ನುಡಿ ಮರಣ ಮತ್ತಷ್ಟು ಕಾರಣ

ಗುರುವಾರ , ಜೂಲೈ 18, 2019
24 °C

ನುಡಿ ಮರಣ ಮತ್ತಷ್ಟು ಕಾರಣ

Published:
Updated:

ಜನ ಸಮೃದ್ಧವಾಗಿ ಬದುಕಿದ್ದರೂ ಅವರ ಭಾಷೆ ಅವನತಿಯ ದಾರಿಯಲ್ಲಿ ಸಾಗುತ್ತ ಕಣ್ಮರೆಯಾಗಬಹುದು. ಒಂದು ಸಂಸ್ಕೃತಿ ಪ್ರಬಲವಾದ ಇನ್ನೊಂದು ಸಂಸ್ಕೃತಿಯ ಪ್ರಭಾವಕ್ಕೆ ಗುರಿಯಾಗಿ ಅದರೊಳಗೆ `ಜೀರ್ಣ~ವಾದಾಗ ಹೀಗಾಗುತ್ತದೆ. ತಮ್ಮದೇ ಭಾಷೆಯನ್ನಾಡುತಿದ್ದ ಜನ ಹೊಸ ವರ್ತನೆ, ಹೊಸ ನೀತಿಗಳನ್ನು ಅಳವಡಿಸಿಕೊಳ್ಳುತ್ತಾ ತಮ್ಮ ಸಾಂಸ್ಕೃತಿಕ ಚಹರೆ ಕಳೆದುಕೊಳ್ಳುತ್ತಾರೆ.ಬೇರೆಯ ನುಡಿಯ ಜನ ಮತ್ತೊಂದು ಪ್ರದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಹರಿದು ಬಂದು ಸ್ಥಳೀಯರನ್ನು ಮುಳುಗಿಸಿಬಿಡಬಹುದು. ವಸಾಹತುಶಾಹಿ ಕಾಲದಲ್ಲಿ ಆದದ್ದು ಇದೇ. ಆಸ್ಟ್ರೇಲಿಯ, ಉತ್ತರ ಅಮೆರಿಕ ಇದಕ್ಕೆ ಉದಾಹರಣೆಗಳು. ಅನ್ಯ ಸಂಸ್ಕೃತಿಯ ಜನ ಹೀಗೆ ವಲಸೆ ಬರದೆಯೂ ತಮ್ಮ ಸೈನ್ಯದ, ದುಡ್ಡಿನ ಬಲಗಳಿಂದ ಇದೇ ಕೆಲಸ ಮಾಡಬಹುದು.ಹೇಗಿದ್ದರೂ ಅವರು ಬಳಸುವ ಭಾಷೆ ಅವರ ಪ್ರಾಬಲ್ಯದ ಲಾಂಛನವಾಗುತ್ತದೆ; ಅಧಿಕೃತ ಭಾಷೆಯಾಗಿ, ಆಡಳಿತ ಭಾಷೆಯಾಗಿ ಆಳುವ ದೇಶದ ಪ್ರತಿನಿಧಿಯಾಗಿ ಉಳಿಯುತ್ತದೆ. ಹೀಗಾಗಲು ಅನ್ಯರ ಸಂಖ್ಯೆ ದೊಡ್ಡದಾಗೇ ಇರಬೇಕೆಂದಿಲ್ಲ. ಆಫ್ರಿಕದಲ್ಲಿದ್ದ ಯೂರೋಪಿಯನ್ನರು ಕಡಮೆ ಸಂಖ್ಯೆಯಲ್ಲಿದ್ದರೂ ಅವರ ಸಾಂಸ್ಕೃತಿಕ ಪ್ರಭಾವ ದೊಡ್ಡದಾಗಿತ್ತು.ಒಂದು ಸಂಸ್ಕೃತಿ ಮತ್ತೊಂದರ ಮೇಲೆ ಪ್ರಭಾವ ಬೀರಲು ಅದು ಅಕ್ಕಪಕ್ಕದ್ದೇ ಆಗಿರಬೇಕಿಲ್ಲ. ಗ್ರಾಹಕ ಸಂಸ್ಕೃತಿ ಎಂದು ಕರೆಯಲಾಗುವಂಥದ್ದು ಈಗ ಜಗತ್ತನ್ನೇ ವ್ಯಾಪಿಸಿದೆ. ನಗರಗಳು ಹಳ್ಳಿಗರನ್ನು ಸೆಳೆಯುವ ಅಯಸ್ಕಾಂತಗಳಾಗುತ್ತಿವೆ. ಸಂಪರ್ಕ ಸಂವಹನದ ಸೌಲಭ್ಯಗಳಿಂದ ನಗರದವರೊಡನಾಟ, ಗ್ರಾಹಕರ ಸಮಾಜದ ಒಡನಾಟ ತಕ್ಷಣಕ್ಕೇ ಲಭ್ಯವಾಗುತ್ತದೆ.

 

ಈ ಸಂಪರ್ಕ ಏಕರೂಪತೆಯನ್ನು ಅನಿವಾರ್ಯವಾಗಿಸುತ್ತದೆ. ಪ್ರಧಾನ ಭಾಷೆಯನ್ನು ಕಲಿಯದೆ ಇರಲಾಗದ ಸ್ಥಿತಿ ಬರುತ್ತದೆ. ದಕ್ಷಿಣ ಅಮೆರಿಕದಲ್ಲಿ ಸ್ಪಾನಿಶ್ ಅಥವ ಪೋರ್ಚುಗೀಸ್; ಪೂರ್ವ ಆಫ್ರಿಕದ ಬಹಳಷ್ಟು ಭಾಗಗಳಲ್ಲಿ ಸ್ವಾಹಿಲಿ; ಜಗತ್ತಿನ ಬಹಳಷ್ಟು ಪ್ರದೇಶಗಳಲ್ಲಿ ಇಂಗ್ಲಿಷ್ ತಿಳಿದಿರಲೇಬೇಕೆಂಬ ಒತ್ತಾಯ ಮೂಡಿದೆ.ಜನ ತಮ್ಮ ಊರುಗಳಲ್ಲೇ ಉಳಿದರೂ ಇಂಥ ಒತ್ತಾಯವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಳ್ಳಿಗರನ್ನ ಪಟ್ಟಣಕ್ಕೆ ಒಯ್ಯುವ ಸಂಪರ್ಕ ವ್ಯವಸ್ಥೆಯೇ ಗ್ರಾಹಕ ಉತ್ಪನ್ನಗಳನ್ನು, ಜಾಹೀರಾತುಗಳನ್ನು ಹಳ್ಳಿಗೆ ತಂದು ಸುರಿಯುತ್ತವೆ. ನಗರಗಳಲ್ಲಿ ಅಧಿಕಾರ ಕೇಂದ್ರೀಕರಣಗೊಂಡು ಸ್ಥಳೀಯ ಸಮುದಾಯಗಳ ಸ್ವಾಯತ್ತತೆ ನಾಶವಾಗುತ್ತದೆ.

 

ತಮ್ಮ ವಿಧಿ ತಮ್ಮ ಕೈಯಲ್ಲಿಲ್ಲ, ದೂರದಲ್ಲಿರುವ `ಡಿಸಿಶನ್ ಮೇಕರ್~ಗಳು ತಮ್ಮ ಸ್ಥಳೀಯ ಅಗತ್ಯಗಳನ್ನು ನಿರ್ಲಕ್ಷಿಸುತ್ತಾರೆನ್ನುವುದು ಗೊತ್ತಾಗಿ ಅನಾಥಭಾವ ಜನರನ್ನು ಕಾಡುತ್ತದೆ. ಪ್ರಧಾನ ಸಂಸ್ಕೃತಿಯ ಭಾಷೆ ಎಲ್ಲೆಲ್ಲೂ ಕದ್ದು ನುಸುಳುತ್ತ, ಸಮೂಹ ಮಾಧ್ಯಮಗಳು ಸಾಂಸ್ಕೃತಿಕ ಒತ್ತಡವನ್ನು ಹೆಚ್ಚಿಸುತ್ತದೆ. ಪಾರಂಪರಿಕ ಜ್ಞಾನ, ಬದುಕಿನ ರೀತಿ ಕುಸಿದು ಹೋಗುತ್ತವೆ.ಸಾಂಸ್ಕೃತಿಕ ಏಕರೂಪತೆ ಜಗತ್ತನ್ನು ಅಂಜಿಸುತ್ತಿದೆ. `ಹಲವು ವರ್ಷಗಳ ರಾಷ್ಟ್ರೀಯ ಚಳವಳಿಯಿಂದ ಸ್ವಾತಂತ್ರ್ಯ ಪಡೆದಿದ್ದರೂ ಸ್ವಾತಂತ್ರ್ಯ ದೊರೆತ ತಕ್ಷಣವೇ ಹಿಂದೆ ಆಳುತ್ತಿದ್ದ ಶಕ್ತಿಯ ಮೌಲ್ಯಗಳೇ, ಆಸೆಗಳೇ ಮತ್ತೆ ವಿಜೃಂಭಿಸುವುದಾದರೆ ಏನು ಸಾಧಿಸಿದಂತಾಯಿತು?~ ಎಂದು ಹರ್ಬರ್ಟ್ ಶಿಲರ್ ಕೇಳುತ್ತಾನೆ.ಒಂದು ಸಂಸ್ಕೃತಿ ಮತ್ತೊಂದನ್ನು ಜೀರ್ಣಿಸಿಕೊಂಡಾಗ ಅಪಾಯಕ್ಕೆ ಒಳಗಾದ ಭಾಷೆಗಳು ಸಾಗುವ ದಾರಿ ಸರಿ ಸುಮಾರಾಗಿ ಒಂದೇ ಥರದ ಮೂರು ಮಜಲಿನ ಇಳಿಜಾರು ದಾರಿ. ಪ್ರಧಾನ ಸಂಸ್ಕೃತಿಯ ಭಾಷೆಯನ್ನು ಮಾತಾಡಬೇಕು, ಕಲಿಯಬೇಕು ಅನ್ನುವ ಅಗಾಧವಾದ ಒತ್ತಾಯ ಮೊದಲು ಹುಟ್ಟುತ್ತದೆ.ಪ್ರಧಾನ ಸಂಸ್ಕೃತಿಯ ಭಾಷೆಯನ್ನು ಕಲಿತರೆ ಮಾತ್ರ ಅಧಿಕಾರ, ಸವಲತ್ತು, ಮನ್ನಣೆ, ಒಳ್ಳೆಯ ಸಂಬಳ- ಹೀಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಮೂಲಗಳಿಂದ ಈ ಒತ್ತಾಯ ಹುಟ್ಟಬಹುದು.ಈ ಭಾಷೆ ಕಲಿತರೆ ಇಂತಿಂಥ ಲಾಭ ಎಂದು ಪುಸಲಾಯಿಸುವುದು, ಈ ಭಾಷೆ ಕಲಿಯಿರಿ ಎಂದು ಶಿಫಾರಸು ಮಾಡುವುದು (`ಇಂಗ್ಲಿಷ್ ಕಲಿಯಿರಿ~) ಪ್ರಧಾನ ಸಂಸ್ಕೃತಿಯ ಭಾಷೆಗೆ ಸರ್ಕಾರದ ಬೆಂಬಲ (ಪ್ರಬಲ ಭಾಷೆಯ ಮಾಧ್ಯಮದ ಶಾಲೆಗಳನ್ನು ತೆರೆಯುವುದು), ಫ್ಯಾಶನ್ನಿನ ಟ್ರೆಂಡ್, ಮನರಂಜನೆ, ವೀಡಿಯೋ ಆಟಗಳು, ಸಿನಿಮಾ ಹಾಡು, ರ‌್ಯಾಗಿಂಗ್, ಸಮಾನ ಮನಸ್ಕರ ಒತ್ತಾಯ ಹೀಗೆ. ಅನ್ಯ ಭಾಷೆ ವ್ಯಾಪ್ತಿ ಹೆಚ್ಚುತ್ತ ಘರ್ಷಣೆ ಹುಟ್ಟುತ್ತದೆ.ಎರಡನೆಯ ಮಜಲು: ಜನ ಹೊಸ ಭಾಷೆಯಲ್ಲಿ ಸಾಮರ್ಥ್ಯ ಪಡೆಯುತ್ತಾರೆ; ತಮ್ಮ ಭಾಷೆಯ ಸಾಮರ್ಥ್ಯವನ್ನೂ ಉಳಿಸಿಕೊಂಡಿರುತ್ತಾರೆ; ಹಳೆಯ ಭಾಷೆ ನಿಧಾನವಾಗಿ ಹೊಸದಕ್ಕೆ ಜಾಗ ತೆರವು ಮಾಡುತ್ತದೆ.ಮೂರನೆಯ ಮಜಲು: ಯೂತ್‌ಗಳು ನ್ಯೂ ಲಾಂಗ್ವೇಜಿನಲ್ಲಿ ಕೇಪಬಲ್; ತಮ್ಮ ನೆಸಸಿಟಿಗಳಿಗೆ ಮದರ್‌ಟಂಗ್ ಅನ್‌ನೆಸೆಸರಿ ಅಂದುಕೊಳ್ಳುತ್ತಾರೆ. ಮದರ್‌ಟಂಗ್ ಬಳಸುವ ಪೇರೆಂಟುಗಳೂ ಚಿಲ್ಡ್ರನ್ನುಗಳೂ ಶೇಮ್ ಅನುಭವಿಸುತ್ತಾರೆ.ಪೇರೆಂಟುಗಳು ಚಿಲ್ಡ್ರನ್ ಜೊತೆ ಮದರ್‌ಟಂಗ್ ಯೂಸ್ ಮಾಡುವುದಿಲ್ಲ; ನ್ಯೂ ಏಜ್ ಚಿಲ್ಡ್ರನ್ ಹೆಚ್ಚಿದಂತೆ ವಯಸ್ಕರು ಅವರೊಡನೆ ಮದರ್‌ಟಂಗ್ ಯೂಸ್ ಮಾಡುವ ಆಪರ್ಚುನಿಟಿ ರೇರ್ ಆಗುತ್ತದೆ. ಹಳೆಯ ಭಾಷೆಯನ್ನೆ ಬಳಸುವ ಮನೆಗಳವರೊಡನೆ ಮಾತಾಡಬಲ್ಲ ಮನೆಗಳ ಸಂಖ್ಯೆ ಕುಗ್ಗುತ್ತದೆ. ಮಾತು ನಿಗೂಢವಾಗುತ್ತ, ಒಳನೋಡಿಕೊಳ್ಳುವುದಾಗಿ, ಮನೆನುಡಿಗಳು ಹುಟ್ಟುತ್ತವೆ.

 

ಮನೆಯಾಚೆ ಮಕ್ಕಳು ಇತರ ಮಕ್ಕಳೊಡನೆ ಹಳೆಯ ಭಾಷೆ ಆಡುವುದು ಬಿಡುತ್ತಾರೆ. ಒಂದೇ ತಲೆಮಾರಿನಲ್ಲಿ, ಕೆಲವೊಮ್ಮೆ ಒಂದೇ ದಶಕದಲ್ಲಿ ಆರೋಗ್ಯಪೂರ್ಣ ಬಹುಭಾಷಿಕತೆ ಕರಗಿ, ಭಾಷೆಯ ಸಾವು ಇನ್ನೊಂದು ಹೆಜ್ಜೆ ಹತ್ತಿರವಾಗುತ್ತದೆ.ಮೊದಲ ಮಜಲಿನ ಪ್ರಭಾವಗಳ ಬಗ್ಗೆ ಏನೂ ಮಾಡಲಾಗುವುದಿಲ್ಲ; ಮೂರನೆಯ ಮಜಲಿನಲ್ಲಿರುವ ಭಾಷೆಗಳ ಬಗ್ಗೆ ಕಾಲ ಮೀರಿದೆ; ದ್ವಿಭಾಷಿಕತೆ ತಲೆ ಎತ್ತುತಿರುವ ಮಧ್ಯದ ಮಜಲಿನ ನುಡಿಗಳ ಭಾಷಾವನತಿಯನ್ನು ನಿಧಾನಗೊಳಿಸಬಹುದು, ನಿಲ್ಲಿಸಬಹುದು, ಮರಳಿ ಶಕ್ತಿ ತುಂಬಬಹುದು.ಪರಭಾಷೆಯ ಪ್ರಾಬಲ್ಯ ನಗರಗಳಲ್ಲಿ ಮೊದಲು, ಆಮೇಲೆ ಇತರೆಡೆಗಳಿಗೆ ಹರಡುತ್ತದೆ. ನಗರಗಳಲ್ಲಿ `ದೊಡ್ಡ~ ಭಾಷೆಗಳನ್ನಾಡುವವರು ಒಂದೇ ಭಾಷೆ ಇರುವುದು `ಸಹಜ, ಅಪೇಕ್ಷಣೀಯ~ ಅನ್ನುವ ನಂಬಿಕೆ ಬೆಳೆಸಿಕೊಳ್ಳುತ್ತಾರೆ; ಅವರ ಸಂಪರ್ಕಕ್ಕೆ ಬಂದ ಸ್ಥಳೀಯ ಭಾಷೆಗಳ ಜನ ಕೂಡ ಅದನ್ನೇ ತಮ್ಮ ಧೋರಣೆಯಾಗಿಸಿಕೊಳ್ಳುತ್ತಾರೆ.ಹೀಗಾಗದಿದ್ದರೆ-ನಗರಭಾಷೆಗಳನ್ನಾಡುವ ಜನ ಚಿಕ್ಕಪುಟ್ಟ ಭಾಷೆಗಳ ಜನರ ಎದುರಿಗೆ `ನಮ್ಮ ಭಾಷೆ~ ಅಥವಾ `ನಿಮ್ಮ ಭಾಷೆ~, `ನಗರಭಾಷೆ ಕಲಿಯಿರಿ ಇಲ್ಲವೆ ಪ್ರಧಾನ ಸಂಸ್ಕೃತಿಗೆ ಹೊರಗಿನವರಾಗಿ, ಲಾಭಗಳನ್ನು ಕಳಕೊಳ್ಳಿ~ ಅನ್ನುತ್ತಾರೆ.

 

ಹೀಗಾಗದಿದ್ದರೆ-ಚಿಕ್ಕಪುಟ್ಟ ಭಾಷೆಗಳನ್ನಾಡುವ ಜನ ತಮ್ಮ ಮತ್ತು ನಗರ ಭಾಷೆಗಳೆರಡನ್ನೂ ಬಳಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಹೀಗಾಗದಿದ್ದರೆ-`ದೊಡ್ಡ ಭಾಷೆ~, `ಚಿಕ್ಕ ಭಾಷೆ~ಗಳೆರಡೂ ಉಳಿಯುತ್ತವೆ.ಎರಡು ಭಾಷೆಗಳಿರುವಲ್ಲಿ ಪ್ರಧಾನ ಮತ್ತು ಅಧೀನ ಭಾಷೆಗಳು ಸಂಘರ್ಷವಿಲ್ಲದೆ ಸಹಬಾಳುವೆ ನಡೆಸುವುದು ತಾತ್ವಿಕವಾಗಿ ಸಾಧ್ಯ. ಯಾಕೆಂದರೆ ಎರಡು ಭಾಷೆಗಳು ಅಸ್ತಿತ್ವದಲ್ಲಿರುವುದಕ್ಕೆ ಇರುವ ಕಾರಣಗಳೇ ಬೇರೆ ಬೇರೆ.ಪ್ರಧಾನ ಭಾಷೆ ಆಕರ್ಷಕ- ಅದು ಸ್ಥಳೀಯ ಸಮುದಾಯದಿಂದ ಆಚೆಗೆ ಹೊರಮುಖ ಚಲನೆಯ ಅವಕಾಶ ಒದಗಿಸುತ್ತದೆ. ಹೊಸ ದಿಗಂತಗಳನ್ನು, ಸಾಧಿಸಬೇಕಾದ ಹೊಸ ಜೀವನ ಮಟ್ಟಗಳನ್ನು ತೋರುತ್ತದೆ. ಹೊಸ-ಹಳೆಯ ಜಗತ್ತುಗಳ ನಡುವೆ ಸೇತುವೆಯಾಗುತ್ತದೆ. ಈ ಅರ್ಥವಂತಿಕೆಯ ಸೇತುವೆ ಇರದಿದ್ದರೆ ಪ್ರಗತಿ ನಗಣ್ಯ.ಅಧೀನ ಭಾಷೆ ಅಂತರ-ರಾಷ್ಟ್ರೀಯ ಅಥವ ಅಂತರ-ಸಂಸ್ಕೃತಿಯ ಭಾಷೆ ಆಗಲಾರದು. ಬೇರೆ ಬೇರೆ ಜನರ ನಡುವೆ ಸಂಪರ್ಕಕ್ಕೆ ಒದಗದು. ಅದರ ನೋಟ ಒಳಮುಖಿಯಾದದ್ದು. ಅದು ತನ್ನನ್ನು ಬಳಸುವ ಜನ ಸಮುದಾಯದ ಅಸ್ಮಿತೆಯ ಚಹರೆ.ಕುಟುಂಬ ಸಂಬಂಧ, ಸಾಮಾಜಿಕ ಸಂಬಂಧ, ಚಾರಿತ್ರಿಕ ಸಾತತ್ಯ, ಸಮುದಾಯಕ್ಕೆ ಪರಂಪರೆಯ ಘನತೆಯ ಭಾವಗಳನ್ನು ಒದಗಿಸುತ್ತದೆ. ಪ್ರಧಾನ ಭಾಷೆ ಈ ಕೆಲಸ ಮಾಡಲಾರದು. ಪ್ರಧಾನ ಭಾಷೆ ಮುಟ್ಟಲಾಗದ ಬದುಕಿನ ಭಾಗವನ್ನು, ಸಾಮಾಜಿಕ ಅಸ್ಮಿತೆಯನ್ನು, ಅಧೀನ ಭಾಷೆ ಮಾತ್ರ ಕಲ್ಪಿಸಬಲ್ಲದು.ಇದು ಆಗಬೇಕಾದರೆ ಪ್ರಧಾನ, ಅಧೀನ ಅನ್ನುವ ಪರಿಭಾಷೆ ಇಲ್ಲವಾಗಬೇಕು. ಭಾಷೆಗಳು ಪೂರಕವಾಗಿ ಇರುವ ಸ್ವಸ್ಥ ವಾತಾವರಣ ನಿರ್ಮಾಣವಾಗಬೇಕು. ಅಪಾಯದಲ್ಲಿರುವ ಭಾಷೆಗಳ ಜನರ ಧೋರಣೆ ಮುಖ್ಯ: ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಇದ್ದರೆ, ಅದನ್ನು ಸೃಜನಶೀಲವಾಗಿ ಬಳಸುವ, ಬೇರೆಯವರು ಹಾಗೆ ಬಳಸಿದಾಗ ಖುಷಿಪಡುವ ಮನೋಧರ್ಮ ಇದ್ದರೆ, ತಮ್ಮ ಭಾಷೆ ಹೆಚ್ಚು ಹೆಚ್ಚು ಕೇಳಿಸುವಂಥ ಸಂದರ್ಭಗಳನ್ನು ಸೃಷ್ಟಿಸಲು ಬಯಸಿದರೆ ಆ ಭಾಷೆ ಉಳಿಯುವದಕ್ಕೆ ಪೂರಕ ವಾತಾವರಣ ಇರುತ್ತದೆ.ತಮ್ಮ ಭಾಷೆ ಬಳಸುವ ಬಗ್ಗೆ ಸಂಕೋಚವಿದ್ದರೆ, ಅವಕಾಶ ದೊರೆತಾಗಲೆಲ್ಲ ಪ್ರಧಾನ ಭಾಷೆಗೆ ಜಾರಿಕೊಂಡರೆ, ತಮ್ಮ ನುಡಿ ಆಡುವವರನ್ನು ಗುರಿಯಾಗಿಟ್ಟುಕೊಂಡು ಜೋಕು ಹೇಳುತಿದ್ದರೆ, ತಮ್ಮ ಭಾಷೆಯ ಬಗ್ಗೆ ಸಂಭ್ರಮಿಸುವ ಅವಕಾಶಗಳನ್ನು ತಪ್ಪಿಸಿಕೊಂಡರೆ, ಎರಡನೆ ಹಂತ ಬೇಗ ಕಳೆಯುತ್ತದೆ.ರಾಷ್ಟ್ರೀಯ ಭಾವನೆ ಅಸ್ಥಿರವಾಗಿರುವಾಗ ಭಾಷಾ ವೈವಿಧ್ಯವು ರಾಷ್ಟ್ರೀಯ ಏಕತೆಗೆ ಅಪಾಯಕಾರಿ ಎಂಬ ಭಾವನೆ ಮೂಡುತ್ತದೆ. ಆಫ್ರಿಕದಲ್ಲಿ ಜನಾಂಗ ಸಂಘರ್ಷವಿದೆ. ಸರ್ಕಾರದಲ್ಲಿರುವವರೆ ಸ್ವತಃ ಇಂಥ ಗುಂಪುಗಳಿಗೆ ಸೇರಿದವರು. ಭಾಷೆಯನ್ನು ಉಪಕರಣವಾಗಿಸಿಕೊಂಡು ದಮನಕಾರಿ ಸರ್ಕಾರಗಳ ವಿರುದ್ಧ ಚಳವಳಿ ನಡೆದ, ಭಾಷಿಕ ಸಮುದಾಯಗಳನ್ನು ಹಿಂಸಿಸಿದ ಉದಾಹರಣೆಗಳಿವೆ.ರಾಷ್ಟ್ರೀಯತೆ ಸ್ಥಿರವಾಗಿರುವಲ್ಲಿ ಭಾಷಾ ವಿರೋಧ ಎದ್ದು ಕಾಣದೆ ಸೂಕ್ಷ್ಮವಾಗಿ ಇರುತ್ತದೆ. ಕಚೇರಿ, ಬ್ಯಾಂಕು, ಮೀಡಿಯಾ, ಉನ್ನತ ಶಿಕ್ಷಣಗಳಲ್ಲಿ ಚಿಕ್ಕಪುಟ್ಟ ಭಾಷೆಗಳ ಬಳಕೆಯ ಅವಕಾಶ ಇರುವುದಿಲ್ಲ. ಆಫ್ರಿಕದ 1200 ಸ್ಥಳೀಯ ಭಾಷೆಗಳು ಮಾಧ್ಯಮಿಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವಲ್ಲ.ಬದುಕಿನ ಗಂಭೀರ ವಲಯಗಳಿಂದ ಭಾಷೆ ನಿಧಾನ ಕಣ್ಮರೆಯಾಗುತ್ತಾ ಧರ್ಮ, ಜನಪ್ರಿಯ ಮನರಂಜನೆ, ಜಾನಪದಗಳಲ್ಲಿ ಉಳಿದಿರಬಹುದು. ಇವು `ಘನತೆ~ಯ ವಲಯಗಳಲ್ಲ. ನುಡಿಬಳಕೆಯ ವಲಯ ಕುಗ್ಗಿದಂತೆ ಶಬ್ದಕೋಶ, ಮಾತುಕತೆಯ ಶೈಲಿ ವೈವಿಧ್ಯ, ವ್ಯಾಪ್ತಿ ಕುಗ್ಗುತ್ತವೆ. ಜನರಿಗೆ ತಮ್ಮ ಭಾಷೆಯಲ್ಲಿ ಮಾತಾಡಿಕೊಳ್ಳಲು ವಿಷಯಗಳಿರುವುದಿಲ್ಲ, ಶಬ್ದಕೋಶವೂ ಇರುವುದಿಲ್ಲ. ಭಾಷೆ ಕಣ್ಮರೆಯಾಗುತ್ತದೆ.ತಮ್ಮ ಭಾಷೆ ಹಿಂದುಳಿದಿರುವಿಕೆಯ ಸಂಕೇತ, ಸಾಮಾಜಿಕ ಅಂತಸ್ತಿಗೆ ಬಾಧಕ ಎಂದು ಭಾವಿಸುವ ನಕಾರಾತ್ಮಕ ಧೋರಣೆ ಎಲ್ಲಿಂದ ಬರುತ್ತದೆ? ಪ್ರಧಾನ ಸಂಸ್ಕೃತಿ-ಭಾಷೆಯ ಜನ ಮಿಕ್ಕ ಸ್ಥಳೀಯ ಭಾಷೆಯವರನ್ನು ಪೆದ್ದರು, ಸೋಮಾರಿಗಳು, ಅನಾಗರಿಕರು, ಅವರ ಭಾಷೆ ಹಿಂದುಳಿದದ್ದು, ಜ್ಞಾನವಿಲ್ಲದ್ದು, ಅಸಮರ್ಪಕ ಎಂದು ಭಾವಿಸುವುದು ಕಾರಣ.ಸ್ಥಳೀಯ ಭಾಷೆ ಗಿಕುಯುವನ್ನು ಶಾಲೆಯ ಹತ್ತಿರ ಬಳಸಿದ್ದು ಗೊತ್ತಾದರೆ ಚಡ್ಡಿ ಬಿಚ್ಚಿಸಿ, ಆರು ಏಟು ಕೊಟ್ಟು, `ನಾನು ಪೆದ್ದ, ನಾನು ಕತ್ತೆ~ ಅನ್ನುವ ಬರಹ ಹೊತ್ತು ಇಡೀ ದಿನ ಇರುವ ಶಿಕ್ಷೆ ಮತ್ತು ದಂಡ ಇರುತಿತ್ತು, ಎನ್ನುತ್ತಾನೆ ಲೇಖಕ ಎನ್‌ಗೂಗಿ. ಶಾಲೆಯಲ್ಲಿ ತುಳು ಮತ್ತು ಕನ್ನಡದಲ್ಲಿ ಒಂದು ಎರಡು ಹೇಳಿಸಿ ತುಳುವಿನಲ್ಲಿ `ಇಜ್ಜಿ~ ಅಂದವರನ್ನು ಬೇರೆಯಾಗಿ ಕೂಡಿಸುತ್ತಿದ್ದುದನ್ನು ನಾಗವೇಣಿ ದಾಖಲಿಸಿದ್ದಾರೆ.ಜನಕ್ಕೆ ತಮ್ಮ ನುಡಿಯ ಬಗ್ಗೆ ಕೀಳರಿಮೆ, ನಾಚಿಕೆ, ಕಸಿವಿಸಿ ಹುಟ್ಟಿ, ಪೂರ್ವಜರ ಭಾಷೆ ತಮ್ಮನ್ನು ದಮನಿಸಿದೆ, ಸಾಮಾಜಿಕ ಮುನ್ನಡೆಗೆ ಅಡ್ಡಿಯಾಗಿದೆ, ಪ್ರಧಾನ ಭಾಷೆ ಕಲಿತರೆ ಪಾರಾದೇವು ಅನಿಸುತ್ತಿರುವಾಗ ಭಾಷಾ ಸಂರಕ್ಷಣೆ, ಪೋಷಣೆ, ಅಭಿವೃದ್ಧಿಯ ಯೋಜನೆ ಇವೆಲ್ಲದರ ಬಗ್ಗೆ ಅನುಮಾನ ಮೂಡುತ್ತದೆ.ಒಂದು ಭಾಷೆ ಮತ್ತೊಂದು ಭಾಷೆಯನ್ನು ಕೊಲ್ಲುವುದಿಲ್ಲ, ಭಾಷೆಯೊಂದರ ಬಗ್ಗೆ ಇರುವ ಧೋರಣೆ ಭಾಷೆಯ ಸಾವಿಗೆ ಮುಖ್ಯ ಕಾರಣ. ಜನ ತಮ್ಮ ಭಾಷೆಯ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಿ, ಅದನ್ನು ತಮ್ಮ ಮಕ್ಕಳಿಗೆ ಕಲಿಸಬಾರದೆಂದು ನಿರ್ಣಯಿಸಿ, ತಮ್ಮ ಭಾಷೆ ಅಸಹನೀಯ ಹೊರೆ ಎಂದು ತಿಳಿದು ವರ್ತಿಸುವಾಗ ನಡೆಯುವುದು- ಭಾಷೆಯ ಆತ್ಮಹತ್ಯೆ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry