ನೂತನ ಸಾರಥ್ಯಕ್ಕೆ ತೆರೆಮರೆ ಪ್ರಯತ್ನ

7

ನೂತನ ಸಾರಥ್ಯಕ್ಕೆ ತೆರೆಮರೆ ಪ್ರಯತ್ನ

Published:
Updated:

ಕುಂದಾಪುರ: ತಾಲ್ಲೂಕು ಪಂಚಾಯಿತಿಯ ಎರಡನೇಯ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗಿಯಾಗುತ್ತಿದ್ದಂತೆ ಮುಂದಿನ 20 ತಿಂಗಳಿನ ಅಧಿಕಾರದ ಗದ್ದುಗೆಯನ್ನು ಏರಲು ಆಕಾಂಕ್ಷಿಗಳ ಪ್ರಯತ್ನಗಳು ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ.ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆಗೆ ಸ್ಥಾನ ನಿಗದಿಯಾಗಿದೆ.ಕುಂದಾಪುರ ತಾಲ್ಲೂಕು ಪಂಚಾಯಿತಿಯ ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ 22 ಸ್ಥಾನಗಳೊಂದಿಗೆ ಬಹುಮತವನ್ನು ಹೊಂದಿದೆ. 12 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಒರ್ವ ಸದಸ್ಯರು ಸಿಪಿಎಂ ಪಕ್ಷದವರಾಗಿದ್ದಾರೆ.ಕಳೆದ ಬಾರಿ ಬಹುಮತವನ್ನು ಹೊಂದಿದ್ದರು ಮೀಸಲಾತಿಯ ಕಾರಣದಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ದಕ್ಕಿದ್ದರೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಿಗೆ ಕೊಡುಗೆಯಾಗಿ ಬಂದಿತ್ತು.ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದುಕೊಂಡು ಬಿಜೆಪಿಯ ಬಂಡಾಯ ಅಭ್ಯರ್ಥಿ ಕಣಕ್ಕೀಳಿದಿದ್ದರೂ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಬೆಳ್ಳಾಡಿ ಶಂಕರ ಶೆಟ್ಟಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು.ಆದರೆ ಈ ಬಾರಿಯ ಲೆಕ್ಕಾಚಾರವೇ ಬೇರೆಯಾಗಿದೆ 20 ತಿಂಗಳ ಹಿಂದಿದ್ದ ರಾಜಕೀಯ ಸ್ಥಿರತೆಗಳು ಇದೀಗ ಇಲ್ಲಿಲ್ಲ. ಕರಾವಳಿ ಜಿಲ್ಲೆಯ ಪ್ರಭಾವಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಮೇಲೆ ಜಿಲ್ಲೆಯಲ್ಲಿನ ರಾಜಕೀಯ ಚಿತ್ರಣಗಳು ಸ್ಥಿತ್ಯಂತಗೊಂಡಿದೆ.ಇತ್ತೀಚಿಗೆ ನಡೆಯಬೇಕಾಗಿದ್ದ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯ ವೇಳೆಯಲ್ಲಿ ಇದರ ಪ್ರಭಾವ ಬಹಿರಂಗಗೊಂಡಿತ್ತು.ಬಿಜೆಪಿಯಿಂದ ಇನ್ನೂ ಯಾವುದೆ ಅಧಿಕೃತ ಪ್ರಕಟಣೆಗಳು ಹೊರ ಬಿದ್ದಿಲ್ಲ, ಆಕಾಂಕ್ಷಿಗಳು ಪಕ್ಷದ ಮುಖಂಡರ ಹಾಗೂ ತಮ್ಮ ನೆಚ್ಚಿನ ನಾಯಕರ ಒಲವನ್ನು ಗಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry