ನೂರರ ಸಂಭ್ರಮದಲ್ಲಿ ಪೆರೇಸಂದ್ರ ಶಾಲೆ

ಭಾನುವಾರ, ಜೂಲೈ 21, 2019
25 °C

ನೂರರ ಸಂಭ್ರಮದಲ್ಲಿ ಪೆರೇಸಂದ್ರ ಶಾಲೆ

Published:
Updated:

ಚಿಕ್ಕಬಳ್ಳಾಪುರ:  ತಾಲ್ಲೂಕಿನ ಹೊರವಲಯದಲ್ಲಿರುವ ಪೆರೇಸಂದ್ರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಿಸುವ ಸಂಭ್ರಮದಲ್ಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 103 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯು ಜುಲೈ 26ರಂದು ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಿದೆ.ಸುಮಾರು ಮೂರು ವರ್ಷಗಳಿಂದ ಮುಂದೂಡಲ್ಪಡುತ್ತಿದ್ದ ಶತಮಾನೋತ್ಸವ ಸಂಭ್ರಮಾಚರಣೆಯನ್ನು ಪ್ರಸಕ್ತ ವರ್ಷ ಯಾವುದೇ ಕಾರಣಕ್ಕೂ ಕೈಬಿಡಬಾರದೆಂದು ತೀರ್ಮಾನಿಸಿರುವ ಶಾಲೆಯ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಸಿದ್ಧತಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅವರಿಗೆ ಗ್ರಾಮಸ್ಥರಿಂದ ಮತ್ತು ವಿವಿಧ ಸಂಘಸಂಸ್ಥೆಗಳಿಂದ ಸಾಕಷ್ಟು ನೆರವು ದೊರೆಯುತ್ತಿದೆ.ಶತಮಾನೋತ್ಸವ ಆಚರಣೆ ಅಂಗವಾಗಿ `ಜ್ಞಾನ ಸಂಗಮ' ಎಂಬ ಸ್ಮರಣ ಸಂಚಿಕೆಯನ್ನೂ ಸಹ ಹೊರತರಲು ಉದ್ದೇಶಿಸಿರುವ ಶಿಕ್ಷಕರು ಅದಕ್ಕಾಗಿ ಹಳೆಯ ವಿದ್ಯಾರ್ಥಿಗಳಿಂದ, ದಾನಿಗಳಿಂದ ಮತ್ತು ವಿವಿಧ ಸಂಘಸಂಸ್ಥೆಗಳಿಂದ ಲೇಖನಗಳನ್ನು ಆಹ್ವಾನಿಸುತ್ತಿದ್ದಾರೆ. `ಜ್ಞಾನ ಸಂಗಮ' ಸ್ಮರಣ ಸಂಚಿಕೆಯು ನೂರು ವರ್ಷದ ಸಮಗ್ರ ಗುಚ್ಛವಾಗಬೇಕೆಂದು ಅವರು ಬಯಸಿದ್ದಾರೆ.`1910ರಲ್ಲಿ ಸ್ಥಾಪನೆಗೊಂಡ ನಮ್ಮ ಶಾಲೆಯು ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಒಂದು ಕೊಠಡಿಯಲ್ಲಿ ಕೇವಲ 20 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಶಾಲೆಯು ವರ್ಷಗಳು ಕಳೆದಂತೆ ಹಲವಾರು ಸೌಕರ್ಯಗಳಿಂದ ವಿಸ್ತರಣೆಗೊಂಡಿತು. ಸುತ್ತಮುತ್ತಲಿನ ಸುಮಾರು 15 ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ ಮತ್ತು ಪರೀಕ್ಷೆ ಫಲಿತಾಂಶದಲ್ಲಿ ನಮ್ಮ ಶಾಲೆಯು ತಾಲ್ಲೂಕಿನಲ್ಲೇ ಉನ್ನತ ಸ್ಥಾನದಲ್ಲಿದೆ' ಎಂದು ಶಾಲಾ ಶಿಕ್ಷಕಿ ಪಿ.ವಿ.ನೂತನಾ `ಪ್ರಜಾವಾಣಿ'ಗೆ ತಿಳಿಸಿದರು.`ನಮ್ಮ ಶಾಲೆಯ ಮುಖ್ಯ ಶಿಕ್ಷಕ ಕೆ.ಎಲ್.ಶ್ರೀನಿವಾಸ್ ಮತ್ತು ಇತರರ ಮಾರ್ಗದರ್ಶನದಲ್ಲಿ ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದೇವೆ. ಶಾಸಕರು, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಬಹುತೇಕ ಮಂದಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ಶಾಲೆಯ ಅಭಿವೃದ್ಧಿಗಾಗಿ ಮತ್ತು ಸೌಕರ್ಯಗಳ ಪೂರೈಕೆಗಾಗಿ ಉದಾರವಾಗಿ ಸಹಾಯ ಮಾಡುವುದಾಗಿ ಎಲ್ಲರೂ ಭರವಸೆ ನೀಡಿದ್ದಾರೆ' ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry