ನೂರರ ಹಬ್ಬದಲ್ಲಿ ಒಡಕು-ಹುಳುಕು

7

ನೂರರ ಹಬ್ಬದಲ್ಲಿ ಒಡಕು-ಹುಳುಕು

Published:
Updated:

ರಾಷ್ಟ್ರಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಬಿಂಬಿಸಿಕೊಳ್ಳಲು ತಮಿಳು ಚಿತ್ರರಂಗ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ದಕ್ಷಿಣದ ಎಲ್ಲಾ ಪ್ರಮುಖ ನಾಲ್ಕೂ ಭಾಷೆಯ ಚಲನಚಿತ್ರೋದ್ಯಮಗಳನ್ನು ಒಂದೆಡೆ ಸೇರಿಸಿ ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ತುಂಬಿದ ಸಂಭ್ರಮವನ್ನು ಆಚರಿಸುವುದಕ್ಕೆ ಚೆನ್ನೈಯನ್ನು ಆರಿಸಿಕೊಳ್ಳಲು, ಆ ನಗರ ಭಾರತೀಯ ಚಿತ್ರೋದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಪ್ರಮುಖ ಕಾರಣವಾಗಿದ್ದರೂ ಅದರಲ್ಲಿ ಮುಖ್ಯವಾಗಿ ಇದ್ದದ್ದು ಅಲ್ಲಿನ ಸರ್ಕಾರದ ಹಿತಾಸಕ್ತಿ.

ತಮಿಳುನಾಡು ಸರ್ಕಾರ ತನ್ನ ನೆರೆಯ ಚಿತ್ರರಂಗಗಳನ್ನು ಚೆನ್ನೈಗೆ ಕರೆಸಿ ಅವುಗಳಿಗೆ ಸಂಭ್ರಮಿಸಲು ಅವಕಾಶ ನೀಡಿ, ತಾನೂ ಅವರೊಟ್ಟಿಗೆ ಬೆರೆತು ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿದೆ ಎಂದು ಉತ್ತರ ದಿಕ್ಕಿನ ಚಿತ್ರರಂಗಗಳು ವಿಸ್ಮಯದಿಂದ ನೋಡುತ್ತಿವೆ.

ಚೆನ್ನೈನಲ್ಲಿ ಸೆ. 21ರಿಂದ ನಾಲ್ಕು ದಿನ ನಡೆದ ಕಾರ್ಯಕ್ರಮದ ಜವಾಬ್ದಾರಿಯನ್ನು ಅಲ್ಲಿನ ಸರ್ಕಾರವೇ ವಹಿಸಿಕೊಂಡಿತ್ತು.

ಇಡೀ ಕಾರ್ಯಕ್ರಮದ ಪ್ರಸಾರದ ಹಕ್ಕನ್ನು ಜಯಲಲಿತಾ ಒಡೆತನದ ಜಯಾ ಟೀವಿ ಖರೀದಿಸಿತ್ತು. ಸಿನಿಮಾ ನೂರರ ಸಂಭ್ರಮವನ್ನು ಚೆನ್ನೈಗೆ ತೆರಳಿದವರನ್ನು ಸ್ವಾಗತಿಸಿದ್ದು, ಎಂಜಿಆರ್ ಮತ್ತು ಜಯಲಲಿತಾ ಇಬ್ಬರ ಚಿತ್ರಗಳನ್ನು ಹೊರತುಪಡಿಸಿ ಮತ್ತೊಬ್ಬರ ಮುಖಕ್ಕೆ ಅವಕಾಶವೇ ಇಲ್ಲದ ಆಳೆತ್ತರದ ಫ್ಲೆಕ್ಸ್‌ಗಳು.

ಜವಾಹರ್ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದ ಸುತ್ತಮುತ್ತಲ ಸುಮಾರು 3–4 ಕಿ.ಮೀ. ದೂರದಿಂದ ರಸ್ತೆಯ ಇಕ್ಕೆಲಗಳಲ್ಲೂ ಇಂಥ ಲೆಕ್ಕವಿಲ್ಲದಷ್ಟು ಫ್ಲೆಕ್ಸ್‌ಗಳು ತಲೆಯೆತ್ತಿದ್ದವು. ಅಲ್ಲಿ ಸಿನಿಮಾ ಕಾರ್ಯಕ್ರಮ ನಡೆಯುತ್ತಿದೆ ಎಂಬುದಕ್ಕೆ ಪುರಾವೆಯೇ ಇಲ್ಲವೆಂಬಂತೆ ‘ಅಮ್ಮ’ ಆವರಿಸಿದ್ದಳು.ಉದ್ಘಾಟನಾ ದಿನದಂದು ಅದು ಕೇವಲ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ ಎನ್ನುವುದು ಸ್ಪಷ್ಟವಾಗಿತ್ತು. ನಾಲ್ಕೂ ಚಿತ್ರರಂಗಗಳ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ವೇದಿಕೆಯಲ್ಲಿ ಸ್ಥಾನ ನೀಡಬೇಕಿತ್ತು. ಆದರೆ ತಮಿಳು ಚಿತ್ರರಂಗ ಮತ್ತು ಅಲ್ಲಿನ ಸರ್ಕಾರದ ಪ್ರತಿನಿಧಿಗಳೇ ಅಲ್ಲಿ ತುಂಬಿಕೊಂಡಿದ್ದರು. ‘ಇದು ಕೇವಲ ನಿಮ್ಮ ಹಬ್ಬವಲ್ಲ, ನಾವೂ ಇದ್ದೇವೆ’ ಎಂದು ದನಿ ಎತ್ತುವ ತ್ರಾಣ ಕನ್ನಡವೂ ಸೇರಿದಂತೆ ತೆಲುಗು ಮತ್ತು ಮಲಯಾಳಂ ಚಿತ್ರೋದ್ಯಮಕ್ಕೆ ಇದ್ದಂತಿರಲಿಲ್ಲ.

ತೆಲುಗು ಚಿತ್ರರಂಗ ತೆಲಂಗಾಣ ಹೋರಾಟದ ಗಲಾಟೆಯಲ್ಲಿ ಬಸವಳಿದಿದೆ. ಕಾರ್ಯಕ್ರಮದಲ್ಲಿ ಅದು ಭಾಗವಹಿಸುವುದೂ ಅನುಮಾನವಾಗಿತ್ತು. ಆದರೆ ಕನ್ನಡ ಚಿತ್ರರಂಗಕ್ಕೆ ನಿಮಗೆ ಸರಿಸಮನಾಗಿ ನಿಲ್ಲುವ ಶಕ್ತಿಯನ್ನು ನಾವೂ ಹೊಂದಿದ್ದೇವೆ ಎಂದು ಒಗ್ಗಟ್ಟು ಮತ್ತು ಸಾಮರ್ಥ್ಯ ಪ್ರದರ್ಶಿಸುವ ಅಪೂರ್ವ ಅವಕಾಶ ಸಿಕ್ಕಿತ್ತು. ಆದರೆ, ನಡೆದದ್ದು ಬೇರೆಯೇ.ಕನ್ನಡ ಚಿತ್ರರಂಗದ ಮೂಲ ಬೇರು ಮದ್ರಾಸ್‌ ಆದರೂ, ಅಲ್ಲಿಂದ ಬೆಳೆದ ಕನ್ನಡ ಚಿತ್ರರಂಗ ಆ ನೆಲದ ಹಂಗಿಲ್ಲದೆ ಚಿತ್ರಗಳನ್ನು ತಯಾರಿಸುವ ಮಟ್ಟಿಗೆ ಬೆಳೆದು ದಶಕಗಳು ಉರುಳಿದೆ. ಚೆನ್ನೈನ ಸಿನಿಮಾ ಉತ್ಸವದ ನೆಪದಲ್ಲಿ ಸಿಕ್ಕ ಅವಕಾಶದಲ್ಲಿ ಭಾರತೀಯ ಚಿತ್ರರಂಗಕ್ಕೆ ಕನ್ನಡ ನೀಡಿರುವ ಕೊಡುಗೆಯನ್ನು ನೆನಪಿಸುವ ಜೊತೆಯಲ್ಲಿ, ಕನ್ನಡ ಡಿಂಡಿಮ ಮೊಳಗಿಸಲು ಕನ್ನಡ ಚಿತ್ರೋದ್ಯಮಕ್ಕೆ ಒಂದು ಅವಕಾಶವಿತ್ತು.ಆದರೆ ಅದು ಆರಂಭದಲ್ಲಿ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆ ಮತ್ತು ಕೊನೆಯಲ್ಲಿ ‘ಹಚ್ಚೇವು ಕನ್ನಡದ ದೀಪ’ದ ಮೂಲಕ ಕನ್ನಡ ಬಾವುಟ ಹಾರಾಡಿದ ಸಮಾಧಾನಕ್ಕೆ ಸೀಮಿತವಾಯಿತು. ‘ತಮಿಳು ಮತ್ತು ತೆಲುಗು ಚಿತ್ರರಂಗದವರು ನಮ್ಮ ಸಿನಿಮಾಗಳನ್ನು ನೋಡಿ ನಗುತ್ತಿದ್ದಾರೆ’ ಎಂದು ಸಂಭಾಷಣೆಕಾರ ಮಂಜು ಮಾಂಡವ್ಯ ಒಮ್ಮೆ ಬೇಸರದಿಂದ ಹೇಳಿಕೊಂಡಿದ್ದರು.

ನಗುವವರಿಗೆ ಅವಕಾಶ ಕಲ್ಪಿಸುವಂತೆ ಕನ್ನಡ ಚಿತ್ರೋದ್ಯಮದ ಅಭಿವ್ಯಕ್ತಿ ಚೆನ್ನೈನಲ್ಲಿ ಅನಾವರಣಗೊಂಡಿತು. ‘ಬಂಗಾಳಿ ಚಿತ್ರಗಳನ್ನು ಬಿಟ್ಟರೆ ಉತ್ತಮವಾದ ಚಿತ್ರಗಳು ಬರುತ್ತಿರುವುದು ಕನ್ನಡದಲ್ಲಿಯೇ. ನಾವು ಅವರನ್ನು ನೋಡಿ ಕಲಿಯಬೇಕು ಎಂದು ನಿರ್ದೇಶಕ ಕೆ. ಬಾಲಚಂದರ್‌ ಹೇಳುತ್ತಿದ್ದರು. ಕನ್ನಡ ಚಿತ್ರಗಳನ್ನು ನೋಡುವ ಸಲುವಾಗಿಯೇ ಅವರು ಬೆಂಗಳೂರಿಗೆ ಬರುತ್ತಿದ್ದರು.

ನಿಮಗೆ ಮನವಿ ಮಾಡುತ್ತೇನೆ. ದಯವಿಟ್ಟು ಕನ್ನಡ ಚಿತ್ರರಂಗವನ್ನು ಆ ದಿನಗಳಿಗೆ ಮತ್ತೆ ಕರೆದುಕೊಂಡು ಹೋಗಿ’ ಎಂದು ಕಾರ್ಯಕ್ರಮದಲ್ಲಿ ಕಮಲಹಾಸನ್‌ ಹೇಳಿದ ಮಾತುಗಳು ಕನ್ನಡ ಚಿತ್ರರಂಗದ ಚೆನ್ನೈನ ಪ್ರದರ್ಶನಕ್ಕೆ ಮಾತ್ರವಲ್ಲದೆ, ಈ ಹೊತ್ತಿನ ಚಿತ್ರೋದ್ಯಮದ ಪರಿಸ್ಥಿತಿಗೂ ಕನ್ನಡಿ ಹಿಡಿದಂತಿತ್ತು.ಕಾಣೆಯಾದವರು ಮತ್ತು ಬೆನ್ನುತಟ್ಟಿಕೊಂಡವರು..!

ಇಡೀ ಕಾರ್ಯಕ್ರಮ ಅವ್ಯವಸ್ಥೆ ಮತ್ತು ಗೊಂದಲದ ಗೂಡಾಗಿತ್ತು ನಿಜ. ಅದಕ್ಕೆ ಜವಾಬ್ದಾರಿ ವಹಿಸಿಕೊಂಡ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಹೊಣೆಗಾರರನ್ನಾಗಿಸಬಹುದು. ಆದರೆ, ಭಾನುವಾರ (ಸೆ. 22) ನಡೆದ ಕನ್ನಡದ ಕಾರ್ಯಕ್ರಮ ಕಳಾಹೀನವಾಗಲು ಯಾರು ಕಾರಣ? ಉಸ್ತುವಾರಿ ವಹಿಸಿಕೊಂಡವರೇ, ಕಲಾವಿದರೇ ಅಥವಾ ಪ್ರೇಕ್ಷಕರೇ?ರಮೇಶ್‌ ಅರವಿಂದ್‌, ಶ್ರೀನಗರ ಕಿಟ್ಟಿ, ವಿಜಯ ರಾಘವೇಂದ್ರ, ಯೋಗೀಶ್‌, ಮುರಳಿ ಮುಂತಾದ ಕೆಲ ನಟರನ್ನು ಬಿಟ್ಟರೆ ಮತ್ತೊಬ್ಬ ‘ಸ್ಟಾರ್‌’ ಅಲ್ಲಿರಲಿಲ್ಲ. ನಾಯಕಿಯರ ಸಾಲಿನಲ್ಲಿಯೂ ಇದ್ದದ್ದು ರಾಗಿಣಿ, ಹರ್ಷಿಕಾ ಪೂಣಚ್ಚ ಮತ್ತಿತರರು ಮಾತ್ರ. ಕನ್ನಡದ ಕಾರ್ಯಕ್ರಮದಲ್ಲಿ ಶಿವಣ್ಣ, ಸುದೀಪ್‌, ಪುನೀತ್‌, ಅಂಬರೀಷ್‌, ರವಿಚಂದ್ರನ್‌, ದರ್ಶನ್‌, ಗಣೇಶ್‌, ಉಪೇಂದ್ರ ಎಲ್ಲರೂ ಹಾಜರಾಗಬೇಕಿತ್ತಲ್ಲವೇ? ಈ ಪ್ರಶ್ನೆ ಮೂಡಿದರೂ ಅದಕ್ಕೆ ಉತ್ತರವೂ ಇದೆ.

ಈ ನಟರಿಗೆ ನಮ್ಮ ವಾಣಿಜ್ಯ ಮಂಡಳಿ ಆಹ್ವಾನ ನೀಡಿದ್ದು ‘ಕೊನೆಯ ದಿನದಂದು ಬನ್ನಿ’ ಎಂದು. ಅಂಬಿಕಾ, ಊರ್ವಶಿ, ಬಿ. ಸರೋಜಾದೇವಿ ಮುಂತಾದ ಕನ್ನಡ ಮತ್ತು ತಮಿಳು ಭಾಷೆಯೊಂದಿಗೆ ನಂಟು ಇಟ್ಟುಕೊಂಡ ನಟಿಯರ ಹಾಜರಾತಿ ಇದ್ದರೆ, ಎಸ್‌.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ, ರಜನೀಕಾಂತ್‌, ಮುಂತಾದ ಗಣ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನಟ ಜಗ್ಗೇಶ್‌ ಮೊದಲೇ ಹೇಳಿದ್ದರು. ‘ಕೊನೆಯ ದಿನ ಬನ್ನಿ ಎಂದಿದ್ದವರು, ಬೇಡ ಕನ್ನಡ ಕಾರ್ಯಕ್ರಮದ ದಿನವೇ ಬನ್ನಿ ಎಂದರು. ಅದೇಕೆ ಹೀಗೆ ಎಂದು ಪ್ರಶ್ನಿಸಿದರೆ, ಚಿಕ್ಕಮಕ್ಕಳಿಗೆ ಹೇಳುವಂತೆ ಸುಳ್ಳು ಹೇಳಿದರು. ನಮ್ಮಂಥ ಕಲಾವಿದರು ಬರುವ ಅಗತ್ಯವಿಲ್ಲ ಎಂದು ಉದ್ದೇಶಪೂರ್ವಕವಾಗಿಯೇ ಹೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು. ಸಿನಿಮಾ ರಂಗಕ್ಕೆ ನೂರು ವರ್ಷ ತುಂಬಿದೆ.

ಅದರಲ್ಲಿ ನಾನೂ 32 ವರ್ಷ ಸವೆಸಿದ್ದೇನೆ, ಅಷ್ಟು ಸಾಕು’ ಎಂದು ಜಗ್ಗೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅದರ ಜವಾಬ್ದಾರಿ ಹೊತ್ತುಕೊಂಡಿದ್ದ    ಎಸ್‌. ನಾರಾಯಣ್‌, ‘ಯಾರೂ ಸಹಕಾರ ನೀಡಲಿಲ್ಲ’ ಎಂದು ನೋವಿನಿಂದ ಹೇಳಿಕೊಂಡರು. ಸಾಕಷ್ಟು ಬಂಡವಾಳವೂ ಸಿಕ್ಕಿರಲಿಲ್ಲವಂತೆ. ಚಿತ್ರರಂಗದೊಳಗಿನ ಸಮನ್ವಯ, ಸಹಕಾರ, ಸಾಮರಸ್ಯದ ಕೊರತೆ ಅಂದು ಸಂಪೂರ್ಣ ಬಹಿರಂಗಗೊಂಡಿತು.

ಈ ಅಸಹಕಾರದ ಧೋರಣೆಯಿಂದಲೇ ಚಿತ್ರರಂಗದಿಂದ ನಿವೃತ್ತಿ ಹೊಂದುತ್ತಿರುವುದಾಗಿ ಅವರು ಈ ಹಿಂದೆ ಘೋಷಿಸಿದ್ದರು. ‘ನಾನು ಕನ್ನಡಿಗನಾಗಿರಲು ಬಯಸುತ್ತೇನೆ. ಇಲ್ಲಿಗೆ ಕರೆದಿದ್ದಾರೆ, ಬಂದಿದ್ದೇನೆ. ಕರೆಯದಿದ್ದರೂ ಬರುತ್ತಿದ್ದೆ’ ಎಂದು ಹೇಳಿದ ಹಿರಿಯ ನಟ ಕಮಲಹಾಸನ್‌ಗೂ ನಮ್ಮ ಕಲಾವಿದರಿಗೂ ಇರುವ ವ್ಯತ್ಯಾಸವಿದು.ಉತ್ಸವದುದ್ದಕ್ಕೂ ಅಸಹಾಯಕರಂತೆ ಓಡಾಡುತ್ತಿದ್ದ ಚಿತ್ರೋದ್ಯಮದ ಪ್ರತಿನಿಧಿಗಳು, ಕನ್ನಡದ ಕಲಾವಿದರ ಕುರಿತೂ ಕಾಳಜಿ ತೆಗೆದುಕೊಳ್ಳಲಿಲ್ಲ. ಹಾಗೆ ಮಾಡಿದ್ದರೆ ಹಿರಿಯ ನಟಿ ಲೀಲಾವತಿ ಕೊನೆಯ ದಿನ ಒಳಗೆ ಪ್ರವೇಶ ದೊರಕದೆ ಅವಮಾನಿತರಾಗಿ ಕಣ್ಣೀರು ಸುರಿಸಿಕೊಂಡು ವಾಪಸ್‌ ಬರುವ ಸ್ಥಿತಿ ಎದುರಾಗುತ್ತಿರಲಿಲ್ಲ. ‘ನಾವಿಲ್ಲಿ ಕೇವಲ ಕೆಲಸಗಾರರಾಗಿದ್ದೇವೆ’ ಎಂದು     ಸಾ.ರಾ. ಗೋವಿಂದು ಹೇಳಿಕೊಂಡಿದ್ದು ಅಲ್ಲಿನ ಪರಿಸ್ಥಿತಿಯ ನಿದರ್ಶನ.‘ಸ್ಟಾರ್‌’ಗಳು ಇಲ್ಲದಿದ್ದರೂ, ಹಲವು ಮಿತಿಗಳ ನಡುವೆಯೂ ಅಚ್ಚುಕಟ್ಟಾಗಿ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವ ಸಾಧ್ಯತೆಯಿತ್ತು. ಆದರೆ ಹೊಣೆಹೊತ್ತವರಿಗೆ ಕಾರ್ಯಕ್ರಮದ ಸ್ವರೂಪದ ಕುರಿತು ಸ್ಪಷ್ಟಕಲ್ಪನೆ ಇದ್ದಂತಿರಲಿಲ್ಲ. ರೀಮೇಕ್‌ ಚಿತ್ರಗಳನ್ನು ನಮ್ಮ ಯಶಸ್ವಿ ಚಿತ್ರಗಳೆಂಬಂತೆ ಬಿಂಬಿಸಿದರು. ಮಿಗಿಲಾಗಿ ಅವರ ನಿರ್ದೇಶನದ ಚಿತ್ರಗಳ ತುಣುಕುಗಳು ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಚಿತ್ರಗಳು ಎಂಬಂತೆ ಪದೇ ಪದೇ ತೆರೆಮೇಲೆ ಕಾಣಿಸತೊಡಗಿದವು.

ನಮ್ಮ ಸಿನಿಮಾಯಾನದ ಪರಿಚಯದಲ್ಲಿ ನೆನಪಿಸಿಕೊಂಡ ಪ್ರತಿಭೆಗಳಿಗಿಂತ ಮರೆತ ಪ್ರತಿಭೆಗಳ ಸಂಖ್ಯೆಯೇ ಹೆಚ್ಚು. ಮನರಂಜನೆಯೆಂದರೆ ಹಾಡು ಕುಣಿತದ ಸುಗ್ಗಿ ಮಾತ್ರವೇ? ಇಡೀ ಕಾರ್ಯಕ್ರಮದಲ್ಲಿ ಮೋಡಿ ಮಾಡಿದ್ದು, ನಾಡಗೀತೆಯ ರೋಮಾಂಚನ, ‘ಮೆಲ್ಲುಸಿರೆ ಸವಿಗಾನ...’ ಹಾಡಿಗೆ ಇಳಿ ವಯಸ್ಸಿನಲ್ಲೂ ಯುವನಟಿಯರು ನಾಚುವಂತೆ ಹೆಜ್ಜೆಹಾಕಿದ ಲೀಲಾವತಿ, ‘ಬಾಳ ಬಂಗಾರ ನೀನು...’ ಎಂದು ವಿಷ್ಣುವರ್ಧನ್‌ರನ್ನು ನೆನಪಿಸಿದ ಭಾರತಿ, ಪುಟ್ಟಣ್ಣ ಕಣಗಾಲರ ಅಶರೀರವಾಣಿಯೊಂದಿಗೆ ಸಂಭಾಷಿಸಿದ ನಟಿ ಜಯಂತಿ ಮತ್ತು ಡ್ರಮ್ಮರ್‌ ದೇವ ಅವರ ಜುಗಲ್ಬಂದಿ ಸಂಗೀತ ಮಾತ್ರ.‘ಇದು ಸಿನಿಮಾ ಹಬ್ಬ ನಿಜ. ಇಂಥ ಹಬ್ಬದ ಆಚರಣೆಯಲ್ಲಿ ಸಂಭ್ರಮದ ಆಚೆಗೂ ಸಿನಿಮಾ ಸಿರಿವಂತಿಕೆಯನ್ನು ಕೊಟ್ಟಿಕೊಡುವ ಸಾಧ್ಯತೆ ಇತ್ತು. ಆದರೆ ಮಿತಿಗಳ ನಡುವೆ ಹಬ್ಬವಾಗಿ ಉಳಿದಿದೆಯಷ್ಟೆ. ಇಂಥ ಕಾರ್ಯಕ್ರಮ ಬೆಂಗಳೂರಿನಲ್ಲೇ ನಡೆದರೆ, ಇಲ್ಲಿಗೆ ಬರಲಾಗದ ಅನೇಕರನ್ನು ಅಲ್ಲಿಯೇ ಗೌರವಿಸಲು ಸಾಧ್ಯವಾಗುತ್ತದೆ’ ಎನ್ನುವ ಗಿರೀಶ್‌ ಕಾಸರವಳ್ಳಿ ಅವರ ಮಾತು ಅರ್ಥಪೂರ್ಣ.‘ಚೆನ್ನೈನಲ್ಲಿ ಕನ್ನಡಿಗರು ಐದು ಲಕ್ಷಕ್ಕೂ ಹೆಚ್ಚಿದ್ದಾರೆ. ಭಾನುವಾರದ ರಜಾದಿನದಂದು ಅದರಲ್ಲಿ ಕನಿಷ್ಠ 10–15 ಸಾವಿರ ಜನಕ್ಕಾದರೂ ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲವೇ? ಕನ್ನಡಿಗರಿಗೆ ಅಭಿಮಾನವೇ ಇಲ್ಲ. ಇಲ್ಲಿನ ಕನ್ನಡ ಸಂಘಗಳು ಏನು ಮಾಡುತ್ತಿವೆ? ರಜೆಯಂದು ಎಲ್ಲರೂ ಹೆಂಡತಿ ಮಕ್ಕಳನ್ನು ಕರೆದುಕೊಂಡು ತಮಿಳು ಚಿತ್ರಕ್ಕೋ, ಇಂಗ್ಲಿಷ್‌ ಚಿತ್ರ ನೋಡಲೋ ಹೋಗಿರುತ್ತಾರೆ’ ಎಂದು ಹಿರಿಯ ನಟಿ ಹರಿಣಿ ತುಸು ಕೋಪದಿಂದಲೇ ಹೇಳಿದ್ದರು.ಸುಮಾರು ಒಂಬತ್ತು ಸಾವಿರ ಮಂದಿ ಕೂರಬಹುದಾಗಿದ್ದ ಸ್ಥಳ ಕನ್ನಡದ ಕಾರ್ಯಕ್ರಮದಂದು ಖಾಲಿ ಹೊಡೆಯುತ್ತಿತ್ತು. ಇಲ್ಲಿನ ಚಿತ್ರರಂಗದಿಂದ ಹೋದವರನ್ನು ಬಿಟ್ಟರೆ, ಚೆನ್ನೈನಲ್ಲಿ ವಾಸಿಸುತ್ತಿರುವ ಕನ್ನಡಿಗರು ಬಂದದ್ದು ಬೆರಳಣಿಕೆಯಷ್ಟು ಮಾತ್ರ. ಅಲ್ಲಿನ ಕನ್ನಡಿಗರಿಗೆ ಈ ಉತ್ಸವದಲ್ಲಿ ಕನ್ನಡ ಚಿತ್ರರಂಗ ಪಾಲ್ಗೊಂಡು, ಒಂದು ದಿನ ಸಂಪೂರ್ಣ ಕಾರ್ಯಕ್ರಮ ನೀಡುತ್ತಿದೆ ಎಂಬುದರ ಮಾಹಿತಿಯೇ ಇರಲಿಲ್ಲ.

ಅಲ್ಲಿನ ಕನ್ನಡ ಸಂಘಗಳನ್ನು ಸಂಪರ್ಕಿಸುವ ಪ್ರಯತ್ನವನ್ನು ನಮ್ಮ ವಾಣಿಜ್ಯ ಮಂಡಳಿ ಮಾಡಿರಲಿಲ್ಲ. ನಮ್ಮಲ್ಲಿನ ಚಿತ್ರಗಳನ್ನೇ ಕದ್ದು ಸಿನಿಮಾ ಮಾಡುತ್ತಾರೆ ಎಂದು ಗೇಲಿ ಮಾಡುವ ಅಲ್ಲಿನ ಚಿತ್ರೋದ್ಯಮದ ಎದುರು, ಪ್ರೇಕ್ಷಕರಿಲ್ಲದೆ ಭಣಗುಡುತ್ತಿದ್ದ ಸಭಾಂಗಣದಲ್ಲಿ ನಮ್ಮ ಚಿತ್ರರಂಗದವರ ಹಾಡುಕುಣಿತ ಮತ್ತಷ್ಟು ನಗೆಪಾಟಲಿಗೆ ಈಡಾಯಿತು.ದಕ್ಷಿಣ ಭಾರತ ವಾಣಿಜ್ಯ ಮಂಡಳಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಸೇರುತ್ತಿದ್ದ ಸಭೆಗಳು ಚರ್ಚೆಗಳಿಲ್ಲದೇ ಮುಗಿಯುತ್ತಿದ್ದವಂತೆ. ‘ನಿಮ್ಮಿಂದ ಸಾಧ್ಯವಾಗದಿದ್ದರೆ ನಾವು ಮಾಡಿ ತೋರಿಸುತ್ತೇವೆ, ಅವಕಾಶ ಕೊಡಿ’ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ನೇರವಾಗಿ ಅವರಿಗೆ ಹೇಳಿದ್ದರಂತೆ.ನೂರರ ಹಬ್ಬ ಮುಗಿದಿದೆ. ಹಬ್ಬದ ವೇದಿಕೆಯಲ್ಲಿ ಕನ್ನಡ ಚಿತ್ರರಂಗದೊಳಗಿನ ಒಡಕು ಮತ್ತು ಹುಳುಕು ಬಯಲಾಗಿವೆ. ತಪ್ಪುಗಳಿಂದ ಪಾಠ ಕಲಿಯುವ ಸಹನೆ ಮತ್ತು ಹಂಬಲ ಮೈಗೂಡಿಸಿಕೊಳ್ಳದೇ ಹೋದರೆ ಕನ್ನಡ ಚಿತ್ರರಂಗದ ಪರಿಸ್ಥಿತಿ ಮತ್ತಷ್ಟು ಅಸಹನೀಯವಾದೀತು?

–ಅಮಿತ್ ಎಂ.ಎಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry