ನೃತ್ಯ ಭಾವದ ಬೀಸು

7

ನೃತ್ಯ ಭಾವದ ಬೀಸು

Published:
Updated:

ಪಕ್ವವಾದ ರಸದೃಷ್ಟಿ, ನಿರತಿಶಯ ಆನಂದ ನೀಡಿದ ನಿರೂಪಣೆಗಳ ಪರಿಭಾವನೆ, ನೋಡುಗನ ಚಿತ್ತ ಭಿತ್ತಿಯ ಮೇಲೆ ಸ್ಪಷ್ಟವಾಗಿ ವಿವಿಧ ಪಾತ್ರಗಳು ಮತ್ತು ಭಾವಗಳನ್ನು ಮೂಡಿಸಬಲ್ಲ ಅಭಿನಯ ಸೂಕ್ಷ್ಮತೆ.

 

ಇಂಥ ಗುಣಗಳಿಂದ ನುರಿತ ಭರತನಾಟ್ಯ ನರ್ತಕಿ ಹಾಗೂ ಸುವಿಖ್ಯಾತ ಅಭಿನೇತ್ರಿ ಲಕ್ಷ್ಮಿ ಗೋಪಾಲಸ್ವಾಮಿ ಮೊನ್ನೆ ನಡೆದ ತಮ್ಮ ಭರತನಾಟ್ಯ ಪ್ರದರ್ಶನದ ಮೂಲಕ ಮೇಲ್ತರಗತಿಯ ಆಸ್ವಾದಕತೆಯನ್ನು ಒದಗಿಸಿಕೊಟ್ಟರು.

 

ಶ್ರಿರಾಮ ಲಲಿತಕಲಾ ಮಂದಿರದ 12 ದಿನಗಳ ವಾರ್ಷಿಕ  ನೃತ್ಯ ಸಂಗೀತೋತ್ಸವದ ಸರಣಿ ಕಾರ್ಯಕ್ರಮಗಳ ನಡುವೆ ಗಾಯನ ಸಮಾಜದಲ್ಲಿ ನಡೆದ ಅವರ ಕಾರ್ಯಕ್ರಮದಲ್ಲಿ ಭಾವ ಪ್ರಸರಣದ ವಿಪುಲ ಸಂವೇದನೆಗಳು ತುಂಬಿ ತುಳುಕಾಡಿತು.ಉತ್ತಮ ಅಂಗಸೌಷ್ಠವ ಸಂರಕ್ಷಿಸಿಕೊಂಡು, ಗಂಭೀರವಾಗಿ ಕಲಾಸಾಧನೆ ಮಾಡಿಕೊಂಡು ಸಫಲತೆ ಕಾಣುತ್ತಿರುವ ಲಕ್ಷ್ಮಿ ಅವರ ನಿರೂಪಣೆಗಳು ಗಮನಾರ್ಹವಾಗಿದ್ದವು. ಕೀರ್ತಿಶೇಷ ಗುರು ನರ್ಮದಾ ಅವರ ಬಹುಮಾನಿತ ಶಿಷ್ಯೆ ಲಕ್ಷ್ಮಿ.

 

ಅವರ ಏಕಾಗ್ರತೆ, ತಲ್ಲೆನತೆ ಮತ್ತು ತನ್ಮಯತೆಗಳು ಆಕರ್ಷಿಸಿದಷ್ಟೇ ಅಲ್ಲದೇ ಅವರ ಪ್ರಸ್ತುತಿಗಳನ್ನು ಪರಿಣಾಮಕಾರಿಯಾಗಿಸಿದವು. ಅವರು ನೃತ್ಯ ಕಲಾ ಸಮಾಜ ಸಮ್ಮತವಾಗಿ ವಸ್ತುವನ್ನು ಸಾದರ ಪಡಿಸಿದರು.ಆರಂಭದ ಕಾಳೀ ಕೌತುವಂನ ಸೊಲ್ಕಟ್ಟುಗಳನ್ನು ನಿರಾಯಾಸವಾಗಿ ನಮೂದಿಸಿ ರಂಜನಿಮಾಲೆ ಮಂಡಿಸಿದರು. ರಂಜಿನಿ, ಶ್ರಿರಂಜಿನಿ, ಮೇಘರಂಜಿನಿ ಮತ್ತು ಜನರಂಜಿನಿ ಎಂಬ ರಂಜಿನಿ ಶಬ್ದವನ್ನೊಳಗೊಂಡಿದ್ದ ವಿಭಿನ್ನ ರಾಗಗಳಲ್ಲಿ ಹೆಣೆಯಲಾಗಿದ್ದ ದೇವಿಯ ಗುಣಗಾನದ ಶಂಕರಯ್ಯರ್ ಅವರ ರಚನೆ (ಮೃದುಪಂಕಜ )ಯನ್ನು ಅರ್ಥಪೂರ್ಣಗೊಳಿಸಿದರು.

 

ಅದರೊಂದಿಗೆ ಅಡಕಗೊಳಿಸಲಾಗಿದ್ದ ಸ್ವರಗಳು ನೃತ್ತಕ್ಕೆ ಅವಕಾಶ ಮಾಡಿಕೊಟ್ಟವು. ಅವರ ಹಸನ್ಮುಖ, ನಟನಾ ಕುಶಲತೆ, ರೂಪ ಲಾವಣ್ಯ ಮತ್ತು ಭಂಗಿಗಳು ವಿವಿಧ ದೇವಿಗಳ ದರ್ಶನವನ್ನು ಸಾಕಾರಗೊಳಿಸಿದವು.ಎಂದಿನಂತೆ ವರ್ಣದ ವಿಶದೀಕರಣ ಕಾರ್ಯಕ್ರಮದ ಪ್ರಧಾನ ಘಟ್ಟವಾಗಿತ್ತು. ಅದಕ್ಕಾಗಿ ಅವರ ಆಯ್ಕೆ ಕೆ. ದಂಡಾಯುಧಪಾಣಿ ಪಿಳ್ಳೈ ಅವರ ಖರಹರಪ್ರಿಯ ರಾಗದ ಜನಪ್ರಿಯ `ಮೋಹ ಮಾಯಿನೇನ ಎಂದವೇಳ~ ಪದವರ್ಣ; ಚಿದಂಬರನಾಥೇಶ್ವರನನ್ನು ಕುರಿತದ್ದು.ವಿರಹೋತ್ಕಂಠಿತ ನಾಯಕಿಯ ಅಪಾರ ವಿರಹ ವೇದನೆ ಮತ್ತು ಅವಳು ತನ್ನ ಅವಸ್ಥೆಯನ್ನು ಸಖಿಯೊಡನೆ ಹಂಚಿಕೊಳ್ಳುವ ಸನ್ನಿವೇಶವನ್ನು ಲಕ್ಷ್ಮಿ ಮೋಹಕವಾಗಿ ಅಭಿವ್ಯಕ್ತಿಗೊಳಿಸಿದರು. ಸ್ಥಾಯಿಭಾವಕ್ಕೆ ಪೂರಕವಾಗಿ ಹಿತಮಿತವಾದ, ಆದರೆ ಅಷ್ಟೇ ಕಲಾತ್ಮಕ ಮತ್ತು ಲಯ ವೈವಿಧ್ಯದ ನೃತ್ತ ಮತ್ತು ನೃತ್ಯ ಮೂಡಿಬಂತು.

 

ಹಾಗೆಯೇ ನಾಯಕಿಯ ಗುಣ ಲಕ್ಷಣಗಳನ್ನು ಬೇಹಾಗ್ ಜಾವಳಿ (ಸಾರಮೈನ ಮಾಟಲೆಂತೋ , ಸ್ವಾತಿ ತಿರುನಾಳ್)ಯ ಆಧಾರದ ಮೇಳೆ ನುರಿತ ಅಭಿನಯದ ಮೂಲಕ ಚಿತ್ರಿಸಿದರು.ಪುರಂದರದಾಸರ `ಓಡಿ ಬಾರಯ್ಯ~ (ಭೈರವಿ) ಪದವನ್ನು ಅವರು ಅರ್ಥೈಸಿದ ರೀತಿ ಇಷ್ಟವಾಯಿತು. ಮಾತೃವಾತ್ಸಲ್ಯದಿಂದ ದಾಸರು ವೈಕುಂಠಪತಿಯನ್ನು ನೋಡಿ, ಮುದ್ದಾಡಿ, ಮಾತಾಡಿ ಸಂತೋಷಿಸಲು ಹಂಬಲಿಸುವ ಭಾವವನ್ನು ಲಕ್ಷ್ಮಿ ಆಪ್ತವಾಗಿ ಅನಾವರಣಗೊಳಿಸಿದರು.ಉಗಾಭೋಗವೊಂದನ್ನು(ದೇಶ್) ಪೀಠಿಕೆಯಾಗಿ ಬಳಸಿಕೊಂಡು ನಂತರ ಪದಾಭಿನಯದಲ್ಲಿ ಅವರು ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ರಂಜಿಸಿದ ಖಮಾಚ್ ತಿಲ್ಲಾನವನ್ನು ಅನುಸರಿಸಿದ `ಮೈತ್ರೀಂ ಭಜತಾಂ~ನೊಂದಿಗೆ ಅವರ ಕಾರ್ಯಕ್ರಮವು ಸಮಾಪ್ತಿಯಾಯಿತು. ನೃತ್ಯ ಪಟು ಪ್ರವೀಣ್‌ಕುಮಾರ್ (ನಟುವಾಂಗ), ಭವಾನಿ ಶಂಕರ್ (ಗಾಯನ), ನಟರಾಜಮೂರ್ತಿ (ಪಿಟೀಲು), ಜಯರಾಂ (ಕೊಳಲು) ಮತ್ತು ಶ್ರಿಹರಿ (ಮೃದಂಗ) ಅವರ ಸಹಕಾರ ಮೆಚ್ಚಿಸಿತು.ಮೋಹಿಸಿದ ರಾಗಗಳು ಮತ್ತು ಕೃತಿಗಳುಮಾರನೆಯ ದಿನ ಅದೇ ವೇದಿಕೆಯನ್ನು ಪ್ರಸಿದ್ಧ ಗಾಯಕ ಸಂಜಯ್ ಸುಬ್ರಮಣ್ಯಂ ಅವರು ಅಲಂಕರಿಸಿದರು. ನಾಗೈ ಮುರಳೀಧರನ್ (ಪಿಟೀಲು), ಮನ್ನಾರಗುಡಿ ಈಶ್ವರನ್ (ಮೃದಂಗ) ಮತ್ತು ಬಿ.ರಾಜಶೇಖರ್ (ಮೋರ್ಸಿಂಗ್) ಅವರ ಪೋಷಕ ಮತ್ತು ಪೂರಕ ಸಹವಾದ್ಯಗಳೊಂದಿಗೆ ಕಲ್ಯಾಣಿ ಅಟತಾಳವರ್ಣವನ್ನು ಹಾಡಿ ತಮ್ಮ ಕಛೇರಿಗೆ ಘನ ಅಡಿಪಾಯ ಹಾಕಿದರು.

 

ರಸಾನಂದವನ್ನು ಸಂವರ್ಧಿಸುವಂತಹ ನಿಚ್ಚಳ ಅಭಿವ್ಯಕ್ತಿಯಿಂದ ಶ್ರಿರಂಜಿನಿ (ಬ್ರೋಚೆವಾ, ಕಲ್ಪನಾಸ್ವರ ಸಹಿತ) ಮತ್ತು ಬೇಗಡೆ (ನಾದೋಪಾಸನ , ರಾಗ ಮತ್ತು ಸ್ವರವಿನ್ಯಾಸ) ರಾಗಗಳು ಮೋಹಿಸಿದವು. ಮಧ್ಯಮಾವತಿ ರಾಗಾಲಾಪನೆ ಮತ್ತು ದಾಸರ `ಗೋವಿಂದಾ ನಿನ್ನ ಆನಂದ~ (ಸೃಷ್ಟಿ ಸ್ಥಿತಿ ಲಯ  ಎಂಬಲ್ಲಿ ನೆರವಲ್) ಮುದ ನೀಡಿತು.ಹನ್ನೆರಡು ವೈವಿಧ್ಯಪೂರ್ಣ ರಾಗಗಳು ಮತ್ತು ಕೃತಿಗಳನ್ನು ಆಯ್ದುಕೊಂಡು ಅವುಗಳನ್ನು ತಮ್ಮ ನೈಜ ಪ್ರತಿಭೆ ಮತ್ತು ಪರಿಣತಿಗಳ ಲೇಪನದೊಂದಿಗೆ ಸಜ್ಜುಗೊಳಿಸಿ ನಮೂದಿಸಿ ಸಂಜಯ್ ಅವರು ಸಂಗೀತಾರಾಧಕರನ್ನು ಸೆಳೆದರು.ಅಂತೆಯೇ ಸರಸ್ವತೀಮನೋಹರಿ (ಮಾಮವ ಜಗದೀಶ) ಮತ್ತು ವಸಂತ (ಶ್ರಿಕಾಮಾಕ್ಷಿ , ರಾಗ, ಸ್ವರ ಸಹಿತ) ರಾಗಗಳು ಹೊಸತನದಿಂದ ರಾರಾಜಿಸಿದವು. ಹಿಂದಿನ ಕಾಲದ ಪದ್ಧತಿಯಂತೆ ಆರಂಭದ ವರ್ಣವನ್ನು ಹಾಡಿದ ರಾಗದಲ್ಲೇ ರಾಗ, ತಾನ ಮತ್ತು ಪಲ್ಲವಿಯನ್ನು (ವರ್ಣ ಪಲ್ಲವಿ) ಗಾಯಕರು ನಿರೂಪಿಸಿದರು.

 

ಹಾಗಾಗಿ ಕಲ್ಯಾಣಿ ರಾಗವು ಎಲ್ಲ ಸ್ಥಾಯಿಗಳಲ್ಲೂ ಚಲ್ಲವರಿದು ಚಿತ್ರಣ ಪೂರ್ಣವಾಯಿತು. ಖಂಡ ನಡೆಯ ಆದಿತಾಳದಲ್ಲಿ ಪಾದವಂ ಆಡುಂ ತಿಲ್ಲೈ ನಟರಾಜನ್ ತಜ್ಜಂ ತಕಜ್ಜಂ ತಕಿಟಜ್ಜಂ  ಪಲ್ಲವಿಯನ್ನು ಕಾಲ, ನಡೆ ಭೇದಗಳಲ್ಲಿ ವಿಸ್ತರಿಸಿರು.

 

ಹೀಗೆ ವಿಸ್ತೃತವಾಗಿ ಪ್ರತಿಪಾದಿಸಲಾದ ರಾಗ, ತಾನ ಮತ್ತು ಪಲ್ಲವಿಯನ್ನು ಕೇಳಿದ ರಸಿಕರಿಗೆ ಅಪೂರ್ವ ಸಂತಸವುಂಟಾಯಿತು. ಆ ಸಂತಸವನ್ನು ಮತ್ತಷ್ಟು ಹಿಗ್ಗಿಸಿ ಅದಕ್ಕೆ ಆನಂದಭೈರವಿ, ವರಾಳಿ, ಕಾನಡಾ ರಾಗಮಾಲಿಕೆಯ ಸ್ವರಪ್ರಸ್ತಾರವನ್ನು ಕಲಾತ್ಮಕವಾಗಿ ಅಳವಡಿಸಿ ಶ್ರೋತೃಗಳ ಮನ ಗೆದ್ದರು. ಸ್ವಾತಿತಿರುನಾಳರ ಹಿಂದಿ ರಚನೆ `ಕರುಣಾ ನಿಧಾನ~ (ಹಮೀರ್‌ಕಲ್ಯಾಣಿ), ಪಾಶುರಂ ಇತ್ಯಾದಿ ರಚನೆಗಳು ಸಂಜಯ್ ಅವರ ಕಛೇರಿಯನ್ನು ಸಮೃದ್ಧಗೊಳಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry