ನೂರು ತುಂಬಿದ ಶಿರಸಿ ಪಶುವೈದ್ಯ ಆಸ್ಪತ್ರೆ

7

ನೂರು ತುಂಬಿದ ಶಿರಸಿ ಪಶುವೈದ್ಯ ಆಸ್ಪತ್ರೆ

Published:
Updated:

ಒಂದು ಶತಮಾನವೆಂದರೆ ಬಹಳ ದೀರ್ಘ ಕಾಲ. ಆದರೆ ನೂರು ವರ್ಷಗಳ ಹಿಂದೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಶುಪಾಲನೆಗೆ ಪೂರಕವಾಗಿ ಜಾನುವಾರು ಆಸ್ಪತ್ರೆ ಪ್ರಾರಂಭವಾಗಿದ್ದು ಅತ್ಯಂತ ಸೋಜಿಗ ಮತ್ತು ಅಷ್ಟೇ ಸಂತಸಪಡುವ ಸಂಗತಿ.ಏಕೆಂದರೆ ಪಶುಪಾಲನೆಯಲ್ಲಿ ಆಗ ಹಣ ಗಳಿಕೆಯ ಉದ್ದೇಶಗಳಿರಲಿಲ್ಲ. ಆದರೆ ಹಳ್ಳಿಗಳಲ್ಲಿ ಕೂಡ ಹೈನುಗಾರಿಕೆಯು ನಿರಂತರ ಆದಾಯ ತರಬಲ್ಲ ಉಪಕಸುಬಾಗಿ ಬದಲಾವಣೆ ಹೊಂದಿರುವುದು ಇಂದಿನ ವಿದ್ಯಮಾನ.ಕಳೆದ ನೂರು ವರ್ಷಗಳ ಅವಲೋಕನ ಮಾಡಿದಾಗ ಅಂದಿಗೂ ಇಂದಿಗೂ ಶಿರಸಿ ಮತ್ತು ಸುತ್ತಮುತ್ತಲ ಪ್ರದೇಶವು ಪಶುಪಾಲನೆಯ ಮಟ್ಟಿಗೆ ಅಗಾಧ ಬದಲಾವಣೆ ಹೊಂದಿರುವುದು ಕಂಡುಬರುತ್ತದೆ.ಆಗ ನಾಟಿ ಜಾತಿಯ ಹಸುಗಳು, ಎಮ್ಮೆಗಳು, ನಾಯಿಗಳು, ಕೋಳಿಗಳು ಇದ್ದವು. ಈಗ ಇವುಗಳ ಸಂಖ್ಯೆ ಕಡಿಮೆಯಾಗಿ ಸುಧಾರಿಸಿದ, ಅಧಿಕ ಉತ್ಪಾದನೆ ನೀಡಬಲ್ಲ ತಳಿಗಳ ಸಂಖ್ಯೆ ಹೆಚ್ಚಿದೆ. ಸಾಂಕ್ರಾಮಿಕ ರೋಗಗಳ ಹಾವಳಿ ತುಂಬಾ ಕಡಿಮೆಯಾಗಿದೆ.ಅನಾರೋಗ್ಯದ ಸಂದರ್ಭಗಳಲ್ಲಿ ತಜ್ಞರಿಂದ ಉತ್ತಮವಾದ ಚಿಕಿತ್ಸೆ ಶೀಘ್ರವಾಗಿ ಲಭಿಸುವಂತಾಗಿದೆ. ರೈತರಲ್ಲಿ ಹಾಗೂ ಪ್ರಾಣಿಪ್ರಿಯರಲ್ಲಿ ಕೂಡ ಪಾಲನೆ ಪೋಷಣೆಗಳ ಬಗ್ಗೆ ಅರಿವು ಹೆಚ್ಚಿದೆ. ತಪ್ಪು ಕಲ್ಪನೆಗಳು, ಮೂಢ ನಂಬಿಕೆಗಳು ಕ್ರಮೇಣವಾಗಿ ಮರೆಯಾಗುತ್ತಿವೆ.ಈ ಎಲ್ಲಾ ಬೆಳವಣಿಗೆಗೆ ಆಧಾರ ಸ್ತಂಭವಾಗಿ ನಿಂತಿದ್ದು ಶಿರಸಿಯ ಪಶುವೈದ್ಯ ಆಸ್ಪತ್ರೆ. ಕ್ರಿ ಶ 1911 ರಲ್ಲಿ ಡಾ. ಮೇಲುಕೋಟೆ ಶ್ರೀನಿವಾಸ ಗರುಡಾಚಾರ್ ಪ್ರಥಮ ಪಶುವೈದ್ಯರಾಗಿ ನೇಮಕಗೊಂಡರು. ಆಗಿನ ದಿನಗಳಲ್ಲಿ ಸಾರಿಗೆ ಸೌಲಭ್ಯ ತೀರಾ ಕಡಿಮೆಯಿತ್ತು.ಪಶುವೈದ್ಯಕೀಯ ಸೇವೆ ಮತ್ತು ಸಲಹೆ ಪಡೆಯಲು ರೈತರು ನಾಲ್ಕಾರು ಮೈಲುಗಳಿಂದ ತಮ್ಮ ಜಾನುವಾರುಗಳನ್ನು ಕರೆತರಬೇಕಾಗಿತ್ತು ಅಥವಾ ವೈದ್ಯರನ್ನು ಕರೆದೊಯ್ಯಲು ಹತ್ತಾರು ಮೈಲುಗಳ ದೂರದಿಂದ ನಡೆದೋ ಇಲ್ಲವೇ ಸೈಕಲ್ಲು ಹೊಡೆದುಕೊಂಡು ಬರಬೇಕಾಗಿತ್ತು. ಒಬ್ಬರೇ ವೈದ್ಯರು ಇಡೀ ತಾಲೂಕನ್ನು ಸಂಭಾಳಿಸುವ ಪರಿಸ್ಥಿತಿಯಿತ್ತು.ಆದರೆ ಕಾಲಕ್ರಮೇಣ ಈ ಕೊರತೆ ನಿವಾರಣೆಯಾಗುತ್ತಾ ಬಂದಿದೆ. ಈಗ ರೈತ ಕೇವಲ ಒಂದು ದೂರವಾಣಿ ಕರೆ ಮಾಡಿದರೆ ಸಾಕು, ಒಂದೆರಡು ಗಂಟೆಗಳಲ್ಲಿಯೇ ಮನೆಬಾಗಿಲಿಗೆ ಸೇವೆ ದೊರೆಯುವಷ್ಟರ ಮಟ್ಟಿಗೆ ದಿನಗಳು ಬದಲಾಗಿವೆ. ಕೆಲವೊಮ್ಮೆ ವೈದ್ಯರೇ ರೈತಗೋಸ್ಕರ ಕಾದು ನಿಂತು ಚಿಕಿತ್ಸೆ ನೀಡಿ ಬಂದ ಸಂದರ್ಭಗಳೂ ಇವೆ!ಈ ಪ್ರದೇಶದ ಪಶುಪಾಲನೆಯ ವಿದ್ಯಮಾನಗಳನ್ನು ಪುನಃ ನೆನಪು ಮಾಡಿಕೊಳ್ಳುವ ಉದ್ದೇಶದಿಂದ ಫೆ. 18ರಂದು ಶತಮಾನೋತ್ಸವ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸ್ಥಳದಾನಿ ದಿವಂಗತ ಧರಣೇಂದ್ರಪ್ಪ ಪದ್ಮಪ್ಪ ಆಲೂರರ ಕುಟುಂಬವನ್ನು ಸನ್ಮಾನಿಸಲಾಗುತ್ತದೆ.  ವೈವಿಧ್ಯಮಯ ಪಶುಪಾಲನೆಯ ಪ್ರದರ್ಶನ ಮತ್ತು ವಿಜ್ಞಾನಿಗಳೊಂದಿಗೆ ರೈತರ ಸಂವಾದ ಏರ್ಪಡಿಸಲಾಗಿದೆ. ಸ್ಮರಣ ಸಂಚಿಕೆಯೊಂದು ಬೆಳಕು ಕಾಣಲಿದೆ.‘The best doctor in the world is a Veterinarian. He can’t  ask his patients what is the matter, he’s got to just know~ ಎನ್ನುತ್ತಾನೆ ಪಾಶ್ಚಾತ್ಯ ಚಿಂತಕ ವಿಲ್ ರೋಜರ್ಸ್. ಇದರಂತೆ  ಮೂಕ ಪ್ರಾಣಿಗಳ ಸೇವೆಗೆ ಕಟಿಬದ್ಧವಾದ ಶಿರಸಿಯ  ಪಶುವೈದ್ಯ ಆಸ್ಪತ್ರೆಗೆ ನೂರು ವರ್ಷಗಳು ತುಂಬಿದ ಕಾಲಘಟ್ಟದಲ್ಲಿ ಈ ಸಂಭ್ರಮವನ್ನು ಆಚರಿಸಲು ನಮಗೆ ಅವಕಾಶ ದೊರಕಿದ್ದು ನಿಜಕ್ಕೂ ಸುದೈವದ ಸಂಗತಿ ಎನ್ನುತ್ತಾರೆ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ದಿವಾಕರ ಭಟ್. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry