ನೆನಪಿನ ಕೋಟೆ ಬ್ಯೂಗಲ್‌ ರಾಕ್‌

7

ನೆನಪಿನ ಕೋಟೆ ಬ್ಯೂಗಲ್‌ ರಾಕ್‌

Published:
Updated:

ಅಲ್ಲೊಂದು ಮಂಟಪವಿದೆ, ಅದರ ಕೆಳಗೆ ಒಂದು ದೊಡ್ಡ ಬಂಡೆಗಲ್ಲು, ಸುತ್ತ–ಮುತ್ತ ಕಣ್ಮನ ಸೆಳೆಯುವ ಹಸಿರು, ಆಹ್ಲಾದಕರ ಗಾಳಿ ನೀಡುವ ಗಿಡ–ಮರಗಳು, ಹಕ್ಕಿಗಳ ಇಂಚರ, ಮಕ್ಕಳ ನಲಿದಾಟ... ಇದಿಷ್ಟೇ ಹೇಳಿದರೆ ಇದರ ವಿವರಣೆ ಮುಗಿಯುವುದಿಲ್ಲ. ಒಂದು ಅಖಂಡ ಕಲ್ಲುಬಂಡೆ ಎನ್ನುವ ಜೊತೆಗೆ ಸಾಕಷ್ಟು ಐತಿಹಾಸಿಕ ಮಹತ್ವವನ್ನು ಹೊತ್ತು ನಿಂತ ಹೆಗ್ಗಳಿಕೆಯೂ ಇದಕ್ಕಿದೆ.‘ಕಹಳೆ ಬಂಡೆ’ ಎಂದರೆ ಥಟ್ಟನೆ ಅನೇಕರಿಗೆ ಗೊತ್ತಾಗಲಿಕ್ಕಿಲ್ಲ. ಆದರೆ ‘ಬ್ಯೂಗಲ್‌ ರಾಕ್‌’ ಎಂದೊಡನೆ ಇಂದಿಗೂ ಅದೆಷ್ಟೋ ಹಳೇ ಬೆಂಗಳೂರಿಗರ ಮನದಲ್ಲಿ ಸಂತೋಷದ ಅಲೆಗಳು ಏಳುತ್ತವೆ. ಅದಕ್ಕಿರುವ ಇತಿಹಾಸವೂ ಅಷ್ಟೇ ದೊಡ್ಡದು. ಗಾಂಧಿ ಬಜಾರ್‌, ಬಸವನಗುಡಿಯ ಹೆಮ್ಮೆಯ ಪ್ರತೀಕವೇ ಸರಿ. ಕೆಂಪೇಗೌಡ ಬಸ್‌ ನಿಲ್ದಾಣದಿಂದ 4 ಕಿ.ಮೀ. ಕಲಾಸಿಪಾಳ್ಯದಿಂದ 5 ಕಿ.ಮೀ. ಅಂತರದಲ್ಲಿರುವ ಬ್ಯೂಗಲ್‌ ರಾಕ್‌ಗೆ ಹಲವು ಮುಖಗಳು.ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡ ತನ್ನ ಆಡಳಿತದ ಅವಧಿಯಲ್ಲಿ ಇಲ್ಲೊಂದು ವಿಶಾಲವಾದ ಉದ್ಯಾನ ನಿರ್ಮಿಸಿ, ಇಲ್ಲಿನ ಬೃಹತ್ ಬಂಡೆಯೊಂದರ ಮೇಲೆ ಗೋಪುರವನ್ನು ಕಟ್ಟಿಸಿದರು. ಅಲ್ಲಿ ಕಾವಲಿಗಿರುವ ಒಬ್ಬ ಸೈನಿಕ ಅಪಾಯ ಬಂದಾಗ ಕಹಳೆ ಊದುತ್ತಿದ್ದ. ಹೀಗಾಗಿ ಈ ಉದ್ಯಾನಕ್ಕೆ ‘ಕಹಳೆ ಬಂಡೆ ಉದ್ಯಾನ’ ಎನ್ನುವ ಹೆಸರಿತ್ತು. ನಂತರದ ದಿನಗಳಲ್ಲಿ ಬ್ರಿಟಿಷರ ಬಾಯಿಗೆ ಸಿಕ್ಕು ಇದು ‘ಬ್ಯೂಗಲ್ ರಾಕ್’ ಎಂದಾಯಿತು.ಕಾಲಕ್ರಮೇಣ ಇದೊಂದು ಉದ್ಯಾನವಾಗಿ ಉಳಿದುಕೊಂಡಿತಷ್ಟೆ. ಆದರೆ ಇತ್ತೀಚೆಗೆ ಮತ್ತೆ ಹೊಸ ನೋಟ ಹೊತ್ತ ಬ್ಯೂಗಲ್‌ ರಾಕ್‌, ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ. ಈ ಉದ್ಯಾನ ಒಂದು ಕಾಲದಲ್ಲಿ ದಯನೀಯ ಸ್ಥಿತಿ ತಲುಪಿತ್ತು ಎನ್ನುವುದೂ ಸತ್ಯ. ಡಿವಿಜಿ ಅವರಂತಹ ಮಹಾನ್‌ ದಿಗ್ಗಜರಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಈ ಉದ್ಯಾನ ಬಹುಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಪ್ರೇಮಿಗಳು ಕದ್ದು ಸೇರುವ ಸೀಮಿತ ಸ್ಥಳವಾಗಿತ್ತು.ಆದರೆ ಸುತ್ತಮುತ್ತಲಿನ ನಾಗರಿಕರು ಈ ಬಗ್ಗೆ ಜಾಗೃತರಾಗಿ, ಸ್ಥಳೀಯ ಶಾಸಕರು–ಸಚಿವರ ನೆರವು ಪಡೆದು ಈ ಉದ್ಯಾನಕ್ಕೆ ಒಂದು ಹೊಸ ಆಯಾಮ ನೀಡಿದರು. ಈಗ ಹೊಸ ರೂಪ ಹೊತ್ತು ನವವಧುವಿನಂತೆ ನಳನಳಿಸುತ್ತಿದೆ.  ಬಸವನಗುಡಿ, ಎನ್.ಆರ್. ಕಾಲೋನಿ ಹಾಗೂ ಬಿಎಂಎಸ್ ಮಹಿಳಾ ಕಾಲೇಜು ಮತ್ತು ಡಿ.ವಿ.ಜಿ. ರಸ್ತೆಗೆ ಹೊಂದಿಕೊಂಡ ಸುತ್ತಲಿನ ಜನರ ಮೆಚ್ಚಿನ ವಾಯುವಿಹಾರ ತಾಣವಾಗಿದೆ.ಉಬ್ಬು–ತಗ್ಗು ಪ್ರದೇಶವಾದ ಕಾರಣ ಹಸಿರಿನ ಹರಿವು ಕಣ್ಮನ ತಣಿಸುತ್ತದೆ. ಮುಸ್ಸಂಜೆಯ ವಾಯುವಿಹಾರಕ್ಕೆ ಪ್ರಶಸ್ತ ಜಾಗ. ವಾರಾಂತ್ಯಗಳಲ್ಲಿ ಸಂಗೀತ ಕಾರಂಜಿಯ ವ್ಯವಸ್ಥೆಯೂ ಇದೆ. ವಿಶಾಲವಾದ ರಂಗಮಂದಿರ ಮತ್ತು ಗ್ಯಾಲರಿ ಇರುವುದರಿಂದ ಬಸವನಗುಡಿ ಹಾಗೂ ಹನುಮಂತನಗರದ ಸಾಂಸ್ಕೃತಿಕ ಸಂಘಟನಾ ಕೂಟಗಳು ಆಗಾಗ್ಗೆ ಇಲ್ಲಿ ವಾದ್ಯಗೋಷ್ಠಿಗಳನ್ನು ನಡೆಸುತ್ತವೆ.ಉದ್ಯಾನದ ಒಳಭಾಗದಲ್ಲಿ ಸುಮಾರು 9 ದಶಕಗಳಷ್ಟು ಹಳೆಯದಾದ ನೀರಿನ ಟ್ಯಾಂಕ್‌ ಇದೆ. ಅದಕ್ಕೂ ಈಗ ಹೊಸ ನೋಟದ ಭಾಗ್ಯ. ಟ್ಯಾಂಕ್‌ನ ಹೊರಗೋಡೆಯ ಸುತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳನ್ನು ರಚಿಸಲಾಗಿದೆ. ಹೀಗೆ ಬ್ಯೂಗಲ್‌ ರಾಕ್‌ ಒಂದೆಡೆ ಹಲವಾರು ದಶಕಗಳ ಇತಿಹಾಸ ಸಾರುವ ಕುರುಹಾಗಿಯೂ, ಇನ್ನೊಂದೆಡೆ ವಾಯುವಿಹಾರಕ್ಕೆ ಯೋಗ್ಯ ಸ್ಥಳವಾಗಿಯೂ, ಮತ್ತೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿಯೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry