ಶುಕ್ರವಾರ, ನವೆಂಬರ್ 22, 2019
25 °C
ಗಾಂಧಿನಗರ, ರಾಜರಾಜೇಶ್ವರಿನಗರ, ಮಲ್ಲೇಶ್ವರ ವಿಭಾಗದ ಹಗರಣ

ನೂರು ಕಾಮಗಾರಿಗಳ ಆರೋಪ ಪಟ್ಟಿ ಶೀಘ್ರ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಗಾಂಧಿ ನಗರ, ರಾಜರಾಜೇಶ್ವರಿ ನಗರ ಮತ್ತು ಮಲ್ಲೇಶ್ವರ ವಿಭಾಗಗಳಲ್ಲಿ 2009ರಿಂದ 2011ರವರೆಗೆ ನಡೆದಿರುವ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಈವರೆಗೆ 67 ಕಾಮಗಾರಿಗಳ ತನಿಖೆ ಪೂರ್ಣಗೊಳಿಸಿದ್ದು, 43 ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.`ಬಿಬಿಎಂಪಿಯ 33 ಮಂದಿ ಎಂಜಿನಿಯರ್‌ಗಳು ಹಾಗೂ 31 ಮಂದಿ ಗುತ್ತಿಗೆದಾರರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳೆಲ್ಲರೂ ಸದ್ಯ ನಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇದಲ್ಲದೇ ಇನ್ನೂ 100 ಕಾಮಗಾರಿಗಳ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ಶೀಘ್ರದಲ್ಲೇ ಆರೋಪ ಪಟ್ಟಿ ಸಲ್ಲಿಸುವ ಬಗ್ಗೆ ಪ್ರಕ್ರಿಯೆ ನಡೆದಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.ಆದರೆ ಹಗರಣದಲ್ಲಿ ಬಿಬಿಎಂಪಿ ಸದಸ್ಯರು, ಸ್ಥಳೀಯ ಶಾಸಕರು ಸೇರಿದಂತೆ ಪ್ರಭಾವಿಗಳ ಪಾತ್ರವಿರುವ ಬಗ್ಗೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹಿರಿಯ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.`ಆರೋಪಿಗಳಲ್ಲಿ ಹಲವರು ಹಗರಣದ ತನಿಖೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ 25 ಪ್ರತ್ಯೇಕ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ಗಳಿಂದ ಹಿಡಿದು ಅನೇಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಹಗರಣದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಆದರೆ, ಮುಖ್ಯ ಎಂಜಿನಿಯರ್‌ಗಳು ಹಾಗೂ ಅವರಿಗಿಂತ ಉನ್ನತಮಟ್ಟದ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಹಗರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಗಾಂಧಿ ನಗರ, ಮಲ್ಲೇಶ್ವರ ಮತ್ತು ರಾಜರಾಜೇಶ್ವರಿ ನಗರ ವಿಭಾಗಗಳಲ್ಲಿ 2009ರಿಂದ 2011ರವರೆಗೆ  ರೂ 1,539 ಕೋಟಿ ಮೊತ್ತದ ಸಾವಿರಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು `ಆಯುಕ್ತರ ನೇತೃತ್ವದ ತಾಂತ್ರಿಕ ಜಾಗೃತ ದಳ' (ಟಿವಿಸಿಸಿ) 2011ರ ಅಕ್ಟೋಬರ್‌ನಲ್ಲಿ ಬಿಬಿಎಂಪಿ ಆಯುಕ್ತರಿಗೆ ವರದಿ ಸಲ್ಲಿಸಿತ್ತು.`ಸುಮಾರು 8,500 ಸಾವಿರ ಕಡತಗಳ 10,109 ಬಿಲ್ ರಿಜಿಸ್ಟರ್ (ಬಿ.ಆರ್) ನಂಬರ್‌ಗಳಲ್ಲಿ ಅವ್ಯವಹಾರ ನಡೆದಿದೆ. ಬಿಲ್‌ಗಳು ಹಾಗೂ ನಡೆದಿರುವ ಕಾಮಗಾರಿಗಳಿಗೆ ತಾಳೆಯಾಗುತ್ತಿಲ್ಲ. ನಡೆಯದ ಕಾಮಗಾರಿಗಳಿಗೂ ಬಿಲ್ ಸಲ್ಲಿಸಲಾಗಿದೆ. ಇದಲ್ಲದೇ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಬಿಬಿಎಂಪಿಯಿಂದ ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ' ಎಂದು ಟಿವಿಸಿಸಿ ವರದಿಯಲ್ಲಿ ತಿಳಿಸಿತ್ತು.ಈ ಹಗರಣದ ತನಿಖೆ ನಡೆಸುವಂತೆ ಬಿಬಿಎಂಪಿ ಆಯುಕ್ತರು 2011ರ ಅಕ್ಟೋಬರ್‌ನಲ್ಲಿ ಬೆಂಗಳೂರು ಮಹಾನಗರ ಕಾರ್ಯಪಡೆಗೆ (ಬಿಎಂಟಿಎಫ್) ದೂರು ಸಲ್ಲಿಸಿದ್ದರು. ನಂತರ, ರಾಜ್ಯ ಸರ್ಕಾರ ಹಗರಣದ ತನಿಖೆಯನ್ನು 2011ರ ನವೆಂಬರ್ 28ರಂದು ಸಿಐಡಿಗೆ ವಹಿಸಿತ್ತು.

ಪ್ರತಿಕ್ರಿಯಿಸಿ (+)