ಬುಧವಾರ, ಮೇ 25, 2022
24 °C

ನೂತನ ಶ್ರೀಗಳ ಪೀಠಾರೋಹಣ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಉಜ್ಜಯಿನಿ  ಸದ್ಧರ್ಮ ಪೀಠಕ್ಕೆ ಈಗಾಗಲೇ ಸ್ಥಿರ ಪೀಠಾಧಿಪತಿ ಇರುವುದರಿಂದ ಹೊಸಬರಿಗೆ  ಪಟ್ಟಾಭಿಷೇಕ ಮಾಡುವುದು ಅನಗತ್ಯ. ಈ ಹಿನ್ನೆಲೆಯಲ್ಲಿ ನ. 3ರಂದು ಉಜ್ಜಯಿನಿ ಪೀಠಕ್ಕೆ ಹೊಸ ಪೀಠಾಧಿಪತಿಯನ್ನು ನೇಮಿಸಿ, ಪಟ್ಟಾಭಿಷೇಕ ಮಾಡುವುದನ್ನು ತಡೆದು ಪ್ರತಿಭಟಿಸಲಾಗುವುದು ಎಂದು ಹರಪನಹಳ್ಳಿ ಜ್ಞಾನಗುರು ವಿದ್ಯಾಪೀಠದ ಸದಸ್ಯ ಕೆ.ಎಂ. ವಾಮದೇವಯ್ಯ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇತ್ತೀಚೆಗೆ ಲಿಂಗೈಕ್ಯರಾದ ಮರುಳಸಿದ್ಧ ಶಿವಾಚಾರ್ಯರನ್ನು ಚರ ಪೀಠಾಧಿಪತಿಯನ್ನಾಗಿ ಈ ಹಿಂದಿನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ನೇಮಿಸಿದ್ದರು. ಅಲ್ಲದೆ, 1997ರಲ್ಲಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಕರಿ ಬಸವರಾಜ ಎಂಬ ವಟುವನ್ನು  ತ್ರಿಲೋಚನ ಶಿವಾಚಾರ್ಯ ಸ್ವಾಮೀಜಿ ಎಂದು ನಾಮಕಾರಣ ಮಾಡಿ ತಮ್ಮ ಮುಂದಿನ ಸ್ಥಿರ ಪೀಠಾಧಿಪತಿಯನ್ನಾಗಿ (ಉತ್ತರಾಧಿಕಾರಿ) ನೇಮಿಸಿದ್ದರು ಎಂದು  ಹೇಳಿದರು.ಉಜ್ಜಯಿನಿ ಪೀಠಕ್ಕೆ ಸಮಸ್ಯೆ ಉಂಟಾದಲ್ಲಿ ಅದನ್ನು ರಂಭಾಪುರಿ ಪೀಠದ ಶ್ರೀಗಳು ಬಗೆಹರಿಸಬೇಕು. ಒಂದು ವೇಳೆ ರಂಭಾಪುರಿ ಪೀಠಕ್ಕೆ ತೊಡಕು ಉಂಟಾದಲ್ಲಿ ಉಜ್ಜಯಿನಿ ಪೀಠದ ಸ್ವಾಮೀಜಿ ಸರಪಡಿಸಬೇಕು. ಇದರಲ್ಲಿ ಬೇರೆ ಯಾವುದೇ ಪೀಠಾಧಿಪತಿ ಮಧ್ಯಸ್ಥಿಕೆ ಮಾಡುವಂತಿಲ್ಲ. ಇದು ಆದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.ಆದರೆ, ಶ್ರೀಶೈಲ ಪೀಠದ ಸ್ವಾಮೀಜಿ ಇದನ್ನು ಮೀರಿ ತರಾತುರಿಯಲ್ಲಿ, ದುರುದ್ದೇಶ ಪೂರ್ವಕವಾಗಿ ನೂತನ ಶ್ರೀಗಳ ಹೆಸರನ್ನು ಘೋಷಿಸಿದ್ದಾರೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.