ನೆನಪ ನೇವರಿಕೆಯಲಿ...

5

ನೆನಪ ನೇವರಿಕೆಯಲಿ...

Published:
Updated:

ಚಿತ್ತ ಭಿತ್ತಿಯೊಳಗೆ ನಿನ್ನದೇ ನೆನಪಿನ ಚಿತ್ತಾರ ತುಂಬಿಕೊಂಡ ಈ ನಿನ್ನ ಗೆಳತಿಗೆ ವಿದಾಯದ ಕೈಬೀಸಲು ಅದು ಹೇಗೆ ನಿನ್ನ ಚಿತ್ತ ಚಿತ್ತೈಸಿತು? ಆಕಸ್ಮಿಕ ಒಡನಾಟ ಒಡಲಾಳದಲ್ಲಿ ಅಪರೂಪದ ತುಡಿತವೊಂದನ್ನು ಹಿತವಾಗಿ ಮಿಡಿಯುತ್ತಿರುವಾಗ ನಾನು ಅದೆಷ್ಟೊಂದು ಸಂಭ್ರಮಿಸಿದ್ದೆ.....! ಲೆಕ್ಕವಿಲ್ಲದಷ್ಟು ಕನಸುಗಳಿಗೆ ಕಣ್ರೆಪ್ಪೆಯ ಕಾವಲಿರಿಸಿ ನವಿರಾಗಿ ಹೆಣೆದಿದ್ದ.... ಆ ಕನಸುಗಳೆಲ್ಲವ ನಿನ್ನೊಂದಿಗೆ ನನಸಾಗಿಸಬೇಕೆಂಬ ನನ್ನ ಹಂಬಲಗಳಿಗೆ ನೀ ನೀರೆರೆಯುತ್ತೀಯ ಎಂದು ಕಾದಿದ್ದೆ.... ಅರಿಯದ ಮಾರ್ದವತೆಯಲ್ಲಿ ನಾ ತೇಲಿದ್ದೆ....ಅದೇಕೋ ತಿಳಿಯದು. ನನ್ನೆಲ್ಲಾ ಭಾವಗಳನ್ನು ನಿನ್ನೆದುರು ಬಿಚ್ಚಿಡಬೇಕೆಂದು ಬಯಸಿದಾಗಲೆಲ್ಲ ಎದೆಯೊಳಗೆ ತಡೆವ ನಡುಕ! ಹಿಡಿ-ಹಿಡಿಯಾಗಿ ಮುದ್ದೆಯಾಗುವ ಮನಸು! ನನ್ನ ತೊಳಲಾಟಕ್ಕೆ ಹಸಿ ಕಣ್ಣೀರಿನ ಜೊತೆಯಾಟ....! ಹೀಗೆ ಬಹುಬೇಗ-ಬೇಗ ಕಳೆದು ಹೋಗುತ್ತಿರುವ ಈ ಕಾಲದ ಜೊತೆ-ಜೊತೆಗೆ ನನ್ನಿಂದ ನೀನೂ ಕೂಡ ಕೈಜಾರುತ್ತಿರುವುದನ್ನು ನೆನೆವಾಗ ಹೃದಯದೊಳಗೆ ಹಿಂಡುವ ಸಂಕಟ.... ಇಲ್ಲ ಗೆಳೆಯಾ.... ನಾನರಿಯದ ನಾಚಿಕೆ, ಕಂಪನ, ತೊಳಲಾಟವ ಹೃದಯದೊಳಗೆ ತುಂಬಿದ ಈ ಭಾವಕ್ಕೊಂದು ಹೆಸರಿದೆಯೆಂದು ನನಗೂ ಗೊತ್ತು, ನಿನಗೂ ಗೊತ್ತು. ಈ ಗೊತ್ತುಗಳ ನಡುವೆ ಜೊತೆಯಾಗಲಾರೆವೆಂಬ ಕಹಿ ಸತ್ಯವೂ ಗೊತ್ತು. ಈ ಗೊತ್ತುಗಳ ಜೊತೆಗೆ ಮೆತ್ತಗೆ ಸರಿದು ಹೋಗುತ್ತಿದ್ದೇವೆಂದೂ ಗೊತ್ತು. ನೀನತ್ತ.... ನಾನಿತ್ತ.....ನಾನು ಹೀಗೆ ದಿನವೂ ಸಂಕಟದ ಕಣ್ಣೀರಾಗುತ್ತೇನೆ.... ತಣ್ಣಗೆ ತೊಳಲಾಡುತ್ತೇನೆ.... ಸಂತೈಸಲು ಯಾರೂ ಇಲ್ಲ. ಕಡೆಗೆ ನನ್ನ ಹಂಬಲದ ಚಿತ್ರಗಳಿಗೆ ಬಣ್ಣ ಬರೆದ ನೀನೂ ಕೂಡ ನನ್ನ ಚಿತ್ತ ಸರೋವರದೊಳಗೆ ನನಸಾಗದೆ ಕೊನೆಯಾಗುತ್ತಿಹ ಈ ಭಾವವ ನೆನೆ ನೆನೆದು ‘ಸಂವೇದನೆ’ಯ  ಅಲೆಗಳು ಭೋರ್ಗರೆದು ಅಳುತ್ತಿವೆ....ನಿನ್ನನ್ನು ತಡೆದು ನಿಲ್ಲಿಸಲಾಗದ ನನ್ನ ಅಸಹಾಯಕತೆಗೆ ಮನವು ಮುದುಡಿ ಬಿಕ್ಕುತ್ತಿದೆ.... ನಿನಗೆ ಉತ್ತರಿಸಲು; ನಿನ್ನಿಂದ ಉತ್ತರ ಪಡೆಯಲು ಬಯಸಿದ್ದ ನನ್ನ ಮಧುರ ಭಾವಗಳೆಲ್ಲವೂ ಸೋತು ಸಮಾಧಿಯಾಗಿವೆ.... ಅದರ ಜೊತೆ ನಾ ಹೆಣೆದ ಕನಸಿನ ಮೂಲೆ ಸಮಾಧಿಯ ಮೇಲೆ ಬಾಡಿ ನಗುತ್ತಿದೆ....!ಏನೇ ಆದರೂ ನೀ ನನ್ನೊಳಗಿರುವೆ... ಮೃದು ಕಂಪನದಂತೆ..... ಮಧುರ ಇಂಪಿನಂತೆ.... ಪ್ರತ್ಯೂಷದ ಹಿಮಬಿಂದುವಿನಂತೆ... ಮರೆಯದಿರು.... ನೆನೆಯುತ್ತಿರು...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry