ಗುರುವಾರ , ಮೇ 13, 2021
35 °C
ರಸ್ತೆಯುದ್ದಕ್ಕೂ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದ ಪ್ರೇಕ್ಷಕರು...

ನೆಟ್ಟಕಲ್ಲಪ್ಪ ರಸ್ತೆ ಓಟ: ಸ್ಪರ್ಧಿಗಳಿಗೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಟ್ಟಕಲ್ಲಪ್ಪ ರಸ್ತೆ ಓಟ: ಸ್ಪರ್ಧಿಗಳಿಗೆ ಸಂಭ್ರಮ

ಕಾರವಾರ: `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್' ಪ್ರಾಯೋಜಿತ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದಲ್ಲಿ ಭಾನುವಾರ ನಡೆದ ಕೆ.ಎ.ನೆಟ್ಟಕಲ್ಲಪ್ಪ ರಸ್ತೆ ಓಟದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 200 ಸ್ಪರ್ಧಿಗಳು ಆಗಮಿಸಿದ್ದರು.ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಮೈಸೂರು, ಮಂಡ್ಯ, ಕೋಲಾರ, ಶಿವಮೊಗ್ಗ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಮತ್ತು ಬೆಂಗಳೂರಿನಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು.ನಗರದ ಮಾಲಾದೇವಿ ಮೈದಾನದಲ್ಲಿ 12 ಕಿಲೋ ಮೀಟರ್ ಸ್ಪರ್ಧೆ ಪ್ರಾರಂಭವಾಯಿತು. ಕೋಡಿಬಾಗ ಮುಖ್ಯರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಶಿವನಾಥ ದೇವಸ್ಥಾನ, ಸೋನಾರವಾಡ, ಅಂಚೆ ಇಲಾಖೆ ವಸತಿ ಗೃಹ, ದೇವಳಿವಾಡಾ ಮುಖ್ಯರಸ್ತೆ, ಪ್ರದ್ಮನಾಭ ನಗರದ ಮುಖ್ಯರಸ್ತೆ, ಗುರುಮಠ ಕ್ರಾಸ್, ಕಾಜುಬಾಗ ಕ್ರಾಸ್ ಮೂಲಕ ಕೋಡಿಬಾಗ ಮುಖ್ಯರಸ್ತೆಯ ಮೂಲಕ ಒಟ್ಟು ಎರಡು ಲಾಪ್‌ಗಳನ್ನು ಸ್ಪರ್ಧಿಗಳು ಪೂರ್ಣಗೊಳಿಸಬೇಕಾಗಿತ್ತು.ಸ್ಪರ್ಧೆಯಲ್ಲಿ ಪಾಲ್ಗೊಂಡ ಬಹುತೇಕ ಸ್ಪರ್ಧಿಗಳು ಎರಡು ಲ್ಯಾಪ್‌ಗಳನ್ನು ಪೂರ್ಣಗೊಳಿಸಿದರು. ಓಟದ ಮಾರ್ಗ ಮಾರುಕಟ್ಟೆ ಹಾಗೂ ಜನವಸತಿ ಪ್ರದೇಶಗಳಿಂದ ಹಾದು ಹೋಗಿದ್ದರಿಂದ ರಸ್ತೆ ಬದಿಯಲ್ಲಿ ನಿಂತ ಪ್ರೇಕ್ಷಕರು ಸ್ಪರ್ಧಿಗಳನ್ನು ಕುತೂಹಲದಿಂದ ನೋಡಿದರು.ಮಹಿಳೆಯರ ಆರು ಕಿಲೋ ಮೀಟರ್ ಓಟದ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ತಿಪ್ಪವ್ವ ಸಣ್ಣಕ್ಕಿ ಮೊದಲಿಗರಾಗಿ ಗುರಿಮುಟ್ಟಿದ್ದರು. ಆರಂಭದಿಂದ ಮುನ್ನಡೆಯನ್ನು ಕಾಯ್ದುಕೊಂಡ ತಿಪ್ಪವ್ವ ಮುಕ್ತಾಯದ ಹಂತದವರೆಗೂ ಮನ್ನಡೆ ಸಾಧಿಸಿ 22 ನಿಮಿಷ 48 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.ಮಾರ್ಗದುದ್ದಕ್ಕೂ ನಿಂತ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಬಾಲಕರ ಹಾಗೂ ಬಾಲಕಿಯರ ಓಟದ ಸ್ಪರ್ಧೆಗಳು ಗಮನ ಸೆಳೆದವು. ಅಂದಾಜು ನೂರು ಸ್ಪರ್ಧಿಗಳು ಈ ವಿಭಾಗದಲ್ಲಿ ಪಾಲ್ಗೊಂಡಿದ್ದರು. 2.5 ಕಿಲೋ ಮೀಟರ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸ್ಪರ್ಧಿಗಳು ಉತ್ಸಾಹದಿಂದಲೇ ಆಗಮಿಸಿದ್ದರು.ಬಾಲಕರ ಸ್ಪರ್ಧೆಯಲ್ಲಿ ಕಾರವಾರ ಪರಶುರಾಮ ನಾಯ್ಕ (ನಾಲ್ಕನೇ ಸ್ಥಾನ), ರಾಹುಲ್ ನಾಗೇಕರ್ (10ನೇ ಸ್ಥಾನ) ಮತ್ತು ಕುಮಟಾದ ಲೋಹಿತ್ ಪಟಗಾರ (ಎಂಟನೇ ಸ್ಥಾನ) ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದರು.ಬಾಲಕಿಯರ ವಿಭಾಗದಲ್ಲಿ ಕಾರವಾರದ ಬಾಲಕಿಯರು ಪಾರಮ್ಯ ಮೆರೆದವರು. ಹತ್ತು ಸ್ಥಾನಗಳ ಪೈಕಿ ಮೊದಲ ಸ್ಥಾನ ಮಂಡ್ಯದ ರಕ್ಷಿತಾ ಆರ್ ಹಾಗೂ ಎಂಟನೇ ಸ್ಥಾನವನ್ನು ಗದಗ್‌ನ ಶಮ್ರೀನ್ ಅಣ್ಣಿಗೇರಿ ಪಡೆದಿರುವುದು ಬಿಟ್ಟರೆ ಉಳಿದ ಎಂಟು ಸ್ಥಾನಗಳನ್ನು ಕಾರವಾರದ ಬಾಲಕಿಯರು ಬಾಚಿಕೊಂಡರು.ಗಮನ ಸೆಳೆದ ಬಾಲೆಯರು

ಕಾರವಾರ: ನಗರದಲ್ಲಿ ಭಾನುವಾರ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದಲ್ಲಿ ನಡೆದ ರಸ್ತೆ ಓಟದ ಸ್ಪರ್ಧೆ 2.5 ಕಿಲೋ ಮೀಟರ್ ಸ್ಪರ್ಧೆಯಲ್ಲಿ ಹತ್ತು ವರ್ಷದ ಬಾಲಕಿಯರಿಬ್ಬರು ಗಮನ ಸೆಳೆದರು.ಇಲ್ಲಿಯ ಹಬ್ಬುವಾಡದಲ್ಲಿರುವ ಕ್ರೀಡಾ ವಸತಿ ನಿಯಲದಲ್ಲಿರುವ ಹಳಿಯಾಳ ತಾಲ್ಲೂಕಿನ ಮೇಘಾ ಪರಸೋಗಿ ಮತ್ತು ಯಲ್ಲಾಪುರ ತಾಲ್ಲೂಕಿನ ದಿವ್ಯಾ ಬೋವಿವಡ್ಡರ ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನ ಪಡೆದು ಎಲ್ಲರ ಹುಬ್ಬೆರುವಂತೆ ಮಾಡಿದರು.2.5 ಕಿಲೋ ಮೀಟರ್ ಓಟದ ಸ್ಪರ್ಧೆ ನಗರದ ಅಂಚೆ ಮತ್ತು ತಂತಿ ಇಲಾಖೆಯ ವಸತಿ ಗೃಹ ಸಮೀಪದಲ್ಲಿರುವ ವೃತ್ತದಿಂದ ಪ್ರಾರಂಭವಾಯಿತು. ಆರಂಭದಿಂದ ಕೊನೆಯವರೆಗೂ ಸ್ವಲ್ಪವೂ ಎದೆಗುಂದದೆ ಓಡಿದ ಮೇಘಾ ಮತ್ತು ದಿವ್ಯಾ ನಿರಾಯಾಸವಾಗಿ ಸ್ಪರ್ಧೆಯನ್ನು ಕೊನೆಗೊಳಿಸಿದರು.ಮಾರ್ಗದುದ್ದಕ್ಕೂ ಇಬ್ಬರೂ ಸ್ಪರ್ಧಿಗಳು ಸ್ವಲ್ಪ ಬಳಲಿದಂತೆ ಕಂಡುಬರಲಿಲ್ಲ. ಇಬ್ಬರೂ ಸ್ಪರ್ಧಿಗಳು ಮುಕ್ತಾಯದ ಗೆರೆ ಸಮೀಪಿಸುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಸ್ವಾಗತಿಸಿದರು.ಇಬ್ಬರೂ ನಗರದ ಹಬ್ಬವಾಡದಲ್ಲಿರುವ ಶಾರದಾ ವಿದ್ಯಾಮಂದಿರದ ವಿದ್ಯಾರ್ಥಿಗಳು. ಸಾಧನೆಯ ಬಗ್ಗೆ ಕೇಳಿದರೆ `ಖುಷಿಯಾಗಿದೆ' ಎಂದು ಇಬ್ಬರೂ ನಗುಮೊಗದಿಂದ ಉತ್ತರ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.