ನೂರು ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ

7

ನೂರು ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ

Published:
Updated:
ನೂರು ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ

ಬೀದರ್: ಕೃಷಿಯನ್ನು ಆದಾಯ ತರುವ ಕ್ಷೇತ್ರವಾಗಿಸುವುದು, ಕೃಷಿಕರಲ್ಲಿ ಬಹು ಬೆಳೆ, ಕಸುಬು ಪ್ರವೃತ್ತಿ ಬೆಳೆಸುವ ಕ್ರಮವಾಗಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ ತಲಾ ನೂರು ಎಕರೆ ಭೂಮಿಯಲ್ಲಿ ಸಮಗ್ರ ಕೃಷಿಗೆ ಒತ್ತುನೀಡುವ `ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ~ ಮಂಗಾರು ಹಂಗಾಮಿನಿಂದ ಚಾಲ್ತಿಗೆ ಬರಲಿದೆ.ಪ್ರತಿ ತಾಲ್ಲೂಕಿನಲ್ಲಿ ಕೃಷಿಕರು ಹೊಂದಿರುವ ಭೂಮಿಯನ್ನು ಆಧರಿಸಿ ತಲಾ 30ರಿಂದ 35 ಮಂದಿ ರೈತರಿಗೆ ಈ ಯೋಜನೆ ನೆರವಾಗಬಹುದು ಎಂದು ಈ ಯೋಜನೆ ಕುರಿತು ಮಾಹಿತಿ ನೀಡಿದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಬಿ.ಜೆ.ಪೂಜಾರಿ `ಪ್ರಜಾವಾಣಿ~ಗೆ ತಿಳಿಸಿದರು.ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ವಿಜ್ಞಾನ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲಿದ್ದು, ಇದಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸುಮಾರು 4 ಕೋಟಿ ರೂಪಾಯಿ ಲಭ್ಯವಿದೆ ಎಂದರು.ಬೀದರ್ ಅಲ್ಲದೆ, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಈ ಯೋಜನೆಯು ಕಾರ್ಯಗತಗೊಳ್ಳಲಿರುವ ಇತರ ಜಿಲ್ಲೆಗಳು. ರೈತರ ಆಸಕ್ತಿ, ನೀರಾವರಿ, ಮಳೆ ಆಶ್ರಿತ ಸೇರಿದಂತೆ ಲಭ್ಯ ಸಂಪನ್ಮೂಲವನ್ನು ಆಧರಿಸಿ ರೈತರಿಗೆ ಸಮಗ್ರ ಕೃಷಿ ಪದ್ಧತಿಗೆ ಅಗತ್ಯ ಸಹಕಾರವನ್ನು ವಿಶ್ವವಿದ್ಯಾಲಯ ಒದಗಿಸಲಿದೆ ಎಂದು ವಿವರಿಸಿದರು.ಜಿಲ್ಲೆಯಲ್ಲಿ ಬೀದರ್  ತಾಲ್ಲೂಕು ಉತ್ತರದ ರೈತ ಸಂಪರ್ಕ, ಔರಾದ್ ತಾಲ್ಲೂಕಿನಲ್ಲಿನ ಸಂತಪುರ, ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಬಿ), ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಮತ್ತು ಭಾಲ್ಲಿ ತಾಲ್ಲೂಕಿನ ಹಲಬರ್ಗಾ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ಬರಲಿದೆ.ಮೂರು ವರ್ಷ ಇದರ ಮೇಲ್ವಿಚಾರಣೆಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯವೇ ವಹಿಸಲಿದೆ. ರಸ್ತೆ ಸಂಪರ್ಕ, ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸಂಪರ್ಕ ಸೌಲಭ್ಯ ಆಧರಿಸಿ  ಆಧರಿಸಿ ಭೂಮಿ ಆಯ್ಕೆ ಮಾಡಲಾಗುತ್ತದೆ. ಮಣ್ಣಿನ ಗುಣಮಟ್ಟ , ಮಳೆ, ನೀರಾವರಿ ಸೌಲಭ್ಯ ಆಧರಿಸಿ ರೈತರಿಗೆ ಸಮಗ್ರ ಕೃಷಿ ಕುರಿತು ಸಲಹೆ ಸಹಕಾರ ನೀಡಲಾಗುವುದು ಎಂದರು.ಅಲ್ಲದೆ, ರೈತರ ಆಸಕ್ತಿಯನ್ನು ಆಧರಿಸಿ ಹೈನುಗಾರಿಕೆ, ತೋಟಗಾರಿಕೆ, ತರಕಾರಿ ಬೆಳೆಯೂ ಸೇರಿದಂತೆ ಸಮಗ್ರ ಕೃಷಿಗೆ ಒತ್ತು ನೀಡಲಾಗುತ್ತದೆ. ರೈತರಲ್ಲಿ ಮಿಶ್ರ ಬೆಳೆ, ಉಪ ಕಸುಬು ಕುರಿತು ಆಸಕ್ತಿಯನ್ನು ಮೂಡಿಸುವುದು,ಸಂಘಟಿತವಾಗಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಾಧ್ಯತೆಗಳ ಬಗೆಗೂ ಮನವರಿಕೆ ಮಾಡಲಾಗುವುದು ಎಂದರು.ಕೃಷಿ ಉತ್ಪನ್ನಗಳನ್ನು ಆಧರಿಸಿ ಕೃಷಿಕರ ಗುಂಪುಗಳನ್ನು ರಚಿಸಲಾಗುವುದು. ಈ ಗುಂಪುಗಳ ಪೈಕಿಯೇ ಸರದಿ ಅನುಸಾರ ಒಬ್ಬರಿಗೆ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯುವ, ಮಾರಾಟ ಮಾಡುವ ಹೊಣೆ ಒಪ್ಪಿಸುವ ಉದ್ದೇಶವು ಇದೆ. ಒಟ್ಟಿಗೆ ಮಾರಾಟ ಮಾಡುವುದರಿಂದ ಇತರರ ಸಮಯ ಉಳಿತಾಯದ ಜೊತೆಗೆ, ಉತ್ತಮ ಬೆಲೆಯೂ ದೊರಕುವ ಸಾಧ್ಯತೆ ಇದೆ. ಫಲಾನುಭವಿ ರೈತರ ಸಮ್ಮತಿಯನ್ನು ಪಡೆದುಕೊಂಡೇ ಈ ಪೈಕಿ ಒಬ್ಬರನ್ನು ಮಾರಾಟ ಪ್ರಕ್ರಿಯೆಗೆ ನಿಯೋಜಿಸಲಾಗುವುದು ಎಂದು ತಿಳಿಸಿದರು.ಈಗಾಗಲೇ ಯೋಜನೆಯಡಿ ನಿರ್ದಿಷ್ಟ ಭೂಮಿ, ರೈತರನ್ನು ಗುರುತಿಸುವ, ಆಯಾ ವ್ಯಾಪ್ತಿಯಲ್ಲಿ ಯೋಜನೆ ಕಾರ್ಯಗತಗೊಳಿಸಿ ಮೇಲ್ವಿಚಾರಣೆ ಮಾಡಬೇಕಾದ ರೈತ ಸಂಪರ್ಕ ಕೇಂದ್ರವನ್ನು ಗುರುತಿಸಲಾಗಿದೆ.ಮುಂಗಾರು ಹಂಗಾಮಿನಿಂದಲೇ ಕಾರ್ಯಗತಗೊಳ್ಳಲಿದ್ದು, ಮುಂಗಾರು ಮಳೆ ಅಗಮನವನ್ನು ನಿರೀಕ್ಷಿಸಲಾಗುತ್ತಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry