ನುಸಿ ಔಷಧಿಯಿಂದ ತೆಂಗಿನ ಮರಗಳಿಗೇ ಕುತ್ತು

ಮಂಗಳವಾರ, ಜೂಲೈ 16, 2019
25 °C

ನುಸಿ ಔಷಧಿಯಿಂದ ತೆಂಗಿನ ಮರಗಳಿಗೇ ಕುತ್ತು

Published:
Updated:

ತುಮಕೂರು: ಕಳೆದ ದಶಕದಲ್ಲಿ ತೆಂಗಿನ ಮರಗಳಿಗೆ ಆವರಿಸಿದ್ದ ನುಸಿ ಪೀಡೆ ನಾಶಪಡಿಸಲು ಸರ್ಕಾರ ನೀಡಿದ್ದ ಔಷಧಿಯಿಂದ ಈಗ ತೆಂಗಿನ ಮರಗಳು ಸಾಯಲು ಆರಂಭಿಸಿವೆ.ಕಳೆದ 2000-04ರ ಅವಧಿಯಲ್ಲಿ ತೆಂಗು ಬೆಳೆಗೆ ಎಲ್ಲೆಡೆ ನುಸಿ ಪೀಡೆ ಆವರಿಸಿತ್ತು. ಈ ಸಂದರ್ಭದಲ್ಲಿ ಸರ್ಕಾರ ಕೃಷಿ ಇಲಾಖೆ ಮೂಲಕ ಮಾನೋಕ್ರೋಟ್ ಎಂಬ ಔಷಧಿಯನ್ನು ವಿತರಿಸಿತ್ತು. ಇದನ್ನು ರೈತರು ಗಿಡದ ಕಾಂಡಕ್ಕೆ ಚುಚ್ಚುವ ಮೂಲಕ ಔಷಧೋಪಚಾರ ಮಾಡಿದ್ದರು.ಗಿಡದ ಕಾಂಡವನ್ನು ಕೊರೆದು ಅಲ್ಲಿಗೆ ಇಂಜಕ್ಷನ್ ಮೂಲಕ ಔಷಧಿ ನೀಡಲಾಗುತ್ತಿತ್ತು. ಆನಂತರ ಈ ಔಷಧಿ ವಿತರಣೆಯನ್ನು ಸರ್ಕಾರ ನಿಲ್ಲಿಸಿತ್ತು. ಆದರೆ ಈ ಔಷಧಿ ಪ್ರಭಾವ ಇನ್ನೂ ಇದ್ದು, ಗಿಡ ಸಾಯುತ್ತಿರುವುದಕ್ಕೆ ಔಷಧಿಯೇ ಕಾರಣ ಎಂದು ಬೆಳೆಗಾರರು ಹೇಳುತ್ತಿದ್ದಾರೆ.ಈಗ ತೆಂಗು ಬೆಳೆಗೆ ನುಸಿಪೀಡೆ, ಗರಿ ಸೋತು ಬೀಳುವ ರೋಗ ಮತ್ತು ರಸ ಸೋರುವ ರೋಗ ತೀವ್ರವಾಗಿದ್ದು, ಎಲ್ಲೆಡೆ ಶೀಘ್ರವಾಗಿ ಪಸರಿಸುತ್ತಿದೆ. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರು ಈಗ ರೋಗ ಹತೋಟಿಗೆ ತರಲಾಗದೆ ಕೈಚಲ್ಲಿದ್ದಾರೆ. ಇದರಿಂದ ಕಲ್ಪತರು ನಾಡಿನಲ್ಲಿ ತೆಂಗಿನ ಭವಿಷ್ಯವೇ ತೂಗೂಯ್ಯಾಲೆಯಲ್ಲಿದೆ.ರಾಜ್ಯದಲ್ಲಿ 4.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಇದರಲ್ಲಿ ಜಿಲ್ಲೆಯೊಂದರಲ್ಲಿಯೇ 1.5 ಲಕ್ಷ ಹೆಕ್ಟೇರ್ ತೆಂಗು ಬೆಳೆಯುವ ಪ್ರದೇಶವಿದೆ. ಕಳೆದ ದಶಕದಲ್ಲಿ ನುಸಿ ಪೀಡೆ ತಗುಲಿದಾಗ ಸಹ ಜಿಲ್ಲೆಯಲ್ಲಿ ಆರ್ಥಿಕವಾಗಿಯೂ ತೀವ್ರ ಹಿನ್ನಡೆಯಾಗಿತ್ತು.ಜಿಲ್ಲೆಯಲ್ಲಿ 7.61 ಲಕ್ಷ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿ ಇದೆ. ಇದರಲ್ಲಿ 2.05 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ತೋಟಗಾರಿಕೆ ಬೆಳೆಯ ಶೇ 70ರಷ್ಟು ಭೂಮಿಯಲ್ಲಿ ತೆಂಗು ಹಾಗೂ ಶೇ. 15ರಷ್ಟು ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಹೀಗಾಗಿ ಜಿಲ್ಲೆಯ ಆರ್ಥಿಕತೆ ಸಹ ಹೆಚ್ಚಾಗಿ ತೆಂಗು, ಅಡಿಕೆ ಬೆಳೆ ಮೇಲೆ ಅವಲಂಬಿತವಾಗಿದೆ. ಆದರೆ ಈ ಮೂರು ವಿಧದ ರೋಗದಿಂದ ತೆಂಗಿನ ಇಳುವರಿ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದೆ.ಶಿಲೀಂಧ್ರದಿಂದ ರಸ ಸೋರುವ ರೋಗ ಬರುತ್ತಿದ್ದು, ಬೇರು ಮತ್ತು ಮಣ್ಣಿನ ಮೂಲಕವೇ ಹರಡುತ್ತದೆ. ಒತ್ತೊತ್ತಾಗಿ ತೋಟಗಳಿದ್ದಲ್ಲಿ ಬಹು ಬೇಗ ರೋಗ ಹರಡುತ್ತದೆ. ಮಳೆ ಕೊರತೆ ಮತ್ತು ತೇವಾಂಶ ಪ್ರಮಾಣ ಇಳಿಕೆಯಿಂದ ರೋಗ ಹೆಚ್ಚುತ್ತಿದೆ. ಮಣ್ಣಿನ ಪೋಷಕಾಂಶ ಕೊರತೆ ಸಹ ರೋಗಕ್ಕೆ ಕಾರಣ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತಜ್ಞರು `ಪ್ರಜಾವಾಣಿ~ಗೆ ತಿಳಿಸಿದರು.ಬೆಲೆ ಕುಸಿತ: ತೆಂಗಿನ ಕಾಯಿ ಮತ್ತು ಕೊಬ್ಬರಿ ಬೆಲೆ ಕುಸಿತ ಕಂಡಿದೆ. 1990ರ ಅವಧಿಯಲ್ಲಿದ್ದ ಬೆಲೆಯೇ ಈಗಲೂ ಇದೆ. ತೆಂಗಿನ ಕಾಯಿ ಸರಾಸರಿ ಸಾವಿರಕ್ಕೆ ರೂ. 5000 ಇದೆ. ಕೊಬ್ಬರಿ ಕ್ವಿಂಟಲ್‌ಗೆ ರೂ. 5000 ಇದೆ. ಕಳೆದ ವರ್ಷ ತೆಂಗಿನಕಾಯಿ ಬೆಲೆ ಚೇತರಿಕೆಯಾಗಿತ್ತು. ಆದರೆ ಮತ್ತೆ ಇಳಿಮುಖವಾಗಿದೆ. ಇದರಿಂದ ಬೆಳೆಗಾರರಿಗೆ ಇಳುವರಿ ಮತ್ತು ಬೆಲೆ ಎರಡೂಕೈಕೊಟ್ಟಂತಾಗಿದೆ.ವರದಿಗೆ ಸೂಚನೆ: ಜಿಲ್ಲೆಯಲ್ಲಿ ತೆಂಗಿನ ಸಸಿಗಳು ವ್ಯಾಪಕವಾಗಿ ಸಾಯುತ್ತಿರುವುದು ಸತ್ಯ. ಕಳೆದ ದಶಕದಲ್ಲಿ ನೀಡದ ಮಾನೋಕ್ರೋಟ್‌ನಿಂದ ತೆಂಗಿನ ಸಸಿಗಳು ನಾಶವಾಗುತ್ತಿವೆ. ಈ ಬಗ್ಗೆ ತಕ್ಷಣ ವರದಿ ನೀಡುವಂತೆ ತೋಟಗಾರಿಕೆ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆನಂದರವಿ `ಪ್ರಜಾವಾಣಿ~ಗೆ ತಿಳಿಸಿದರು.ಜಿಲ್ಲೆಯಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ತಿಪಟೂರು ತಾಲ್ಲೂಕಿನ ಶೇ 95ರಷ್ಟು ತೆಂಗಿನ ತೋಟಗಳು ಒಂದಿಲ್ಲೊಂದು ರೋಗಕ್ಕೆ ತುತ್ತಾಗಿವೆ. ರಸ ಸೋರುವ ರೋಗ ಈಗ ಹರಡುತ್ತಿದೆ. ಆದರೆ ಮರಗಳು ಕೊಳೆತು ಬೀಳುತ್ತಿರುವುದು ನಿರಂತರವಾಗಿ ನಡೆಯುತ್ತಿದೆ.ಈ ಬಗ್ಗೆ ತೋಟಗಾರಿಕೆ ಸಚಿವರಿಗೆ ಕಳೆದ 2 ತಿಂಗಳ ಅವಧಿಯಲ್ಲಿ ಮೂರು ಬಾರಿ ಪತ್ರ ಬರೆದು ಸಮಸ್ಯೆ ವಿವರಿಸಿದ್ದೇನೆ. ಆದರೆ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಪ್ರಸ್ತುತ ರಾಜ್ಯದ ರಾಜಕೀಯ ಸಮಸ್ಯೆಗಳು ಮುಗಿದರೆ ಮುಂದಿನ ವಾರ ಸಚಿವರನ್ನು ಭೇಟಿ ಮಾಡಿ ಕ್ರಮಕ್ಕೆ ಕೋರುವುದಾಗಿ ಅವರು ತಿಳಿಸಿದ್ದಾರೆ.ನಿಷೇಧಿತ ಔಷಧಿ ವಿತರಣೆ: ಹೊರ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದ್ದ ಮಾನೋಕ್ರೋಟ್ ಮತ್ತು ಡೈಕ್ರೋಪೋಲೋ ಎಂಬ ಔಷಧಿಗಳನ್ನು ನುಸಿಪೀಡೆ ರೋಗ ನಿವಾರಣೆಗೆ ಸರ್ಕಾರ ರಾಜ್ಯದ ರೈತರಿಗೆ ಹಂಚಿಕೆ ಮಾಡಿತ್ತು. ಇದನ್ನು ವಿರೋಧಸಿ ರೈತಸಂಘ ಪ್ರತಿಭಟನೆ ನಡೆಸಿತ್ತು.ನಂತರ ತಜ್ಞರ ಸಮಿತಿ ಸಹ ನಿಷೇಧಿಸುವಂತೆ ಶಿಫಾರಸು ಮಾಡಿತು. ಆದರೆ ಆ ಸಮಯಕ್ಕೆ ಸಾಕಷ್ಟು ರೈತರು ಔಷಧಿಯನ್ನು ಪ್ರಯೋಗಿಸಿದ್ದರು. ಆಗ ಆರಂಭವಾದ ರೋಗ ಇನ್ನೂ ನಿಂತಿಲ್ಲ ಎನ್ನುತ್ತಾರೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು.ಕಳೆದ ದಶಕದಲ್ಲಿ ನುಸಿಪೀಡೆ ಬಂದಾಗ ನೀರಾ ಕಟ್ಟಲು ಅನುಮತಿ ನೀಡುವಂತೆ ರೈತ ಸಂಘ ಆಗ್ರಹಿಸಿತ್ತು. ಆದರೆ ಸರ್ಕಾರ ರಾಸಾಯನಿಕ ಔಷಧಿ ನೀಡಿ ಬೆಳೆಗಾರರನ್ನು ದಾರಿ ತಪ್ಪಿಸಿತು. ಒಂದು ವರ್ಷ ನೀರಾ ಕಟ್ಟಿದ ತೆಂಗಿನ ಮರಗಳಿಗೆ ರೋಗ ಬಂದಿಲ್ಲ.ಆದರೆ ನೀರಾ ಸಂಸ್ಕರಣೆ ಘಟಕ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಬೇಡಿಕೆ ಇಲ್ಲದೆ ರೈತರು ನೀರಾ ಉತ್ಪಾದನೆಗೆ ಮುಂದಾಗಲಿಲ್ಲ ಎಂದು ರೈತ ಸಂಘದ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಂಕರೆ ಸತೀಶ್ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry