ಸೋಮವಾರ, ಏಪ್ರಿಲ್ 19, 2021
32 °C

ನೆಟ್, ಸೆಟ್, ಪಿಎಚ್‌ಡಿ ಅಭ್ಯರ್ಥಿಗಳ ಕಡೆಗಣನೆ

ಪ್ರಜಾವಾಣಿ ವಾರ್ತೆ/ ಸುಭಾಸ.ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಮೈಸೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ ಅತಿಥಿ ಉಪನ್ಯಾಸಕ ಆಯ್ಕೆ ಪ್ರಕ್ರಿಯೆ ನಡೆದಿದ್ದು ನೆಟ್, ಸೆಟ್, ಪಿಎಚ್‌ಡಿ ಪದವೀಧರ ರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಆಯ್ಕೆ ಪ್ರಕ್ರಿಯೆಗೆ 100 ಅಂಕಗಳನ್ನು ನಿಗದಿ ಪಡಿಸ ಲಾಗಿದೆ. ಸಾಮಾನ್ಯ ವಿದ್ಯಾರ್ಹತೆಗೆ 50 ಅಂಕ (ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಯಲ್ಲಿ ಶೇ 60 ಅಂಕ ಪಡೆದಿದ್ದಲ್ಲಿ ಅದರ ಅರ್ಧ ಭಾಗವನ್ನು, ಅಂದರೆ 30 ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುವುದು), ಪಿಎಚ್‌ಡಿ ವಿದ್ಯಾರ್ಹತೆ ಪಡೆದಿದ್ದಲ್ಲಿ 10 ಅಂಕ, ನೆಟ್/ಸೆಟ್ ಪರೀಕ್ಷೆಗೆ 10 ಅಂಕ, ಹಿಂದಿನ ವರ್ಷ ಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 4 ಅಂಕ ಗಳಂತೆ ಗರಿಷ್ಠ 5 ವರ್ಷಗಳಿಗೆ 20 ಅಂಕ, ವಿಷಯ ತಜ್ಞರು ನೀಡಬಹುದಾದ ಅಂಕ 10 ಹಾಗೂ ಕಾಲೇಜಿನ ಪ್ರಾಂಶುಪಾಲರು ನೀಡಬಹುದಾದ 10 ಅಂಕ ಸೇರಿದಂತೆ ಒಟ್ಟು 100 ಅಂಕ ನಿಗದಿ ಪಡಿಸಲಾಗಿದೆ.2011-12ನೇ ಸಾಲಿನಲ್ಲಿ ಯುಜಿಸಿ ನಿಯಮಾ ವಳಿ ಪ್ರಕಾರ ನೆಟ್, ಸೆಟ್, ಪಿಎಚ್‌ಡಿ ಪದವಿ ಪಡೆದ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ನೀಡಲಾಗಿತ್ತು. ನಿರ್ದಿಷ್ಟ ವಿಷಯಗಳಲ್ಲಿ ನೆಟ್, ಸೆಟ್, ಪಿಎಚ್‌ಡಿ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ 2009ರೊಳಗೆ ಎಂ.ಫಿಲ್ ಪದವಿ ಪಡೆದ ಅಭ್ಯರ್ಥಿಗಳು ಅಥವಾ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅಭ್ಯರ್ಥಿಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು.ಆದರೆ, ಈ ಬಾರಿ ಸೇವಾ ಹಿರಿತನಕ್ಕೆ 20 ಅಂಕ, ಕಾಲೇಜಿನ ಪ್ರಾಂಶುಪಾಲರಿಗೆ 5 ಅಂಕ ಹಾಗೂ ವಿಷಯ ತಜ್ಞರಿಗೆ 5 ಅಂಕ ಸೇರಿದಂತೆ ಸುಮಾರು 30 ಅಂಕಗಳನ್ನು ನೀಡುವ ಮೂಲಕ ನೆಟ್, ಸೆಟ್, ಪಿಎಚ್‌ಡಿ ಮಾಡಿದ ಉಪನ್ಯಾಸಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿವೆ.ಅತಿಥಿ ಉಪನ್ಯಾಸಕರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಕಾಲೇಜಿಗಿಂತ ಹೆಚ್ಚಿನ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಈಗಾಗಲೇ ಸೇವಾ ಹಿರಿತನ ಹೊಂದಿರುವ ಉಪನ್ಯಾಸಕರಿಗೆ ಹೆಚ್ಚುವರಿ ಬೋಧನಾ ಅವಧಿ ಲಭ್ಯವಾಗುತ್ತಿದೆ. ಅಲ್ಲದೆ, ಒಬ್ಬರೇ ಅತಿಥಿ ಉಪನ್ಯಾಸಕರು ಎರಡು, ಮೂರು ಕಾಲೇಜುಗಳಲ್ಲಿ ಬೋಧನೆ ಮಾಡುವುದರಿಂದ ನೆಟ್, ಸೆಟ್, ಪಿಎಚ್‌ಡಿ ಪದವಿ ಪಡೆದಿರುವ ಅಭ್ಯರ್ಥಿಗಳು ಕೆಲಸದಿಂದ ವಂಚಿತವಾಗಬೇಕಾಗುತ್ತದೆ.ಅಲ್ಲದೆ, ಈ ಬಾರಿ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆ ಅವಧಿಯ ಸಂಬಳ ಕಡಿತಗೊಳಿಸಿ ಇಲಾಖೆ ಆದೇಶ ಹೊರಡಿ ಸಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ನಿಜಕ್ಕೂ ತೊಂದರೆ ಆಗುತ್ತಿದೆ ಎಂದು ಸ್ನಾತಕೋತ್ತರ ಅಭ್ಯರ್ಥಿಗಳು ದೂರಿದ್ದಾರೆ.19ರಂದು ಸಭೆ: ಕಳೆದ ಸಾಲಿನ ನಿಯಮಾ ವಳಿಯಂತೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ. 19 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.ಜಿಲ್ಲೆಯ ಎಲ್ಲ ಸ್ನಾತಕೋತ್ತರ ಪದವೀಧರರು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಸ್ನಾತಕೋತ್ತರ ಪದವೀಧರರ ವೇದಿಕೆಯ ಎಂ.ಎಸ್.ದಾಮೋದರ್, ಸೋಮಶೇಖರ್, ನವೀನ್ ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.