ಗುರುವಾರ , ಮೇ 13, 2021
16 °C
ನಾಳೆಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

`ನುಡಿಹಬ್ಬಕ್ಕೆ' ಸರ್ವ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜೂನ್ 15 ಹಾಗೂ 16 ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ ಭರದಿಂದ ಸಾಗಿದೆ.ಸಮ್ಮೇಳನಕ್ಕೆ ಜಿಲ್ಲೆಯ ಕನ್ನಡಿಗರನ್ನು ಸ್ವಾಗತಿಸಲು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸ್ವಾಗತ ಸಮಿತಿ ಬಳಗವು ಈಗಾಗಲೇ ಸರ್ವ ಸಿದ್ಧತೆ ಮಾಡಿಕೊಂಡಿದೆ. ಜಗತ್ ವೃತ್ತದಿಂದ ಕನ್ನಡ ಭವನದವರೆಗೂ ಭೀಮಸೇನರಾವ ತವಗ, ಪ್ರಭುಲಿಂಗಯ್ಯ ಮಲ್ಲಾಪುರ, ಬಿ. ಮಹಾದೇವಪ್ಪ, ಶಿವಶರಣ ಪಾಟೀಲ ಜವಳಿ ಅವರ ನಾಮಾಂಕಿತದ ಒಟ್ಟು ನಾಲ್ಕು ಮಹಾದ್ವಾರಗಳು ಸಜ್ಜಾಗಿವೆ. ಶ್ರೀ ಶರಣ ಬಸವೇಶ್ವರ ಹಾಗೂ ಹಜರತ್ ಖ್ವಾಜಾ ಬಂದೇನವಾಜ್  ಶೃದ್ಧಾಕೇಂದ್ರಗಳ ಹೆಸರಿನ ಎರಡು ಮಹಾ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ.ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಹೊಂದಿಕೊಂಡಿರುವ ಬಾಪುಗೌಡ ದರ್ಶನಾಪುರ ರಂಗಮಂದಿರ, ಕನ್ನಡ ಭವನದ ಇಡೀ ಆವರಣ ದೇಶಿ ಕಲೆ ಐಸಿರಿಯೊಂದಿಗೆ ಹೊಳೆಯುತ್ತಿದೆ. ವೇದಿಕೆ ಅಲಂಕಾರ ಜವಾಬ್ದಾರಿ ಹೊತ್ತಿರುವ ದೃಶ್ಯ ಬೆಳಕು ಸಾಂಸ್ಕೃತಿಕ ವೇದಿಕೆ ತಂಡವು, ನಿಸರ್ಗ ಸ್ನೇಹಿ ಪರಿಕರಗಳನ್ನು ಬಳಸಿಕೊಂಡು ವೇದಿಕೆ,  ಮಹಾದ್ವಾರ ಹಾಗೂ ಆವರಣಗಳನ್ನು ಅಲಂಕರಿಸಿ ಗ್ರಾಮೀಣ ಸೊಗಡು ನೆಲೆ ನಿಲ್ಲುವಂತೆ ಮಾಡಿದೆ.28 ಅಡಿ ಉದ್ದ ಹಾಗೂ 12 ಅಡಿ ಎತ್ತರದ ವೇದಿಕೆ ಪರದೆ ಸಿದ್ಧವಾಗಿದ್ದು, ಇದರಲ್ಲಿ ತತ್ರಾಣಿ, ಸೀರೆಗಳು, ರೊಟ್ಟಿಬುಟ್ಟಿ, ನೆಲುವು ಇತ್ಯಾದಿ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ. ಇದೊಂದು `ಫ್ಲೆಕ್ಸ್ ರಹಿತ' ಸಮ್ಮೇಳನ ಎನ್ನುವುದು ಸಮ್ಮೇಳನ ಸಂಘಟಕರ ವಿವರಣೆ.ಸಮ್ಮೇಳನಕ್ಕೆ ಒಟ್ಟು 1,500 ಪ್ರತಿನಿಧಿಗಳ ಆಗಮನದ ನಿರೀಕ್ಷೆಯನ್ನು ಸ್ವಾಗತ ಸಮಿತಿ ಹೊಂದಿದೆ. ಸಮ್ಮೇಳನದಲ್ಲಿ ನೋಂದಾಯಿಸಿಕೊಳ್ಳುವವರಿಗೆ ರೂ 150 ಶುಲ್ಕ ನಿಗದಿ ಮಾಡಲಾಗಿದೆ. ನೋಂದಾಯಿಸಿಕೊಂಡ ಪ್ರತಿನಿಧಿಗೆ ಒಂದು ಬ್ಯಾಗ್, ಪುಸ್ತಕ ಹಾಗೂ ಲೇಖನಿ ನೀಡಲಾಗುತ್ತದೆ. ಪ್ರತಿನಿಧಿಗಳಿಗೆ ಸೂಕ್ತ ಊಟದ ವ್ಯವಸ್ಥೆಗೆ ಯೋಜನೆ ಸಿದ್ಧವಾಗಿದೆ.ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಜಿಡಿಎ ಕಚೇರಿ ಆವರಣ ಹಾಗೂ ಮಿನಿ ವಿಧಾನಸೌಧದ ಆವರಣದಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಿಂದ 10 ಪುಸ್ತಕ ಮಳಿಗೆಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿವೆ.ಕನ್ನಡ ಭವನದ ಮೇಲಿನ ವೇದಿಕೆಯಲ್ಲಿ ಒಂದು ಸಾವಿರ ಪ್ರತಿನಿಧಿಗಳು ಕುಳಿತುಕೊಳ್ಳಲು ಅವಕಾಶವಿದ್ದು, ನೆಲ ಅಂತಸ್ತಿನಲ್ಲಿ ಕುಳಿತುಕೊಳ್ಳುವ ಪ್ರತಿನಿಧಿಗಳಿಗಾಗಿ ನಾಲ್ಕು ಎಲ್‌ಸಿಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ.ಅಕ್ಷರ ಜಾತ್ರೆಯಲ್ಲಿ ಅಕ್ಷರ ಪ್ರೀತಿ ಹೆಚ್ಚಿಸಲು ಹಾಗೂ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸಲು ಹಲವು ಹೊಸ ಆಯಾಮಗಳನ್ನು ಈ ಬಾರಿಯ ಜಿಲ್ಲಾ ಸಮ್ಮೇಳನ ಅಳವಡಿಸಿಕೊಂಡಿರುವುದು ವಿಶೇಷ. ಮೊದಲನೆಯದ್ದು ಅಂತರ್ಜಾಲ ತಾಣ ಉದ್ಘಾಟನೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಿಂದಿನ ಬಹುತೇಕ ಅಧ್ಯಕ್ಷರನ್ನು ಸಮ್ಮೇಳನದಲ್ಲಿ ಸಕ್ರಿಯಗೊಳಿಸಿಕೊಂಡಿರುವುದು.`ಜಿಲ್ಲಾ ಸಮ್ಮೇಳನಕ್ಕೆ ಸಾಹಿತ್ಯ ವಲಯದಿಂದ ತುಂಬ ಹೃದಯದ ಬೆಂಬಲ ಸಿಕ್ಕಿದೆ. ನಿರೀಕ್ಷೆ ಮೀರಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ವಿಶ್ವಾಸವಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. 13 ಕೃತಿಗಳನ್ನು ಬಿಡುಗಡೆಗೊಳಿಸುವುದು ಸೇರಿದಂತೆ ಸಾಹಿತ್ಯ ಸೇವೆಯಲ್ಲಿ ಈ ಸಮ್ಮೇಳನವು ಹೊಸ ಬೆಳಕು ಚೆಲ್ಲಬೇಕು ಎನ್ನುವುದು ನಮ್ಮ ಅಪೇಕ್ಷೆ' ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.