ನೆನಪಿನ ದೋಣಿಯಲ್ಲಿ ರಜನಿಕಾಂತ

7

ನೆನಪಿನ ದೋಣಿಯಲ್ಲಿ ರಜನಿಕಾಂತ

Published:
Updated:
ನೆನಪಿನ ದೋಣಿಯಲ್ಲಿ ರಜನಿಕಾಂತ

`ಒಬ್ಬೊಬ್ಬರೂ ನನ್ನನ್ನು ಬಿಟ್ಟುಹೋಗುವಾಗ ಇಂಥದ್ದೊಂದು ನೆನಪಿನ ಕಾಣಿಕೆ ಕೊಟ್ಟುಹೋಗಿದ್ದಾರೆ...' ಅರೆಕ್ಷಣ ಭಾವುಕರಾದರು ದುನಿಯಾ ವಿಜಯ್. ಅವರ ಕೈಮೇಲಿರುವ ಶಿವಲಿಂಗದ ಹಚ್ಚೆ ಹಾಕಿಸಿದ್ದು ಅವರಿಗೆ ಆತ್ಮೀಯರಾಗಿದ್ದ ಗೆಳೆಯರೊಬ್ಬರು.

ಗೆಳೆಯನ ಮರಣದ ಬಳಿಕ `ದುನಿಯಾ' ಚಿತ್ರ ಸೆಟ್ಟೇರಿತು. ಹಚ್ಚೆ ಗುರುತು ನೋಡಿದ ಯೋಗರಾಜ್ ಭಟ್ಟರು ಶಿವಲಿಂಗು ಎಂದೇ ಪಾತ್ರದ ಹೆಸರಿರಲಿ ಎಂದರು. ಸಿನಿಮಾರಂಗದಲ್ಲಿ ವಿಜಯ್‌ಗೆ ಆಸರೆಯಾದವರು ಸಹಾಯಕ ನಿರ್ದೇಶಕರಾಗಿದ್ದ ತುಷಾರ್ ರಂಗನಾಥ್. ಸಾಯುವ ಮೊದಲು `ರಜನಿ ಕಾಂತ' ಶೀರ್ಷಿಕೆಯನ್ನು ಸೂಚಿಸಿದ್ದವರು ಅವರು. ಇದು ಕೂಡ ಇಂದು ಸಾಧ್ಯವಾಗಿದೆ ಎಂದರು ವಿಜಯ್.ವಿಜಯ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿರುವ `ರಜನಿಕಾಂತ' ಈ ವಾರ ತೆರೆಕಾಣುತ್ತಿದೆ. `ಕಿರಾತಕ' ಮತ್ತು `ಮಿ.420' ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರದೀಪ್‌ರಾಜ್ ಈ ಚಿತ್ರದ ಬಗ್ಗೆ ಹೆಚ್ಚು ಭರವಸೆ ಹೊಂದಿದ್ದಾರೆ. ಕ್ಲಾಸ್ ಹಾಗೂ ಮಾಸ್ ಎರಡೂ ವರ್ಗಕ್ಕೆ ಇಷ್ಟವಾಗುವ ಸಿನಿಮಾ ಎನ್ನುವುದು ಅವರ ಹೇಳಿಕೆ. ಅಣ್ಣ, ತಮ್ಮ ಮತ್ತು ಅಮ್ಮನ ನಡುವಿನ ಸೆಂಟಿಮೆಂಟ್ ಜನರನ್ನು ಕಾಡಿಸಲಿದೆ ಎಂಬ ನಂಬಿಕೆ ಅವರದು.

ನಾಯಕಿ ಐಂದ್ರಿತಾ ಮತ್ತು ಅಣ್ಣ, ತಮ್ಮಂದಿರ ತ್ರಿಕೋನ ಪ್ರೇಮಕಥೆಯೂ ವಿಭಿನ್ನವಂತೆ. ರಜನಿಯಾಗಿ ವಿಜಯ್ ಸೀಳು ತುಟಿ ಸಮಸ್ಯೆಯುಳ್ಳ ಪಾತ್ರದಲ್ಲಿ ನಟಿಸಿದ್ದರೆ, ಕಾಂತನಾಗಿ ಅವರು ಮಾಸ್ ಹೀರೋ. ಹಾಸ್ಯನಟ ಬುಲೆಟ್ ಪ್ರಕಾಶ್ ಕಲಾತ್ಮಕವೆನಿಸುವ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಎಂದರು ಪ್ರದೀಪ್‌ರಾಜ್.ಚಿತ್ರರಂಗದಿಂದ ದೂರವುಳಿದಿದ್ದ ವಿತರಕ ಪ್ರಸಾದ್ ಈ ಚಿತ್ರದ ಹಕ್ಕುಗಳನ್ನು ಖರೀದಿಸಲು ವ್ಯವಹಾರದ ಜೊತೆ ಮತ್ತೊಂದು ಕಾರಣವಿದೆ. ಶೀರ್ಷಿಕೆಯಲ್ಲಿನ ರಜನಿ ಮತ್ತು ಕಾಂತ ಅವರ ತಂದೆ-ತಾಯಿಯ ಹೆಸರೂ ಹೌದು.ಚಿತ್ರೀಕರಣದುದ್ದಕ್ಕೂ ನಟಿ ಐಂದ್ರಿತಾರನ್ನು ಕಿಚಾಯಿಸುತ್ತಲೇ ಇದ್ದುದನ್ನು ವಿಜಯ್ ನೆನಪಿಸಿಕೊಂಡರು. ಲಾಭ ಗಳಿಸಬಹುದೆಂದು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ನಮಗೆ ಸಂಕಷ್ಟ ತಂದೊಡ್ಡಬೇಡಿ ಎನ್ನುವುದು ಪ್ರಸಾದ್‌ಗೆ ಅವರು ಮಾಡಿದ ಮನವಿ.`ಜಂಗ್ಲಿ' ಬಳಿಕ ಐಂದ್ರಿತಾ ಮತ್ತೆ ವಿಜಯ್‌ಗೆ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಅವರದು ಕಾಲೇಜು ವಿದ್ಯಾರ್ಥಿನಿಯ ಪಾತ್ರ. ಸೆಟ್‌ನಲ್ಲಿ ಯಾವಾಗಲೂ ನಗುವಿನ ಹಬ್ಬ ಇರುತ್ತಿದ್ದರಿಂದ ಚಿತ್ರೀಕರಣ ಮುಗಿದದ್ದೇ ತಿಳಿಯಲಿಲ್ಲ ಎಂದರು ಐಂದ್ರಿತಾ.ಖಳನಟ ಅನಿಲ್, ನಿರ್ಮಾಪಕ ಕೆ.ಮಂಜು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಒಟ್ಟು 110 ಚಿತ್ರಮಂದಿರಗಳಲ್ಲಿ ರಜನಿಕಾಂತನ ಆರ್ಭಟ ಶುರುವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry