ನೃತ್ಯಗಾರ್ತಿಯ ಪಾತ್ರಸುಖ

7

ನೃತ್ಯಗಾರ್ತಿಯ ಪಾತ್ರಸುಖ

Published:
Updated:
ನೃತ್ಯಗಾರ್ತಿಯ ಪಾತ್ರಸುಖ

ಥಳುಕು ಬಳುಕು

ಭವ್ಯವಾದ ಕೋಣೆ. ಗೋಡೆಮೇಲೆ ತೂಗುಹಾಕಿದ ಪಟದ ಮೇಲೆ ಮುದ್ದುಮುಖದ ನಟಿ. ಅದೇ ನಟಿಯ ಕೋಣೆ ಅದು. ಅಮ್ಮ ಬೆಳಿಗ್ಗೆ ಕಾಫಿ ಲೋಟ ಹಿಡಿದು ಬಂದು ಮಗಳನ್ನು ಎಬ್ಬಿಸುವ ಹೊತ್ತಿಗೇ ಆ ಪಟದ ಮೇಲಿನ ದೂಳನ್ನು ಮನೆಗೆಲಸದವಳು ಒರೆಸುತ್ತಿದ್ದಳು.ಮಂಚದ ಪಕ್ಕದ ಟೀಪಾಯಿಯ ಮೇಲಿದ್ದ ನಿಯತಕಾಲಿಕೆಯ ತೆರೆದ ಪುಟಗಳಲ್ಲೂ ಅದೇ ನಟಿಯ ಬಿಕಿನಿ ಚಿತ್ರ. ಅಮ್ಮ ಅದನ್ನು ನಿರ್ಭಾವುಕತೆಯಿಂದಲೇ ನೋಡಿ ಮಡಿಸಿಟ್ಟು, ಮಗಳನ್ನು ಎಬ್ಬಿಸಿದರು. ಎದ್ದ ಮಗಳ ಹೆಸರು ಅದಿತಿ ರಾವ್ ಹೈದರಿ.ಕಾಫಿ ಹಿಡಿದು ತಂದ ತಾಯಿಗೆ ಜನ್ಮ ನೀಡಿದವರು ರಾಮೇಶ್ವರ ರಾವ್; ಆಂಧ್ರದ ವನಪರ್ತಿಯ ರಾಜರಾಗಿದ್ದವರು. ಇನ್ನು ಅದಿತಿಯ ಅಪ್ಪನ ತಂದೆ ಅಕ್ಬರ್ ಹೈದರಿ ಹೈದರಾಬಾದ್‌ನ ಮುಖ್ಯಮಂತ್ರಿಯಾಗಿದ್ದವರು.

 

ಸುಖ ಸುಪ್ಪತ್ತಿಗೆಯಲ್ಲೇ ಬೆಳೆದರೂ ಅದಿತಿಯನ್ನು ಮನೆಯವರು ಸಂಸ್ಕಾರದಲ್ಲಿ ಅದ್ದಿ ತೆಗೆದರು. ಆರನೇ ವರ್ಷದಿಂದಲೇ ಭರತನಾಟ್ಯ ಕಲಿಸಿದರು. ನೃತ್ಯದ ಸತತ ಅಭ್ಯಾಸ ಅದಿತಿಗೆ ಸುಂದರ ಮೈಕಟ್ಟು ಕೊಟ್ಟಿತು. ಅದನ್ನೀಗ ಎರಡೇ ತುಂಡು ಬಟ್ಟೆಯಲ್ಲಿ ತೋರಿಸಲು ಅವರು ಹಿಂದೇಟು ಹಾಕುತ್ತಿಲ್ಲ. ಅಂಥ ತುಂಡು ಬಟ್ಟೆಗಳನ್ನು ಖರೀದಿಸಲು ಅವರಮ್ಮನೂ ಜೊತೆಗೆ ಹೋಗಿದ್ದರೆಂಬುದು ವಿಶೇಷ.`ಸಿನಿಮಾಗೆ ನಾನು ಕಾಲಿಟ್ಟಾಗ ಮನೆಯವರೇನೂ ಬೇಡವೆನ್ನಲಿಲ್ಲ. ಮೊದಲಿನಿಂದಲೂ ಅವರು ನನ್ನನ್ನು ಸರ್ವತಂತ್ರ ಸ್ವತಂತ್ರಳಾಗಿಯೇ ಬೆಳೆಸಿದರು. ಇಂಥದ್ದೇ ಬಟ್ಟೆ ಹಾಕಬೇಕು, ಅದನ್ನು ತಿನ್ನಬಾರದು, ಹುಡುಗರ ಜೊತೆ ಓಡಾಡಕೂಡದು ಎಂದೆಲ್ಲಾ ನಿಬಂಧನೆಗಳನ್ನು ಹಾಕಲಿಲ್ಲ.ವೃತ್ತಿಯ ವಿಷಯ ಬಂದಾಗಲೂ ಯಾರೊಬ್ಬರೂ ಅಡ್ಡಿ ಪಡಿಸಲಿಲ್ಲ. ಬಿಕಿನಿ ತೊಡುವುದು ಅಶ್ಲೀಲವೇನೂ ಅಲ್ಲ. ನನ್ನ ದೇಹಕ್ಕೆ ಅದು ಹೊಂದುತ್ತದೆ. ಒಂದು ವೇಳೆ ಹೊಂದದಿದ್ದರಷ್ಟೇ ಅದು ಕೆಟ್ಟದಾಗಿ ಕಾಣುತ್ತದೆ~ ಎನ್ನುವ ಅದಿತಿ ಮನೆಗೆ ಈಗೀಗ ಎಡತಾಕುವ ನಿರ್ಮಾಪಕರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ.`ಪ್ರಜಾಪತಿ~ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದು ಆರು ವರ್ಷದ ಹಿಂದೆ. `ಶೃಂಗಾರಂ~ ತಮಿಳು ಚಿತ್ರದಲ್ಲಿ ಸಿಕ್ಕಿದ್ದು ದೇವದಾಸಿಯ ಪಾತ್ರ. `ಡೆಲ್ಲಿ 6~, `ಯೇ ಜಿಂದಗೀ~, `ರಾಕ್‌ಸ್ಟಾರ್~ ಚಿತ್ರಗಳಲ್ಲಿ ಅವರ ಅಭಿನಯ ಹೆಚ್ಚಿನ ಜನರ ಗಮನ ಸೆಳೆಯಲಿಲ್ಲ.ಈ ವರ್ಷ ತೆರೆಕಂಡ `ಲಂಡನ್ ಪ್ಯಾರಿಸ್ ನ್ಯೂಯಾರ್ಕ್~ ಚಿತ್ರ ನೋಡಿದ ಮೇಲೆ ಅವಕಾಶಗಳು ಮನೆಬಾಗಿಲಿಗೆ ಬರಲಾರಂಭಿಸಿಯಂತೆ. ಆದರೆ, ಅದಿತಿ ಸುದ್ದಿಯಾದದ್ದು `ಯೇ ಸಾಲಿ ಜಿಂದಗಿ~ ಚಿತ್ರದಿಂದ. ಅದರಲ್ಲಿ ಲೆಕ್ಕ ತಪ್ಪುವಷ್ಟು ಮುತ್ತುಗಳನ್ನು ಅವರು ಸಹನಟನ ಜೊತೆ ಹಂಚಿಕೊಂಡಿದ್ದರು.`ಆ ಚಿತ್ರದಲ್ಲಿ ನಾನು ಮುತ್ತುಗಳನ್ನು ಕೊಟ್ಟಿದ್ದನ್ನು ಕಂಡು ಅನೇಕರು ನನ್ನನ್ನು ವಿಚಿತ್ರವಾಗಿ ನೋಡಿದರು. ತೆರೆಮೇಲೆ ಗಂಡು, ಹೆಣ್ಣು ಪರಸ್ಪರ ಮೈಮುಟ್ಟಿಕೊಳ್ಳುವುದಕ್ಕಿಂತ ಮುತ್ತುಕೊಡುವುದು ಮಧುರವಾದದ್ದು. ಪ್ರೀತಿಸುವ ಸನ್ನಿವೇಶ ಇದ್ದಮೇಲೆ ಮುತ್ತುಕೊಡುವುದು ತಪ್ಪೆಂಬುದನ್ನು ನಾನು ಒಪ್ಪುವುದಿಲ್ಲ.

 

ಅದು ಕೂಡ ಇಂದು ಅಭಿನಯದ ಭಾಗ. ಮುತ್ತು ಕೊಡುವ ಸನ್ನಿವೇಶದಲ್ಲಿ ನಟಿಸುವುದು ಸುಲಭದ ಮಾತಲ್ಲ. ನಾನು ತುಂಬಾ ಬೋಲ್ಡ್ ಆಗಿಯೇ ಇರಬೇಕು ಎಂದು ಭಾವಿಸಿಯೇ ಅಂಥ ಸಾಹಸಕ್ಕೆ ಕೈಹಾಕಬೇಕು. ಈ ಬಗ್ಗೆ ಅಮ್ಮ ಕೂಡ ನನಗೆ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ~ ಎನ್ನುವ ಅದಿತಿ ನಿಜಕ್ಕೂ ಬೋಲ್ಡ್.ಪೋಷಕ ಪಾತ್ರಗಳನ್ನು ಮಾಡುವ ಸತ್ಯದೀಪ್ ಮಿಶ್ರ ಎಂಬ ನಟನನ್ನು ಅದಿತಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದನ್ನು ಖಾತರಿಪಡಿಸಲು ಇಚ್ಛಿಸದ ಈ ನಟಿ `ನಾನು ನನ್ನ ಬದುಕಿನ ಸರಿದಾರಿ ಕಂಡುಕೊಳ್ಳಲು ಯತ್ನಿಸುತ್ತಿದ್ದೇನೆ. ಸುಮ್ಮನೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು ನನಗಿಷ್ಟವಿಲ್ಲ~ ಎನ್ನುತ್ತಾರೆ. ಅಂದಹಾಗೆ, ಅದಿತಿ ವಯಸ್ಸೀಗ ಮೂವತ್ತಮೂರು. 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry