ನೂತನ ಮೂರ್ತಿ ಪ್ರತಿಷ್ಠಾಪನೆ ಇಂದು

7

ನೂತನ ಮೂರ್ತಿ ಪ್ರತಿಷ್ಠಾಪನೆ ಇಂದು

Published:
Updated:
ನೂತನ ಮೂರ್ತಿ ಪ್ರತಿಷ್ಠಾಪನೆ ಇಂದು

ಯಲ್ಲಾಪುರ: ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದಾದ ಇಲ್ಲಿನ ತಪೋಭೂಮಿಯಲ್ಲಿನ ಬಾಲ ತ್ರಿಪುರಸುಂದರಿ ದೇವಸ್ಥಾನ ಪಕೃತಿ ಮಡಿಲಿನಲ್ಲಿ, ವಿಶಾಲವಾದ ಸರೋವರದ ಪಕ್ಕದಲ್ಲಿ ಧರ್ಮಕ್ಷೇತ್ರವಾಗಿ ಜಾಗೃತ ಪೀಠವಾಗಿ ಭಕ್ತರ ಅಭೀಷ್ಟೆಗಳನ್ನು ನೆರವೇರಿಸುತ್ತಿದೆ.ಶಕ್ತಿ ದೇವತೆ, ವಿದ್ಯಾಧಿದೇವತೆಯ ಸಂಯುಕ್ತ ರೂಪವಾಗಿ ಬಾಲ್ಯದಿಂದಲೇ ದುಷ್ಟ ರಕ್ಕಸರನ್ನು ಸಂಹಾರಗೈಯುತ್ತ ಶಕ್ತಿ ದೇವತೆಯಾಗಿ ಮೆರೆದ ಈ ದೇವತೆಯನ್ನು, ಶೃಂಗೇರಿ ಪೀಠದಿಂದ ನೂರಾರು ವರ್ಷಗಳ ಹಿಂದೆ ಸ್ವಾಮಿ ಆತ್ಮಾನಂದ ಎಂಬ ತಪಸ್ವಿಗಳು ಈ ಸ್ಥಳದಲ್ಲಿ ನಿರ್ಮಲಾನಂದ ತೀರ್ಥವೆಂದು ಖ್ಯಾತಿ ಪಡೆದಿದ್ದ ಸರೋವರದ ಪಕ್ಕದಲ್ಲಿ ಪ್ರತಿಷ್ಠಾಪಿಸಿ ಶ್ರೀ ಬಾಲ ತ್ರಿಪುರಸುಂದರಿ ಶಾರದಾಂಬಾ ದೇವಸ್ಥಾನ ಎಂದು ನಾಮಕರಣ ಮಾಡಿದರು; ಈ ಭೂಮಿಯಲ್ಲಿ ತಪಸ್ಸನ್ನಾಚರಿಸಿ ತಪೋಭೂಮಿಯನ್ನಾಗಿಸಿದ್ದಲ್ಲದೇ, ಶಕ್ತಿ ಪೀಠದ ಸ್ಥಾಪನೆಗೆ ಕಾರಣರಾದರು. ಹಲವಾರು ವರ್ಷ ತಪಸ್ಸನ್ನಾಚರಿಸಿದ ಈ ತಪಸ್ವಿ ಆತ್ಮಾನಂದ ಯತಿಗಳು ಸರೋವರದ ನೀರನ್ನು ತಂದು ದೇವಿಗೆ ದೀಪ ಉರಿಸುತ್ತಿದ್ದರು ಎಂಬುದು ಐತಿಹ್ಯ.ಕಾಲಾನಂತರದಲ್ಲಿ ಪೂಜ್ಯ ಆತ್ಮಾನಂದರು ಇದೇ ಸ್ಥಳದಲ್ಲಿ ಕಾಲವಶವಾದರು. ಅವರು ಸಮಾಧಿ ಹೊಂದಿದ ಸ್ಥಳದಲ್ಲಿ ಗುರು ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.ಇಂಥ ಐತಿಹ್ಯವಿರುವ ದೇವಾಲಯದಲ್ಲಿ ಏ.23 ರಿಂದ ಏ. 26ರವರೆಗೆ ನೂತನ ಮೂರ್ತಿ ಪ್ರತಿಷ್ಠಾಪನೆ, ಶತ ಚಂಡಿಕಾ ಮಹಾಯಾಗ  ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಕೊನೆಯ ದಿನವಾದ ಏ.26 ರಂದು ವೈದಿಕರ ಸಮಾವೇಶ ನಡೆಯಲಿದೆ.ಕನ್ನಡ ವೈಶ್ಯ ವಾಣಿ ಸಮಾಜದವರು ಸಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಪಂಚಲೋಹದ ಸುಂದರ ಮೂರ್ತಿಯನ್ನು ದೇಣಿಗೆ ನೀಡಿದ್ದಾರೆ.  ಈ ಎಲ್ಲ ಕಾರ್ಯಕ್ರಮಗಳು ಸ್ವರ್ಣವಲ್ಲಿ ಶ್ರಿಗಳಾದ ಗಂಗಾಧರೆಂದ್ರ ಸರಸ್ವತಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ.ಶ್ರೀ ದೇವಿಯ ಜಾತ್ರಾ ಮಹೋತ್ಸವವು ಪ್ರತಿ ರಥ ಸಪ್ತಮಿಯಂದು ನಡೆಯುತ್ತಿದ್ದು, ಹಿಂದೆ ರಥೋತ್ಸವ ತಟಗಾರ ಕ್ರಾಸ್‌ನವರೆಗೂ ನಡೆಯುತ್ತಿತ್ತು. ಆದರೆ ಇಂದು ಪಾಲಕಿ ಉತ್ಸವ ಮಾತ್ರ ನಡೆಯುತ್ತಿದೆ.ಸ್ವರ್ಣವಲ್ಲಿ ಶ್ರೀಗಳು ಈ ದೇವಸ್ಥಾನವನ್ನು ವಹಿಸಿಕೊಂಡ ಮೇಲೆ ವ್ಯವಸ್ಥಿತವಾಗಿ ಪೂಜಾ ವಿನಿಯೋಗ , ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ತಾವೇ ಸ್ವತಹ ಭಾಗವಹಿಸುತ್ತಾ ಬಂದರು. ದೇವಾಲಯ , ದೇವಿ ಶಿಥಿಲಗೊಂಡಿದ್ದನ್ನು ಮನಗಂಡು ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನೂತನ ದೇವಾಲಯ ,ಹಾಗೂ ಒಂದು ಲಕ್ಷರೂ ವೆಚ್ಚದ ನೂತನ ಮೂರ್ತಿ ಪ್ರತಿಷ್ಠಾಪನೆಯ ಸಂಕಲ್ಪ ತೊಟ್ಟು ಇಂದು ಅದು ನೆರವೇರುತ್ತಿದೆ.ನಾಲ್ಕು ದಿನಗಳ ಕಾಲ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಏ.23 ರಂದು ಸಂಸದ,ಅನಂತ ಕುಮಾರ ಹೆಗಡೆ, ಶಾಸಕ ವಿ.ಎಸ್.ಪಾಟೀಲ್, ಜಿ.ಪಂ. ಅಧ್ಯಕ್ಷೆ ಸುಮಾ ಲಮಾಣಿ, ಉಪಾಧ್ಯಕ್ಷ ಉದಯ ನಾಯ್ಕ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಮತ್ತಿತರರು ಆಗಮಿಸಲಿದ್ದಾರೆ.ಏ. 24 ರಂದು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ್ , ಮಾಜಿ ಸಚಿವ ಆನಂದ ಅಸ್ನೊಟಿಕರ್, ಎಸ್.ಪಿ. ಎಸ್.ಟಿ.ಎಸ್. ರಮೇಶ , ಮತ್ತಿತರರು ಆಗಮಿಸಲಿದ್ದಾರೆ.ಏ.25 ರಂದು ಧಾರವಾಡದ ರಾಮಕೃಷ್ಣ ಆಶೃಮದ ಸ್ವಾಮಿ ರಘುವೀರಾನಂದರು, ಸ್ವಾಮಿ ನಚಿಕೇತಾನಂದರು, ವಿದಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ವೈ.ಎಸ್.ವಿ ದತ್ತ, ಶಾಸಕ ಸುನೀಲ ಹೆಗಡೆ, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಾಜಿ ಶಾಸಕ ಉಮೇಶ ಭಟ್ಟ, ವಿಜಯ ಹೆಗಡೆ ದೊಡ್ಮನೆ , ಮತ್ತಿತರರು ಆಗಮಿಸಲಿದ್ದಾರೆ.

 

ಏ. 26 ರಂದು ಸಮಾರೋಪ ನಡೆಯಲಿದ್ದು, ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಹೈಕೋರ್ಟ್ ನ್ಯಾಯಾಧೀಶ ಎನ್.ಕುಮಾರ್, ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಮಾಜಿ ಸಚಿವ ಎಚ್.ಕೆ. ಪಾಟೀಲ. ನಿವೃತ್ತ ಐ.ಎ.ಎಸ್. ಅಧಿಕಾರಿ ಎ. ರಾಮಸ್ವಾಮಿ ಆಗಮಿಸಲಿದ್ದು ಪ್ರತಿದಿನದ ಕಾರ್ಯಕ್ರಮದಲ್ಲಿ ಸೋಂದಾ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಪ್ರತಿನಿತ್ಯ ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry