ನೃತ್ಯ ಪರಂಪರೆಯ ಜಾಡು ಹಿಡಿದು...!

7

ನೃತ್ಯ ಪರಂಪರೆಯ ಜಾಡು ಹಿಡಿದು...!

Published:
Updated:

ಕನ್ನಡ ನಾಡಿನ ನೃತ್ಯ ಪರಂಪರೆಯ ಬೆನ್ನು ಹತ್ತಿದ ಡಾ. ಮಾಲಾ ಶಶಿಕಾಂತ್ ಅವರ ಶ್ರಮ ವ್ಯರ್ಥವಾಗಲಿಲ್ಲ. ನಾಡಿನ ಮೂಲೆ ಮೂಲೆ ಸುತ್ತಾಡಿ, ನೃತ್ಯದ ಇತಿಹಾಸವನ್ನು ಕಲೆ ಹಾಕುವ ಅವರ ಮನೋಭಿಲಾಷೆ ಈಗ ಅಮೂಲ್ಯ ಕೃತಿಯ ರೂಪದಲ್ಲಿ ಸಾಕಾರಗೊಂಡಿದೆ.ಸುಲಭವಲ್ಲ ಎನ್ನುವುದು ಗೊತ್ತಿತ್ತು. ಮಹಿಳೆಯೊಬ್ಬಳು ಇತಿಹಾಸ ಹುಡುಕುತ್ತಾ ನಾಡು ಸುತ್ತುವುದು ಶ್ರಮ ಎನ್ನುವ ಅರಿವಿತ್ತು. ಆದರೂ, ನಮ್ಮದೆನ್ನುವ ಪರಂಪರೆಯನ್ನು ಹುಡುಕಿ ಪದಗಳಾಗಿ ಜೋಡಿಸಿ ಇಡುವ ಉತ್ಸಾಹ ಮಾತ್ರ ಕುಗ್ಗಲಿಲ್ಲ. ನೃತ್ಯ ಪರಂಪರೆಯನ್ನು ಅರಿಯುವ ಸಾಹಸಕ್ಕೆ ಮುಂದಾದರು       ಡಾ. ಮಾಲಾ ಶಶಿಕಾಂತ್.

ಸುದೀರ್ಘಕಾಲ ನಾಡಿನ ಮೂಲೆ ಮೂಲೆ ಸುತ್ತಾಡಿ ಸಂಗ್ರಹಿಸಿದ ನೃತ್ಯಕ್ಕೆ ಸಂಬಂಧಿಸಿದ ಐತಿಹಾಸಿಕ ಮೌಲ್ಯವುಳ್ಳ ಮಾಹಿತಿ ಈಗ ಅಮೂಲ್ಯ ಕೃತಿ ರೂಪವಾಗುವ ಅರ್ಹತೆಯೊಂದಿಗೆ ಸಿದ್ಧವಾಗಿದ್ದು ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.ನೃತ್ಯ ಪರಂಪರೆ ಎಂದರೆ ಮತ್ತೆ ತಮಿಳುನಾಡಿನವರು ಬರೆದ ಗ್ರಂಥಗಳ ಅನುವಾದವನ್ನೇ ಓದುತ್ತಾ ಅದಷ್ಟೇ ನಿಜವೆನ್ನುವ ಸ್ಥಿತಿಯಲ್ಲಿ ನಮ್ಮ ನಾಡಿನ ನಾಟ್ಯ ಕಲಾವಿದರು ಉಳಿಯಬಾರದೆನ್ನುವ ಬಲವಾದ ಆಶಯವೇ ಇಂಥದ್ದೊಂದು ಕೆಲಸಕ್ಕೆ ಮುಂದಾಗಲು ಪ್ರೇರಣೆ. ಕರ್ನಾಟಕವೂ ಭವ್ಯವಾದ ನೃತ್ಯ ಪರಂಪರೆಯನ್ನು ಹೊಂದಿದೆ. ಇಲ್ಲಿಯೂ ಉನ್ನತ ಪರಿಣತಿ ಹೊಂದಿದ ನಾಟ್ಯಾಚಾರ್ಯರು ಹಾಗೂ ನಾಟ್ಯ ಕಲಾವಿದೆಯರು ಇದ್ದರೆಂಬುದನ್ನು ದಾಖಲೆಗಳ ಸಹಿತ ಸಾರುವುದು ಮಾಲಾ ಅವರ ಉದ್ದೇಶವಾಗಿತ್ತು. ಆ ನಿಟ್ಟಿನಲ್ಲಿ ಅವರ ಪ್ರಯತ್ನ ಸಾರ್ಥಕವಾಗಿದೆ.ಸಾವಿರಾರು ಯುವ ಕಲಾವಿದರಿಗೆ ನೃತ್ಯ ಶಿಕ್ಷಣ ನೀಡಿರುವ ಹಾಗೂ ಈಗಲೂ ಕಲಾಸೇವೆಯಲ್ಲಿ ನಿರತರಾಗಿರುವ ಮಾಲಾ ಕರ್ನಾಟಕದ ನೃತ್ಯ ಪರಂಪರೆಯ ಜಾಡು ಹಿಡಿದು ಹೊರಟಾಗ ಎದುರಾದ ಸವಾಲುಗಳು ಹಾಗೂ ಸಿಕ್ಕ ಅಮೂಲ್ಯವಾದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ:ಬೇರು ಹುಡುಕುವ ಸಾಹಸ

ತಮಿಳುನಾಡಿನಂತೆ ನಮ್ಮಲ್ಲಿ ನೃತ್ಯ ಪರಂಪರೆಯ ಇತಿಹಾಸವನ್ನು ವ್ಯವಸ್ಥಿತವಾಗಿ ಬರೆದಿಡುವ ಪ್ರಯತ್ನ ನಡೆದಿದ್ದು ಕಡಿಮೆ. ಆದ್ದರಿಂದ ನೃತ್ಯ ಕಲೆಯು ಕನ್ನಡ ನಾಡಿನಲ್ಲಿ ಬೆಳೆದ ಮಾರ್ಗವನ್ನು ಹುಡುಕುವುದು ಸಾಹಸವೇ ಸರಿ. ಶಿಲಾಶಾಸನಗಳ ಉಲ್ಲೇಖದಿಂದ ಹಿಡಿದು ಪತ್ರಿಕೆಗಳಲ್ಲಿ ದಾಖಲಾದ ಅಂಶಗಳವರೆಗೆ ನಿರಂತರ ಶೋಧನೆ.

`ದಕ್ಷಿಣಾಪಥ'ದ ಚಾಲುಕ್ಯರ ನಾಟ್ಯ ರೂಪಗಳ ನಂತರದ ನಾಟ್ಯದ ಹೆಜ್ಜೆ ಗುರುತುಗಳು ಸಿಕ್ಕಿದ್ದು ರಾಷ್ಟ್ರಕೂಟ, ಕಲ್ಯಾಣ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯದ ಶಾಸನಗಳಲ್ಲಿ. ನಾಟ್ಯಾಚಾರ್ಯ `ಅಚಲ' ಅವರಿಂದ ಹಿಡಿದು ಇಪ್ಪತ್ತನೇ ಶತಮಾನದಲ್ಲಿ ನೃತ್ಯಧವಳ ಕೀರ್ತಿ ಮೆರೆದ ಅಮೃತಪ್ಪನವರ ವರೆಗಿನ ಇತಿಹಾಸದ ಪುಟಗಳನ್ನು ತೆರೆಯುವ ಪ್ರಯತ್ನದಲ್ಲಿ ತೊಡಗಿದಾಗ ಅದ್ಭುತ ಜಗತ್ತು ಪ್ರವೇಶಿಸಿದ ಅನುಭವ.ಇತ್ತೀಚಿನ ನಾಟ್ಯಾಚಾರ್ಯರಿಂದ ಪಡೆದ ಮಾಹಿತಿಗಳು ಹಾಗೂ ಪತ್ರಾಗಾರಗಳಲ್ಲಿ ದೊರೆತ ಉಲ್ಲೇಖಗಳು ನೀಡಿದ ಪೂರಕ ಅಂಶಗಳು ಪರಂಪರೆಯ ಹುಡುಕಾಟವನ್ನು ಅರ್ಥಪೂರ್ಣಗೊಳಿಸಿದವು. ನಂಜನಗೂಡಿನ ರಾಜಮ್ಮ ಅವರ ಶಿಷ್ಯರಾದ ಸುಬ್ರಹ್ಮಣ್ಯ ಕೌಶಿಕ್, ನಾಟ್ಯ ಸರಸ್ವತಿ ಜಟ್ಟಿತಾಯಮ್ಮನವರ ಸಂಪ್ರದಾಯ ಮುಂದುವರಿಸಿದ ಡಾ. ಕೆ.ವೆಂಕಟಲಕ್ಷಮ್ಮ ಹಾಗೂ ಕೋಲಾರ ಪರಂಪರೆಯ ಕೊಂಡಿ ಎನಿಸಿರುವ ಸಿ.ರಾಧಾಕೃಷ್ಣ ಅವರು ನಮ್ಮ ನಾಡಿನ ಭವ್ಯ ನೃತ್ಯಪರಂಪರೆಯನ್ನು ಒಗ್ಗೂಡಿಸಲು ಪ್ರೇರಣೆ ಹಾಗೂ ಕಾರಣ. ಅವರು ತೋರಿಸಿದ ಹಾದಿಯಲ್ಲಿ ಸಾಗಿದಾಗ ಸಿಕ್ಕ ಮಾಹಿತಿಯೂ ಅಪಾರ.ಕೈಶಿಕೀ ವೃತ್ತಿ

ನಾವೆಲ್ಲ ನೃತ್ಯ ಇತಿಹಾಸ ಎಂದಾಕ್ಷಣ ಮುಖಮಾಡಿ ನಿಲ್ಲುವುದು ತಮಿಳುನಾಡಿನ ಕಡೆಗೆ. ಆದರೆ ಶಾತವಾಹನರ ಕಾಲದಲ್ಲಿಯೇ `ದಾಕ್ಷಿಣಾತ್ಯ ಸಂಸ್ಕೃತಿ' ಎನ್ನುವುದು ಕರ್ನಾಟಕ ಸಂಸ್ಕೃತಿ ಆಗಿತ್ತು. ಗಮನ ಸೆಳೆಯುವ ಅಂಶವೆಂದರೆ ವೇಷ-ಭೂಷಣ ಸಹಿತವಾದ, ಲಲಿತವಾದ, ಚಾತುರ್ಯಪೂರ್ಣ ನೃತ್ಯಾಭಿನಯವಾದ `ಕೈಶಿಕೀ ವೃತ್ತಿ' ಜನಪ್ರಿಯವಾಗಿದ್ದು ಕೂಡ ಈಗ ಕರ್ನಾಟಕವೆಂದು ಗುರುತಿಸುವ ಭಾಗದಲ್ಲಿ. ಅದಕ್ಕೆ ಕನ್ನಡ ಕಾವ್ಯಗಳಲ್ಲಿ ಸ್ಪಷ್ಟ ಆಧಾರಗಳು ಸಿಗುತ್ತವೆ. ನಮ್ಮ ನಾಡಿನ ರಾಜವಂಶಗಳ ಅನೇಕ ರಾಣಿಯರು ಸಂಗೀತ-ನಾಟ್ಯ ಪ್ರವೀಣೆಯರಾಗಿದ್ದರು.ಕೈಶಿಕೀ ವೃತ್ತಿ ಎನ್ನುವುದು ಸ್ತ್ರೀ ಸಹಜವಾದ ವೃತ್ತಿ ಎಂದು ಪಂಪ ಕವಿಯೇ ಬರೆದಿದ್ದಾರೆ. `ಭಾರತಿ, ಶಾಶ್ವತಿ, ಕೈಶಿಕೀ, ಯಾರಭಟಿಯೆಂಬ ವೃತ್ತಿಯೋಳ್' ಎನ್ನುವುದು ನೃತ್ಯವು ಮಹಿಳೆಯ ವೃತ್ತಿಯಾಗಿ ಬೆಳೆದ ಇತಿಹಾಸಕ್ಕೆ ಬಿಂಬ. ಪೊನ್ನ ಕವಿಯ ಕೃತಿಯಲ್ಲಿ ಇದೇ ವೃತ್ತಿಯು `ನರ್ತನೋಪೇತಮುಮಂಗನಾ ಕುಸುಮ ಸುಕುಮಾರಾಂಗ ಸಮುಚಿತಮುಮಪ್ಪ ಸಂದ್ಯಂಗ ಗತನೃತ್ಯಾಂಗರಸ ಭಾವಾಭಿನಯಂಗಳ...' ಎಂದು ವರ್ಣಿತವಾಗಿದೆ.

ಮೈಸೂರು ಒಡೆಯರ ಆಸ್ಥಾನದಲ್ಲಿ ಕೈಶಿಕೀ ವೃತ್ತಿಗೆ ಸಿಕ್ಕ ಪ್ರೋತ್ಸಾಹ ಅಪಾರ. ನೃತ್ಯದ ಭವ್ಯಪರಂಪರೆಯು ಉಚ್ಛ್ರಾಯ ಸ್ಥಿತಿ ತಲುಪಿದ್ದು ಅದೇ ಕಾಲದಲ್ಲಿ. ಬಿಜಾಪುರದ ಇಬ್ರಾಹಿಂ ಕೂಡ ಕರ್ನಾಟಕ ನೃತ್ಯ ಪರಂಪರೆಯನ್ನು ಪೋಷಿಸಿದ ಕಲಾಪ್ರಿಯ ಮುಸ್ಲಿಂ ದೊರೆ. ಆದ್ದರಿಂದಲೇ ಕನ್ನಡ ನಾಡಿನಲ್ಲಿ ವಿಶಿಷ್ಟ ನೃತ್ಯ ಪ್ರಯೋಗಗಳು ನಡೆಯಲು ಸಾಧ್ಯವಾಗಿದ್ದು.ಹೈದರ್ ಅಲಿ ಅಂತಃಪುರದ ಸ್ತ್ರೀಯರಿಗೆ ನಾಟ್ಯ ಕಲಿಸಲು ಕುಪ್ಪಯ್ಯ ಅವರನ್ನು ನೇಮಿಸಿದ್ದ. ಅದೇ ಟಿಪ್ಪುಸುಲ್ತಾನ್ ದೇವದಾಸಿ ಪದ್ಧತಿಯನ್ನು ನಿಷೇಧಿಸಿದ ಕಾಲದಲ್ಲಿ ಕರ್ನಾಟಕದಿಂದ ಅನೇಕ ಕಲಾವಿದೆಯರು ಪಲಾಯನ ಮಾಡಿದ್ದು ನಿಜ. ಆದರೆ 1823ರಿಂದ 1874ರಲ್ಲಿ ಲಿಂಗರಾಜ ಅರಸರ ಮೂಲಕ ಮತ್ತೆ ನೃತ್ಯವೃತ್ತಿ ಚೈತನ್ಯ ಪಡೆಯಿತು.

ನಿಧಾನವಾಗಿ ದೇವದಾಸಿ ವೃತ್ತಿ ಎನ್ನುವ ಚೌಕಟ್ಟಿನಿಂದ ಹೊರಗೆ ಬಂದ ನೃತ್ಯ ಕಲೆಯಿಂದ, ಸಾಮಾನ್ಯ ವರ್ಗದ ಮನೆಯಲ್ಲಿಯೂ ನೃತ್ಯಾಭ್ಯಾಸ ಮಾಡುವ ಮಹಿಳೆಯರು ಕಾಣಿಸಿಕೊಂಡರು. ಅದು ಹೊಸದೊಂದು ಬದಲಾವಣೆಯ ಕಾಲಘಟ್ಟ. ಒಂದು ರೀತಿಯಲ್ಲಿ ಒಳಿತಿನ ಬೆಳವಣಿಗೆ. ನೃತ್ಯ ಎನ್ನುವುದು ದೇವಸ್ಥಾನ ಹಾಗೂ ಅಂತಃಪುರದ ನಾಲ್ಕು ಗೋಡೆಗಳಿಂದ ಹೊರಬಂದು `ಸಭಾ ನೃತ್ಯ'ವಾಗುವ ಅರ್ಹತೆ ಪಡೆದುಕೊಂಡಿತು.

ಕ್ರಾಂತಿಕಾರಿ ಹೆಜ್ಜೆ

ಕೋಲಾರದ ಯಜಮಾನ ಕಿಟ್ಟಣ್ಣನವರನ್ನು ಮರೆಯುವುದು ಹೇಗೆ? ಕರ್ನಾಟಕದ ನೃತ್ಯ ಪರಂಪರೆಯ ಗಟ್ಟಿ ಬೇರು. ಅವರ ವಂಶಜರಾದ ಭರತಕಲಾಮಣಿ ಸಿ.ರಾಧಾಕೃಷ್ಣ ಅದೇ ತಾಯಿ ಬೇರಿನಿಂದ ಬೆಳೆದ ಹೆಮ್ಮರದ ವಿಶಾಲ ಟೊಂಗೆ. ಕಿಟ್ಟಣ್ಣ ಅವರಂತೂ ಸ್ವತಃ ಪಿಟಿಲು ವಾದಕರು. ರೂಪು, ಲಾವಣ್ಯ, ಗುಣಗಳ ಆಧಾರದಲ್ಲಿ ಕಲಾ ಶಿಕ್ಷಣ ಮಾರ್ಗ ರೂಪಿಸಿದವರು.

ಆಗ ಪ್ರಚಲಿತವಿದ್ದ ಆಲಯ-ಆಸ್ಥಾನ ಹಾಗೂ `ಸಭಾ ನೃತ್ಯ'ಗಳಿಗೆ ಅರ್ಹತೆಯಲ್ಲಿ ಕಲಾವಿದರನ್ನು ಆಯ್ಕೆ ಮಾಡಿ ಮೂರು ವರ್ಗಗಳಲ್ಲಿ ನೃತ್ಯ ತರಬೇತಿ ನೀಡಿದವರು. ಅವರು ಮುನ್ನೂರಕ್ಕೂ ಹೆಚ್ಚು ದೇವದಾಸಿಯರಿಗೆ ನೃತ್ಯಗುರು! ಯಾರೇ ಆಹ್ವಾನಿಸಿದರೂ ವೀಳ್ಯ ಪಡೆದು ನೃತ್ಯ ಪ್ರದರ್ಶನ ನೀಡಿದವರು.

ಒಂದು ವಿಶೇಷವೆಂದರೆ ಅವರು `ಸಭಾ ನೃತ್ಯ' ಪದ್ಧತಿಯನ್ನು ಆರಂಭಿಸಿದ ಮೊದಲಿಗರು.

ಸುಶ್ರಾವ್ಯ ಸಂಗೀತದೊಂದಿಗೆ ನರ್ತಕಿಯರು ರಂಗ ಮಧ್ಯೆ ನಿಂತು ಚೂರ್ಣಿಕೆ ಪಡೆದು ಪುಷ್ಪಾಂಜಲಿ, ಜತಿಸ್ವರ, ಸ್ವರ ಜತಿವರ್ಣಗಳ ಜೊತೆಗೆ ಜನರಂಜನೆಯ ನೀತಿಬೋಧಕ ಪದಗಳನ್ನೂ ಪ್ರದರ್ಶಿಸಿದ್ದು ವಿಶೇಷ. ಅದೊಂದು ಕ್ರಾಂತಿಕಾರಿ ಬದಲಾವಣೆ.  ಜಡೆ ಕೋಲಾಟ, ರಾಸಲೀಲೆ, ಪತಂಗ ನಾಟ್ಯ, ಮೋಡಿ ನೃತ್ಯ, ಕೃಷ್ಣನ ಚೆಂಡಾಟದಂಥ ಲಘು ನೃತ್ಯಗಳು ರಂಗದಲ್ಲಿ ಕಾಣಿಸುವಂತೆ ಮಾಡಿದ ಕ್ರಾಂತಿಕಾರಿ ವಿಚಾರಧಾರೆಯ ನೃತ್ಯ ಗುರು ಕಿಟ್ಟಣ್ಣ.

ಗಜಲ್, ಠುಮ್ರಿ, ದರ್ಬಾರ್ ನೃತ್ಯಗಳನ್ನು ರಂಗದ ಮೇಲೆ ಕಲ್ಪಿಸಿಕೊಳ್ಳುವುದೂ ಅಸಾಧ್ಯ ಎನ್ನುವ ಸಂದರ್ಭದಲ್ಲಿ ಇಟ್ಟ ದಿಟ್ಟ ಹೆಜ್ಜೆ ಮೆಚ್ಚುವಂಥದ್ದು. ವಿದುಷಿಯರಲ್ಲಿ ನಾಗರತ್ನಮ್ಮ, ರಂಗನಾಯಕಮ್ಮ, ಚೆಲ್ಲ, ಸುಬ್ಬರತ್ನ, ವರಾಲು (ವರಲಕ್ಷ್ಮಿ), ದೊಡ್ಡಬಳ್ಳಾಪುರದ ಪುಟ್ಟಮ್ಮ, ತುಮಕೂರು ತಾಯಮ್ಮ ಪ್ರಮುಖರು. ವರಾಲು ಅವರಂತೂ ಪ್ರೇಕ್ಷಕರು ರೋಮಾಂಚನಗೊಳ್ಳುವಂಥ ಪ್ರದರ್ಶನ ನೀಡಿದವರು. ನಾಟ್ಯ ಮಾಡುತ್ತಲೇ ಹಿಮ್ಮುಖವಾಗಿ ಬಾಗಿ ಕಣ್ಣ ರೆಪ್ಪೆಯಲ್ಲಿ ಸೂಜಿಯನ್ನು ಎತ್ತುವಂಥ ಸಾಹಸ ಕೂಡ ಮಾಡಿದ್ದರು.

ಕೃಷ್ಣವರ್ಣ ಚೆಲುವೆ ಎಂದೇ ಹೆಸರಾಗಿದ್ದ ಸುಬ್ಬಮ್ಮ ಜಿಂಕೆಯಂಥ ಚಲನೆಯ ಚುರುಕು ಕಲಾವಿದೆ ಎನಿಸಿಕೊಂಡಿದ್ದರು. ಹೀಗೆ ನಮ್ಮ ಕರ್ನಾಟಕದ ನೃತ್ಯ ಪರಂಪರೆಯು ವಿಶಿಷ್ಟವಾದದ್ದು. ಅದರತ್ತ ಒಮ್ಮೆ ತಿರುಗಿ ನೋಡುವ ಪ್ರಯತ್ನವನ್ನು ನಮ್ಮ ಯುವ ಕಲಾವಿದರೂ ಮಾಡಬೇಕು ಎನ್ನುವುದು ನನ್ನ ಆಶಯ.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry