ನೂರರ ಬೆಳಕಲ್ಲಿ ಕೃಷಿ ಇಲಾಖೆ

7

ನೂರರ ಬೆಳಕಲ್ಲಿ ಕೃಷಿ ಇಲಾಖೆ

Published:
Updated:
ನೂರರ ಬೆಳಕಲ್ಲಿ ಕೃಷಿ ಇಲಾಖೆ

ನಗರದ ಕೆ.ಆರ್. ವೃತ್ತದಲ್ಲಿರುವ ಕೃಷಿ ಇಲಾಖೆ ಅಸ್ತಿತ್ವಕ್ಕೆ ಬಂದು ಇಂದಿಗೆ (ಫೆ.13) ನೂರು ವರ್ಷ.

ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಆಗಿನ ಮೈಸೂರು ಅರಸರ ನೇತೃತ್ವದ ಸರ್ಕಾರ ಬೇಸಾಯ ಇಲಾಖೆ ಆರಂಭಿಸಿದ್ದು ಪ್ರಸ್ತುತ ಇರುವ ಕೃಷಿ ಇಲಾಖೆ ನಿರ್ದೇಶಕರ ಕಟ್ಟಡದಲ್ಲಿ, ಅದೂ ಮಣ್ಣು ವಿಶ್ಲೇಷಣಾ ಪ್ರಯೋಗಾಲಯ ಪ್ರಾರಂಭ ಮಾಡುವ ಮೂಲಕ. ಬ್ರಿಟಿಷರ ಮೇಲ್ವಿಚಾರಣೆಯಲ್ಲಿ ಆಡಳಿತ ನಡೆಸುತ್ತಿದ್ದ ಮೈಸೂರು ಒಡೆಯರ ಪ್ರಭುತ್ವ ಜನಹಿತಕ್ಕಾಗಿ ಹಲವು ಇಲಾಖೆಗಳನ್ನು ಸ್ಥಾಪಿಸಿ, ಅಭಿವೃದ್ಧಿಗೆ ಅಧುನಿಕತೆಯ ಸ್ಪರ್ಶ ನೀಡಲಾರಂಭಿಸಿದಾಗ ಆದ್ಯತೆ ಪಡೆದಿದ್ದು ಬೇಸಾಯ ಇಲಾಖೆ.ಕೃಷಿ ನಿರಂತರವಾಗಿ ಸಾಗಬೇಕೆಂಬುದು ಅದರ ಉದ್ದೇಶವಾಗಿತ್ತು. 19ನೇ ಶತಮಾನದ ಕೊನೆಯಲ್ಲಿ ದೇಶವನ್ನು ಪದೇಪದೇ ಕಾಡುತ್ತಿದ್ದ ಕ್ಷಾಮವೂ ಇದಕ್ಕೆ ಕಾರಣ. ಹಸಿವಿನಿಂದ ಸಂಭವಿಸುತ್ತಿದ್ದ ಸಾವು -ನೋವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೃಷಿಯತ್ತ ಹೆಚ್ಚು ಗಮನ ಕೊಡುವುದು ಆಗ ಅನಿವಾರ್ಯವಾಗಿತ್ತು. ಸರ್ಕಾರಿ ಸಂಸ್ಥೆಗಳ ಮುಖಾಂತರ ಅಭಿವೃದ್ಧಿಯತ್ತ ಸಾಗುತ್ತಿದ್ದ ಮೈಸೂರು ಸರ್ಕಾರ ರೈತರಿಗೆ ನೆರವು ಒದಗಿಸಲು ಕೃಷಿ ಇಲಾಖೆಗೆ ಲೆಸ್ಲಿ. ಸಿ. ಕೋಲ್ಮನ್ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿತು.ಪ್ರಪಂಚದಾದ್ಯಂತ ಕೃಷಿ ಕ್ಷೇತ್ರದಲ್ಲಾಗುತ್ತಿದ್ದ ಬದಲಾವಣೆಗಳಿಗೆ ಅನುಗುಣವಾಗಿ ಕರ್ನಾಟಕ ರಾಜ್ಯದ ಕೃಷಿ ಇಲಾಖೆಯನ್ನು ಸಜ್ಜುಗೊಳಿಸಿದವರು ಕೋಲ್ಮನ್. ಕೃಷಿ ಶಾಲೆಗಳ ಆರಂಭ, ಮಣ್ಣು ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಬೆಳೆ ಯೋಜನೆಗಳ ತಯಾರಿಕೆ, ಕೃಷಿ ಸಂಶೋಧನಾ ವಿಭಾಗ ಸ್ಥಾಪನೆ, ಕೃಷಿ ಎಂಜಿನಿಯರಿಂಗ್ ಶಾಖೆ ಆರಂಭ ಮಾಡುವ ಮೂಲಕ ಕೋಲ್ಮನ್ ಮುಂದಿನ ಇಪ್ಪತ್ತು ವರ್ಷ ಕೃಷಿ ಇಲಾಖೆಗೆ ಭದ್ರ ಬುನಾದಿ ಹಾಕಿಕೊಟ್ಟರು.ಕೃಷಿ ಇಲಾಖೆಯು ಆಹಾರ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ ರೈತರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದೆ. ಮಣ್ಣು ಪರೀಕ್ಷೆ, ನೀರು ನಿರ್ವಹಣೆ, ರೋಗ ನಿಯಂತ್ರಣ, ಗೊಬ್ಬರ ಉಪಯೋಗ ಹಾಗೂ ಮಾರುಕಟ್ಟೆ ವ್ಯವಸ್ಥೆ ಹೀಗೆ ರೈತರಿಗೆ ಕೃಷಿಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಜೊತೆಗೆ ಹೊಸ ಕೃಷಿ ವಿಧಾನಗಳನ್ನು ರೈತರ ಬಳಿಗೆ ಕೊಂಡೊಯ್ದಿದೆ.ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಅಧುನಿಕ ಕೃಷಿ ವಿಧಾನಗಳನ್ನು ಅಳವಡಿಸಲು ರೈತರಿಗೆ ನೆರವಾಗುತ್ತಿರುವ ಕೃಷಿ ಇಲಾಖೆ `ಹಸಿರು ಕ್ರಾಂತಿ' ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು. ಏಕೀಕೃತ ಕರ್ನಾಟಕದ ಆಹಾರ ಧಾನ್ಯ ಉತ್ಪಾದನೆ 1955-56ರಲ್ಲಿ 38 ಲಕ್ಷ ಟನ್‌ಗಳಾಗಿತ್ತು. ಇದು 2001-02ರಲ್ಲಿ 100 ಲಕ್ಷ ಟನ್‌ಗಳಿಗೆ ಹೆಚ್ಚಿತು. ಈಗ ಕೃಷಿ ಇಲಾಖೆ ಶತಮಾನೋತ್ಸವ ವರ್ಷದ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ 130 ಲಕ್ಷ ಟನ್‌ಗೆ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದೆ.ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರೈತರನ್ನು ವಿಧಾನಸೌಧದಲ್ಲಿ ಸನ್ಮಾನಿಸಿ ಗೌರವಿಸಲು ಆರಂಭಿಸಿದ ಕರ್ನಾಟಕ ಕೃಷಿ ಇಲಾಖೆಯು ಪ್ರತ್ಯೇಕ ಕೃಷಿ ಬಜೆಟ್ ಪರಿಚಯಿಸಿದ್ದು ಮತ್ತೊಂದು ಹೆಗ್ಗಳಿಕೆ.ಆಹಾರ ಸ್ವಾವಲಂಬನೆಗೆ ಅಪಾರ ಕೊಡುಗೆ ನೀಡಿರುವ ಕೃಷಿ ಇಲಾಖೆ ತನ್ನ ಶತಮಾನೋತ್ಸವ ಸಂದರ್ಭದಲ್ಲಿ ಕೃಷಿ ಬದುಕಿನ ಏಳು ಬೀಳುಗಳನ್ನು ಪ್ರತಿಬಿಂಬಿಸುವ ಹೊತ್ತಿಗೆಯನ್ನು ಪ್ರಕಟಿಸಲು ನಿರ್ಧರಿಸಿದೆ. ಕೃಷಿ ಶತಮಾನೋತ್ಸವ ಭವನವೂ ಇದೇ ಸಂದರ್ಭದಲ್ಲಿ ಮೈದಳೆಯಲಿರುವುದು ವಿಶೇಷ.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry