ಮಂಗಳವಾರ, ಏಪ್ರಿಲ್ 13, 2021
25 °C

ನುಸುಳುಕೋರರ ತಡೆಗೆ ಕೇಂದ್ರದಿಂದ ಕ್ರಮ ಆಗಲಿ: ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: `ಬಾಂಗ್ಲಾ ನುಸುಳುಕೋರರಿಂದಾಗಿ ಆಸ್ಸಾಂ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹ ಮಾಡಿದರು.ನಗರದ ಕಾಜುಬಾಗ್‌ನಲ್ಲಿರುವ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ 66ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ, ಪೊಲೀಸ್, ಎನ್‌ಸಿಸಿ, ಸೇವಾದಳ, ಗೃಹರಕ್ಷದ ದಳಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.`ಭಯೋತ್ಪಾದಕರು, ಮಾವೊವಾದಿಗಳು ಮತ್ತು ನಕ್ಸಲರು ಸಮಾಜದಲ್ಲಿರುವ ದೌರ್ಬಲ್ಯಗಳ ದುರುಪಯೋಗ ಪಡೆದು ಸಮಾಜದಲ್ಲಿ ಕಂದಕ ನಿರ್ಮಾಣ ಮಾಡುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಿ ದೇಶ ಒಡೆಯುವ ಷಡ್ಯಂತ್ರ ನಡೆಸಿದ್ದಾರೆ~ ಎಂದರು.`ಭ್ರಷ್ಟಾಚಾರ, ನಿರುದ್ಯೋಗ ಹೀಗೆ ಹತ್ತಾರು ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ದೇಶದ ಪ್ರಜೆಗಳಲ್ಲಿ ಒಗ್ಗಟ್ಟು ಮೂಡಿದರೆ ಈ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲಬಹುದು~ ಎಂದರು.`ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗದಲ್ಲೂ ಮೌಲ್ಯಗಳ ಕುಸಿಯುತ್ತಿವೆ.ಮೌಲ್ಯಗಳನ್ನು ಪುನರ್‌ಸ್ಥಾಪನೆ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಸ್ವಾರ್ಥ ಅಥವಾ ಹಣ ಗಳಿಕೆಗಾಗಿ ಶಿಕ್ಷಣ ಪಡೆಯಬಾರದು. ಶಿಕ್ಷಣದಿಂದ ಸಂಸ್ಕಾರ ಸಿಗಬೇಕು. ರಾಷ್ಟ್ರದ ಯಶಸ್ಸಿಗೆ ಶಿಕ್ಷಣ ಮೂಲವಾಗಬೇಕು ಎಂದು ಹೇಳಿದ ಅವರು, ಪ್ರತಿಭೆ ಪಲಾಯನವಾಗಬಾರದು. ಪ್ರತಿಭೆ ದೇಶ ಆಸ್ತಿ ಆಗಬೇಕು~ ಎಂದರು.`ಅಭಿವೃದ್ಧಿಯಲ್ಲಿ ಕರ್ನಾಟಕ ರಾಷ್ಟ್ರದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿಯೇ ರಾಜ್ಯ ಸರ್ಕಾರ ಮೂಲಮಂತ್ರವಾಗಿದೆ. ರಾಜ್ಯದ ಅಭ್ಯುದಯಕ್ಕಾಗಿ ಇರುವ ಯೋಜನೆಗಳೊಂದಿಗೆ ಇನ್ನಷ್ಟು ಯೋಜನೆಗಳು ನೀಡಲು ಸರ್ಕಾರ ಸಿದ್ಧವಿದೆ~ ಎಂದು ಅವರು ಹೇಳಿದರು. ರಾಜ್ಯ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಕೈಪಿಡಿಯನ್ನು ಸಚಿವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಇಂಕೋಂಗ್ಲಾ ಜಮೀರ್, ಜಿಲ್ಲಾ ಪಂಚಾಯಿತಿ ಸಿಇಒ ಆರ್.ಜೆ.ಜೋಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ವೇದಿಕೆಯಲ್ಲಿದ್ದರು.`ಅರ್ಥ ಕಳೆದುಕೊಳ್ಳುತ್ತಿರುವ ಸ್ವಾತಂತ್ರ್ಯ~

ಕುಮಟಾ: `ದೇಶದ ವಿವಿಧ ಭಾಗಗಳಲ್ಲಿ ನಿತ್ಯ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಂದಾಗಿ ಗಾಂಧೀಜಿ ಕಲ್ಪನೆಯ ಸ್ವಾತಂತ್ರ್ಯ ಅರ್ಥ ಕಳೆದುಕೊಳ್ಳುತ್ತಿದೆ~ ಎಂದು ಉಪವಿಭಾಗಾಧಿಕಾರಿ ಅನುರಾಧ ಅಭಿಪ್ರಾಯಪಟ್ಟರು.ಇಲ್ಲಿಯ ಸುಭಾಸ ಮೈದಾನದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮಂಗಳೂರಿನ ಹೋಂ ಸ್ಟೇ ಹಾಗೂ ದೇಶದ ಇತರೆಡೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಗಳನ್ನು ಪ್ರಸ್ತಾಪಿಸಿದ ಅವರು, ರಾಷ್ಟ್ರ ಪ್ರೇಮದ ಸರಿಯಾ ಪರಿಕಲ್ಪನೆ ಇಲ್ಲದ ನಾವು ಇಂದು ಪ್ಲಾಸ್ಟಿಕ್‌ನಿಂದ ರಾಷ್ಟ್ರಧ್ವಜ ತಯಾರಿಸಿ ಅದನ್ನು ಕಸದಂತೆ ಎಸೆದು ಅವಮಾನ ಮಾಡುತ್ತಿದ್ದೇವೆ ಎಂದರು.

ಇಂದಿನ ರಾಜಕೀಯ ವ್ಯವಸ್ಥೆ ಕೂಡ ಸರಿಪಡಿಸಲಾರದಷ್ಟು ಹೊಲಸಾಗಿದೆ. ಈ ಎಲ್ಲದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ~ ಎಂದರು.ತಹಶೀಲ್ದಾರ ವಿ.ಬಿ. ಫರ್ನಾಂಡಿಸ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಟಿ. ನಾಯ್ಕ ವಂದಿಸಿದರು. ತಾ.ಪಂ. ಅಧ್ಯಕ್ಷೆ ನೀಲಾಂಬಿಕಾ ನಾಯ್ಕ, ಉಪಾಧ್ಯಕ್ಷ ಈಶ್ವರ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಉದಯ ನಾಯ್ಕ, ಅಧಿಕಾರಿಗಳಾದ ಗಣೇಶ ನಾಯ್ಕ, ಕಿರಣ ಪೆಡ್ನೇಕರ್, ಕಸಾಪ ಜಿಲ್ಲಾ ಘಟಕದ  ಅಧ್ಯಕ್ಷ ರೋಹಿದಾಸ ನಾಯ್ಕ, ಕಂದಾಯ ಇಲಾಖೆ ಅಧಿಕಾರಿಗಳಾದ ಕಿರಣ ಗೌರಯ್ಯ, ಶೇಣ್ವಿ, ಅರಣ್ಯ ಅಧಿಕಾರಿಗಳಾದ ಎನ್.ಟಿ. ಹೆಗಡೆ, ವಿ.ಟಿ. ಕವರಿ, ಸಿ.ಪಿ.ಐ. ಶ್ರೀಕಾಂತ, ಪಿ.ಎಸ್.ಐ. ಆಂಜನೇಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ನಾಯ್ಕ, ಸದಸ್ಯ ಮಧುಸೂದನ್ ಶೇಟ್, ತಾ.ಪಂ. ಸದಸ್ಯರಾದ ಗಜಾನನ ಪೈ, ಫ್ರಾನ್ಸಿಸ್ ಫರ್ನಾಂಡಿಸ್ ಮೊದಲಾದವರಿದ್ದರು.`ಯುವಕರು ಹೋರಾಟಗಾರರ ಅನುಸರಿಸಲಿ~

ಹೊನ್ನಾವರ:`ತಮ್ಮ ತ್ಯಾಗ-ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರ ಧ್ಯೇಯೋದ್ದೇಶಗಳ ಬೆಳಕಿನಲ್ಲಿ ಯುವಕರು ಸಾಗಿದರೆ ಭಾರತ ಎಂದೆಂದಿಗೂ ವಿಶ್ವಮಾನ್ಯ ರಾಷ್ಟ್ರವಾಗಿ ಉಳಿಯುವುದು~ ಎಂದು ತಹಶೀಲ್ದಾರ ಗಾಯತ್ರಿ ನಾಯಕ ಅಭಿಪ್ರಾಯಪಟ್ಟರು.ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸ್ವತಂತ್ರ ಭಾರತದ ಗಣನೀಯ ಸಾಧನೆಯನ್ನು ವಿವರಿಸಿದರು.`ಬಡತನ, ಅನಕ್ಷರತೆ, ಪ್ರಾದೇಶಿಕ ಅಸಮತೋಲನ ಮೊದಲಾದ ಸಮಸ್ಯೆಗಳನ್ನು ತೊಡೆದುಹಾಕುವ ಸವಾಲು ದೇಶದ ಮುಂದಿದೆ~ ಎಂದು ಹೇಳಿದ ಅವರು, ರೈತರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆಯೆಂದರು.ಆಂತರಿಕ ಹಾಗೂ ಬಾಹ್ಯ ದುಷ್ಟ ಶಕ್ತಿಗಳಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಬೇಕು ಹಾಗೂ ದೇಶದ ಎಲ್ಲ ಪ್ರಜೆಗಳಲ್ಲಿ ದೇಶಪ್ರೇಮ ಸದಾ ಜಾಗೃತವಾಗಿರಬೇಕೆಂದು ಅವರು ಸಲಹೆ ಹೇಳಿದರು.ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ನಾಯ್ಕ, ತಾ.ಪಂ.ಅಧ್ಯಕ್ಷ ಮಂಜುನಾಥ ನಾಯ್ಕ,ಉಪಾಧ್ಯಕ್ಷೆ ಹರ್ಷಿಣಿ ಗೌಡ ಉಪಸ್ಥಿತರಿದ್ದರು.ರಾಜು ಹೆಬ್ಬಾರ ಕಾರ್ಯಕ್ರಮ ನಿರೂಪಿಸಿದರು. ಉಪ ತಹಶೀಲ್ದಾರ ಎಲ್.ಎಸ್.ಹೆಗಡೆ ವಂದಿಸಿದರು.`ಮಕ್ಕಳಲ್ಲಿ ದೇಶಪ್ರೇಮ ಮೂಡಿಸಿ~

ದಾಂಡೇಲಿ: `ಇಂದಿನ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸಿದರೆ ಸ್ವಾತಂತ್ರೋತ್ಸವ ಸಾರ್ಥಕ~ ಎಂದು ನಗರಸಭಾ ಅಧ್ಯಕ್ಷ ಗೋವಿಂದ ಮೇಲಗಿರಿಯವರು ಅಭಿಪ್ರಾಯಪಟ್ಟರು.ಅವರು ಇಲ್ಲಿಯ ಸಿ.ಎಂ.ಸಿ.ಮೈದಾನದ ನೇತಾಜಿ ಸುಭಾಸ್‌ಚಂದ್ರ ಭೋಸ್ ರಂಗಮಂದಿರದ ವೇದಿಕೆಯಲ್ಲಿ ನೆಡೆದ 66ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ ಮಾತನಾಡಿದರು.`ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಭಾರತ ದೇಶದ ನಾಡು ನುಡಿ ಸಂಸ್ಕಾರಗಳ ಬಗ್ಗೆ ನಮ್ಮ ಮಕ್ಕಳಿಗೆ ನೈಜಪಾಠವನ್ನು ನೀಡುವ ಅಗತ್ಯವಿದೆ~ ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಶೋಭಾ ಜಾಧವ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಆಯಿಷಾ ಪಠಾಣ, ಪೌರಾಯುಕ್ತ ಸಿ.ಡಿ.ದಳವಿ, ಉಪಸ್ಥಿತರಿದ್ದರು.

 

ನಗರದ ಪೊಲೀಸ್ ಇಲಾಖೆಯ ಹಾಗೂ ಗೃಹರಕ್ಷಕದಳ ಸಿಬ್ಬಂದಿ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಮತ್ತು ಎನ್.ಸಿ.ಸಿ.ಕೆಡೆಟ್‌ಗಳು ಧ್ವಜವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಸರ್ವಸದಸ್ಯರು ಎಲ್ಲ ಪಕ್ಷಗಳ ಮುಖಂಡರು, ವೈದ್ಯರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಮುನ್ನ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು.ಸ್ವಾತಂತ್ರೋತ್ಸವದ ಅಂಗವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆಸಲಾದ ಭಾಷಣ, ನಿಬಂಧ ಹಾಗೂ ದೇಶಭಕ್ತಿಗೀತೆಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಪಾಲ್ಗೊಂಡು ಶಿಸ್ತು ಪಾಲಿಸಿದ ಶಾಲೆಗಳಿಗೆ ಕೊಡಮಾಡುವ ಬಹುಮಾನಗಳಲ್ಲಿ ಪ್ರಥಮ ಸ್ಥಾನವನ್ನು ಸೆಂಟ್ ಮೈಕಲ್ಸ್ ಪ್ರಾಥಮಿಕ ಶಾಲೆ, ದ್ವಿತೀಯ ಸ್ಥಾನವನ್ನು ಬಂಗೂರನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ತೃತೀಯ ಸ್ಥಾನವನ್ನು ಹಳೆದಾಂಡೇಲಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳು ಪಡೆದುಕೊಂಡವು.ತಲೆ ಸುತ್ತಿ ಬಿದ್ದ ವಿದ್ಯಾರ್ಥಿಗಳು..

ಕಾರವಾರ: ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಲೆಸುತ್ತಿ ಬಿದ್ದ ಘಟನೆ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆಯಿತು.ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಗಮಿಸಿದ 1200 ವಿದ್ಯಾರ್ಥಿಗಳಲ್ಲಿ ಒಟ್ಟು ಮೂವರು ವಿದ್ಯಾರ್ಥಿಗಳು ತಲೆಸುತ್ತಿ ಬಿದ್ದರು ಎಂದು ಗೊತ್ತಾಗಿದೆ.

ಸ್ಥಳದಲ್ಲಿದ್ದ ಶಿಕ್ಷಕರು ಮತ್ತು ಸ್ವಯಂಸೇವಕರು ತಕ್ಷಣ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿದರು. ಕೆಳಗೆ ಬಿದ್ದ ಧ್ವಜ...

ಕುಮಟಾ: ಇಲ್ಲಿಯ ಗಾಂಧಿ ಚೌಕದಲ್ಲಿ ಧ್ವಜಾರೋಹಣ ನಡೆಸಿದ ಕೆಲ ಗಂಟೆಗಳ ನಂತರ ಧ್ವಜ ಕೆಳಗೆ ಬಿದ್ದ ಘಟನೆ ಜರುಗಿದೆ.ಕಾಂಗ್ರೆಸ್ ಪಕ್ಷದವರು ಇಲ್ಲಿ ಧ್ವಜಾರೋಹಣ ನಡೆಸಿದ ಸುಮಾರು ಎರಡು ಗಂಟೆಗಳ ನಂತರ ಗಾಳಿಯ ಹೊಡೆತಕ್ಕೆ ಜಾರಿ ದ್ವಜ ಕೆಳಗೆ ಬಿದ್ದಿದೆ. ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣ ಧ್ವಜವನ್ನು ಸರಿಯಾಗಿ ಕಟ್ಟಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.`ಧ್ವಜ ಹೇಗೆ ಕೆಳಗೆ ಬಿತ್ತು ಎನ್ನುವ ಬಗ್ಗೆ ತನಿಖೆ ನಡೆಸಿದ ನಂತರ ಪ್ರಕರಣದ ಕುರಿತು ಕ್ರಮ ಕೈಕೊಳ್ಳಲಾಗುವುದು~ ಎಂದು ತಹಶೀಲ್ದಾರ ವಿ.ಬಿ. ಫರ್ನಾಂಡಿಸ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.