ನೆನಪಿನ ಸಂಕೀರ್ಣತೆ ಹಿಡಿಯುವ ಯತ್ನ

7

ನೆನಪಿನ ಸಂಕೀರ್ಣತೆ ಹಿಡಿಯುವ ಯತ್ನ

Published:
Updated:
ನೆನಪಿನ ಸಂಕೀರ್ಣತೆ ಹಿಡಿಯುವ ಯತ್ನ

ಬೆಂಗಳೂರು: ``ಆತ್ಮಕಥೆ ಬರೆಯುವುದು ಎಂದರೆ ನೆನಪಿನ ಸಂಕೀರ್ಣತೆಯನ್ನು ಹಿಡಿಯುವುದು ಎಂದರ್ಥ. ನನ್ನ ಬದುಕಿನ ಬೇರೆ ಬೇರೆ ಘಟನೆಗಳನ್ನು `ಆಡಾಡತ ಆಯುಷ್ಯ~ ಆತ್ಮಕಥೆಯಲ್ಲಿ ದಾಖಲಿಸಿದ್ದೇನೆ~~ ಎಂದು ನಾಟಕಕಾರ ಗಿರೀಶ ಕಾರ್ನಾಡ ತಿಳಿಸಿದರು.ಮನೋಹರ ಗ್ರಂಥಮಾಲಾ ಮತ್ತು ರಿಲಯನ್ಸ್ ಟೈಮ್‌ಔಟ್ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಲೇಖಕರ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ಇತಿಹಾಸ ಮತ್ತು ಆತ್ಮಚರಿತ್ರೆಗಳು ಚರಿತ್ರೆಯನ್ನು ವಾಸ್ತವವಾಗಿ ದಾಖಲಿಸುವುದಿಲ್ಲ. ಹೀಗಾಗಿ ಇವು ಕಾಲ್ಪನಿಕ ಸಾಹಿತ್ಯವೇ ಆಗಿವೆ ಎಂದು ಹೊಸ ವಿಮರ್ಶೆ ವ್ಯಾಖ್ಯಾನಿಸಿದೆ. ಇದಕ್ಕೆ ಅನುಗುಣವಾಗಿ ನನ್ನ ಕೃತಿಯೂ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.`ಕೃತಿಯ ಶೀರ್ಷಿಕೆಯನ್ನು ಕವಿ ಬೇಂದ್ರೆಯವರ ಕವನದಿಂದ ಪಡೆದಿದ್ದೇನೆ. ಬೇಂದ್ರೆ ಧಾರವಾಡದ ಚರಾಚರವನ್ನೂ ಪ್ರಭಾವಿಸಿರುವಂತೆ ನನ್ನನ್ನೂ ಪ್ರಭಾವಿಸಿದ್ದಾರೆ. ಮೂವತ್ತು- ಮೂವತ್ತೈದು ವರ್ಷಗಳ ಬೇರೆ ಬೇರೆ ಹೊತ್ತಿನಲ್ಲಿ ನೆನಪಾದ ಘಟನೆಗಳನ್ನು ಕೃತಿಯಲ್ಲಿ ದಾಖಲಿಸಿದ್ದೇನೆ~ ಎಂದರು.“ಮನೋಹರ ಗ್ರಂಥಮಾಲಾ 1961ರಲ್ಲಿ ನನ್ನ ಮೊದಲನೆ ಕೃತಿಯನ್ನು ಪ್ರಕಟಿಸಿತು. ಐವತ್ತು ವರ್ಷಗಳ ಬಳಿಕ ಇದೇ ಪ್ರಕಾಶನ ಸಂಸ್ಥೆಯಿಂದ ಆತ್ಮಕಥೆ ಬಿಡುಗಡೆಯಾಗಿರುವುದು ಸಂತಸದ ಸಂಗತಿ. ಮೊದಲಿನಿಂದಲೂ ಸಾಹಿತ್ಯಕ್ಕೆ ಪ್ರೇರಣೆ ನೀಡುತ್ತಿರುವ `ಪ್ರಜಾವಾಣಿ~, ಕೃತಿಯ ವಿವಿಧ ಭಾಗಗಳನ್ನು ಪ್ರಕಟಿಸಿದ್ದು ಹೆಮ್ಮೆಯ ವಿಚಾರವಾಗಿದೆ” ಎಂದು ಹೇಳಿದರು.ಇದಕ್ಕೂ ಮುನ್ನ `ಪ್ರಜಾವಾಣಿ~ ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಅವರು ಕಾರ್ನಾಡರ `ಆಡಾಡತ ಆಯುಷ್ಯ~, ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಪ್ರಬಂಧ ಸಂಕಲನ `ಅಂತರಂಗದ ಮೃದಂಗ~, ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರ ಕಾದಂಬರಿ `ಹೊಳೆ ಮಕ್ಕಳು~ ಹಾಗೂ ನಾಟಕಕಾರ ಡಾ. ಲೋಹಿತ ನಾಯ್ಕರ ಅವರ `ನಾ ಬದುಕಲಿಕ್ಕೆ ಒಲ್ಲೆಪಾ~ ನಾಟಕಗಳ ಸಂಕಲನ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು, `ಮನೋಹರ ಗ್ರಂಥಮಾಲಾ ಆಧುನಿಕ ಕನ್ನಡ ಸಾಹಿತ್ಯದೊಂದಿಗೆ ಗುರುತಿಸಿಕೊಂಡು ಬಂದಿದೆ. ಪುಸ್ತಕ ಪ್ರಕಟಣೆ ಮತ್ತು ಚಿಂತನಾ ಚಾವಡಿಗಳನ್ನು ರೂಪಿಸಿದ್ದು ಸಂಸ್ಥೆಯ ಹೆಗ್ಗುರುತುಗಳು. ಶ್ರೇಷ್ಠ ಸದಭಿರುಚಿಯ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡುವ ಜತೆಗೆ ಸಾಂಸ್ಕೃತಿಕ ಸಂವಾದಕ್ಕೂ ಸಂಸ್ಥೆ ವೇದಿಕೆ ಕಲ್ಪಿಸಿತು. ಶರದೋತ್ಸವ ವಸಂತೋತ್ಸವಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಿತು~ ಎಂದು ಶ್ಲಾಘಿಸಿದರು.“ಕಾರ್ನಾಡರು ಕೇವಲ ಸಾಹಿತಿ ಮಾತ್ರವಲ್ಲ, ಬಹುಮುಖಿ ಪ್ರತಿಭಾವಂತ ವ್ಯಕ್ತಿ. `ಆಡಾಡತ ಆಯುಷ್ಯ~ ಒಂದು ಅಪೂರ್ವ ಆತ್ಮಕಥನವಾಗಿದೆ. ನಾಡು ಕಂಡ ಶ್ರೇಷ್ಠ ನಾಟಕಕಾರರ ಕೃತಿಯನ್ನು ಬಿಡುಗಡೆ ಮಾಡಿರುವುದು ದೊಡ್ಡ ಗೌರವದ ವಿಚಾರ~ ಎಂದರು.ಈ ಸಂದರ್ಭದಲ್ಲಿ ಕೃತಿಕಾರರು ತಮ್ಮ ಕೃತಿಗಳ ವಿವಿಧ ಭಾಗಗಳನ್ನು ವಾಚಿಸಿದರು. ಪ್ರಕಾಶಕ ರಮಾಕಾಂತ ಜೋಷಿ, ರಿಲಯನ್ಸ್ ಟೈಮ್‌ಔಟ್‌ನ ಉಪಾಧ್ಯಕ್ಷ ದೀಪಕ್ ಮಾರ್ವ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry