ಶನಿವಾರ, ಜೂನ್ 19, 2021
27 °C

ನುಡಿ ಮರೆವು

ಓ.ಎಲ್. ನಾಗಭೂಷಣಸ್ವಾಮಿ Updated:

ಅಕ್ಷರ ಗಾತ್ರ : | |

ಮನುಷ್ಯ ಮಿದುಳಿನಲ್ಲಿ ಭಾಷೆ ಹೇಗೆ ವ್ಯವಸ್ಥೆಗೊಂಡಿದೆ ಅನ್ನುವುದನ್ನು ತಿಳಿಯುವ ಪ್ರಯತ್ನ ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದು. ಕ್ರಿಪೂ 3000ದ ಸುಮಾರಿನ ಈಜಿಪ್ಟಿನ ಕಾಗದ ಸುರುಳಿಯಲ್ಲಿ ಒಂದು ವಿವರ ದಾಖಲಾಗಿದೆ. ಆ ಕಾಗದ ಸುರುಳಿಯನ್ನು ಎಡ್ವಿನ್ ಸ್ಮಿತ್ ಪ್ಯಾಪರಸ್ ಅಂತ ಗುರುತಿಸುತ್ತಾರೆ. ಇಮ್‌ಹೋಟೆಪ್ ಎಂಬ ಹೆಸರಿನ ವೈದ್ಯ ಕಣತಲೆಗೆ, ಕಿವಿಯ ಮೇಲುಭಾಗ ಮತ್ತು ಹಣೆಯ ಪಕ್ಕಕ್ಕೆ ಪೆಟ್ಟು ಬಿದ್ದ ವ್ಯಕ್ತಿಯ ಬಗ್ಗೆ ಅದರಲ್ಲಿ ದಾಖಲಿಸಿದ್ದಾನಂತೆ. ಪೆಟ್ಟು ಬಿದ್ದ ವ್ಯಕ್ತಿಗೆ ಮಾತಿನ ಶಕ್ತಿ ಹೊರಟು ಹೋಯಿತು, ಪೆಟ್ಟು ಬಿದ್ದ ಜಾಗವನ್ನು ಗಮನಿಸಿದರೆ ಮಾತ್ರ ಇಂಥ ತೊಂದರೆಗಳ ಬಗ್ಗೆ ತಿಳಿಯಬಹುದು ಎಂದು ಟಿಪ್ಪಣಿ ಮಾಡಿದ್ದಾನಂತೆ. ಈ ಪ್ರಾಚೀನ ಈಜಿಪ್ತ್ ವೈದ್ಯ ಮಾತ್ರವಲ್ಲದೆ ಕ್ರಿಪೂ 400ರಲ್ಲಿದ್ದ ಗ್ರೀಕ್ ವೈದ್ಯ ಹಿಪ್ಪೊಕ್ರೇಟಸ್, ತತ್ವಶಾಸ್ತ್ರಜ್ಞ ಪ್ಲೇಟೋ, ಅರಿಸ್ಟಾಟಲ್, ಕ್ರಿಪೂ 200ರ ಸುಮಾರಿನ ರೋಮ್ ದೇಶದ ಗಾಲೆನ್ ಇವರೆಲ್ಲರೂ ಕೂಡ ಮಿದುಳಿಗೂ ಭಾಷೆಗೂ ಇರುವ ಸಂಬಂಧವನ್ನು ಕುರಿತು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.

ಈಜಿಪ್ತಿನ ಮಾಹಿತಿಯ ತುಣುಕಿಗೆ ಐದು ಸಾವಿರ ವರ್ಷಗಳಾಗಿದ್ದರೂ ಅದರ ಮಹತ್ವದ ಬಗ್ಗೆ ಉತ್ಸಾಹ ತಾಳಿದ್ದು ಮಾತ್ರ ಹತ್ತೊಂಬತ್ತನೆಯ ಶತಮಾನದ ಕೊನೆಯ ವೇಳೆಗೆ. ಆ ಹೊತ್ತಿಗೆ ಅಫಾಸಿಯಾಲಜಿ, ಅಫಾಸಿಯ ಎಂಬ ರೋಗದ ಬಗ್ಗೆ ಅಧ್ಯಯನ, ಶುರುವಾಗಿತ್ತು. ಆಘಾತ, ಅಪಘಾತಗಳ ಕಾರಣದಿಂದ ಮಿದುಳಿಗೆ ಪೆಟ್ಟಾದರೆ ಮಾತಾಡುವ, ಮಾತನ್ನು ತಿಳಿಯುವ, ಬರೆದದ್ದನ್ನು ಓದಿ ಗ್ರಹಿಸುವ ಶಕ್ತಿ ತಾತ್ಕಾಲಿಕವಾಗಿಯೋ ಶಾಶ್ವತವಾಗಿಯೋ ನಶಿಸಿ ಹೋಗಬಹುದು. ಇದನ್ನು ಅಫಾಸಿಯ ಅನ್ನುತ್ತಾರೆ. ಗ್ರೀಕ್ ಭಾಷೆಯಲ್ಲಿ ಅಫಾಸಿಯ ಅಂದರೆ ಮಾತಿಲ್ಲದಂತಾಗುವುದು ಎಂದು ಅರ್ಥ. ಕನ್ನಡದಲ್ಲಿ ನುಡಿಮರೆವು ಅಂತ ಇಟ್ಟುಕೊಳ್ಳೋಣ.

ಮಿದುಳಿಗೆ ಆದ ಪೆಟ್ಟು, ಪಾರ್ಶ್ವವಾಯು, ಇಂಥ ಕಾರಣಗಳಿಂದ ತಟಕ್ಕನೆ ಅಥವಾ ಮಿದುಳು ಗಡ್ಡೆ, ಅಥವಾ ಸ್ಮೃತಿನಾಶ ಇಂಥ ಹಲವು ಕಾರಣಗಳಿಂದ ಸಾವಕಾಶವಾಗಿ ನುಡಿಮರೆವು ಉಂಟಾಗಬಹುದು. ನುಡಿಮರೆವು ಅಷ್ಟು ಪ್ರಬಲವಲ್ಲದಿದ್ದರೆ ಒಂದೆರಡು ವರ್ಷಗಳಲ್ಲಿ ಬಹುಮಟ್ಟಿಗೆ ಗುಣವಾದರೆ ತೀವ್ರ ಸ್ವರೂಪದ ನುಡಿಮರೆವು ಅನುಭವಿಸುವವರು ಭಾಷಾಸಾಮರ್ಥ್ಯವನ್ನು ತಕ್ಕಮಟ್ಟಿಗೆ ಮಾತ್ರ ವಾಪಸ್ಸುಗಳಿಸಿಕೊಳ್ಳಬಲ್ಲರು. ಈ ನುಡಿಮರೆವಿನಲ್ಲೂ ಹಲವು ಬಗೆಗಳಿವೆ. ಇತ್ತೀಚಿನ ಸಂಗತಿಗಳ ಮರೆವು, ಸಂಖ್ಯೆಗಳ ಅನುಕ್ರಮದ ಮರೆವು, ಹೆಸರು ಪದಗಳ ಮರೆವು ಇತ್ಯಾದಿ. ನುಡಿಮರೆವಿನಿಂದ ಚೇತರಿಸಿಕೊಳ್ಳುವುದರಲ್ಲೂ ಒಂದು ಕ್ರಮವಿದೆಯಂತೆ.

ಈಗ ಮನುಷ್ಯರ ಮಿದುಳಿನಲ್ಲಿ ಉಂಟಾಗುವ ಈ ಅವ್ಯವಸ್ಥೆಯ ಬಗ್ಗೆ ಕೇವಲ ನರಮಂಡಳದ ತಜ್ಞರು ಮಾತ್ರವಲ್ಲ, ಜೀವಶಾಸ್ತ್ರ, ಮಾನವಶಾಸ್ತ್ರ, ತತ್ವಶಾಸ್ತ್ರ, ಭಾಷಾಶಾಸ್ತ್ರ, ಕಂಪ್ಯೂಟರಿನ ಕೃತಕ, ಅಂದರೆ ಮನುಷ್ಯ ನಿರ್ಮಿತ, ಜಾಣತನ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಜ್ಞರು ಎಲ್ಲರೂ ಕುತೂಹಲ ತಳೆದಿದ್ದಾರೆ. ಅವ್ಯವಸ್ಥೆ ಎದುರಾದಾಗ ಮಾತ್ರ ವ್ಯವಸ್ಥೆಯ ಮಹತ್ವ ಗೊತ್ತಾಗುವ ಹಾಗೆ, ರೋಗದ ತಿಳಿವಿನಿಂದ ಮಾತ್ರ ಆರೋಗ್ಯದ ತಿಳಿವು ಮೂಡುತ್ತದೋ ಏನೋ! ಭಾಷಾ ವ್ಯವಸ್ಥೆಗೂ ಮಿದುಳಿನ ಕಾರ್ಯವ್ಯವಸ್ಥೆಗೂ ಇರುವ ಸಂಬಂಧ ಅರ್ಥಮಾಡಿಕೊಳ್ಳುವ ಪ್ರಯತ್ನ 1970ರ ದಶಕದಿಂದೀಚೆಗೆ ದೊಡ್ಡ  ಪ್ರಮಾಣದಲ್ಲಿ ನಡೆದಿದೆ.

ಭಾಷಾಶಾಸ್ತ್ರದ ಒಂದು ಶಾಖೆ, ನ್ಯೂರೋಲಿಂಗ್ವಿಸ್ಟಿಕ್ಸ್, ನರಮಂಡಳ ಭಾಷಾವಿಜ್ಞಾನದ ಪ್ರಮುಖ ಪ್ರಶ್ನೆ ಇದು: ಭಾಷಾ ಸಾಮರ್ಥ್ಯ ಮನುಷ್ಯ ಮಿದುಳಿನಲ್ಲಿ ಹೇಗೆ, ಯಾವ ಕ್ರಮದಲ್ಲಿ ದಾಖಲಾಗಿದೆ? ಭಾಷೆಯ ನಿಯಮಗಳಿಗೂ ಮಿದುಳಿನ ರಚನೆ ಮತ್ತು ಕಾರ್ಯವಿಧಾನಕ್ಕೂ ಯಾವ ಥರದ ಸಂಬಂಧ ಇದೆ? ಮಿದುಳಿಗೆ ಯಾವ ಥರದ ಘಾಸಿಯಾದಾಗ ಭಾಷೆಗೆ, ಸಂವಹನಕ್ಕೆ ಯಾವ ಗತಿಯಾಗುತ್ತದೆ? ಮನುಷ್ಯ ಜೀವಿಗಳ ವಿಕಾಸಕ್ರಮದಲ್ಲಿ ಸಂವಹನೆಯ ಸಾಮರ್ಥ್ಯ, ಭಾಷೆಯ ಬಳಕೆ ಹೇಗೆ ಬೆಳೆದವು? ಈ ವಿಕಾಸದ ಸುಳಿವನ್ನು ಮಿದುಳಿನಲ್ಲಿ ಕಾಣಲು ಸಾಧ್ಯವೇ? ಮಕ್ಕಳು ಭಾಷೆಯನ್ನು ಬಳಸಿ ಸಂವಹನ ಕೌಶಲ ಹೇಗೆ ಕಲಿಯುತ್ತಾರೆ? ಮಕ್ಕಳ ಭಾಷಾ ಸಂಪಾದನೆಗೂ ಅವರ ಮಿದುಳಿನ ಬೆಳವಣಿಗೆಗೂ ಸಂಬಂಧ ಕಲ್ಪಿಸಬಹುದೇ? ಭಾಷೆಯ ಮೂಲಕ ಸಂವಹನ ನಡೆಯುವಾಗ ಮಿದುಳಿನಲ್ಲಿ ನಡೆಯುವ ಕ್ರಿಯೆಗಳನ್ನು ಚಿತ್ರವತ್ತಾಗಿ ದಾಖಲಿಸಿಕೊಂಡು ಅಳೆಯಬಹುದೆ? ಹೀಗೆ ಮಾಡುತ್ತ ಭಾಷೆ ಮತ್ತು ಸಂವಹನದ ಮಾದರಿಯನ್ನು ಕಲ್ಪಿಸಿಕೊಳ್ಳಲು ಆಗುತ್ತದೆಯೆ? ಆ ಮಾದರಿಯನ್ನಿಟ್ಟುಕೊಂಡು ಭಾಷೆಯ ಕಲಿಕೆಯಲ್ಲಿ, ಕಂಪ್ಯೂಟರುಗಳಲ್ಲಿ ಭಾಷಾ ಸಂಸ್ಕರಣದಲ್ಲಿ ಮುಂದುವರೆಯುವ ಸಾಧ್ಯತೆಗಳೇನು? ಭಾಷಾ ಸಂಸ್ಕರಣದ ಪ್ರಮೇಯಗಳನ್ನು ಕಲ್ಪಿಸಿಕೊಳ್ಳಬಹುದೆ? ಇವು ನ್ಯೂರೋಲಿಂಗ್ವಿಸ್ಟಿಕ್ಸ್‌ನ ಮುಖ್ಯ ಆಸಕ್ತಿಗಳು. 

ಆದರೆ ಈ ತಿಳಿವಳಿಕೆ ಪಡೆಯಲು ಸಿಗುವುದು ಮಾತ್ರ ಮಿದುಳಿನ ಆಘಾತಕ್ಕೆ ಒಳಗಾದವರು ಮತ್ತೆ ನುಡಿಸಂಪಾದನೆಯಲ್ಲಿ ಎದುರಿಸುವ ಕಷ್ಟದ ಉದಾಹರಣೆಗಳಷ್ಟೇ! ಅವರು ಎದುರಿಸುವ ಕಷ್ಟ, ಅದನ್ನು ಮೀರಲು ನಡೆಸುವ ಪ್ರಯತ್ನಗಳನ್ನು ಆಧಾರವಾಗಿಟ್ಟುಕೊಂಡು ಜೀವಂತ, ಆರೋಗ್ಯವಂತ ಮಿದುಳಿನ ಭಾಷೆಯ ಸಾಮರ್ಥ್ಯಕ್ಕೆ ವಸ್ತುನಿಷ್ಠ ಪುರಾವೆ ಹುಡುಕುವ ಮಹಾ ಸಾಹಸ ಇದು. ಹಾಗೆಯೇ ಮನುಷ್ಯೇತರ ಮಿದುಳಿನ ಮೇಲೆ ನಿಯಂತ್ರಿತ ಪ್ರಯೋಗಗಳನ್ನು ನಡೆಸಿ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ವ್ಯಕ್ತಪಡಿಸುವುದಕ್ಕೆ ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಅನ್ನುವುದನ್ನು ತಿಳಿಯಲು ನ್ಯೂರೋ ವಿಜ್ಞಾನಿಗಳು ಹೆಣಗಿದ್ದಾರೆ. ಆದರೂ ಆಘಾತಗೊಂಡ ಮಿದುಳಿನ ವರ್ತನೆಯನ್ನು ಆಧಾರವಾಗಿಟ್ಟುಕೊಂಡು, ಮಿದುಳಿನ ಯಾವ ಭಾಗಕ್ಕೆ ತೊಂದರೆಯಾದರೆ ಎಂಥ ಮಾತಿನ ತೊಂದರೆ ಅನ್ನುವ ವಿವರವನ್ನಿಟ್ಟುಕೊಂಡು ಭಾಷೆ ಮತ್ತು ಮಿದುಳಿನ ಸಂಬಂಧದ ಸ್ವರೂಪದ ಬಗ್ಗೆ ತೀರ ಖಚಿತವಾಗಿ ತಿಳಿವಳಿಕೆ ಪಡೆದೆವು ಅಂದುಕೊಳ್ಳುವುದು ಸರಿಯಲ್ಲ ಎಂದು ನುಡಿಮರೆವಿನ ತಜ್ಞರು ಎಚ್ಚರಿಸುತ್ತಲೇ ಇರುತ್ತಾರೆ. ಭಾಷೆ ಮತ್ತು ಮಾನಸಿಕ ಚಟುವಟಿಕೆಗಳನ್ನು ಕುರಿತಂತೆ ಮಿದುಳಿನ ಅಚ್ಚುಕಟ್ಟಾದ ನಕ್ಷೆಯನ್ನು ತಯಾರಿಸಬೇಕೆಂಬ ಹಂಬಲ ಇನ್ನೂ ದೂರದ ಸಂಗತಿಯೇ. 

ಈ ಕೆಲಸ ನೆರವೇರಲು ಮಾನವಿಕ ಶಾಸ್ತ್ರಗಳು, ವೈದ್ಯಕೀಯ, ಸಮಾಜವಿಜ್ಞಾನ, ಜೀವಶಾಸ್ತ್ರದ ಶಾಖೆಗಳು ಎಲ್ಲದರ ಹದವರಿತ ಸಂಗಮವಾಗಬೇಕು. ಎಷ್ಟೆಂದರೂ ಭಾಷೆಯನ್ನು ತಿಳಿಯುವುದೆಂದರೆ ಮನುಷ್ಯನನ್ನೇ ತಿಳಿದಂತೆ, ಅಲ್ಲವೇ! ಆದರೂ ಭಾಷೆಗೆ ಸಂಬಂಧಿಸಿದಂತೆ ಈ ಸಂಶೋಧನೆಗಳು ಭಯವನ್ನೂ ಹುಟ್ಟಿಸುತ್ತವೆ.

ಸೂಕ್ಷ್ಮವಾದ ವಿವರಗಳನ್ನು ತಜ್ಞರಿಗೆ ಬಿಡೋಣ. ನಮ್ಮ ಕುತೂಹಲಕ್ಕೆಂದು ಮಿದುಳು ಮತ್ತು ಭಾಷೆಯ ಸಂಬಂಧದ ಬಗ್ಗೆ ಯಾವ ಥರದ ಕೆಲಸ ಯಾವ ದೃಷ್ಟಿಯಿಂದ ನಡೆದಿದೆ ಅನ್ನುವುದನ್ನು ಗಮನಿಸೋಣ. ಕೆಲವು ವಿಜ್ಞಾನಿಗಳು ಮಿದುಳಿನಲ್ಲಿ ಭಾಷೆಯ ಕಾರ್ಯಗಳನ್ನು ನಿರ್ವಹಿಸುವುದಕ್ಕೆಂದು ಪ್ರತ್ಯೇಕ ಸ್ಥಳಗಳು, ಕೇಂದ್ರಗಳು ಇವೆ ಎಂದು ನಂಬಿಕೊಂಡು ಹೊರಡುತ್ತಾರೆ. ಒಂದು ಥರದಲ್ಲಿ ಇವರದು ಸ್ಥಳೀಕರ ದೃಷ್ಟಿ. ಇವರು ಮಿದುಳಿನ ಉನ್ನತ ಕಾರ್ಯಗಳು ಮಿದುಳಿನ ಬೇರೆ ಬೇರೆ ಕೇಂದ್ರಗಳಲ್ಲಿ ಹಂಚಿಹೋಗಿವೆ, ಮುಖ್ಯವಾಗಿ ಮಿದುಳ ಕಾರ್ಟೆಕ್ಸ್ ಅಥವ ಕವಚದಲ್ಲಿ. ಈ ಕೇಂದ್ರಗಳು ಸಹೋದರಿಯರಂತೆ; ಅಥವಾ ಮಿದುಳಿನ ಮುಂಭಾಗದ ಪ್ರಾಮುಖ್ಯ ಹೆಚ್ಚು ಎಂದು ಭಾವಿಸುತ್ತಾರೆ.

ಇನ್ನು ಕೆಲವರು ಪದಗಳಿಗೆ ಐಡಿಯಾಗಳಿಗೆ ಸಂಬಂಧಪಟ್ಟ ಮಿದುಳಿನ ಭಾಗಗಳಿಗೂ ಭಾಷೆಯ ಕಾರ್ಯ ನಿರ್ವಹಿಸುವ ಭಾಗಗಳಿಗೂ ಸಂಬಂಧ ಇರಬೇಕು ಅದನ್ನು ತಿಳಿಯುವುದು ಮುಖ್ಯ ಎಂದು ಭಾವಿಸುತ್ತಾರೆ. ಇವರದು ಮಿದುಳಿನ ವಿವಿಧ ಭಾಗಗಳ ನಂಟಸ್ತಿಕೆಯನ್ನು ನೆಚ್ಚಿ ಹೊರಡುವ ಕ್ರಮ. ಭಾಷಿಕ ಸಾಮರ್ಥ್ಯವೆಂಬುದು ಬಿಂಬ ಮತ್ತು ಪದಗಳ ಸಂಬಂಧ. ಬಿಂಬ ಮತ್ತು ಪದಗಳನ್ನು ನಿರ್ವಹಿಸುವ ಮಿದುಳಿನ ಭಾಗಗಳ ನಡುವೆ ಸಂಪರ್ಕ ತಪ್ಪಿಹೋದರೆ ನುಡಿಮರೆವು ಉಂಟಾಗುತ್ತದೆ ಅನ್ನುವ ನಿಲುವು ಇವರದ್ದು.

ನುಡಿಮರೆವಿಗೆ ಪಕ್ಕಾದವರು ಚೇತರಿಸಿಕೊಳ್ಳುವಾಗ ಮಿದುಳಿನ ಪ್ರಮುಖ ಕೇಂದ್ರಗಳ ಉಪವಿಭಾಗಗಳು ಚೇತರಿಕೆಯ ಕಾರ್ಯಭಾರ ವಹಿಸಿಕೊಳ್ಳುವುದನ್ನು ಕಂಡರೆ ಮಿದುಳಿನ ವಿವಿಧ ಸ್ಥಳಗಳ ಬಗ್ಗೆ ಜೀವಂತ ಚಲನಶೀಲತೆ ಇರಬೇಕು ಎಂದು ಊಹಿಸಿಕೊಂಡು ಅಧ್ಯಯನ ಶುರುಮಾಡಿದವರಿದ್ದಾರೆ. ಹರಿಯುವ ನದಿಗೆ ದೊಡ್ಡ ಬಂಡೆಗಳು ಅಡ್ಡಬಂದರೆ ನೀರಿನ ಹರಿವು ಎಲ್ಲೋ ನುಸುಳಿ, ಇಲ್ಲೆಲ್ಲೋ ಮಲೆತು ಹೇಗೋ ಮುಂದೆ ಸಾಗುವುದಿಲ್ಲವೇ ಹಾಗೆ. ಇವರದ್ದನ್ನು ಪ್ರವಾಹದ ಗತಿಶೀಲ ದೃಷ್ಟಿ ಅನ್ನೋಣ. ಇವರು ಮಿದುಳಿನ ಬೇರೆ ಬೇರೆ ಭಾಗಗಳ ಕಾರ್ಯನಿರ್ವಹಣೆಯಲ್ಲಿ ಹಲವು ಉಪವಿಭಾಗಗಳಿದ್ದು ಅವುಗಳ ಬಗೆಬಗೆಯ ಸಂಯೋಜನೆಯಿಂದ, ಸಂಪರ್ಕದಿಂದ ಭಾಷಿಕ ಸಂವಹನ ಸಾಧ್ಯವಾಗುತ್ತದೆ ಎಂದು ವಿವರಿಸುತ್ತಾರೆ.

ಇನ್ನು ಕೆಲವು ತಜ್ಞರು ವಿಕಾಸವಾದಿಗಳು. ಮನುಷ್ಯ ಮಕ್ಕಳ ಮಿದುಳ ಬೆಳವಣಿಗೆ, ಭಾಷೆಯ ವಿಕಾಸವನ್ನು ಗಮನಿಸುತ್ತಾ ಇಡೀ ಮನುಷ್ಯ ಭಾಷೆ ಮತ್ತು ಮಿದುಳಿನ ವಿಕಾಸದ ಬಗ್ಗೆ ತಿಳಿವಳಿಕೆ ಸಿಕ್ಕೀತು ಅನ್ನುವ ನೆಚ್ಚಿಕೆ ಇರುವವರು. ಮಿದುಳು ಪದರ ಪದರವಾಗಿ ರೂಪುಗೊಂಡಿದೆ. ಒಳಗಿನಿಂದ ಹೊರಗೆ ಅಥವ ಕೆಳಗಿನಿಂದ ಮೇಲಕ್ಕೆ ಈ ಪದರಗಳು ವಿಕಾಸಕ್ರಮದ ಚರಿತ್ರೆಯನ್ನು ಹೇಳುವಂತಿವೆ. ಮಿದುಳಿನ ಪದರಗಳಿಗೂ ಭಾಷಿಕ ಸಂವಹನದ ಸಾಮರ್ಥ್ಯಕ್ಕೂ ಇರುವ ಸಂಬಂಧ ಗಮನಿಸಬೇಕು ಅನ್ನುವ ತಜ್ಞರು ಇವರು.

ಇನ್ನು ಹಲವು ತಜ್ಞರು ಮಿದುಳಿನ ಇಡಿತನವನ್ನು ಗಮನಿಸಬೇಕು ಅನ್ನುವ ವಿಶ್ವಾಸದವರು. ಅವರ ಪ್ರಕಾರ ಮಿದುಳಿನ ಒಂದೊಂದು ಭಾಗ ಭಾಷೆಯ ಒಂದೊಂದು ಕಾರ್ಯ ನಿರ್ವಹಿಸುತ್ತ ಎಲ್ಲ ಭಾಗಗಳ ಸಮಂಜಸ ಕಾರ್ಯಶೀಲತೆಯಲ್ಲಿ ಭಾಷೆಯ ವ್ಯವಹಾರ ನಡೆಯುತ್ತದೆ ಅನ್ನುತ್ತಾರೆ. 

ಗಂಡು-ಹೆಣ್ಣು ಮಿದುಳುಗಳು ಭಾಷೆಯನ್ನು ಒಂದೇ ಬಗೆಯಲ್ಲಿ ಸಂಸ್ಕರಿಸುತ್ತವೆಯೇ? ಭಿನ್ನ ವ್ಯಾಕರಣಗಳನ್ನು ಹೊಂದಿರುವ ಭಾಷಿಕರ ಮಿದುಳುಗಳು ಬೇರೆ ಬೇರೆ ರೀತಿಯಲ್ಲಿ ನುಡಿಮರೆವಿನಿಂದ ಚೇತರಿಸಿಕೊಳ್ಳುತ್ತವೆಯೇ? ವ್ಯಕ್ತಿಯ ವಯಸ್ಸು, ಶೈಕ್ಷಣಿಕ ಹಿನ್ನಲೆಗಳಿಗೂ ನುಡಿಮರೆವಿನ ಚೇತರಿಕೆಗೂ ಸಂಬಂಧವಿದೆಯೇ? ಇವು ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆಗೆ ಗುರಿಯಾಗಿರುವ ಪ್ರಶ್ನೆಗಳು.

ಮಿದುಳು ಮತ್ತು ಮಾತನ್ನು ಕುರಿತ ಒಂದು ಪುಸ್ತಕವನ್ನು ಕೆ.ಎಚ್. ಕೃಷ್ಣಮೂರ್ತಿಯವರು ಬರೆದಿದ್ದಾರೆ. `ಮಿದುಳು, ಮಾತು, ಮನಸ್ಸು~ ಅದರ ಹೆಸರು. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ 1974ರಲ್ಲಿ ಅದನ್ನು ಪ್ರಕಟಿಸಿದೆ. ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಈ ವಿಷಯದ ಬಗ್ಗೆ ಬಂದಿರುವುದು ಇದೊಂದೇ ಪುಸ್ತಕ. ಹೆಚ್ಚಿನ ವಿವರಗಳಲ್ಲಿ ಆಸಕ್ತಿ ಇರುವ ಓದುಗರು ಅದನ್ನು ಗಮನಿಸಬಹುದು. 

ನುಡಿಮರೆವನ್ನು ಕುರಿತ ಸಂಶೋಧನೆಗಳು ಪೂರ್ಣ ಯಶಸ್ವಿಯಾದರೆ ರೋಗಿಗಳಿಗೆ ಅದರಿಂದ ಖಂಡಿತ ಉಪಯೋಗವಾಗುತ್ತದೆ. ನಿಜ. ಆದರೆ ಭಾಷೆಯ ಕಲಿಕೆಯನ್ನು, ಬಳಕೆಗೂ ಮಿದುಳಿನ ಕಾರ್ಯವಿಧಾನಕ್ಕೂ ಇರುವ ಸಂಬಂಧದ ಪೂರ್ಣ ತಿಳಿವಳಿಕೆ ದೊರೆತಿಲ್ಲ. ಅದು ಬಲು ದೂರದ, ಬಲು ಕಷ್ಟದ ಹಾದಿ. ಕೆಲವೊಮ್ಮೆ ಈ ಯತ್ನ ಯಶಸ್ವಿಯಾಗದಿದ್ದರೇ ಒಳಿತೇನೋ ಅನ್ನಿಸುವುದೂ ಉಂಟು. ಭಾಷೆಗಳ ಕಲಿಕೆ, ಬಳಕೆ ಎಲ್ಲವೂ ಖಚಿತ ಮಾದರಿಯೊಂದರ ನಿಯಂತ್ರಣಕ್ಕೆ ಒಳಪಡುವ ಸಾಧ್ಯತೆಯೇ ಭಯ ಹುಟ್ಟಿಸುತ್ತದೆ. ಹಾಗೊಂದು ವೇಳೆ ಭಾಷೆ, ಸಂವಹನ, ಅರ್ಥ ಎಲ್ಲವೂ ನಿಯಂತ್ರಣಕ್ಕೆ ದಕ್ಕಿಬಿಟ್ಟರೆ ಏನೆಲ್ಲ ರಾಜಕೀಯ, ಸಾಂಸ್ಕೃತಿಕ ಪರಿಣಾಮಗಳಾಗಬಹುದು ಊಹಿಸಿಕೊಳ್ಳಿ. ಅಥವಾ ಇದು ತಜ್ಞನಲ್ಲದ ಸಾಮಾನ್ಯನೊಬ್ಬನ ಕಲ್ಪಿತ ಭೀತಿ ಇದ್ದರೂ ಇರಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.