ನೆನೆಯುತ್ತ... ನೆನೆಯುತ್ತ..!

7

ನೆನೆಯುತ್ತ... ನೆನೆಯುತ್ತ..!

Published:
Updated:
ನೆನೆಯುತ್ತ... ನೆನೆಯುತ್ತ..!

ಸಂಗೀತದ ಗುಂಗು ಹಚ್ಚಿಸಿಕೊಂಡವರು ಸಂಜೆಯ ಜಡಿ ಮಳೆಗೆ ಸಿಕ್ಕಿ ಒದ್ದೆಯಾದ ತಲೆಯನ್ನು ಒರೆಸಿಕೊಳ್ಳುತ್ತಾ ಬಿಸಿ ಕಾಫಿಯ ಗುಟುಕು ಹೀರುತ್ತಾ ಅಲ್ಲಿ ಸೇರಿದ್ದರು.

ಅದು ರೋಟರಿ ಹೈಗ್ರೌಂಡ್ಸ್‌ನವರು ಆಯೋಜಿಸಿದ್ದ ರಾಜೇಶ್ ಖನ್ನಾ ಅವರ `ಆರಾಧನಾ~ ಕಾರ್ಯಕ್ರಮ. ರಾಜೇಶ್ ಖನ್ನಾ ನಟಿಸಿದ ಚಿತ್ರ, ಕಿಶೋರ್ ಕುಮಾರ್ ಹಾಡಿದ ಹಾಡುಗಳೇ ಅಲ್ಲಿದ್ದವು.ಕಾರ್ಯಕ್ರಮ ಇನ್ನೂ ಶುರುವಾಗಿಲ್ಲ. ಅಲ್ಲಿ ರಾಜೇಶ್ ಖನ್ನಾ ಅವರ ಗುಣಗಾನ ನಡೆದಿತ್ತು. ರಾಜೇಶ್ ನಟನೆಯಷ್ಟೇ ಮಧುರ ಕಿಶೋರ್ ಕುಮಾರ್ ಹಾಡು.ಕಿಶೋರ್ ರಾಜೇಶ್ ಸಿನಿಪಯಣವೇ ಶರೀರ ಮತ್ತು ಶಾರೀರ ಜೊತೆಯಾದಂತಿತ್ತು.

`ಎಂದೂ ಮರೆಯಲಾಗದ ಹಾಡುಗಳು~ ಒಬ್ಬೊಬ್ಬರೂ ಒಂದೊಂದು ಹಾಡಿನ ಬಗ್ಗೆ ಮಾತನಾಡುತ್ತಿದ್ದರು. ಅವರ ಮಾತಿನ ಲಹರಿ ಮುಗಿಯುವ ಹಾಗೇ ಕಾಣಲಿಲ್ಲ. ಅದು ಬಾಬುಲ್ ಸುಪ್ರಿಯೊ ಕಡೆಗೂ ಹೊರಳಿತು. ಹಂಗಾಮ ಸಿನಿಮಾದ `ಪರಿ ಪರಿ~ ಹಾಡನ್ನು ಹಾಡಿದ ಹುಡುಗ ಅಲ್ವಾ ತುಂಬಾ ಚೆನ್ನಾಗಿ ಹಾಡುತ್ತಾರೆ. ಸಮಯ ಸರಿಯುತ್ತಿತ್ತು. 6.15ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ. 7.30 ಆದರೂ ಆರಂಭವಾಗುವ ಲಕ್ಷಣಗಳಿರಲಿಲ್ಲ. ವಿಐಪಿ ಕುರ್ಚಿಗಳೆಲ್ಲಾ ತುಂಬಿದ್ದವು. ನೆರೆದವರನ್ನು ನಿರಾಸೆ ಪಡಿಸಬಾರದು ಎಂದು ರೇಡಿಯೊ ಜಾಕಿ ಶ್ರದ್ಧಾ ಮಾತಿಗಿಳಿದರು. ಕೊನೆಗೂ ಲಿಫ್ಟ್ ಬಾಗಿಲು ತೆರೆದಾಗ ಬಾಬುಲ್ ಬಂದರು ಎಂಬ ಸಂತಸ ಕಾಣಿಸುತ್ತಿತ್ತು ಎಲ್ಲರ ಮುಖದಲ್ಲಿ.`ಕಿಶೋರ್ ಕುಮಾರ್ ಹಾಡು ಕೇಳಿಕೊಂಡೆ ಬೆಳೆದ ಹುಡುಗ ನಾನು. ಇಲ್ಲಿ  ಬಾಬುಲ್ ಸುಪ್ರಿಯೊ ಹಾಡು ಇರಲ್ಲ. ಈ ಸಂಡೆ  ಬಾಬುಲ್ ಸುಪ್ರಿಯೊಗೆ ರಜೆ.  ಇಲ್ಲಿ ಕೇವಲ ರಾಜೇಶ್, ಕಿಶೋರ್ ಕುಮಾರ್ ಇರುತ್ತಾರೆ. ನನ್ನ ಎಲ್ಲಾ ಕಾರ್ಯಕ್ರಮಕ್ಕೂ ಮಗಳು ಬರುತ್ತಾಳೆ. ಆದರೆ ಈ ಬಾರಿ ಅವಳಿಗೆ ಇಂಗ್ಲಿಷ್ ಪರೀಕ್ಷೆ ಇದೆ ಹಾಗಾಗಿ ಬಂದಿಲ್ಲ. ಅದೂ ಅಲ್ಲದೇ ಇದು ನನ್ನ ಕಾರ್ಯಕ್ರಮವಲ್ಲ. ರಾಜೇಶ್ ಖನ್ನಾ ಅವರದು~. ಎಂದು ಭಾವೋದ್ವೇಗವಾಗಿ ಮಾತನಾಡಲು ಶುರು ಮಾಡಿದರು ಬಾಬುಲ್ ಸುಪ್ರಿಯೊ. ಯಾಕೆ ಇಷ್ಟು ತಡವಾಗಿ ಬಂದಿರಿ ಎಂಬ ಪ್ರಶ್ನೆ ಕೇಳಿದಾಗ. `ನಾನು ಬರುವಾಗ ದೇವರು  ಬೆಂಗಳೂರಿನಲ್ಲಿ ಮಳೆ ಸುರಿಸುತ್ತಾನೆ ಎಂದು ಗೊತ್ತಿರಲಿಲ್ಲ. ಟ್ರಾಫಿಕ್ ಜಾಂನಲ್ಲಿ ಸಿಕ್ಕಿಹಾಕಿಕೊಂಡೆ ಕ್ಷಮಿಸಿ ನಿಮ್ಮನೆಲ್ಲಾ ಕಾಯಿಸಿದ್ದಕ್ಕೆ. ಆದರೆ ಸಹನೆಯ ಫಲ ಸಿಹಿಯಾಗಿರುತ್ತದೆ~ ಎಂದು ಎಲ್ಲರಿಗೂ ಸಮಾಧಾನ ಮಾಡಿದರು. ಜತೆಗೆ ರೋಟರಿ ಅವರು ಕೊಟ್ಟ ಜ್ಯಾಕೆಟ್ ಅನ್ನು ಮುಟ್ಟಿ ಮುಟ್ಟಿ ಖುಷಿಪಟ್ಟರು.`ನಾನು ಮಾತನಾಡುವಾಗ ನಿಧಾನವಾಗಿ ಹಾರ್ಮೊನಿಯಂ ಹಾಕಿ ಪ್ಲೀಸ್... ಬಹಳ ದುಃಖದಿಂದ ಮಾತನಾಡುತ್ತಿದ್ದೇನೆ~ ಎಂದು ಹಾಸ್ಯವನ್ನು ಸೇರಿಸಿದರು. ಮಾತು ನಿಧಾನವಾಗಿ ಸಂಗೀತದತ್ತ ಹೊರಳಿತು.`ಏ ಜೋ ಮಹೋಬ್ಬತ್ ಹೈ...~ ಹಾಡು ಹೇಳಿದಾಗ ಮಾತ್ರ ಅಲ್ಲಿ ಎಲ್ಲರ ಚಪ್ಪಾಳೆಯ ದನಿ ಸೇರಿತು. ಮಳೆ ಕಡಿಮೆ ಇದ್ದ ಕಾರಣ ಜನ ಬರಲ್ಲ ಎಂಬ ನಿರೀಕ್ಷೆ ಕೂಡ ಹುಸಿಯಾಗಿತ್ತು. ಅಲ್ಲಿ ಕೇವಲ ಹಾಡಿರಲಿಲ್ಲ. ಬಾಬುಲ್ ಅವರ ಹೆಜ್ಜೆ ಕೂಡ ಹಾಡಿಗೆ ಸಾಥ್ ನೀಡಿತ್ತು.`ಕೋರಾ ಕಾಗಜ್ ಥಾ ಏ ಮನ್ ಮೇರಾ~, `ಭೀಗಿ ಭೀಗಿ ರಾತೋ ಮೇ ಮೀಠಿ ಮೀಠಿ ಬಾತೋ ಮೆ..~ ಹಾಡಿಗಂತೂ ಹಿರಿಯರೂ ಹೆಜ್ಜೆ ಹಾಕಿದರು. ರಾಜೇಶ್ ಖನ್ನಾ ಯುಗದ ಯವ್ವನಿಗರು ಅವರು.ಒಂದಾದ ನಂತರ ಒಂದು ಹಾಡಿನ ಸುರಿಮಳೆಯೇ ಅಲ್ಲಿತ್ತು. ಹಾಡು ಕೇಳಿ ಹೊರಬಂದಾಗ ಮಳೆ ಇನ್ನೂ ನಿಂತಿರಲಿಲ್ಲ. ಹಾಡಿನ ಮಳೆಯಲ್ಲಿ ನೆನೆದವರು ರಾಜೇಶ್ ಖನ್ನಾ, ಕಿಶೋರ್ ಕುಮಾರ್ ಇಬ್ಬರನ್ನೂ ನೆನೆಯುತ್ತ ನೆನೆಯುತ್ತಲೇ ಗುನುಗುತ್ತಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry