ಸೋಮವಾರ, ಜೂನ್ 14, 2021
26 °C

ನೂತನ ಮೇಜರ್ ಜನರಲ್ ಕೆ.ಎಸ್.ವೇಣುಗೋಪಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಒತ್ತುವರಿಯಾಗಿರುವ ರಕ್ಷಣಾ ಇಲಾಖೆಯ ಜಾಗವನ್ನು ಗುರುತಿಸಿ, ಅದನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳುವುದು ನಮ್ಮ  ಪ್ರಮುಖ ಆದ್ಯತೆಗಳಲ್ಲೊಂದಾಗಿದೆ~ ಎಂದು ಕರ್ನಾಟಕ ಹಾಗೂ ಕೇರಳ ಉಪ ವಲಯದ ನೂತನ ಮೇಜರ್ ಜನರಲ್ ಕೆ.ಎಸ್.ವೇಣುಗೋಪಾಲ್ ತಿಳಿಸಿದ್ದಾರೆ.ಮೇಜರ್ ಜನರಲ್ ಎ.ಕೆ. ಪ್ರಧಾನ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಎ.ಕೆ. ಪ್ರಧಾನ್ ಅವರ ಪ್ರಕಾರ, ಬೆಂಗಳೂರು ನಗರವೊಂದರಲ್ಲಿಯೇ ರಕ್ಷಣಾ ಇಲಾಖೆಗೆ ಸೇರಿದ ಜಾಗ ಒತ್ತುವರಿಯಾಗಿರುವ ಎಂಟು ಪ್ರಕರಣಗಳನ್ನು ಗುರುತಿಸಲಾಗಿದೆ.

 

ಇದರಲ್ಲಿ ಆರು ಸಾವಿರ ಚದರ ಅಡಿ ಒತ್ತುವರಿ ಅತಿ ಸಣ್ಣ ಪ್ರಕರಣವಾಗಿದ್ದರೆ, ಎರಡು ಎಕರೆ ಜಾಗ ಒತ್ತುವರಿ ಅತಿ ದೊಡ್ಡದು ಎನಿಸಿದೆ.`ಸಾಮಾನ್ಯವಾಗಿ ಎಲ್ಲ ಸರ್ಕಾರಗಳು ಒತ್ತುವರಿ ಜಾಗ ಪ್ರಕರಣಗಳು ಬೆಳಕಿಗೆ ಬಂದ ನಂತರವೇ ತೆರವಿಗೆ ಕ್ರಿಯಾಶೀಲವಾಗುತ್ತವೆ.

 

ಆದರೆ, ಒತ್ತುವರಿದಾರರ ಮನವೊಲಿಸಿ, ಅವರಿಗೆ ಪರ್ಯಾಯ ಜಾಗ ನೀಡುವುದರ ಮೂಲಕ ಇಲಾಖೆಗೆ ಸೇರಿದ ಜಾಗವನ್ನು ವಾಪಸು ಪಡೆಯಲು ಪ್ರಯತ್ನ ನಡೆಯಬೇಕಾಗಿದೆ~ ಎಂದು ವೇಣುಗೋಪಾಲ್ ಪ್ರತಿಪಾದಿಸಿದರು.`ದೇಶದಲ್ಲಿನ ರಕ್ಷಣಾ ಇಲಾಖೆಗೆ ಸೇರಿದ ಒತ್ತುವರಿ ಜಾಗವನ್ನು ತೆರವುಗೊಳಿಸುವುದು ಕೇಂದ್ರ ಹಾಗೂ ರಕ್ಷಣಾ ಸಚಿವಾಲಯಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ವೇಳೆ ಸರ್ಕಾರ ರಕ್ಷಣಾ ಇಲಾಖೆಯ ಒತ್ತುವರಿ ಜಾಗವನ್ನು ಗುರುತಿಸಲು ಆಸಕ್ತಿ ತೋರಿದಲ್ಲಿ ಜಂಟಿ ಸರ್ವೆ ನಡೆಸಲು ಇಲಾಖೆ ಸಿದ್ಧವಿದೆ~ ಎಂದರು.`ಸಾಮಾನ್ಯವಾಗಿ ಮೆಟ್ರೊ ನಗರಗಳಲ್ಲಿ ಭೂಮಿಗೆ ಹೆಚ್ಚಿನ ಬೇಡಿಕೆಯಿರುವುದು ಹಾಗೂ ಅದಕ್ಕೆ ಎಲ್ಲ ಕಾಲದಲ್ಲಿಯೂ ಬೆಲೆ ಗಗನಮುಖಿಯಾಗಿರುವುದು ಜಾಗ ಒತ್ತುವರಿಯಾಗಲು ಪ್ರಮುಖ ಕಾರಣ. ಅದೇ ಬಳ್ಳಾರಿಯಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಐದು ಸಾವಿರ ಎಕರೆ ಜಾಗವಿದೆ. ಆದರೆ, ಒಂದಿಂಚೂ ಜಾಗ ಒತ್ತುವರಿಯಾಗಿಲ್ಲ~ ಎಂದು ಪ್ರಧಾನ್ ಹೇಳಿದರು.ಇನ್ನು ನಿವೃತ್ತ ಸೈನಿಕರ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ಹಾಗೂ ಕೇರಳ ಸರ್ಕಾರಗಳೆರಡರ ಜತೆ ಮಾತುಕತೆ ಮುಂದುವರಿಸಲಾಗುವುದು ಎಂದು ವೇಣುಗೋಪಾಲ್ ಭರವಸೆ ನೀಡಿದರು.ಇನ್ನು, ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವುದು ಕೂಡ ನಮ್ಮ ಪ್ರಮುಖ ಗುರಿಯಾಗಿದೆ. ಮುಂದಿನ ಎರಡು-ಮೂರು ವರ್ಷಗಳಲ್ಲಿ ಎಲ್ಲ ಸಿಬ್ಬಂದಿಗೆ ವಸತಿ ಸೌಲಭ್ಯ ಉದ್ದೇಶದಿಂದ ಉಪ ವಲಯದಲ್ಲಿ 1.20 ಲಕ್ಷ ಮನೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ವಿವಿಧ ಹಂತದಲ್ಲಿ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ~ ಎಂದರು.ರಕ್ಷಣಾ ಇಲಾಖೆಗೆ ವಸತಿ ಕಟ್ಟಡಗಳ ದುರಸ್ತಿ ಹಾಗೂ ನಿರ್ವಹಣೆಗೆ 2,500 ಕೋಟಿ ರೂಪಾಯಿಗಳನ್ನು ಒದಗಿಸಲು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಒಪ್ಪಿಗೆ ಸೂಚಿಸಿದ್ದಾರೆ. ಬಜೆಟ್‌ನಲ್ಲಿ ಘೋಷಿಸುವ ಈ ಹಣ ನಂತರದ ದಿನಗಳಲ್ಲಿ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.ಸೇನೆ ಹಾಗೂ ನಾಗರಿಕರ ನಡುವೆ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರಯತ್ನ ಮುಂದುವರಿಸಲಾಗುವುದು ಎಂದು ವೇಣುಗೋಪಾಲ್ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.