ಮಂಗಳವಾರ, ಮಾರ್ಚ್ 2, 2021
23 °C
ಕವಿತೆ

ನೆನಪು ದಾಯಾದಿ

ಎಸ್‌.ಜಿ. ಸಿದ್ದರಾಮಯ್ಯ Updated:

ಅಕ್ಷರ ಗಾತ್ರ : | |

ನೆನಪು ದಾಯಾದಿ

ನೆನಪುಗಳು ವಿಚಿತ್ರದವು ಒಂದಕ್ಕೊಂದು

ಸಂಬಂಧವಿಲ್ಲದವು ನೂರಾರು ಕೂಡಾವಳಿ ನಡೆಸಿ

ಸಾವಿರದ ತೊಟ್ಟಿಲ ಕಟ್ಟಿ ಜೋಗುಳ ಹಾಡುತ್ತವೆ.ನಿದ್ದೆ ಎಚ್ಚರಗಳನೊಂದು ಮಾಡಿ ಮೆರವಣಿಗೆ

ತೆಗೆಯುತ್ತವೆ. ಇಂದು ಹಿಂದುಗಳೊಂದುಗೂಡಿ

ನೆಲದ ಹಾದಿಯ ತುಂಬ ಇವುಗಳದೆ ಹೆಜ್ಜೆಗತಿ

ಇವುಗಳ ಕಾರುಬಾರಿನಲ್ಲಿ ಕಾಣದವರು ಕಂಡವರಾಗಿ

ಕಂಡವರು ಕಾಣದವರಾಗಿ ಹುಟ್ಟುಸಾವುಗಳ ಬೆಟ್ಟ

ಹತ್ತುವವರು ಇಳಿಯುವವರು ಎಲ್ಲಾ ಮುಖಾಮುಖಿ

ಈ ವಿಚಿತ್ರಕೆ ನಮಿಸೋ ಎನ್ನುವಷ್ಟರಲ್ಲಿ ಅವರ

ಪಾಡು ಇವರ ಹಾಡು ಅಬ್ಬರವಿಲ್ಲದೆ ಗೊಬ್ಬರ

ಚೆಲ್ಲಿದ ಹೊಲದ ತುಂಬ ತುಂಬೆ ತುಂಬಿಗಾನ 

ಕಣ್ಣಪ್ಪನ ಪಾದ ಶಿವನ ತಲೆಮೇಲೆ ಬಿದ್ದು

ತಲೆಯೆಲ್ಲ ಬೆಳ್ಳಿಸಾಲ ಬೆಟ್ಟದೂರು. ಸೂರು

ಇಲ್ಲದ ಸ್ಮಶಾನವಾಸಿಯ ತವರಲ್ಲಿ ಜಂಗಮಮೇಳ

ಮೇಳವೆಂದಾಗ ಮುಗಿಯಿತು ಶೂನ್ಯಮಾಸ

ಆನುತಾನುಗಳ ದಾಸ್ಯವಳಿದ ಹಂಗುಬಂಗದ ವ್ಯಾಸ

ಇದು ಅನುದಿನದ ದಾಯಾದಿ ಕಲಹದುರಿಯ ನ್ಯಾಸ

ಗೆದ್ದವರು ಸೋತರೆ ಸೋತವರು ಸತ್ತಬೇಗುದಿಯಲ್ಲಿ

ಹಿಡಿದ ಹಟ ಬಿಡದ ತ್ರಿವಿಕ್ರಮ ಭೂತ ಪೀಡಿತರು

ವರ್ತಮಾನವೆಂಬುದು ಗೆದ್ದವರ ಯಜ್ಞಾಶ್ವದ ಪರ್ಯಟನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.