`ನೆಮ್ಮದಿ'ಗೆ ಒತ್ತಾಯಿಸಿ ನೌಕರರ ಧರಣಿ

7

`ನೆಮ್ಮದಿ'ಗೆ ಒತ್ತಾಯಿಸಿ ನೌಕರರ ಧರಣಿ

Published:
Updated:

ಕೋಲಾರ: ಮರು ನೇಮಕಾತಿಗೆ ಆಗ್ರಹಿಸಿ ನೆಮ್ಮದಿ ಕೇಂದ್ರಗಳ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.ನೆಮ್ಮದಿ ನೌಕರರ ಸಂಘದ ಉಪಾಧ್ಯಕ್ಷ ಮುರುಗೇಶ್ ಮಾತನಾಡಿ, ಜಿಲ್ಲೆಯ ವಿವಿಧ ನೆಮ್ಮದಿ ಕೇಂದ್ರಗಳಲ್ಲಿ 49 ನೌಕರರು ಕಳೆದ ಆರು ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ 18 ಮಹಿಳೆಯರು, ಐವರು ಅಂಗವಿಕಲರೂ ಸೇರಿದ್ದಾರೆ. ಇದೀಗ ಸರ್ಕಾರ ನಮ್ಮ ಉದ್ಯೋಗ ಕಿತ್ತುಕೊಳ್ಳಲು ಮುಂದಾಗಿದೆ ಎಂದು ದೂರಿದರು.2006ರಿಂದ ಖಾಸಗಿ ಸಂಸ್ಥೆಗಳ ಅಡಿ ಕಾರ್ಯನಿರ್ವಹಿಸುತ್ತಿದ್ದೆವು. ನಮ್ಮ ಮೇಲೆ ಕುಟುಂಬಗಳು ಅವಲಂಬಿತವಾಗಿವೆ. ಸರ್ಕಾರ ಸೂಕ್ತ ಕ್ರಮ ಕೈಗೊಂಡು ಪರ್ಯಾಯ ಮಾರ್ಗ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.ಸರ್ಕಾರದ ಸುತ್ತೋಲೆ ಪರಿಗಣಿಸದೆ ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೊಸ ನೆಮ್ಮದಿ ಯೋಜನೆಯಲ್ಲಿ ಮೊದಲು ಕೆಲಸ ನಿರ್ವಹಿಸಿದ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಪ್ರಾಶಸ್ತ್ಯ ನೀಡುವಂತೆ ಒತ್ತಾಯಿಸಿದರು.ಸ್ಥಳೀಯ ಆಡಳಿತ ಮರುಟೆಂಡರ್ ಮೂಲಕ ನೆಮ್ಮದಿ ಕೇಂದ್ರಗಳ ಉಸ್ತುವಾರಿಯನ್ನು ಎಂಎಂ ಅಸೋಸಿಯೇಟ್ಸ್ ಸಂಸ್ಥೆಗೆ ನೀಡಿದೆ. ಆದರೆ ಈಗ ಹಿಂದಿನ 49 ನೌಕರರನ್ನು ಕೈಬಿಟ್ಟು ಹೊಸ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು.ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದರೂ ಸಂಬಂಧಿಸಿದವರು ಕ್ರಮ ಕೈಗೊಂಡಿಲ್ಲ. ಇದೇ ಕೆಲಸ ನಂಬಿರುವ ನಮ್ಮ ಜೀವನ ಬೀದಿಪಾಲಾಗುತ್ತಿದೆ. ಅದಕ್ಕಾಗಿ ಹೊಸ ಟೆಂಡರ್‌ನಲ್ಲೂ ಹಳಬರಾದ ನಮ್ಮನ್ನೇ ಮುಂದುವರಿಸಬೇಕು. ಸಮಸ್ಯೆ ಬಗೆಹರಿಯುವರೆಗೂ ಮುಷ್ಕರ ನಡೆಯಲಿದೆ ಎಂದು ತಿಳಿಸಿದರು.ಧರಣಿಯಲ್ಲಿ ರಾಜಕುಮಾರ್, ಲೊಕೇಶ್, ಸಂದೀಪ್, ಸುನಂದ, ಸುಧಾರಾಣಿ, ನಾಗೇಶ್, ನವೀನ್, ಗಾಯಿತ್ರಿ ಮುಂತಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry