ನೆನೆಗುದಿಗೆ ಬಿದ್ದ ಅಕಾಡೆಮಿ ನೇಮಕಾತಿ

7

ನೆನೆಗುದಿಗೆ ಬಿದ್ದ ಅಕಾಡೆಮಿ ನೇಮಕಾತಿ

Published:
Updated:

ಬೆಂಗಳೂರು:  ಕರ್ನಾಟಕ ನಾಟಕ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕವಾಗಿ ಐದು ತಿಂಗಳು ಕಳೆದಿದ್ದರೂ ಸದಸ್ಯರ ನೇಮಕ ಆಗಿಲ್ಲದ ಸುದ್ದಿ ಒಂದು ಕಡೆಯಾದರೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿ ಹೊಸ ಅಧ್ಯಕ್ಷರನ್ನು ಕಾಣದೆ ತಿಂಗಳುಗಳೇ ಕಳೆದಿವೆ.ಪ್ರೊ.ಎಂ.ಎಚ್. ಕೃಷ್ಣಯ್ಯ ಅವರ ಅವಧಿ ನ. 30ಕ್ಕೆ ಮುಗಿದ ನಂತರ ಸಾಹಿತ್ಯ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ ಆಗಿಲ್ಲ. ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಜಿ.ಎಸ್. ಖಂಡೇರಾವ್ ಅವರ ಅವಧಿಯೂ ಮುಗಿದಿದೆ. ಆದರೆ ಈ ಅಕಾಡೆಮಿಗೂ ಹೊಸ ಅಧ್ಯಕ್ಷರನ್ನು ಕಾಣುವ ಭಾಗ್ಯ ಲಭಿಸಿಲ್ಲ.ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಖಂಡೇರಾವ್ ಅಕ್ಟೋಬರ್ 22ರಂದೇ ನಿವೃತ್ತಿ ಹೊಂದಿದ್ದಾರೆ. ಆದರೆ, ಕಳೆದ ಜುಲೈ 16ರಂದು ಅಪಘಾತಕ್ಕೆ ಈಡಾಗಿ, ಅವರ ಕಾಲಿಗೆ ತೀವ್ರ ಗಾಯವಾಗಿತ್ತು. ಅಂದಿನಿಂದ ನಿವೃತ್ತಿ ಹೊಂದಿದ ದಿನದವರೆಗೂ ಅಕಾಡೆಮಿಯತ್ತ ಬರಲು ಅವರಿಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಲಲಿತಕಲಾ ಅಕಾಡೆಮಿ ಅಧ್ಯಕ್ಷರನ್ನು ಕಾಣದೆ ಏಳು ತಿಂಗಳು ಪೂರ್ಣಗೊಂಡಿದೆ.ಸಂಗೀತ ನೃತ್ಯ ಅಕಾಡೆಮಿ, ಯಕ್ಷಗಾನ ಬಯಲಾಟ ಅಕಾಡೆಮಿ, ನಾಟಕ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಗೆ ನೂತನ ಸದಸ್ಯರ ನೇಮಕವಾಗದ ಕಾರಣ ಅದರ ಅಧ್ಯಕ್ಷರು ಯಾವುದೇ ನಿರ್ಣಯ ಕೈಗೊಳ್ಳಲಾರದ ಸ್ಥಿತಿಯಲ್ಲಿದ್ದಾರೆ.ಚಿನ್ನದ ಹಬ್ಬ ಮುಗಿಯಿತು!: ಕಳೆದ ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಪಾಲಿಗೆ ಚಿನ್ನದ ಹಬ್ಬದ ವರ್ಷವಾಗಿತ್ತು, ಈ ಹಿನ್ನೆಲೆಯಲ್ಲಿ ಪ್ರೊ. ಕೃಷ್ಣಯ್ಯ ಅವರು ಕೆಲವೊಂದು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದರು.

 

ಅಕಾಡೆಮಿಯ ಹಿಂದಿನ ಅಧ್ಯಕ್ಷರ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುವುದು, ಪಂಪ, ರನ್ನ, ಕುಮಾರವ್ಯಾಸರ ಕಾವ್ಯಗಳನ್ನು ಆಯ್ದ ವಿದ್ವಾಂಸರಿಂದ ವಾಚಿಸಿ, `ಪ್ರಾಚೀನ ಕವಿತೆಯ ಓದು~ ಶೀರ್ಷಿಕೆಯಡಿ ಅಕಾಡೆಮಿ ವೆಬ್‌ಸೈಟ್‌ನಲ್ಲಿ ದೊರೆಯುವಂತೆ ಮಾಡುವುದು ಇದರಲ್ಲಿ ಸೇರಿತ್ತು.ಇವೆಲ್ಲ ಯೋಜನೆಗಳಿಗೆ 30 ಲಕ್ಷ ರೂಪಾಯಿ ಅಗತ್ಯವಿದೆ ಎಂದು ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಪ್ರೊ. ಕೃಷ್ಣಯ್ಯ ಅವರ ಅವಧಿ ಮುಗಿದಿದೆ, ಅಕಾಡೆಮಿಯ ಚಿನ್ನದ ವರ್ಷವೂ ಮುಗಿದಿದೆ. ಆ ಯೋಜನೆಗಳು ಇನ್ನೂ ಬೆಳಕು ಕಂಡಿಲ್ಲ. ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕವಾಗದೆ ಈ ಪ್ರಸ್ತಾವಗಳಿಗೆ ಅನುಮತಿ ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.ಸಾಹಿತ್ಯ ಅಕಾಡೆಮಿ ಮಾತ್ರವಲ್ಲ, ಲಲಿತಕಲಾ ಅಕಾಡೆಮಿಯ ಕೆಲವು ಚಟುವಟಿಕೆಗಳೂ ಅಧ್ಯಕ್ಷರಿಲ್ಲದ ಕಾರಣ ನಿಂತಿವೆ. ಕಾರವಾರದಲ್ಲಿ ನಡೆಯಬೇಕಿದ್ದ ಒಂದು ಕಾರ್ಯಾಗಾರ, ಕೆಲವು ಶಿಬಿರಗಳು ಅಧ್ಯಕ್ಷರಿಲ್ಲದ ಕಾರಣ ನಡೆದಿಲ್ಲ ಎಂದು ಅಕಾಡೆಮಿಯ ಮೂಲಗಳು ತಿಳಿಸಿವೆ.`ಪರಿಶೀಲನೆಯ ಹಂತದಲ್ಲಿದೆ~: `ಸಾಹಿತ್ಯ ಅಕಾಡೆಮಿ ಮತ್ತು ಲಲಿತಕಲಾ ಅಕಾಡೆಮಿಗೆ ಅಧ್ಯಕ್ಷರ ನೇಮಕ ಕುರಿತ ಕಡತ ನಮ್ಮಿಂದ ಸರ್ಕಾರಕ್ಕೆ ರವಾನೆಯಾಗಿದೆ. ವಿಚಾರ ಪರಿಶೀಲನೆ ಹಂತದಲ್ಲಿದೆ. ಶೀಘ್ರದಲ್ಲೇ ಅಧ್ಯಕ್ಷರ ನೇಮಕ ಆಗಲಿದೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry