ನೂರರ ಪ್ರಭೆಯಲ್ಲಿ ದೀಕ್ಷಿತರ ನೆನಪು

7

ನೂರರ ಪ್ರಭೆಯಲ್ಲಿ ದೀಕ್ಷಿತರ ನೆನಪು

Published:
Updated:

ಡಾ. ಗಿರಿ ಶ್ರೀಧರ ದೀಕ್ಷಿತರು (1911-2004) ಕನ್ನಡನಾಡು ಕಂಡ ವಿಶಿಷ್ಟ, ಬಹುಮುಖ ಪ್ರತಿಭೆಯ ಇತಿಹಾಸ ಬೋಧಕರು, ಸಂಶೋಧಕರು ಸಂಘಟಕರು ಹಾಗೂ ಚಿಂತಕರಾಗಿದ್ದರು.

 

ಅವರ ಅಧ್ಯಯನದ ಆಳ ಮತ್ತು ಹರಹುಗಳನ್ನು ಗಮನಿಸಿದರೆ ಒಂಬತ್ತು ಪ್ರಕಟಿತ ಕೃತಿಗಳು, ನೂರೈವತ್ತಕ್ಕೂ ಹೆಚ್ಚಿನ ಕನ್ನಡ ಮತ್ತು ಇಂಗ್ಲಿಷ್ ಲೇಖನಗಳು ಕಡಿಮೆ ಎಂದೇ ಹೇಳಬೇಕು. ಇದಕ್ಕೆ ಮುಖ್ಯ ಕಾರಣ ತನ್ನ ಪ್ರಸಿದ್ಧಿ - ಪ್ರಚಾರ - ಪ್ರತಿಷ್ಠೆಗಳತ್ತ ಗಮನ ಕೊಡದೇ ಶಿಷ್ಯಕೋಟಿಯನ್ನು ಪ್ರೀತಿಸಿ, ಅವರೆಲ್ಲರ ದುಡಿತ ಮತ್ತು ಏಳ್ಗೆಗೆ ಶ್ರಮಿಸಿದ್ದು!ಪಿಎಚ್.ಡಿ. ಪದವಿಗಾಗಿ ಅವರ ಮಾರ್ಗದರ್ಶನ ಪಡೆದವರು, ಕರ್ನಾಟಕವಲ್ಲದೇ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದವರೂ ಇದ್ದರು. ಈ ಪ್ರದೇಶಗಳ ಭಾಷೆಯನ್ನು ದೀಕ್ಷಿತರು ಬಲ್ಲವರಾಗಿದ್ದರು.

 

ಕನ್ನಡ ಮತ್ತು ಮುಖ್ಯವಾಗಿ ಇಂಗ್ಲಿಷ್ ಭಾಷೆಗಳಲ್ಲಿ ಅವರು ಬರೆದ ಅಪರೂಪದ ಸಂಶೋಧನಾ ಲೇಖನಗಳೆಲ್ಲ ದೇಶದ ವಿವಿಧ ಸಂಶೋಧನಾ ಗ್ರಂಥ ಮತ್ತು ನಿಯತಕಾಲಿಕಗಳಲ್ಲಿ ಹಂಚಿಹೋಗಿದ್ದವು. ಅವರ ವಿದ್ವತ್ ಗುರುತಿಸಿ, ನಿಧನದ ಬಳಿಕವಾದರೂ ಸಂಗ್ರಹಿಸಿ ಕಾದಿರಿಸಲು ಶ್ರಮಿಸಿದವರು ಇನ್ನೊಬ್ಬ ಹೆಸರಾಂತ ಸಂಶೋಧಕ, ಸಾಹಿತಿ (ದಿ.) ಡಾ. ಶ್ರೀನಿವಾಸ ಹಾವನೂರ ಅವರು.

 

ಮೊದಲಿಗೆ `ಮಧ್ಯಕಾಲೀನ ಕರ್ನಾಟಕ~ ಶೀರ್ಷಿಕೆಯಲ್ಲಿ ದೀಕ್ಷಿತರ ಕನ್ನಡದಲ್ಲಿಯ ಐತಿಹಾಸಿಕ ಲೇಖನಗಳನ್ನು ಸಂಪಾದಿಸಿ, ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯದಿಂದ ಹೊರತಂದರು (2008ರಲ್ಲಿ).ಕಳೆದ ಅರವತ್ತು ವರ್ಷಗಳಲ್ಲಿ ದೀಕ್ಷಿತರು ಇಂಗ್ಲಿಷ್ ಭಾಷೆಯಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿ, ಸಂಪಾದಿಸುವ ಯತ್ನದಲ್ಲಿದ್ದಾಗಲೇ 2009ರ ಮಾರ್ಚ್ ತಿಂಗಳಲ್ಲಿ ಹಾವನೂರರು ಆಕಸ್ಮಿಕವಾಗಿ ನಿಧನ ಹೊಂದಿದರು.ಹಾವನೂರರು ಒಟ್ಟು ಮಾಡಿದ ಲೇಖನಗಳನ್ನೆಲ್ಲ, ಅವರಿಗೆ ಆತ್ಮೀಯರಾಗಿದ್ದ ಕೃಷ್ಣ ಅವರು ಸಂಪಾದಿಸಿ ಹೊರತರಲು ಶ್ರಮಿಸಿದರು. ಅದರ ಫಲವಾಗಿ ದೀಕ್ಷಿತರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಸುಮಾರು 700 ಪುಟಗಳ ಬೃಹತ್ ಸಂಪುಟ ‘South India : An Expedition in to the Past’.ದೀಕ್ಷಿತರು ದಾವಣಗೆರೆಯ ಹರಿಹರದಲ್ಲಿ 1911ರಲ್ಲಿ ಜನಿಸಿದರು. ಸಂಸ್ಕೃತ ಹಿನ್ನೆಲೆಯ ಕುಟುಂಬ. ತಂದೆ ಕನ್ನಡ ಶಾಲೆಯ ಮೇಷ್ಟ್ರು. ಆರ್ಥಿಕವಾಗಿ ಅಷ್ಟೊಂದು ಅನುಕೂಲವಿಲ್ಲದ ವಾತಾವರಣದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹರಿಹರದಲ್ಲಿ, ಪ್ರೌಢಶಿಕ್ಷಣ ದಾವಣಗೆರೆಯಲ್ಲಿ ಮತ್ತು ಕಾಲೇಜು ಓದನ್ನು ಮೈಸೂರಿನಲ್ಲಿ ಸಾಗಿಸಿದರು.

 

ಬಿ.ಎ. (ಆನರ್ಸ್‌) ಪರೀಕ್ಷೆಯಲ್ಲಿ ಮೊದಲ ವರ್ಗದಲ್ಲಿ ಮೊದಲಿಗರಾಗಿ ಉತ್ತೀರ್ಣರಾದರು. ದೀಕ್ಷಿತರ ಗುರುಗಳು ಪ್ರಸಿದ್ಧ ಪ್ರಾಚ್ಯಶಾಸ್ತ್ರ ಪಂಡಿತರಾಗಿದ್ದ ಡಾ. ಎಂ.ಎಚ್. ಕೃಷ್ಣ ಅವರು. ನಾ.ಕಸ್ತೂರಿ, ಎ.ಎನ್. ಮೂರ್ತಿರಾವ್ ಅವರ ಇತರ ವಿಷಯಗಳ ಉಪನ್ಯಾಸಕರಾಗಿದ್ದರು.ನೌಕರಿಯ ಕಾರಣದಿಂದಾಗಿ ಒರಿಸ್ಸಾ - ಆಂಧ್ರ ಗಡಿಯ ಪುಟ್ಟ ಸಂಸ್ಥಾನವಾಗಿದ್ದ ಪರ್ಲಾಕಮುಡಿಯ ಮಹಾರಾಜಾ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ ದೀಕ್ಷಿತರು, ಆ ಬಳಿಕ ಸಾಂಗಲಿಯ ವಿಲಿಂಗ್ಡನ್ ಕಾಲೇಜು, ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಕಲಿಸುತ್ತಲೇ, ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮಾಡಿದರು. 1955ರಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ ಬಂದರು. ಮೊದಲ ಅವಧಿಯಲ್ಲೇ ಪಿಎಚ್.ಡಿ. ಮುಗಿಸಿದರು. Local Self government in Medieval Karnataka ಅವರ ಅಧ್ಯಯನ ವಿಷಯವಾಗಿತ್ತು.ನಂತರದ ವರ್ಷಗಳಲ್ಲಿ, ಪ್ರಾಚೀನ ದಕ್ಷಿಣ ಭಾರತದಲ್ಲಿ ಪ್ರಚಲಿತವಿದ್ದ ಸ್ಥಳೀಯ ಆಡಳಿತ ಪದ್ಧತಿಯ ಬಗ್ಗೆ ಅಧಿಕೃತವಾಗಿ ಮಾಹಿತಿಯುಳ್ಳ ತಜ್ಞರಾಗಿ ಬೆಳೆದರು. ಆದರೆ ಇತಿಹಾಸದ ಅಧ್ಯಯನ ಅವರ ದೃಷ್ಟಿಯಲ್ಲಿ ವಿಶ್ವವನ್ನೇ ಒಳಗೊಂಡಿತ್ತು! ಯೂರೋಪ್, ಏಷ್ಯಾ, ಅಮೆರಿಕೆಯ ಇತಿಹಾಸವನ್ನು ಸಾದ್ಯಂತವಾಗಿ ಬೋಧಿಸುತ್ತಿದ್ದರು.

 

ಅಮೆರಿಕೆಯ ಇತಿಹಾಸದ ಗ್ರಂಥವನ್ನೂ ಬರೆದಿದ್ದಾರೆ. ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಕೊನೆಯ ವರ್ಷಗಳಲ್ಲಿ ಚೀನಾ-ಭಾರತಗಳ ಸಾಂಸ್ಕೃತಿಕ ಸಂಬಂಧ ಮತ್ತು ಬೌದ್ಧ ಧರ್ಮ ಆ ದೇಶದಲ್ಲಿ ಬೆಳೆದು ಬಂದ ಬಗ್ಗೆ ಅಧ್ಯಯನ ನಡೆಸಿದ್ದರು.ಜೊತೆ ಜೊತೆಗೇ ಹತ್ತನೆಯ ಶತಮಾನದ ಕರ್ನಾಟಕದ ಸೋಮದೇವ ಸೂರಿಯ ಸಂಸ್ಕೃತ ಗ್ರಂಥ ಮತ್ತು ಹಳೆಗನ್ನಡ ಟೇಕಿನ `ನೀತಿವಾಕ್ಯಾಮೃತಂ~ ಎಂಬ ರಾಜಕಾರಣ ಸೂತ್ರದ ಗ್ರಂಥವನ್ನು ಪ್ರೊಫೆಸರ್ ರಾಮಸ್ವಾಮಿ ಮತ್ತು ಡಾ. ಶ್ರೀನಿವಾಸ ರಿತ್ತಿಯವರ ಸಹಾಯದಿಂದ ಸಂಪಾದಿಸಿ ಪ್ರಕಟಿಸಿದರು. (ಹಂಪಿ ವಿಶ್ವವಿದ್ಯಾಲಯ 2000ನೇ ವರ್ಷ).ಅಖಿಲ ಭಾರತ ವ್ಯಾಪ್ತಿಯ ಹಲವಾರು ಐತಿಹಾಸಿಕ ಸಂಸ್ಥೆಗಳ ದೀರ್ಘಾವಧಿಯ ಸದಸ್ಯತ್ವವನ್ನು ದೀಕ್ಷಿತರು ಹೊಂದಿದ್ದು, ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಆಂಧ್ರಪ್ರದೇಶ ಇತಿಹಾಸ ಸಮ್ಮೇಳನ, ಕಲಕತ್ತೆಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಸಂಸ್ಥೆಗಳ ವಾರ್ಷಿಕ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿದ್ದರು.ಇತಿಹಾಸ ಕ್ಷೇತ್ರಕ್ಕೆ ದೀಕ್ಷಿತರ ಕೊಡುಗೆಯೆಂದರೆ 1986ರಲ್ಲಿ ಅವರು ಮುಂದಾಳತ್ವ ವಹಿಸಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಸ್ಥಾಪನೆ. `ಇತಿಹಾಸದ ಪ್ರೀತಿ ಮತ್ತು ಅಭಿವ್ಯಕ್ತಿಗೆ ಆ ವಿಷಯದಲ್ಲಿ ಪದವಿ, ಸ್ಥಾನಮಾನಗಳು ಬೇಕಿಲ್ಲ, ಆಸಕ್ತಿಯೊಂದಿದ್ದರೆ ಸಾಕು!

ಎಂಬ ವಿಶಾಲ ತಳಹದಿಯ ಮೇಲೆ ರೂಪಿತವಾದ ಅಕಾಡೆಮಿ, ಈ 25 ವರ್ಷಗಳಲ್ಲಿ ವಿಶಾಲವಾಗಿ ಬೆಳೆದಿದೆ. 1400 ಆಜೀವ ಸದಸ್ಯರನ್ನು ಒಳಗೊಂಡ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಕರು, ರೈತರು, ತೋಟದ ಮಾಲೀಕರು, ಇಂಜಿನಿಯರ್, ಗುಮಾಸ್ತರು, ಗೃಹಿಣಿಯರೆಲ್ಲ ಪಾಲ್ಗೊಂಡು ಸಂಶೋಧನಾ ಲೇಖನಗಳನ್ನು ವಾರ್ಷಿಕ ಅಧಿವೇಶನದಲ್ಲಿ ಮಂಡಿಸಿದ್ದಾರೆ. ಪ್ರತಿ ವರ್ಷ ಸಮ್ಮೇಳನ ನಡೆಸಿ `ಇತಿಹಾಸ ದರ್ಶನ~ ಎಂಬ ಚರಿತ್ರೆಯ ಹತ್ತಾರು ಆಯಾಮಗಳನ್ನು ಹೊಂದಿದ ಅಧ್ಯಯನ ಪೂರ್ಣ ಲೇಖನಗಳ ಸಂಪುಟವನ್ನು ಅಕಾಡೆಮಿ ಹೊರತರುತ್ತಿದೆ.ದೀಕ್ಷಿತರ ಶತಮಾನೋತ್ಸವ ಸಂಭ್ರಮ ಇತಿಹಾಸ ಅಕಾಡೆಮಿಯ ಹೊಸ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಯುವ ಇತಿಹಾಸಕಾರರ ಚಟುವಟಿಕೆಗಳಿಗೆ ಕೂಡ ಸ್ಫೂರ್ತಿದಾಯಕವಾಗಿದೆ.

`ಪ್ರಗತಿ ಗ್ರಾಫಿಕ್ಸ್~ ಪ್ರಕಟಣೆಯ ‘South India : An Expedition in to the Past’ ಕೃತಿ ಇಂದು ಬೆಳಿಗ್ಗೆ 10ಕ್ಕೆ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry