ಬುಧವಾರ, ಜನವರಿ 22, 2020
25 °C

ನೂತನ ಉಪ ಲೋಕಾಯುಕ್ತರಾಗಿ ಚಂದ್ರಶೇಖರಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ ಅವರು ಎರಡನೇ ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಅವರು ಪ್ರಮಾಣವಚನ ಸ್ವೀಕರಿಸುವರು.ಕಳೆದ ಜುಲೈ ತಿಂಗಳಲ್ಲಿ ಉಪ ಲೋಕಾಯುಕ್ತ-2 ಹುದ್ದೆ ಸೃಷ್ಟಿಸಲಾಗಿತ್ತು. ಈ ಹುದ್ದೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಗುರುರಾಜನ್ ಅವರು ಅಕ್ಟೋಬರ್ 13ರಂದು ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಂದಿ ನಿಂದಲೂ ಈ ಹುದ್ದೆ ಖಾಲಿ ಇತ್ತು.ಉಪ ಲೋಕಾಯುಕ್ತ-2 ಹುದ್ದೆಗೆ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಪ್ರಸ್ತಾವ ಕಳುಹಿಸಿತ್ತು. ಅದನ್ನು ಪರಿಶೀಲಿಸಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು, ಚಂದ್ರಶೇಖರಯ್ಯ ಅವರನ್ನು ಎರಡನೇ ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಿ ಶನಿವಾರ ಬೆಳಿಗ್ಗೆ ಆದೇಶ ಹೊರಡಿಸಿದರು.

`ಪ್ರಾಮಾಣಿಕವಾಗಿ ಕೆಲಸ ಮಾಡುವೆ~
ಉಪ ಲೋಕಾಯುಕ್ತರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ `ಪ್ರಜಾವಾಣಿ~ ಜೊತೆ ಮಾತನಾಡಿದ ನ್ಯಾ. ಚಂದ್ರಶೇಖರಯ್ಯ ಅವರು, `ಹೈಕೋರ್ಟ್ ನ್ಯಾಯಮೂರ್ತಿಯಾಗಿ, ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೆ. ಉಪ ಲೋಕಾಯುಕ್ತ ಹುದ್ದೆಯಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ~ ಎಂದು ಹೇಳಿದರು.`ನಾನು ರೈತನ ಮಗ. ನಮ್ಮ ಹಳ್ಳಿಯಲ್ಲಿ ಪದವಿ ಶಿಕ್ಷಣ ಪೂರೈಸಿದ ಮೊದಲಿಗ. ಜನಸಾಮಾನ್ಯರ ಕಷ್ಟಗಳ ಬಗ್ಗೆ ನನಗೆ ಅರಿವಿದೆ. ನ್ಯಾಯಮೂರ್ತಿ ಹುದ್ದೆ, ಗ್ರಾಹಕ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕಿಂತ ಉಪ ಲೋಕಾಯುಕ್ತ ಸ್ಥಾನ ಭಿನ್ನವಾದುದು. ಕಾನೂನಿನ ಮಿತಿಯಲ್ಲಿ ಸಾಧ್ಯವಿರುವ ಎಲ್ಲ ಕೆಲಸಗಳನ್ನೂ ಮಾಡುತ್ತೇನೆ~ ಎಂದು ತಿಳಿಸಿದರು.`ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ವಕೀಲರು ಮತ್ತು ಕಕ್ಷಿದಾರರಿಗೆ ತೃಪ್ತಿಯಾಗುವ ರೀತಿಯಲ್ಲಿ ಕೆಲಸ ಮಾಡಿದ್ದೆ. ಅರ್ಜಿಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡಿದ್ದೆ. ಗ್ರಾಹಕ ವ್ಯಾಜ್ಯಗಳ ಆಯೋಗದಲ್ಲೂ ಇದೇ ನೀತಿ ಅನುಸರಿಸಿದ್ದೆ. ನನ್ನ ಅವಧಿಯಲ್ಲಿ ಶೇ 97.5ರಷ್ಟು ಅರ್ಜಿಗಳ ಇತ್ಯರ್ಥ ಆಗಿತ್ತು. ಜನತೆಗೆ ಸಕಾಲಕ್ಕೆ ನ್ಯಾಯ ದೊರೆಯಬೇಕೆಂಬುದು ನನ್ನ ನಿಲುವು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಕೆಲಸದ ವಿಷಯದಲ್ಲಿ ನಮ್ಮ ಆತ್ಮಸ್ಥೈರ್ಯವನ್ನೇ ನಾವು ನೆಚ್ಚಿಕೊಳ್ಳಬೇಕು. ಹೆಚ್ಚು ಅವಧಿ ಕೆಲಸ ಮಾಡಿದರೆ ಹೆಚ್ಚು ಪ್ರಕರಣಗಳ ಇತ್ಯರ್ಥ ಸಾಧ್ಯ. ಭಾನುವಾರ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಕಚೇರಿಗೆ ತೆರಳುತ್ತೇನೆ. ಲೋಕಾಯುಕ್ತ ವ್ಯವಸ್ಥೆ, ಉಪ ಲೋಕಾಯುಕ್ತರ ಕರ್ತವ್ಯ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಕನಿಷ್ಠ 15 ದಿನ ಬೇಕಾಗುತ್ತದೆ~ ಎಂದು ತಿಳಿಸಿದರು.ಮುಖ್ಯಮಂತ್ರಿ ಗೌರವ

ಉಡುಪಿ ವರದಿ: `ಸರ್ಕಾರಕ್ಕೆ ಲೋಕಾಯುಕ್ತ ಸಂಸ್ಥೆ ಬಗ್ಗೆ ಗೌರವ, ಆಸಕ್ತಿ ಇದ್ದುದರಿಂದಲೇ ಉಪ ಲೋಕಾಯುಕ್ತರ ನೇಮಕಕ್ಕೆ ತಕ್ಷಣವೇ ಹೆಸರು ಸೂಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದೇವೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಇಲ್ಲಿ ಹೇಳಿದರು.`ಲೋಕಾಯುಕ್ತ ನೇಮಕದಲ್ಲಿ ವಿಳಂಬವಾಗುತ್ತಿದ್ದರೂ ಸಂಸ್ಥೆಯ ಚಟುವಟಿಕೆ ನಿಲ್ಲಬಾರದು ಎಂಬ ಕಾರಣಕ್ಕೆ ಹೆಚ್ಚು ಮುತುವರ್ಜಿಯಿಂದ ಉಪ ಲೋಕಾಯುಕ್ತರ ಹೆಸರು ಶಿಫಾರಸು ಮಾಡಲಾಗಿದೆ~ ಎಂದು ಪ್ರತಿಕ್ರಿಯಿಸಿದರು.
ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲರು ಅವರಿಗೆ ಪ್ರಮಾಣ ವಚನ ಬೋಧಿಸುವರು.ರೈತ ಕುಟುಂಬದವರು

ಚಂದ್ರಶೇಖಯ್ಯ ಅವರು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿಯ ರಾಂಪುರದ ಒಕ್ಕಲಿಗ ಸಮುದಾಯದ ರೈತ ಕುಟುಂಬದಲ್ಲಿ 1942ರ ಮೇ 20ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದ ಅವರು, ನಂತರ ಬೆಂಗಳೂರಿನಲ್ಲಿ ಬಿ.ಎಲ್ ಪದವಿ ಶಿಕ್ಷಣ ಪಡೆದರು. 1969ರ ಏಪ್ರಿಲ್ 11ರಿಂದ ವಕೀಲಿ ವೃತ್ತಿ ಆರಂಭಿಸಿದ್ದು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.1995ರ ಡಿಸೆಂಬರ್ 18ರಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಚಂದ್ರಶೇಖರಯ್ಯ ಅವರು, 2004ರ ಮೇ 5ರವರೆಗೂ ಈ ಹುದ್ದೆಯಲ್ಲಿದ್ದರು.ದೇಶದ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿದ್ದವರ ಪೈಕಿ ತಮ್ಮ ಸೇವಾವಧಿಯಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ ದಾಖಲೆ ಇವರದು.2004ರ ಆಗಸ್ಟ್ 6ರಂದು ರಾಜ್ಯ ಗ್ರಾಹಕ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಚಂದ್ರಶೇಖರಯ್ಯ, 2009ರ ಏಪ್ರಿಲ್ 30ರಂದು ನಿವೃತ್ತರಾದರು. ಈ ಅವಧಿಯಲ್ಲೂ ಬಾಕಿ ಇದ್ದ 3,321 ಪ್ರಕರಣಗಳು ಸೇರಿದಂತೆ ಒಟ್ಟು 17,310 ಅರ್ಜಿಗಳ ಪೈಕಿ 16,710 ಪ್ರಕರಣಗಳನ್ನು ಇತ್ಯರ್ಥಪಡಿಸಿದ ದಾಖಲೆಯೂ ಇವರ ಹೆಸರಿನಲ್ಲಿದೆ.

ಪ್ರತಿಕ್ರಿಯಿಸಿ (+)