ್ಯ ಬೆಳೆಯುತ್ತಿದೆ. ಇವೆಲ್ಲಕ್ಕೂ ದಾರಿ ಸಮಾಜವಾದ. ಸಮಾಜವಾದ ನಮಗೇನು ಅಪರಿಚಿತವಲ್ಲ. ಆದರೆ, ಅದು ಮರುಹುಟ್ಟು ಪಡೆಯಬೇಕಿದೆ ಎಂದರು.

ಪ್ರತಿಕ್ರಿಯಿಸಿ (+)