ನೆನೆಗುದಿಯಲ್ಲಿ ಸ್ವಚ್ಛತಾ ಕಾಮಗಾರಿ

7

ನೆನೆಗುದಿಯಲ್ಲಿ ಸ್ವಚ್ಛತಾ ಕಾಮಗಾರಿ

Published:
Updated:

ಸಂಡೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲ್ಲೂಕಿನಲ್ಲಿ ಆಯ್ಕೆ ಮಾಡಿಕೊಂಡ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಸ್ತುಗಳ ವಿಲೇವಾರಿ ಯೋಜನೆ ಸ್ವಚ್ಛತಾ ಕಾಮಗಾರಿ ಆರಂಭವಾಗದೆ ಕಡತಗಳಲ್ಲೇ ಕೊಳೆಯುತ್ತಿದೆ. ಘನತ್ಯಾಜ್ಯ ವಸ್ತುಗಳ ವಿಲೇವಾರಿ ಕುರಿತಂತೆ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಯ ಕಾರ್ಯವನ್ನು ತೆಗೆದುಕೊಳ್ಳುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸೆ.24ರಂದು ಅನುಮೋದನೆ ನೀಡಿದೆ.ಮೊದಲನೆ ಹಂತದಲ್ಲಿ ಪ್ರಾಯೋಗಿಕವಾಗಿ ಪ್ರತಿ ತಾಲ್ಲೂಕಿನ 5 ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯವನ್ನು ಪ್ರಾರಂಭಿಸಲು ಮಾರ್ಗ ಸೂಚಿಗಳನ್ನು ತಿಳಿಸಿದೆ.ತಾಲ್ಲೂಕಿನ ಭುಜಂಗನಗರ, ಕೃಷ್ಣಾನಗರ, ನರಸಿಂಗಾಪುರ, ಸುಶೀಲಾನಗರ, ಯಶವಂತನಗರ ಸೇರಿದಂತೆ 5 ಗ್ರಾಮ ಪಂಚಾಯಿತಿಗಳ 15 ಹಳ್ಳಿಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ಆರಂಭಗೊಳ್ಳಬೇಕಿದೆ.

 

ಉದ್ಯೋಗ ಚೀಟಿ ಹೊಂದಿರುವ ಕೂಲಿ ಕಾರ್ಮಿಕರನ್ನು ಸ್ವಚ್ಛತಾ ಕಾರ್ಯಕ್ಕಾಗಿ ನಿಯೋಜಿಸಿ ಉದ್ಯೋಗ ಖಾತರಿ ಯೋಜನೆಯಡಿ ಒಂದು ದಿನಕ್ಕೆ ರೂ.125 ಕೂಲಿಯನ್ನು ಎಂ.ಐ.ಎಸ್‌ನಲ್ಲಿ ದಾಖಲಿಸಿ ಎನ್.ಎಂ.ಆರ್.ಮೂಲಕ ಪ್ರತಿ 7 ದಿನಗಳಿಗೊಮ್ಮೆ ಪಾವತಿಸುವ ಕೆಲಸ ಮಾಡದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎನ್ನುವ ಸಾಮೂಹಿಕ ಅಭಿಪ್ರಾಯ ಕೆಲವು ಹಳ್ಳಿಗರದು. ಪ್ರತಿ ಹಳ್ಳಿಗೆ ಸ್ವಚ್ಛತೆ ಮಾಡಲು ಬೇಕಾದ ಸಲಕರಣೆಗಳ ಖರೀದಿ, ತಿಪ್ಪೆ ಗುಂಡಿಗಳ ನಿರ್ಮಾಣಕ್ಕೆ ಯೋಜನೆಯಲ್ಲಿ ಬಳಸಿಕೊಳ್ಳಲು, ಅನುದಾನವನ್ನು ತೆಗೆದಿರಿಸಲು ಅವಕಾಶಗಳಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಕೆಲಸವನ್ನ ಶೀಘ್ರವಾಗಿ ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಸಹ ಉದ್ಯೋಗ ಖಾತರಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಬೆಂಬಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.ಹೆಚ್ಚಿನ ಆದಾಯ ತಂದು ಕೊಡುವ ಕಾಮಾಗಾರಿಗಳನ್ನು ನಿರ್ಮಿಸಲು ತಾ ಮುಂದು, ನಾ ಮುಂದು ಎಂದು ಬರುವವರು, ದೊಡ್ಡ ಮಟ್ಟದಲ್ಲಿ  ಆದಾಯ ಸಿಗದ ಇಂತಹ ಒಳ್ಳೆಯ ಕೆಲಸಗಳಿಗೆ ಸದಸ್ಯರ ಸಹಕಾರದ ಕೊರತೆ ತಾಲ್ಲೂಕಿನಲ್ಲಿ ಹೆಚ್ಚಿದೆ ಅದನ್ನು ಜಿಲ್ಲಾಮಟ್ಟದ ಅಧಿಕಾರಿಗಳೇ ಸರಿಮಾಡ ಬೇಕಾಗಿದೆ ಎನ್ನುತ್ತಾರೆ ಪ್ರಗತಿ ಪರ ಸಂಘಟನೆಯೊಂದರ ಮುಖಂಡರು.ಸಕಾಲಕ್ಕೆ ಮಳೆಬರದೆ ಬರಗಾಲ ಪೀಡಿತ ವಾಗಿರುವ ತಾಲ್ಲೂಕಿನ ಜನರು ಉದ್ಯೋಗ ಅರಸಿಕೊಂಡು ವಲಸೆ ಹೋಗುತ್ತಿದ್ದಾರೆ. ಕೆಲಸ ನೀಡ ಬೇಕಾದವರು ಕೆಲಸ ನೀಡದೆ ಕೈಕಟ್ಟಿ ಕುಳಿತರೆ ಹೇಗೆ? ಎನ್ನುವ ಪ್ರಶ್ನೆ ಬಡ ಕೂಲಿ ಕಾರ್ಮಿಕರದ್ದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry