ನೆಚ್ಚಿನ ಭಾರತಕ್ಕೆ ಇಂಗ್ಲೆಂಡ್ ಸವಾಲು

7

ನೆಚ್ಚಿನ ಭಾರತಕ್ಕೆ ಇಂಗ್ಲೆಂಡ್ ಸವಾಲು

Published:
Updated:

ಬೆಂಗಳೂರು: ಬೆಂಗಳೂರಿನ ಜನ ಆಕಾಶದ ಕಡೆ ನೋಡುತ್ತಿದ್ದಾರೆ. ಮೋಡಗಳೇ ಚದುರಿಹೋಗಿ, ಮಳೆ ಸುರಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ಭಾನುವಾರ ನಡೆಯಲಿರುವ ಹತ್ತನೇ ವಿಶ್ವ ಕಪ್ ಕ್ರಿಕೆಟ್ ‘ಬಿ’ ಗುಂಪಿನ ಪಂದ್ಯ ಮಳೆಯಲ್ಲಿ ಕೊಚ್ಚಿಹೋಗದಿದ್ದರೆ ಸಾಕು ಎಂಬುದೇ ಕ್ರಿಕೆಟ್‌ಪ್ರೇಮಿಗಳ ಪ್ರಾರ್ಥನೆ. ಆದರೆ ಮಳೆರಾಯ ಮುನಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಲೀಗ್ ಹಂತದ ಪ್ರಮುಖ ಪಂದ್ಯ ಇದು. ಎರಡೂ ತಂಡಗಳಿಗೆ ಗೆಲ್ಲುವ ತವಕ. ಇದು ಮುಂದೆ ಲೀಗ್ ಸ್ಥಾನಗಳನ್ನು ನಿರ್ಧರಿಸಲು ಅನುಕೂಲವಾಗುತ್ತದೆ. ಎರಡೂ ತಂಡಗಳಿಗೂ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯುವ ವಿಶ್ವಾಸ ಇದೆಯಾದರೂ, ಆ ಹಂತದಲ್ಲಿ ಯಾರು ಎದುರಾಳಿಗಳಾಗುವರು ಎಂಬ ಲೆಕ್ಕಾಚಾರದಲ್ಲಿ ಲೀಗ್ ಸ್ಥಾನಗಳು ಮಹತ್ವದ್ದಾಗುತ್ತವೆ.ಮಹೇಂದ್ರಸಿಂಗ್ ದೋನಿ ಮುಖದಲ್ಲಿ ಸಂತಸ ತುಂಬಿದೆಯಾದರೂ ಪಿಚ್ ಹೇಗಿರಬಹುದು ಎಂಬ ಆತಂಕವೂ ಇದೆ. ಟೂರ್ನಿ ಆರಂಭಕ್ಕೆ ಮೊದಲು ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಪಿನ್ನರುಗಳ ಬಲದಿಂದ ಆಸ್ಟ್ರೇಲಿಯವನ್ನು ಸೋಲಿಸಿದ್ದ ದೋನಿ, ಇಬ್ಬರು ಸ್ಪಿನ್ನರುಗಳೊಡನೆ ಆಡುವುದು ಖಚಿತ. ಅಲ್ಲದೇ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗೆಲುವು ಸುಲಭವಾಗಿ ಬಂದರೂ ಬೌಲಿಂಗ್ ಸಪ್ಪೆಯಾಗಿದ್ದದ್ದು ದೋನಿ ಮನಸ್ಸಿನಲ್ಲಿದೆ. ಹರಭಜನ್‌ಗೆ ಜೊತೆಯಾಗಿ ಲೆಗ್‌ಸ್ಪಿನ್ನರ್ ಪಿಯೂಶ್ ಚಾವ್ಲ ಆಡುವುದು ಖಚಿತ.ಅದೇ ರೀತಿ ಮೊದಲ ಪಂದ್ಯದಲ್ಲಿ ಹಾಲೆಂಡ್ ತಂಡವನ್ನು ಮಣಿಸಿರುವ ಇಂಗ್ಲೆಂಡ್ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಅವರಿಗೂ ಪಿಚ್ ಮೇಲೆಯೇ ಅನುಮಾನ. ಶುಕ್ರವಾರದ ಮಳೆ ನಂತರ ಮತ್ತೆರಡು ದಿನ ಮಳೆ ಬರುವ ಮುನ್ಸೂಚನೆ ಇರುವುದರಿಂದ ಸ್ಟ್ರಾಸ್ ಮನಸ್ಸಿನಲ್ಲಿ ಯಾರನ್ನು ಆಡಿಸಬೇಕು ಎಂಬ ಬಗ್ಗೆ ಗೊಂದಲ ಇದೆ. ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಜೊತೆ ಎಡಗೈ ಸ್ಪಿನ್ನರ್ ಮೈಕೆಲ್ ಯಾರ್ಡಿ ಕೂಡ ಆಡುವ ಸಾಧ್ಯತೆ ಇದೆ.ದುರ್ಬಲವೆನಿಸಿದ ಹಾಲೆಂಡ್ ತಂಡದ ಬ್ಯಾಟ್ಸಮನ್ನರು ಇಂಗ್ಲೆಂಡ್ ವೇಗದ ಬೌಲರುಗಳನ್ನು ದಂಡಿಸಿದ್ದು, ಅದರಲ್ಲೂ ರ್ಯಾನ್ ಟೆನ್ ಡಾಷೆಟ್ ಶತಕ ಬಾರಿಸಿದ್ದು ಇಂಗ್ಲೆಂಡ್ ಕೂಡ ಭಾರತದಂತೆ ಬೌಲರುಗಳ ಬಗ್ಗೆ ಯೋಚಿಸುವಂತಾಗಿತ್ತು.ಆದರೆ ವೇಗ ಮತ್ತು ಮಧ್ಯಮ ವೇಗದ ದಾಳಿಯಲ್ಲಿ ಅದರ ಶಕ್ತಿ ಭಾರತಕ್ಕಿಂತ ಉತ್ತಮವಾಗಿದೆ. ಇದರಿಂದಾಗಿ ಭಾರತ ತನ್ನ ಸ್ಪಿನ್ನರುಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಪಾಲ್ ಕಾಲಿಂಗ್‌ವುಡ್ ಅವರಂತೆ ಚುರುಕಾಗಿ ರನ್ ಗಳಿಸುವುದರ ಜೊತೆ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲ ಆಲ್‌ರೌಂಡರ್ ಕೊರತೆ ಭಾರತಕ್ಕಿದೆ. ಕಾಲಿಂಗ್‌ವುಡ್ ಅತ್ಯುತ್ತಮ ಫೀಲ್ಡರ್ ಕೂಡ. ಭಾರತಕ್ಕೆ ಫೀಲ್ಡಿಂಗ್ ಕೂಡ ಸಮಸ್ಯೆಯೇ. ಒಂದು ವಾರದಿಂದ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಿರುವ ಭಾರತದ ಆಟಗಾರರು ಫೀಲ್ಡಿಂಗ್ ಸಮಸ್ಯೆಗಳನ್ನು ನಿವಾರಿಸಿಕೊಂಡಿರಬಹುದು. ಇಲ್ಲದಿದ್ದರೆ ಇದೇ ಭಾರತಕ್ಕೆ ಮುಳುವಾಗಬಹುದು.ಗ್ರಹಾಮ್ ಗೂಚ್ 1987 ರ ಸೆಮಿಫೈನಲ್‌ನಲ್ಲಿ ಭಾರತದ ಸ್ಪಿನ್ನರುಗಳನ್ನು ‘ಸ್ವೀಪ್’ ಮಾಡಿಯೇ ಇಂಗ್ಲೆಂಡ್ ಜಯಕ್ಕೆ ಕಾರಣರಾಗಿದ್ದರು. ಆ್ಯಂಡ್ರ್ಯೂ ಸ್ಟ್ರಾಸ್ ಕೂಡ ಅಂಥದ್ದೇ ತಂತ್ರವನ್ನು ಇಲ್ಲಿ ಬಳಸಬಹುದು. ಈ ವಿಶ್ವ ಕಪ್‌ನಲ್ಲಿ ಸ್ಟ್ರಾಸ್ ಜೊತೆ ಆರಂಭಿಕ ಬ್ಯಾಟ್ಸಮನ್ ಆಗಿ ಆಡುತ್ತಿರುವ ಕೆವಿನ್ ಪೀಟರ್ಸನ್ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸುತ್ತಿಲ್ಲವಾದರೂ ಅವರೊಬ್ಬ ಅಪಾಯಕಾರಿ ಆಟಗಾರ. ಜೊನಾಥನ್ ಟ್ರಾಟ್, ಇಯಾನ್ ಬೆಲ್ ಮಧ್ಯಮ ಕ್ರಮಾಂಕದಲ್ಲಿ ಬಲ ತಂದುಕೊಡುತ್ತಾರೆ.ಇಂಗ್ಲೆಂಡ್‌ನ ಬ್ಯಾಟಿಂಗ್ ಚೆನ್ನಾಗಿದೆಯಾದರೂ ಈ ವಿಭಾಗದಲ್ಲಿ ಭಾರತ ಪ್ರಬಲವಾಗಿದೆ. ಶುಕ್ರವಾರ ಅಭ್ಯಾಸ ನಡೆಸುವಾಗ ವೀರೇಂದ್ರ ಸೆಹ್ವಾಗ್ ಪಕ್ಕೆಲುವಿಗೆ ಸಣ್ಣ ಪೆಟ್ಟು ತಿಂದರಾದರೂ ಭಾನುವಾರ ಆಡಲು ತೊಂದರೆಯೇನೂ ಆಗಿಲ್ಲ. ಅವರೇ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಡುವವರು. ಸಚಿನ್ ತೆಂಡೂಲ್ಕರ್ ಅವರ ಮೊಳಕಾಲಿಗೂ ತೊಂದರೆ ಏನಿಲ್ಲ. ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ದೋನಿ, ಯೂಸುಫ್ ಪಟೇಲ್ (ಅಥವಾ ಸುರೇಶ್ ರೈನಾ) ಅವರಿಂದ ಭಾರತದ ಬ್ಯಾಟಿಂಗ್ ಬಲಿಷ್ಠ ವಾಗಿದೆ. ಇವರಿಗೆ ಇಂಗ್ಲೆಂಡ್‌ನ ಸ್ಪಿನ್ನರುಗಳು ಸಮಸ್ಯೆಯೇನೂ ಆಗಲಿಕ್ಕಿಲ್ಲ. ಯುವರಾಜ್ ಸಿಂಗ್ ಅವರನ್ನು ನೋಡಿದರೆ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರು ಬೆಚ್ಚಿಬೀಳಬಹುದು. ಟಿ-20 ಕ್ರಿಕೆಟ್‌ನಲ್ಲಿ ಯುವರಾಜ್ ಒಂದು ಓವರ್‌ನ ಎಲ್ಲ ಆರೂ ಎಸೆತಗಳಲ್ಲಿ ಸಿಕ್ಸರ್ ಹೊಡೆದದ್ದನ್ನು ಬ್ರಾಡ್ ಅವರು ಮರೆಯುವಂತೆಯೇ ಇಲ್ಲ. ಸೇಡು ತೀರಿಸಿಕೊಳ್ಳಲು ಅವರು ಕಾಯುತ್ತಿರಬಹುದು.ಭಾರತ ಮತ್ತು ಇಂಗ್ಲೆಂಡ್ ಹಿಂದಿನ ಒಂಬತ್ತು ವಿಶ್ವ ಕಪ್‌ಗಳಲ್ಲಿ ಆರು ಸಲ ಒಂದನ್ನೊಂದು ಎದುರಿಸಿದ್ದು, ಎರಡೂ ತಂಡಗಳು ತಲಾ ಮೂರು ಸಲ ಗೆದ್ದಿವೆ. ಮೊಟ್ಟಮೊದಲ ವಿಶ್ವ ಕಪ್ ಟೂರ್ನಿಯ (1975) ಉದ್ಘಾಟನಾ ಪಂದ್ಯವೇ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿತ್ತು. ಅದರಲ್ಲಿ ಇಂಗ್ಲೆಂಡ್ (60 ಓವರುಗಳಲ್ಲಿ ನಾಲ್ಕು ವಿಕೆಟ್‌ಗೆ 334) ಭಾರತವನ್ನು (60 ಓವರುಗಳಲ್ಲಿ 3 ವಿಕೆಟ್‌ಗೆ 132) ಸುಲಭವಾಗಿ 202 ರನ್ನುಗಳಿಂದ ಸೋಲಿಸಿತ್ತು. ಸುನೀಲ್ ಗಾವಸ್ಕರ್ ಕೊನೆಯ ತನಕ ಆಡಿ ಔಟಾಗದೆ 36 ರನ್ ಮಾಡಿದ್ದರು. ಭಾರತ ನಿಗದಿಯ ಓವರ್ ಕ್ರಿಕೆಟ್ ಕಲಿತಿರಲೇ ಇಲ್ಲ. ಆದರೆ 1983 ರ ಸೆಮಿಫೈನಲ್‌ನಲ್ಲಿ ಭಾರತ ಆರು ವಿಕೆಟ್‌ಗಳಿಂದ ಗೆದ್ದು ‘ಕ್ರಿಕೆಟ್ ಗುರು’ವಿಗೇ ಪಾಠ ಕಲಿಸಿತ್ತು. ಭಾರತ ಫೈನಲ್ (ವೆಸ್ಟ್‌ಇಂಡೀಸ್ ವಿರುದ್ಧ) ಕೂಡ ಗೆದ್ದು ವಿಶ್ವ ಚಾಂಪಿಯನ್ ಆಗಿತ್ತು. ಎಂಟು ವರ್ಷಗಳಲ್ಲಿ ಭಾರತದ ಒಂದು ದಿನದ ತಂಡ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿತ್ತು.ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ‘ಫೇವರಿಟ್’ ಆಗಿದ್ದರೂ ಒಂದು ದಿನದ ಕ್ರಿಕೆಟ್‌ನಲ್ಲಿ ಹಿಂದಿನ ಆಟವೇ ಬೇರೆ, ಮುಂದಿನ ಆಟವೇ ಬೇರೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದಕ್ಕಿಂತ, ರೋಚಕ ಹೋರಾಟವನ್ನಂತೂ ಖಂಡಿತವಾಗಿಯೂ ನಿರೀಕ್ಷಿಸಬಹುದು. ಮಳೆ ಮಾತ್ರ ಬರಬಾರದಷ್ಟೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry