ನೂತನ ಸ್ವರೂಪ ನೀಡಲು ಶೋಧನಾ ಸಮಿತಿ ರಚನೆಅಂತರಿಕ್ಷ್ಗೆ ಹೊಸ ಅಧ್ಯಕ್ಷರ ನೇಮಕಾತಿಗೆ ಚಾಲನೆ

7

ನೂತನ ಸ್ವರೂಪ ನೀಡಲು ಶೋಧನಾ ಸಮಿತಿ ರಚನೆಅಂತರಿಕ್ಷ್ಗೆ ಹೊಸ ಅಧ್ಯಕ್ಷರ ನೇಮಕಾತಿಗೆ ಚಾಲನೆ

Published:
Updated:

ನವದೆಹಲಿ (ಪಿಟಿಐ): ಎಸ್-ಬ್ಯಾಂಡ್ ಒಪ್ಪಂದ ತೀವ್ರ ವಿವಾದ ಎಬ್ಬಿಸಿರುವ ಬೆನ್ನಲ್ಲೇ, ಇಸ್ರೊದ ವಾಣಿಜ್ಯ ಘಟಕವಾದ ‘ಅಂತರಿಕ್ಷ್’ಗೆ ಹೊಸ ಸ್ವರೂಪ ನೀಡಲು ನಿರ್ಧರಿಸಿರುವ ಬಾಹ್ಯಾಕಾಶ ಆಯೋಗ, ಸಂಸ್ಥೆಗೆ ನೂತನ ಅಧ್ಯಕ್ಷರ ಹೆಸರು ಶಿಫಾರಸು ಮಾಡಲು ಶೋಧನಾ ಸಮಿತಿಯನ್ನು ರಚಿಸಿದೆ.ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಂತರಿಕ್ಷ್‌ಗೆ ಅಧ್ಯಕ್ಷರಾಗಿ ನೇಮಕಗೊಳ್ಳುವವರು ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಪ್ರಸ್ತುತ ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾದ ಕೆ.ರಾಧಾಕೃಷ್ಣನ್ ಅವರೇ ಇಸ್ರೊ ಹಾಗೂ ಅಂತರಿಕ್ಷ್‌ದ ಅಧ್ಯಕ್ಷರೂ ಆಗಿದ್ದಾರೆ. ಹೊಸ ನೇಮಕಾತಿಯ ನಂತರ ರಾಧಾಕೃಷ್ಣನ್ ಅಂತರಿಕ್ಷ್ ಮುಖ್ಯಸ್ಥನ ಹೊಣೆಯಿಂದ ಮುಕ್ತವಾಗಲಿದ್ದಾರೆ.1992ರಲ್ಲಿ ಅಂತರಿಕ್ಷ್ ಸ್ಥಾಪಿಸಿದಾಗಿನಿಂದಲೂ ಇಸ್ರೊ ಮುಖ್ಯಸ್ಥರೇ ಅದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇನ್ನು ಮುಂದೆ ತಂತ್ರಜ್ಞರನ್ನೇ ಅಂತರಿಕ್ಷ್ ಮುಖ್ಯಸ್ಥರಾಗಿ ನೇಮಿಸಲಾಗುವುದು.

ಅಂತರಿಕ್ಷ್‌ದ ವಹಿವಾಟು ವಿಸ್ತರಣೆಯಾಗುತ್ತಿದ್ದು, ಇದೇ ವೇಳೆ ಸಂಸ್ಥೆಗೆ ‘ಮಿನಿ ರತ್ನ’ ಸ್ಥಾನಮಾನವೂ ದಕ್ಕಿದೆ. ಹೀಗಾಗಿ ಸಂಸ್ಥೆಗೆ ಹೊಸದಾಗಿ ಸಿಎಂಡಿ ಯವರನ್ನು (ಚೀಫ್ ಮ್ಯಾನೇಜಿಂಗ್ ಡೈರೆಕ್ಟರ್) ನೇಮಿಸುವ ತೀರ್ಮಾನಕ್ಕೆ ಬರಲಾಯಿತು ಎಂದು ರಾಧಾಕೃಷ್ಣನ್ ವಿವರಿಸಿದ್ದಾರೆ. ಆದರೆ ಅಂತರಿಕ್ಷ್‌ದ ಸ್ವರೂಪವನ್ನು ಇಡಿಯಾಗಿ ಬದಲಾಯಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಅಂತರಿಕ್ಷ್ ಹಾಗೂ ದೇವಾಸ್ ನಡುವೆ ಏರ್ಪಟ್ಟಿದ್ದ ಎಸ್-ಬ್ಯಾಂಡ್ ನೀಡಿಕೆ ಒಪ್ಪಂದ ರದ್ದತಿ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು. ದೇವಾಸ್‌ನೊಂದಿಗಿನ ಒಪ್ಪಂದದ ಕುರಿತ ವಿವರವನ್ನೊಳಗೊಂಡ ಪ್ರತಿಯನ್ನು ಇಸ್ರೊ ಈಗಾಗಲೇ ಸಿದ್ಧಪಡಿಸಿದ್ದು, ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿ ಅದನ್ನು ಪರಿಶೀಲಿಸುತ್ತಿದೆ ಎಂದು ರಾಧಾಕೃಷ್ಣನ್ ತಿಳಿಸಿದರು.

ಒಪ್ಪಂದ ರದ್ದುಗೊಂಡರೆ, ನಿಗದಿತ ತರಂಗಾಂತರ ನೀಡದ ಅಂತರಿಕ್ಷ್ ದಂಡ ಕಟ್ಟಬೇಕಾಗುತ್ತದೆ ಎಂಬುದೂ ಸಭೆಯಲ್ಲಿ ಪ್ರಸ್ತಾಪಗೊಂಡಿತು ಎನ್ನಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಇದೀಗ ಎಸ್-ಬ್ಯಾಂಡ್ ತರಂಗಾಂತರದ ಅಗತ್ಯ ಹೆಚ್ಚಾಗಿರುವುದರಿಂದ ಒಪ್ಪಂದ ರದ್ದತಿ ಮಾಡಲೇಬೇಕಾಗಿದೆ. ಅತ್ಯಂತ ವಿರಳವಾದ ಈ ತರಂಗಾಂತರಕ್ಕೆ ಕಳೆದ ಐದು ವರ್ಷಗಳಲ್ಲಿ ಐದು ಪಟ್ಟು ಬೇಡಿಕೆ ಹೆಚ್ಚಾಗಿದೆ ಎಂದು ರಾಧಾಕೃಷ್ಣನ್ ತಿಳಿಸಿದರು.

ಜಿಸ್ಯಾಟ್ 6 ಮತ್ತು ಜಿಸ್ಯಾಟ್ 6 ಎ ಉಪಗ್ರಹಗಳ ಶೇ 90ರಷ್ಟು ಟ್ರಾನ್ಸ್‌ಪಾಂಡರ್‌ಗಳ ಬಳಕೆ ಹಕ್ಕನ್ನು ದೇವಾಸ್ ಕಂಪೆನಿಗೆ ನೀಡಿರುವ ಎಸ್-ಬ್ಯಾಂಡ್ ಒಪ್ಪಂದದಿಂದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರೂ. ನಷ್ಟವಾಗಿರುವ ಕುರಿತು ವರದಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry