ಶುಕ್ರವಾರ, ಏಪ್ರಿಲ್ 16, 2021
31 °C

ನೆಮ್ಮದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಕೇವಲ ಒಂದು ನೆಮ್ಮದಿ ಕೇಂದ್ರ ಇರುವುದರಿಂದ ವಿವಿಧ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರ ಪರದಾಡುವಂತಾಗಿದೆ ಎಂದು ಆರೋಪಿಸಿ ಜಿಲ್ಲಾ ಯುವ ಜಾತ್ಯತೀತ ಜನತಾ ದಳದ ವತಿಯಿಂದ ಶುಕ್ರವಾರ ನಗರದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಜಿಲ್ಲೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಮಹಿಳೆಯರು, ಅಂಗವಿಕಲರು, ವಿದ್ಯಾರ್ಥಿಗಳು, ವೃದ್ಧರು ತಮಗೆ ಬೇಕಾಗುವ ವಾಸಸ್ಥಳ, ಆದಾಯ, ಜಾತಿ, ವೃದ್ಧಾಪ್ಯ ಮತ್ತು ವಿಧವಾ ವೇತನಕ್ಕಾಗಿ ಪ್ರಮಾಣಪತ್ರ ಪಡೆಯಲು ತಹಶೀಲ್ದಾರ್ ಕಚೇರಿಯಲ್ಲಿರುವ ಒಂದು ನೆಮ್ಮದಿ ಕೇಂದ್ರದ ಎದುರು ಬೆಳಿಗ್ಗೆ 6ರಿಂದ ಸಂಜೆ 8ರ ವರೆಗೆ ಕಾಯುವ ಪರಿಸ್ಥಿತಿ ಇದೆ. ಅಲ್ಲದೆ 15 ದಿನಗಳ ವರೆಗೆ ಪ್ರಮಾಣಪತ್ರ ನೀಡುವುದಿಲ್ಲ. ಈ ಕುರಿತು ತಹಶೀಲ್ದಾರ್ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ತಹಶೀಲ್ದಾರ್ ಕಚೇರಿಯ ನಾಲ್ಕು ವಲಯಗಳಲ್ಲಿ ಪ್ರತ್ಯೇಕ ನೆಮ್ಮದಿ ಕೇಂದ್ರಗಳನ್ನು ಸ್ಥಾಪಿಸಬೇಕು. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನವನ್ನು ಕೂಡಲೇ ಆರಂಭಿಸಬೇಕು ಹಾಗೂ ಸ್ಥಗಿತಗೊಂಡಿರುವ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.ಈ ಎಲ್ಲ ಸಮಸ್ಯೆಗಳಿಗೆ ಒಂದು ವಾರದಲ್ಲಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಯುವ ಜಾತ್ಯತೀತ ಜನತಾ ದಳದ ಅಧ್ಯಕ್ಷ ರವೀಂದ್ರನಾಥ ಹೊನ್ನಳ್ಳಿ, ಕಾರ್ಯಾಧ್ಯಕ್ಷ ದಿಲೀಪ ಡಿ. ಹೂಡಲಕರ್, ಮಹಾಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಂಬಗಾ, ಕೃಷ್ಣ ರೆಡ್ಡಿ, ಫಯಾಜ್ ಹುಸೇನ್, ಬಸವರಾಜ ಬೆಟ್ಟಿ, ದೇವೀಂದ್ರ ಸಿನ್ನೂರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.