ನೆಟ್: ಈ ಸಲ ದಾಖಲೆ ಅಭ್ಯರ್ಥಿಗಳು

7

ನೆಟ್: ಈ ಸಲ ದಾಖಲೆ ಅಭ್ಯರ್ಥಿಗಳು

Published:
Updated:

ಧಾರವಾಡ: ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) ವರ್ಷದಲ್ಲಿ ಎರಡು ಬಾರಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ನೆಟ್) ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಈ ಬಾರಿ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿ.ವಿ. ಇತಿಹಾಸದಲ್ಲೇ ದಾಖಲೆ ಪ್ರಮಾಣದ 15,403 ವಿದ್ಯಾರ್ಥಿಗಳು ಇದೇ 30ರಂದು ನಡೆಯುವ ಪರೀಕ್ಷೆಗೆ ಹಾಜರಾಗಲಿದ್ದಾರೆ.ಕಳೆದ ಜೂನ್‌ನಲ್ಲಿ ನಡೆದ ನೆಟ್ ಪರೀಕ್ಷೆಯಲ್ಲಿ ಕರ್ನಾಟಕ ವಿವಿಯಲ್ಲಿ 8,748 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 56.79 ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು (24,662) ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೆಟ್ ಪರೀಕ್ಷೆ ಬರೆಯಲಿದ್ದು, ಕರ್ನಾಟಕ ವಿ.ವಿ. ಎರಡನೇ ಸ್ಥಾನದಲ್ಲಿದೆ. ಕ್ರಮವಾಗಿ ಮೈಸೂರು ವಿವಿ (12,859), ಗುಲ್ಬರ್ಗ ವಿವಿ (8,806) ಹಾಗೂ ಮಂಗಳೂರು ವಿವಿಯಲ್ಲಿ 5,975 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  `ಕಳೆದ ಶೈಕ್ಷಣಿಕ ವರ್ಷದಿಂದ ಯುಜಿಸಿಯು ನೆಟ್ ಪರೀಕ್ಷೆಯ ಕ್ರಮದಲ್ಲಿ ಬದಲಾವಣೆ ಮಾಡಿದೆ. ಪದವಿ ಹಾಗೂ ವಿವಿ ಮಟ್ಟದಲ್ಲಿ ಉಪನ್ಯಾಸಕರಾಗಿ ನೇಮಕವಾಗುವವರು ನೆಟ್ ಪರೀಕ್ಷೆಯನ್ನು ಉತ್ತೀರ್ಣರಾಗಲೇಬೇಕು ಎಂಬ ಕಟ್ಟುನಿಟ್ಟಿನ ನಿಯಮಾವಳಿಗಳನ್ನೂ ಜಾರಿಗೆ ತಂದಿದೆ. ನೆಟ್ ಬರೆಯಲಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಲು ಇದು ಮೂಲ ಕಾರಣ' ಎಂದು ಕರ್ನಾಟಕ ವಿವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅಭಿಪ್ರಾಯಪಡುತ್ತಾರೆ.`ಈ ಮೊದಲು ಪ್ರಬಂಧ ಮಾದರಿಯ ಉತ್ತರಗಳನ್ನು ಬರೆಯಬೇಕಿತ್ತು. ಆದರೆ ಕಳೆದ ಜೂನ್‌ನಿಂದ ಬಹು ಆಯ್ಕೆಯ ಪ್ರಶ್ನೆಗಳನ್ನೇ ಕೇಳುತ್ತಿರುವುದರಿಂದ ಅಭ್ಯರ್ಥಿಗಳಿಗೆ ಉತ್ತರ ಬರೆಯಲು ಸುಲಭವಾಗಿದೆ. ಅಲ್ಲದೇ ಪಿಎಚ್.ಡಿ ಪೂರೈಸಲು ಕನಿಷ್ಟ ಮೂರು ವರ್ಷ ಬೇಕಾಗುವುದರಿಂದ ಹಾಗೂ ಕೋರ್ಸ್ ವರ್ಕ್ ಕಡ್ಡಾಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ನೆಟ್ ಪರೀಕ್ಷೆ ಸುಲಭದ ಹಾದಿ. ಅದಕ್ಕೆಂದೇ ಈ ಪರೀಕ್ಷೆ ಬರೆಯುವವರ ಸಂಖ್ಯೆ ಹೆಚ್ಚಿದೆ' ಎಂಬುದು ವಿವಿಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ.ಎಂ.ಟಿ.ಬಳೆ ಅವರ ವಿಶ್ಲೇಷಣೆ.ಯುಜಿಸಿಯ ಈ ಕ್ರಮದಿಂದಾಗಿ ಬರೀ ಕರ್ನಾಟಕ ವಿವಿಯಲ್ಲಿ ಅಷ್ಟೇ ಅಲ್ಲ. ದೇಶದಾದ್ಯಂತ 77 ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಟ್ಟಾರೆ 7,78,128 ವಿದ್ಯಾರ್ಥಿಗಳು ಈ ಬಾರಿ ನೆಟ್ ಪರೀಕ್ಷೆ ಎದುರಿಸಲಿದ್ದು, ದೆಹಲಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು, ಅಂದರೆ 46,656 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಯುಜಿಸಿ ಮೂಲಗಳು ತಿಳಿಸಿವೆ.ಕರ್ನಾಟಕ ವಿವಿಯಲ್ಲಿ ಅಭ್ಯರ್ಥಿಗಳು 49 ವಿಷಯಗಳಲ್ಲಿ ನೆಟ್ ಪರೀಕ್ಷೆ ಬರೆಯಲಿದ್ದು, 2,715 ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆ ಬರೆಯಲಿದ್ದಾರೆ. ರಕ್ಷಣೆ ಮತ್ತು ತಂತ್ರಗಾರಿಕೆ ಅಧ್ಯಯನ, ಫ್ರೆಂಚ್, ಪರ್ಷಿಯನ್, ಧರ್ಮಗಳ ತುಲನಾತ್ಮಕ ಅಧ್ಯಯನ, ಪ್ರದರ್ಶನ ಕಲೆಗಳು (ನೃತ್ಯ, ನಾಟಕ, ರಂಗಭೂಮಿ), ತುಲನಾತ್ಮಕ ಸಾಹಿತ್ಯ, ವಿಧಿವಿಜ್ಞಾನ ಹಾಗೂ ಮಾನವ ಹಕ್ಕುಗಳು ಹಾಗೂ ಕರ್ತವ್ಯಗಳು ವಿಷಯದಲ್ಲಿ ತಲಾ ಒಬ್ಬೊಬ್ಬ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry