ಭಾನುವಾರ, ಏಪ್ರಿಲ್ 18, 2021
24 °C

ನೆಮ್ಮದಿಯ ತಾಣವಾಗಿ ಚಿಪಗಿ ಸಸ್ಯೋದ್ಯಾನ: ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ನಗರದ ಹೊರವಲಯದ ಚಿಪಗಿಯಲ್ಲಿ ಪಾಳುಬಿದ್ದ ಬಂಗಲೆಯಂತಿದ್ದ ಸಸ್ಯೋದ್ಯಾನ ಕೇಂದ್ರ ಹೊಸ ರೂಪ ಪಡೆದುಕೊಳ್ಳಲಿದೆ. ನಗರವಾಸಿಗಳು ದೈನಂದಿನ ಗಡಿಬಿಡಿ ಬದುಕಿನಿಂದ ಹೊರ ಬಂದು ರಿಲ್ಯಾಕ್ಸ್ ಪಡೆಯಲು ನೆಮ್ಮದಿಯ ತಾಣವಾಗಿ ಸಸ್ಯೋದ್ಯಾನ ರೂಪುಗೊಳ್ಳಲಿದೆ.ಅರಣ್ಯ ಇಲಾಖೆ ಇಂಥದ್ದೊಂದು ಯೋಜನೆ ರೂಪಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಯೋಜನೆ ಅನುಷ್ಠಾನಗೊಳಿಸಲು ಉತ್ಸುಕರಾಗಿದ್ದಾರೆ. ಅಂದಾಜು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಅರ್ಬನ್ ಪಾರ್ಕ್ ಆಗಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. 37 ಎಕರೆ ವಿಸ್ತಾರ ಪ್ರದೇಶ ಹೊಂದಿರುವ ಸಸ್ಯೋದ್ಯಾನದ ಹಿಂಭಾಗದಲ್ಲಿ ಬಾವಿ ನಿರ್ಮಿಸಲಾಗಿದೆ. ಮುಂದಿನ ಆವಾರದಲ್ಲಿ ಹಲ್ಲು ನಾಟಿ ಮಾಡಿದ್ದು, ಮಕ್ಕಳ ಆಟಿಕೆ, ಕುಳಿತುಕೊಳ್ಳುವ ಆಸನಗಳನ್ನು ಅಳವಡಿಸಲಾಗುತ್ತದೆ. ನಗರದ ಜನರು ರಜಾ ದಿನಗಳಲ್ಲಿ ಶಾಂತ ವಾತಾವರಣದಲ್ಲಿ ಸಮಯ ಕಳೆಯಲು ಅರ್ಬನ್ ಪಾರ್ಕ್ ಸೂಕ್ತ ಸ್ಥಳವಾಗಿ ಮಾರ್ಪಾಡುಗೊಳ್ಳಲಿದೆ.ಪ್ರತಿ ನಗರದಲ್ಲೂ ಉದ್ಯಾನವನ ಮಾದರಿಯ ಸ್ಥಳ ಇರಬೇಕೆಂಬ ಉದ್ದೇಶದಿಂದ ನಿರುಪಯೋಗವಾಗಿದ್ದ ಸಸ್ಯೋದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಸಸ್ಯೋದ್ಯಾನದ ಸ್ಥಿತಿಗತಿ ವೀಕ್ಷಿಸಿದ ಸಚಿವ ಕಾಗೇರಿ ಮಾಧ್ಯಮದವರಿಗೆ ಮಾಹಿತಿ ನೀಡಿದರು.`ಮತ್ತಿ, ಹೊನಲು, ಬೀಟೆ, ನಂದಿ, ಅತ್ತಿ, ಆಲ ಸೇರಿದಂತೆ ನೂರಾರು ಸಸ್ಯ ವೈವಿಧ್ಯಗಳಿಂದ ಸುತ್ತುವರಿದಿರುವ ಸಸ್ಯೋದ್ಯಾನದಲ್ಲಿ ಬೇರೆ ದೇಶದಿಂದ ಬರುವ ಪಕ್ಷಿಗಳನ್ನು ಸೆಳೆಯಲು ಹಾಗೂ ದೇಶೀಯ ಪಕ್ಷಿಗಳನ್ನು ಸಾಕಲು ಯೋಚಿಸಲಾಗಿದೆ. ದಕ್ಷಿಣ ಕನ್ನಡ ಭಾಗದ ಪಿಲಿಕುಳ ನಿಸರ್ಗ ಧಾಮದ ಮಾದರಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಸಸ್ಯೋದ್ಯಾನ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ.1994ರಲ್ಲಿ ಸಸ್ಯೋದ್ಯಾನ ಯೋಜನೆ ರೂಪಿಸಿ 1997ರಲ್ಲಿ ರೂ 23ಲಕ್ಷ ವೆಚ್ಚದಲ್ಲಿ ಸಸ್ಯೋದ್ಯಾನ ಕೇಂದ್ರ ನಿರ್ಮಿಸಲಾಗಿತ್ತು. ಆದರೆ ಇದು ಸೂಕ್ತ ಬಳಕೆ ಆಗದ ಕಾರಣ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು~ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ ಮಾತನಾಡಿ, ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆಯ ಸಭೆಗಳನ್ನು ಈ ಸ್ಥಳದಲ್ಲಿ ನಡೆಸಲು ಅನುಕೂಲವಾಗಲಿದೆ ಎಂದರು.ಚರ್ಚೆಗೆ ವಿನಂತಿಸುವೆ: `ಪಶ್ಚಿಮಘಟ್ಟ ಪ್ರದೇಶವನ್ನು ಯುನೆಸ್ಕೋ ವಿಶ್ವ ಪರಂಪರಾ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತು ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಯುನೆಸ್ಕೋ ಪಟ್ಟಿಗೆ ಸೇರುವುದರಿಂದ ಸ್ಥಳೀಯ ಜನಜೀವನಕ್ಕೆ ಧಕ್ಕೆ ಆಗಲಿದೆಯೇ, ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆಯೇ ಎಂಬ ಕುರಿತು ಜನಸಾಮಾನ್ಯರಿಗೆ ಸ್ಪಷ್ಟ ಮಾಹಿತಿ ಇಲ್ಲದೆ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಜನರು, ಜನಪ್ರತಿನಿಧಿಗಳಿಗೆ ಸ್ಪಷ್ಟ ಮಾಹಿತಿ ನೀಡುವಂತೆ ತಜ್ಞರ ಸಭೆ ನಡೆಸಿ ಸಾಧಕ ಬಾಧಕ ಕುರಿತು ಚರ್ಚಿಸಬೇಕು ಎಂದು ವಿನಂತಿಸಿ ಮುಖ್ಯಮಂತ್ರಿ ವಿನಂತಿಸಲಾಗುವುದು~ ಎಂದು ಅವರು ಹೇಳಿದರು.`ಭವಿಷ್ಯದ ದೃಷ್ಟಿಯಿಂದ ಪಶ್ಚಿಮಘಟ್ಟ ಉಳಿಸಬೇಕಾದ ಹೊಣೆಗಾರಿಕೆ ಇದೆ. ಅರಣ್ಯ ಮಧ್ಯೆ ವಾಸಿಸುವ ಜನರ ಹಕ್ಕು ಸಂರಕ್ಷಿಸಬೇಕಾದ ಅಗತ್ಯವೂ ಇದೆ. ಯುನೆಸ್ಕೋ ಪಟ್ಟಿ ಸೇರ್ಪಡೆಯಿಂದ ಅವರ ಹಕ್ಕು ಸಂರಕ್ಷಣೆಗೆ ತಡೆಯಾಗಬಾರದು ಎಂಬ ಅಭಿಪ್ರಾಯವೂ ಇದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಸಳೂರು ಗ್ರಾ.ಪಂ.ಸದಸ್ಯ ಆರ್.ವಿ.ಹೆಗಡೆ, ಎಪಿಎಂಸಿ ಅಧ್ಯಕ್ಷ ನರೇಶ ಭಟ್ಟ, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.