ಶುಕ್ರವಾರ, ಆಗಸ್ಟ್ 7, 2020
23 °C

ನುಡಿಹಬ್ಬಕ್ಕೆ ಎಲ್ಲರೂ ಬನ್ನಿ...

ಪ್ರಜಾವಾಣಿ ವಿಶೇಷ ವರದಿ/ ಸತೀಶ್ ಬಿ. ಆರಾಧ್ಯ Updated:

ಅಕ್ಷರ ಗಾತ್ರ : | |

ನುಡಿಹಬ್ಬಕ್ಕೆ ಎಲ್ಲರೂ ಬನ್ನಿ...

ಎಚ್.ಡಿ.ಕೋಟೆ: ವಾರದ ಹಿಂದೆ ದಕ್ಷಿಣಕಾಶಿ ಎಂದೇ ಖ್ಯಾತಿ ಹೊಂದಿರುವ ನಂಜನಗೂಡಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ...  ಈಚೆಗೆ ಇಲವಾಲದಲ್ಲಿ 3ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ... ಈಗ ಮತ್ತೆ ಎಚ್.ಡಿ.ಕೋಟೆ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ...ಹೌದು, ಬುಡಕಟ್ಟು ಸಮಾಜವೇ ಹೆಚ್ಚಾಗಿರುವ ಈ ಭಾಗದಲ್ಲಿ ಕನ್ನಡಮ್ಮನ ಉತ್ಸವ ನಿರಂತರವಾಗಿ ನಡೆಯುತ್ತಿವೆ. ಈಗ ಎಚ್.ಡಿ. ಕೋಟೆಯ ಸರದಿ. ತಾಲ್ಲೂಕಿನ ಎರಡನೇ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ಪೂರ್ಣಗೊಂಡಿದೆ. ಪಟ್ಟಣದ ಜಗದ್ಗುರು ಶ್ರೀ ಮಂಗಳ ಮಂಟಪದಲ್ಲಿ ಬೃಹತ್ ವೇದಿಕೆ ಸಜ್ಜುಗೊಂಡಿದೆ.ಕನ್ನಡವನ್ನೇ ಬಳಸು, ಕಲಿಸು, ಉಳಿಸು ಹಾಗೂ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವ ಸಂದೇಶ ಸಾರಲು ತಾಲ್ಲೂಕು ಸಾಹಿತ್ಯ ಪರಿಷತ್ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾಹಿತ್ಯಾಸಕ್ತರಿಗೆ 2000 ಆಸನಗಳ ವ್ಯವಸ್ಥೆ, ಶಾಮಿಯಾನ ಸಿದ್ಧಗೊಳಿಸಿದೆ.ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಬಾವುಟ, ಹಸಿರು ತಳಿರಿನ ತೋರಣ, ವಿವಿಧ ಸಂಘ, ಸಂಸ್ಥೆಗಳಿಂದ ಬ್ಯಾನರ್ ಹಾಗೂ ಫ್ಲೇಕ್ಸ್‌ಗಳನ್ನು ಕಟ್ಟಲಾಗಿದ್ದು, ಅಕ್ಷರ ಜಾತ್ರೆಗೆ ಕನ್ನಡ ಅಭಿಮಾನಿಗಳನ್ನು ಕೈ ಬೀಸಿ ಕರೆಯುವಂತಿದೆ.ಸಭಾ ಮಂಟಪಕ್ಕೆ `ಶ್ರೀ ತಾತಯ್ಯ ಸಭಾಮಂಟಪ' ಎಂದೂ ವೇದಿಕೆಗೆ `ಶ್ರೀಕೃಷ್ಣ ಆಲನಹಳ್ಳಿ ವೇದಿಕೆ' ಎಂದೂ ಹೆಸರಿಡಲಾಗಿದೆ. ಸಮ್ಮೇಳನದ ಸಂಪೂರ್ಣ ಯಶಸ್ಸಿಗೆ ಶಾಲಾ, ಕಾಲೇಜುಗಳು, ವಿವಿಧ ಕನ್ನಡಪರ ಸಮಘಟನೆಗಳು, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು, ವಿವಿಧ ಮಹಿಳಾ ಸಹಕಾರ ಸಂಘಗಳು ಸಹಕಾರ ನೀಡಿವೆ.ಶನಿವಾರ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜ, ರಾಜ್ಯಧ್ವಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಧ್ವಜಗಳನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಅಕ್ಷರ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಕಂಸಾಳೆ, ವೀರಗಾಸೆ, ಗೊರವರ ಕುಣಿತ, ಪಟ್ಟ ಕುಣಿತ, ಸತ್ತಿಗೆ ಸೇರಿದಂತೆ 20ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ರಂಗು ತರುವ ಹಿನ್ನೆಲೆಯಲ್ಲಿ ಹೆಜ್ಜೆ ಹಾಕಲಿವೆ.13 ಸಮಿತಿಗಳ ರಚನೆ

ಸಮ್ಮೇಳನದ ಯಶಸ್ವಿಗಾಗಿ ಮೆರವಣಿಗೆ ಸಮಿತಿ, ಕಾರ್ಯಕ್ರಮ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಹಣಕಾಸು ಸಮಿತಿ, ಪ್ರಚಾರ ಸಮಿತಿ, ಆಹಾರ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಸ್ವಚ್ಛತಾ ಸಮಿತಿ, ವಸತಿ ಸಮಿತಿ, ಸಾಮರಸ್ಯ ಸಮಿತಿ, ಸ್ವಯಂ ಸೇವಕರ ಸಮಿತಿ, ಸಾರಿಗೆ ಸಮಿತಿ ಸೇರಿ 13 ಸಮಿತಿಗಳನ್ನು ರಚಿಸಲಾಗಿದೆ.ಸಮ್ಮೇಳನವನ್ನು ಯಾವುದೇ ಗಲಭೆಗೆ ಅವಕಾಶ ಕಲ್ಪಿಸದೇ ಸುಗಮ ರೀತಿಯಲ್ಲಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಧ್ವಜಾರೋಹಣ ಹಾಗೂ ಅಧ್ಯಕ್ಷರ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಸುಮಾರು ಎರಡು ಸಾವಿರ ಸಾಹಿತ್ಯಾಸಕ್ತರ ಆಗಮನದ ನೀರಿಕ್ಷೆ ಇದ್ದು, ಎಲ್ಲರಿಗೂ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ.ಇನ್ನುಳಿದಂತೆ ಮೂರು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಮೆರವಣಿಗಾ ಸಮಿತಿ ಅಧ್ಯಕ್ಷ ಉದ್ಯಮಿ ಸುರೇಂದ್ರ ಡಿ. ಗೌಡ ತಿಳಿಸಿದ್ದಾರೆ.ಅಲ್ಲದೆ, ಕನ್ನಡದ ಕಂಪನ್ನು ಹಳ್ಳಿ-ಹಳ್ಳಿಗೂ ಸಾರುವ ದೃಷ್ಟಿಯಿಂದ ಎರಡು ತ್ರಿಚಕ್ರ ವಾಹನದಲ್ಲಿ ಧ್ವನಿ ವರ್ಧಕಗಳನ್ನು ಅಳವಡಿಸಿ ಸಮ್ಮೇಳನಕ್ಕೆ ಆಹ್ವಾನ ನೀಡಲಾಗುತ್ತಿದೆ, ಪಟ್ಟಣದ ಎಲ್ಲಾ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಸೇರಿದಂತೆ ವಿವಿಧ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.