ನುಡಿಯಲ್ಲಿರಲಿ ನಿಯಂತ್ರಣ

7

ನುಡಿಯಲ್ಲಿರಲಿ ನಿಯಂತ್ರಣ

Published:
Updated:

ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಈಗಾಗಲೇ ಕಲ್ಲಿದ್ದಲು ಹಗರಣಗಳ ಸುಳಿಯಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೀಳು ಅಭಿರುಚಿಯ, ಮಹಿಳೆಯನ್ನು ಅವಮಾನಿಸುವಂತಹ ಈ ಸಚಿವರ ಲಘುವಾದ ಮಾತುಗಳು ವಿವಾದಕ್ಕೆ ಕಾರಣವಾಗಿದೆ.ಅದೂ, ಈ ಸಚಿವರು ಈ ವಿವಾದಾಸ್ಪದ ಮಾತುಗಳನ್ನಾಡಿದ್ದು ಕಾನ್ಪುರದ ಮಹಿಳಾ ಕಾಲೇಜಿನಲ್ಲಿ ನಡೆದ `ಕವಿ ಸಮ್ಮೇಳನ~ದಲ್ಲಿ ಎಂಬುದು ಮತ್ತೊಂದು ವಿಪರ್ಯಾಸ. ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು 68 ವರ್ಷ ವಯಸ್ಸಾಗಿರುವ ಈ ಸಚಿವರು ಹೋಲಿಸಿದ್ದು `ವಿವಾಹ~ಕ್ಕೆ. `ಹೊಸ ವಿಜಯ ಹಾಗೂ ಹೊಸ ವಿವಾಹ. ಇವುಗಳಿಗೆ ಅವುಗಳದೇ ವಿಭಿನ್ನ ಮಹತ್ವವಿದೆ. ಕಾಲ ಕಳೆದಂತೆ ವಿಜಯದ ನೆನಪು ಹಳೆಯದಾಗುತ್ತದೆ. ಹಾಗೆಯೇ ಕಾಲ ಕಳೆದಂತೆ ಪತ್ನಿಯೂ ಹಳತಾಗುತ್ತಾ ಹೋಗುತ್ತಾಳೆ. ಆಗ ಮಜಾ ಇರುವುದಿಲ್ಲ~ ಎಂಬಂತಹ ಸಚಿವರ ಮಾತುಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆಘಾತದ, ಆಕ್ರೋಶದ ಅಲೆಗಳು ಎದ್ದಿವೆ.ಮಹಿಳೆಯನ್ನು ಭೋಗದ ವಸ್ತುವಿನಂತೆ ಬಿಂಬಿಸುವ ಈ ನುಡಿಗಳನ್ನು `ತಮಾಷೆ~ ಎಂಬಂತೆ ಜವಾಬ್ದಾರಿಯುತವಾದ ಕೇಂದ್ರ ಸಚಿವ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಆಡಿರುವುದು ಖಂಡನೀಯ. ಆದರೆ ಮಹಿಳೆ ಕುರಿತಂತೆ ಕೇವಲವಾಗಿ, ಹಗುರವಾಗಿ ಆಡಿರುವ ಈ ಮಾತಿನ ಪರಿಣಾಮಗಳ ಗಂಭೀರತೆಯನ್ನು ಈಗಲೂ ಸಚಿವರಿಗೆ ಗ್ರಹಿಸಲು ಸಾಧ್ಯವಾಗದಿರುವುದು ದುರಂತ. ಯಾರ ಬಳಿಯಾದರೂ ಇದಕ್ಕಾಗಿ ಕ್ಷಮೆ ಕೇಳಲು ತಮಗೆ ಸಮಸ್ಯೆ ಇಲ್ಲ; ಆದರೆ ತಾವು ಪಾಲ್ಗೊಂಡಿದ್ದಂತಹ ಕಾವ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಪರಿಶೀಲಿಸಬೇಕೆಂದು ಸಚಿವರು ಕೋರುತ್ತಿದ್ದಾರೆ. `ನಾನು ಕವಿ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದಾಗ, ಪಾಕಿಸ್ತಾನದ ವಿರುದ್ಧ ಭಾರತ ಜಯ ಗಳಿಸಿದ ಸುದ್ದಿ ಬಂತು. ಜನ ಪಟಾಕಿಗಳನ್ನು ಸಿಡಿಸತೊಡಗಿದರು. ನಾನಾಗ ಸಮ್ಮೇಳನ ವಿಷಯ ಬಿಟ್ಟು, ನೀವೀಗ ವಿಜಯೋತ್ಸವ ಆಚರಿಸುತ್ತಿದ್ದೀರಿ ಏಕೆಂದರೆ ಈ ವಿಜಯ ಹೊಸತಾಗಿದೆ.ಅದು ಹಳತಾದರೆ ಅದರ ಮಜಾ ಹೋಗಿಬಿಡುತ್ತದೆ. ಹೆಂಡತಿಗೆ ವಯಸ್ಸಾದಂತೆ ವಿವಾಹದ ಆಚರಣೆಯಲ್ಲಿ ಆ ಮಟ್ಟಿಗೆ ಸಂಭ್ರಮ ಉಳಿಯುವುದಿಲ್ಲ ಎಂದಿದ್ದೆ. ನನ್ನ ಮಾತುಗಳನ್ನು ತಪ್ಪಾಗಿ ಗ್ರಹಿಸಲಾಗಿದೆ~ಎಂದಿದ್ದಾರೆ. ಮಹಿಳೆಯರನ್ನು ಕೀಳಾಗಿ ಲೇವಡಿ ಮಾಡುವುದೂ ಹಾಸ್ಯ ಎನಿಸಿಕೊಳ್ಳುವಂತಹ ಸಂಸ್ಕೃತಿ ಸಮಾಜದಲ್ಲಿದೆ. ಸಚಿವರ ಮಾತುಗಳು ಹಾಗೂ ಅವರ ಸಮರ್ಥನೆಗಳು ಇದನ್ನೇ ಪುಷ್ಟೀಕರಿಸುತ್ತಿರುವುದು ದುರಂತ. ಮಹಿಳೆ ಕುರಿತಾಗಿ ಈ ಬಗೆಯ ಪೂರ್ವಗ್ರಹಗಳ (ಸೆಕ್ಸಿಸ್ಟ್) ಮಾತುಗಳನ್ನು ಅಧಿಕಾರದ ಸ್ಥಾನಗಳಲ್ಲಿರುವವರು ಬಹಿರಂಗವಾಗಿ ಹೇಳುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಆಡಿದ ಮಾತುಗಳೆಲ್ಲಾ ಇತ್ತೀಚೆಗೆ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿಸಿರುವುದು ಜನಮಾನಸದಲ್ಲಿ ಹಸಿರಾಗಿದೆ. ಪಿತೃಪ್ರಾಧಾನ್ಯದ ಸಂಸ್ಕೃತಿ ಭಾಷೆಯೊಳಗೂ ಪ್ರತಿಬಿಂಬಿತವಾಗುವ ವೈಖರಿ ಇದು. ಆಧುನಿಕತೆಯನ್ನು ಅಪ್ಪಿಕೊಳ್ಳುತ್ತಾ ಸಮಾನತೆಯೆಡೆಗೆ ಹೆಜ್ಜೆ ಇಡುವ ಪ್ರಕ್ರಿಯೆಯಲ್ಲಿ ನಮ್ಮ  ಭಾಷೆಯೂ ಬದಲಾಗಬೇಕಾದುದು ಅನಿವಾರ್ಯ. ಗಂಡು, ಹೆಣ್ಣನ್ನು ಸಮಾನವಾಗಿ ಕಾಣುವ ನಮ್ಮ ಸಂವಿಧಾನದ ಆಶಯವನ್ನು ಗೌರವಿಸಬೇಕಾದಂತಹ ರಾಜಕೀಯ ನಾಯಕರೇ ಕೀಳು ಅಭಿರುಚಿಯ ಮಾತುಗಳನ್ನಾಡುವುದು ಅಕ್ಷಮ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry